×
Ad

ಖಷ್ತೆ ನಬಾಷಿದ್ (ಅಂದರೆ ಸುಂದರ ಸಿನೆಮಾ!)

Update: 2016-04-10 16:53 IST

ಕಳೆದ ಜನವರಿಯಲ್ಲಿ ನಡೆದ 8ನೆ ಬೆಂಗಳೂರು ಅಂತಾರಾಷ್ಟ್ರೀಯ ಸಿನೆಮೋತ್ಸವದಲ್ಲಿ ತೆರೆಕಂಡದ್ದು 61 ದೇಶಗಳ ಸುಮಾರು 170 ಚಿತ್ರಗಳು. ರಾಜಾಜಿನಗರದ ಒರಿಯನ್ ಮಾಲ್‌ನಲ್ಲಿ 8 ದಿನ ಜರಗಿದ ಈ ಹಬ್ಬದಲ್ಲಿ ಸಿನೆಮಾಸಕ್ತರು ದಿನಕ್ಕೆ 5 ಪ್ರದರ್ಶನಗಳನ್ನು (11 ಪರದೆಗಳಲ್ಲಿ) ನೋಡಿ ತಣಿಯಬಹುದಿತ್ತು. ಅಂದರೆ, ಸುಮಾರು 40 ಚಿತ್ರಗಳು. ಲೇಖಕಿಗೆ ನೋಡಲು ಸಾಧ್ಯವಾದ 19 ವೈಯಕ್ತಿಕ ಆಯ್ಕೆಯ ಚಿತ್ರಗಳಲ್ಲಿ ಅತ್ಯುತ್ತಮ ಎನಿಸಿದ ಮೂರರ ಕುರಿತು ರಸಾಸ್ವಾದನೆ ಇಲ್ಲಿದೆ.

ಸುಸ್ತಾಗಬೇಡಿ, ಸುಸ್ತ್ ಮಾಡ್ಕೋಬೇಡಿ, ಆರಾಮಾಗಿರಿ!

ಹೀಗೊಂದು ಉಪಚಾರದ ನುಡಿ ನಮ್ಮಲ್ಲಿ ಬಳಕೆಯಲ್ಲಿದೆಯಲ್ಲವೇ?

ಇದಕ್ಕೆ ಸಮಾನವಾದದ್ದನ್ನು ಈ ಸಿನೆಮಾ ಪಾತ್ರಗಳು ಆಗಾಗ, ಅಲ್ಲಲ್ಲಿ ಉಚ್ಚರಿಸುತ್ತಿರುತ್ತವೆ. ಆದರೆ ಇಂಥದೊಂದು ಗುಟ್ಟು ಬಿಟ್ಟುಕೊಡದ, ಸರಳೀಕೃತ ಉದ್ಗಾರವನ್ನೇ ಶೀರ್ಷಿಕೆಯಾಗಿ ಹೊಂದಿರುವ ಇರಾನಿ ಸಿನೆಮಾ, ಸುಸ್ತಾಗುವಷ್ಟು ಐಂದ್ರಿಕ ಆನಂದ, ಬೌದ್ಧಿಕ ಮಂಥನ ನೀಡುತ್ತದೆಂದರೆ ಏನು ಹೇಳುವುದು?!

***

ಗಂಡ ರೋಮನ್, ಎಪ್ಪತ್ತು ವರ್ಷದವನಾಗಿದ್ದರೂ ತುಂಬುಗೂದಲಿನ ಕರಿ-ಬಿಳಿ ಕ್ರಾಪ್, ಎತ್ತರದ ನೀಳಕಾಯ, ಒಪ್ಪವಾದ ಕಣ್ಣು, ಮೂಗಿನ ಲಕ್ಷಣವಂತ. ಕೈಯಲ್ಲಿರುವ ಕ್ಯಾಮೆರಾ, ಏನೋ ಹೊಳೆದರೆ, ಧಡ್ ಎಂದು ಕೂತು, ಬಗ್ಗಿ, ಜಿಗಿದು, ತೆವಳಿ ಮಾಡುವ ಅಂಗಭಂಗಿಗಳು ಅವನೊಬ್ಬ ಸಾಹಸಿಗ ಎಂದು ಹೇಳುತ್ತಿವೆ. ಲಹರಿ ಬಂದಾಗ ಬಾಯ್ದೆರೆದು ಹಾಡುವ, ಇದೆಲ್ಲದರ ಮಧ್ಯೆ, ನೆನಪಿನಿಂದ ಅರ್ಧಾಂಗಿಯನ್ನು ನಲ್ಮೆಯಿಂದ ಆಗಾಗ ವಿಚಾರಿಸಿಕೊಳ್ಳುವ ಸಜ್ಜನ. ಆದರೆ ಹೆಂಡತಿ ಮರಿಯಾ, ಏಕೋ ಮುಟ್ಟಿದರೆ ಸಿಡಿಯುವ ಮೂಡಿನಲ್ಲಿದ್ದಾಳೆ. ಆಕ್ಷೇಪಣೆ ರಾಣಿಯಾಗಿ ಆತನ ಪ್ರತಿ ಮಾತು-ಕೃತ್ಯಗಳಿಗೂ ಸಿರ್ರೆನ್ನುತ್ತಿದ್ದಾಳೆ. ಹಾಗಿರುವಾಗ ಅದೆಲ್ಲಿಯದೋ ಒಂದು ಫೋನ್ ಕಾಲ್. ನೀನು ಹೀಗೆ ಬಹಳ ವರ್ಷಗಳ ನಂತರ ಇಲ್ಲಿಗೆ ಬಂದಿರುವೆ ಎಂದು ಗೊತ್ತಾಯ್ತು, ಬಂದು ಭೇಟಿ ಮಾಡಲೇ? ಮುಂತಾಗಿ ಸ್ನೇಹ ಸೂಸುವ ಸಂಬಂಧಿಯ ಮಾತು, ಮರಿಯಾಗೆ. ಇದು, ಇರಾನಿನ ಹೋಟೆಲೊಂದರಲ್ಲಿ ತಂಗಿರುವ ಆ ದಂಪತಿ, ಮಿಶ್ರ ಮದುವೆ ಆದವರೆಂದು, ಅವರ ನಡೆ-ನುಡಿ ಹೇಳುವಂತೆ ಐರೋಪ್ಯ ದೇಶದಲ್ಲಿ ಬಹುಕಾಲ ನೆಲೆಸಿದ್ದರೂ ಪತ್ನಿ ಈ ಮೂಲದವಳೆಂದು (ಪ್ರೇಕ್ಷಕರಿಗೆ) ತಿಳಿಸುತ್ತದೆ. ತಮ್ಮ ಆಧುನಿಕ ಜೀವನಶೈಲಿಗೆ ಅನುಗುಣವಾಗಿ, ಪರಸ್ಪರ ಸ್ಪೇಸ್ ಕೊಟ್ಟುಕೊಳ್ಳಲು, ಇಬ್ಬರೂ ಪ್ರತ್ಯೇಕ ಕೋಣೆಗಳಲ್ಲಿದ್ದಾರೆ.

ಅಲ್ಲಿ ಅವರಿಗೆ ಟೀ ಕೊಡಲೆ, ಅದು ಮಾಡಲೆ, ಇದು ಮಾಡಲೆ ಎಂದು ಗಳಿಗೆಗೊಮ್ಮೆ ಕೇಳುವ ವಿನಯಶೀಲ, ಯಾರಾದರೂ ಮೆಚ್ಚಿಕೊಳ್ಳುವ ವ್ಯಕ್ತಿತ್ವದ, ಉತ್ಸಾಹ ಪುಟಿಯುವ ತರುಣ ವೇಯ್ಟರ್ ಮೋರ್ಷಾನ ಪರಿಚಯವಾಗುತ್ತದೆ. ಬಿಸಿಲು ಸುಟ್ಟುಹೋಗುವ ದಿ ಗ್ರೇಟ್ ಸಾಲ್ಟ್ ಡೆಸರ್ಟ್ ನೋಡಬೇಕೆಂಬ ಬಯಕೆ, ಗಂಡನಿಗೆ. ಅದು ಯಾವ ರೀತಿಯಲ್ಲೂ ಕೈಗೂಡಬಾರದು ಎಂದು ಹಟ ತೊಟ್ಟಂತಿರುವ ಹೆಂಡತಿ. ಅವಳನ್ನು ಯಾಮಾರಿಸಿ ಆತ ಹೊರಡಬೇಕು. ತತ್‌ಕ್ಷಣದ ಗುರುತಾದರೂ ನಿಮಿಷಗಳಲ್ಲಿ ಆತ್ಮೀಯನಾದ ಆ ಹುಡುಗನ ಸಹಾಯ ಪಡೆದುಕೊಳ್ಳಲೆ ಎಂದು ಹವಣಿಸುವಷ್ಟರಲ್ಲಿ ಅನಿರೀಕ್ಷಿತವೊಂದು ನಡೆದುಹೋಗುತ್ತದೆ: ವಿದೇಶಿ ಗ್ರಾಹಕರ ಹಿಂದೆ-ಮುಂದೆ ಓಡಾಡಿಕೊಂಡು ಅವರನ್ನು ಇಂಗ್ಲಿಷಿನಲ್ಲಿ ಅನುನಯದಿಂದ ಮಾತಾಡಿಸಿಕೊಂಡು ಆ ಹುಡುಗ ಇರುವುದನ್ನು ನೋಡಿದರೆ ಅವನ ಮಾಲಕನಿಗೆ ಹೊಟ್ಟೆಯುರಿ. ಇಲ್ಲಿ ವೇಯ್ಟರ್ ಕೆಲಸಕ್ಕೆ ಬಂದಿದೀಯ ತಾನೆ? ಸುಮ್ಮನೆ ಅಷ್ಟು ಮಾಡು...ನೀನೇನು ಟೂರಿಸ್ಟ್ ಗೈಡಾ? ಇಂಗ್ಲಿಷ್ ಮಾತು ಉದುರಿಸಿಕೊಂಡು ಪಾಶ್ಚಾತ್ಯರನ್ನು ಒಲಿಸಿಕೊಳ್ಳೋಕೆ ಅಂತ ಮಾತಿಗೊಮ್ಮೆ ಹಂಗಿಸುತ್ತ ಅದನ್ನು ಹೊರಹಾಕುವುದು ಅವನ ವೈಖರಿ. ಈ ಮಧ್ಯೆ ಗಂಡ-ಹೆಂಡಿರ ಟೀ ಕುಡಿ-ಉಹುಂ ನನಗೆ ಬ್ಯಾಡ ಜಗಳದಲ್ಲಿ ಸರದಿಯಂತೆ ಇಬ್ಬರ ಕೋಣೆಯ ಬಾಗಿಲುಗಳನ್ನೂ ತಟ್ಟಿ, ಹೆಂಡತಿಯಿಂದ ಭುಸ್ ಅನ್ನಿಸಿಕೊಂಡ ಈತ, ಭಯಂಕರ ಗಡಿಬಿಡಿಯಲ್ಲಿ ಟೀ ಪಾತ್ರೆ-ಉಪಕರಣಗಳ ಟ್ರೇಯನ್ನು ದಢಾಲ್ ಎಂದು ಎತ್ತಿಹಾಕಿ, ಅದು ಒಡೆಯನೆದುರೇ ಪುಡಿಪುಡಿಯಾಗಿ...ಇನ್ನೇನು, ಉಸಿರು ಸಹ ಬಿಡದೆ, ಮೇಲಂಗಿ ಕಳಚಿ, ಕೆಕ್ಕರುಗಣ್ಣಿಂದ ಮಾಲಕನನ್ನು ಸಮೀಪಿಸಿ, ಅದೇಕೋ ಮನಸ್ಸು ಬದಲಾಯಿಸಿ, ಸಮವಸ್ತ್ರದ ಅಂಗಿಯನ್ನು ಅವನ ಮುಖದ ಮೇಲೆ ಎಸೆಯದೆ, ಕೆಳಗೆ ಒಗೆದು ಹೊರಡುವ ವೇಳೆಗೆ .... ಸರ್ವತಂತ್ರ ಸ್ವತಂತ್ರ!

ಮುಂದಿನ ಚಿತ್ರಿಕೆಯಲ್ಲಿ ಆಗಲೇ ಅವನು ತನ್ನ ಟ್ಯಾಕ್ಸಿ ಡ್ರೈವರ್ ಸ್ನೇಹಿತನನ್ನು ಹೊರಡಿಸಿಕೊಂಡು ಹೊಟೇಲ್ ಮುಂದೆ ಹಾಜರು. ಮರಿಯಾ ಮಲಗಿದ್ದಾಳೆಂದು ತಿಳಿದು ರೋಮನ್ ಕಳ್ಳತನದಿಂದ ಕಾರಿನೊಳಕ್ಕೆ ತೂರಿಕೊಂಡರೆ ಕಾಣುವುದು, ಯಾವ ಮಾಯದಲ್ಲೋ ಕಾರು ಹತ್ತಿ, ಬಿಮ್ಮಗೆ ಕೂತಿರುವ ಹೆಂಡತಿ. ಅಡ್ಡಿಯಿಲ್ಲ. ಇವೆಲ್ಲ ಅವಗೆ ಹೊಸತೇನಲ್ಲ. ಪಕ್ಕದಲ್ಲಿದ್ದಾಳೆಂದರೆ, ಮುನಿಸು ತರವೆ? ಎಂದು ಪರಿಪರಿ ಪ್ರಯತ್ನ ಮಾಡಿ ಅದನ್ನು ಹೋಗಲಾಡಿಸುವುದನ್ನು ಬಲ್ಲ ನಲ್ಲನವ. ಕಾದಾಟದ ಪರದೆಯಾಚೆ ಅವರಲ್ಲಿರುವ ಅನ್ಯೋನ್ಯತೆ ನೋಡುಗರಲ್ಲಿ ಇಷ್ಟಿಷ್ಟೇ ಬೇರೂರುತ್ತಿದೆ...

(clue)" Your Motherland is magnificent Maria!'

ಸಂಭಾಷಣೆಯ ಸುಳಿವುಗಳು : ಈ ಮೊದಲು ಮತ್ತು ಆ ನಂತರ- ಪ್ರತಿಷ್ಠಾಪಿಸುವ ಇನ್ನೊಂದಿಷ್ಟು ಅಂಶಗಳೆಂದರೆ, ಅವರಿಬ್ಬರೂ ಕೆನಡಾದಲ್ಲಿ ನೆಲೆಸಿರುವ ಭೂಗರ್ಭಶಾಸ್ತ್ರಜ್ಞರು. ಐರೋಪ್ಯ ರೋಮನ್ ಕೈಹಿಡಿದಿರುವ ಮರಿಯಾ ಮೂಲತಃ ಇರಾನೀಯಳು. ಇರಾನ್ ದೇಶದ ವಿಸ್ಮಯಗಳಲ್ಲಿ ಒಂದಾದ ದಿ ಗ್ರೇಟ್ ಸಾಲ್ಟ್ ಡೆಸರ್ಟ್ ಮರುಭೂಮಿಯನ್ನು ನೋಡಲು ಪ್ರವಾಸ ಬಂದವರು. ಆದರೆ ಪ್ರವಾಸಿ ಸಂಸ್ಥೆಯೊಂದು ನಿಯೋಜಿಸಿದ್ದ ಈ ಕಾರ್ಯಕ್ರಮ ಯಾವುದೋ ಕಾರಣಕ್ಕೆ ವಿಫಲಗೊಂಡು, ವೈಯಕ್ತಿಕ ಸಿದ್ಧತೆ-ವ್ಯವಸ್ಥೆಯೊಂದಿಗೆ ಅವರೀಗ ಅಲ್ಲಿಗೆ ಪ್ರಯಾಣಿಸಬೇಕಿದೆ. 50 ಡಿಗ್ರಿ ಸೆಲ್ಸಿಯಸ್ ತಾಪಮಾನದ ಜತೆಗೆ ಇನ್ನೂ ಸಾಕಷ್ಟು ಎಡರು-ತೊಡರು ಅವರ ಮುಂದೆ. ಎಂದು ಅಡಿಗಡಿಗೆ, ಗಳಿಗೆ ಗಳಿಗೆಗೆ ಭಾವೋತ್ಕರ್ಷದಿಂದ ಉದ್ಗರಿಸುವ ಮನಸ್ಥಿತಿ ರೋಮನ್‌ದಾದರೆ, ಮರಿಯಾ ಒಳಗೊಳಗೇ ಪರಕೀಯತೆ ಅನುಭವಿಸುತ್ತಿದ್ದಾಳೆ. ಯಾರದು, ಇಷ್ಟು ವರ್ಷ ಹೊರಗಿದ್ದರೂ ನನ್ನನ್ನು ನೆನಪಿಟ್ಟುಕೊಂಡಿರುವವರು? ಅವರನ್ನು ಭೇಟಿಯಾಗುವ ಕಾತುರ ನನ್ನಲ್ಲಿ ಮೂಡುತ್ತಿಲ್ಲವೇಕೆ?...ಬಾಲ್ಯದಿಂದಲೇ ಈ ನೆಲದಿಂದ ಬೇರ್ಪಟ್ಟ ನನಗೆ ಇದು ನನ್ನದು ಎಂಬ ಆತ್ಮೀಯತೆ ಹೇಗೆ ಬರಲಿಕ್ಕೆ ಸಾಧ್ಯ...ಹೀಗೆಲ್ಲ ಕ್ಷೋಭೆಗೊಳ್ಳುತ್ತ, ತಮ್ಮ ಪ್ರವಾಸ, ವಾಸ್ತವ್ಯ, ವಾಹನದ ಅವ್ಯವಸ್ಥೆಗಳನ್ನು ದೊಡ್ಡದು ಮಾಡಿಕೊಂಡು ವಿಮುಖಳಾಗಿದ್ದಾಳೆ. ಮೇಲ್ಪದರದ ಈ ಸಿಟ್ಟು ಸಿಡುಕುಗಳ ಕೆಳಗೆ ಗಾಢ ವಿಷಣ್ಣತೆಯೂ ಅವಳನ್ನು ಬಾಧಿಸುತ್ತಿರಬಹುದು ಎಂದು ಯೋಚಿಸಲು ಆಧಾರ ಇದೆ. ನಿನ್ನೆ ತಾನೆ ವ್ಯಾನ್ ಪೆಯಿಂಟ್ ಮಾಡಿಟ್ಟಿದ್ದೀನಿ, ಅದಿನ್ನೂ ಒಣಗಿಲ್ಲ...ಸುಮ್ಮನೆ ನನ್ನನ್ನು ಬಲವಂತ ಮಾಡಬೇಡ ಹೀಗೆನ್ನುತ್ತ ಎಂಟ್ರಿ ತೆಗೆದುಕೊಳ್ಳುವುದು ಟ್ಯಾಕ್ಸಿ ಡ್ರೈವರ್ ಹುಸೇನಿ. ಮಾತಿಗೊಮ್ಮೆ ಇಲ್ಲ, ಆಗಲ್ಲ, ಸಾಧ್ಯವೇ ಇಲ್ಲ ಎಂದು ಬುಸುಗುಡುವ ಆತ, ಆಧುನಿಕ, ಇಂಗ್ಲಿಷ್ ಮಾತಾಡುವ, ಸಿರಿವಂತ ಮರಿಯಾಳಿಗೆ ಸಮಸಮವಾಗಿ ರೇಗು, ಚಡಪಡಿಕೆ, ಆಳದ ಬೇಸರ ವ್ಯಕ್ತಪಡಿಸುವ ಇನ್ನೊಂದು ನಮೂನೆ. ಪರಸ್ಪರ ವಿರುದ್ಧ ಗುಣಸ್ವಭಾವದ ಈ ಇಬ್ಬರು ಗೆಳೆಯರು, ತಮ್ಮ ಅಗಾಧ ಚೈತನ್ಯ, ಮುಗ್ಧತೆ, ಕಿಲಾಡಿತನ, ವಿನೋದಪರತೆ, ಹೃದಯವಂತಿಕೆಯಿಂದ ತೇಜಸ್ವಿ ಕಾದಂಬರಿಯ ಹಳ್ಳಿಗ ತರುಣರನ್ನು ನೆನಪಿಸಿದರೆ ಆಶ್ಚರ್ಯವಿಲ್ಲ. ಸಾಲ್ಟ್ ಮರುಭೂಮಿಗೆ ಪ್ರಯಾಣ ಮಾಡುವುದು ಬೇಡಾ ಅಂದ್ರೆ ಬೇಡ ಎಂದು ಹುಸೇನಿಗೆ ಅನಿಸುತ್ತಿರುವುದು ಯಾಕೋ? ಅಲ್ಲಿ ನಿಮ್ಮ ಚಿಕ್ಕಮ್ಮ ಇದ್ದಾರಲ್ಲ? ಅವರ ಮನೆಗೂ ಬೇಟಿ ಕೊಡೋಣ ಗೆಳೆಯನನ್ನು ಹುರಿದುಂಬಿಸಲು ಮೋರ್ಷಾ ಹೀಗೆ ಹೇಳಿದರೆ ಇವನು ಇನ್ನೂ ಕುಗ್ಗಿಹೋಗುತ್ತಾನೆ! ಮಾತು ಬದಲಾಯಿಸುತ್ತಾನೆ.

***

ರಣ ರಣ ಬಿಸಿಲಿನಲ್ಲಿ ಸಾಲ್ಟ್ ಮರುಭೂಮಿಯೆಡೆ ಅವರ ರೋಡ್‌ಟ್ರಿಪ್ ಅಂದರೆ, ನೋಡುಗರಿಗೆ ಆಗಸದ ಬೃಹತ್ ಕ್ಯಾನ್ವಾಸ್‌ನಲ್ಲಿ ಕಡು ಬಣ್ಣಗಳ ರಂಗಿನಾಟ, ಕಣ್ಣ ಮುಂದಿನ ಮೇರೆಯಿಲ್ಲದ ಅಸೀಮ ಲ್ಯಾಂಡ್‌ಸ್ಕೇಪ್ ಅನ್ನು ಉಣಬಡಿಸಲು ಮಾಡಿದ ನೆಪ ಎಂದೇ ಪರಿಗಣಿಸಲು ಅಡ್ಡಿಯಿಲ್ಲ. (ದಟ್ಟ ಅರಣ್ಯ, ಮೇರು ಶಿಖರ, ಪ್ರಖರ ಪಾರದರ್ಶಕ ನೀರಿನ ನೀಲಿಒಡಲ ದಿಗ್ದರ್ಶನವನ್ನು ಹಾಲಿವುಡ್ ಸಿನೆಮಾಗಳು ಮಾಡಿರುವಾಗ, ಹೀಗೆ ಮರುಭೂಮಿಯನ್ನು ಆಯ್ದುಕೊಂಡಿರುವುದು ಗಮನ ಸೆಳೆಯುತ್ತದೆಯಲ್ಲವೇ?) ಭೂತಾಯಿಯ ತಂಪಾದ ಗರ್ಭದ ಗುಂಟ ರೋಮನ್ ಸನ್ನಿಯಲ್ಲಿ ಇರುವವನಂತೆ ಜರಗುತ್ತ, ಮಾನವತೆ, ಮನುಷ್ಯ ಸ್ವಭಾವ, ಸೃಷ್ಟಿ, ಪ್ರಪಂಚದ ಕುರಿತು ಆಣಿರತ್ನಗಳನ್ನು ಹೊಳೆಸುವ ವಿನೂತನ ಸಾಂದರ್ಭಿಕ ಕಾವ್ಯಮಯತೆಯೂ ಮುಂದೆ ಬರುತ್ತದೆ. ಅದು ಆಗುವುದು ಹೀಗೆ: ಬಿಸಿಲ ಬಸಿದುಕೊಂಡು ಬಳಲಿಸುವ ಕಾರು ಆ ನಾಲ್ವರನ್ನೂ ಹೊತ್ತೊಯ್ಯುತ್ತಿದೆ... ಟಯರ್ ಪಂಕ್ಚರ್! ಮಾತಿಗೆ ಮಾತು, ಕಿಡಿನೋಟಕ್ಕೆ ನೋಟ, ಕುಹಕಕ್ಕೆ ಕುಹಕವನ್ನು ಪರಸ್ಪರ ಅರ್ಥವಾಗದ ತಂತಮ್ಮ ಭಾಷೆಯಲ್ಲಿ ಝಳಪಿಸುವ ಕೆಲಸದಲ್ಲಿ ಡ್ರೈವರ್ ಹುಸೇನಿ ಮತ್ತು ಕುಚೇಷ್ಟೆಯ ಫಾರಿನ್ ಮೇಡಂ ಮರಿಯಾ ತತ್ಪರರಾಗಿದ್ದಾರೆ. ನೋಡುಗರಿಗೆ ಕರ್ಣಾನಂದ. ಪುಷ್ಕಳ ನಗೆ. ಪಾಪ, ಮೋರ್ಷಾ, ಯಾರಿಂದಲೋ ಲಿಪ್ಟ್ ಪಡೆದು, ಟಯರ್ ಹೊತ್ತು ಎಲ್ಲಿಗೋ ಹೋಗುತ್ತಾನೆ. ಇತ್ತ ರೋಮನ್ ಸಹ ಇಲ್ಲೇ ಹೋಗಿಬರುತ್ತೇನೆ ಎಂದು ಮಾಯವಾಗುತ್ತಾನೆ.

ಟಯರ್ ಬದಲಿಸಿಕೊಂಡು ಬಸ್ಸೇರುವ ಮೋರ್ಷಾನಿಗೆ ದಿಟ್ಟ ಚೆಲುವೆಯೊಬ್ಬಳ ಪರಿಚಯ ಆಗುವ ಕತೆ ಒಂದು ಕಡೆ ನಡೆಯುತ್ತಿದ್ದರೆ, ರೋಮನ್‌ಗೆ ಒಬ್ಬ ಬಚ್ಚಿಹೋದ ಮುದುಕ (ಮತ್ತೊಂದು ತೇಜಸ್ವಿ ಕ್ಯಾರೆಕ್ಟರ್) ಎದುರಾಗುತ್ತಾನೆ. ನೆಲದ ಮೇಲೆ ಎಂತಹುದೋ ಉಪಕರಣ ಇರಿಸಿ, ಭೂಪದರದ ಕೆಳಗಿರುವ ನೀರಿನ ಕಾಲುವೆಯೊಳಗೆ ಮನೆಯಿಂದ ಪೇಟೆಗೆ ಹೋಗಿಬರುವ ಸಲೀಸಿನಲ್ಲಿ ಅಡ್ಡಾಡುವ ಆತ ಒಬ್ಬ ಸಹಜ ಭೂ ವಿಜ್ಞಾನಿ. ಅವನೊಂದಿಗೆ ಅದೇನದು, ಇದೇಕೆ ಹೀಗೆ, ಇಲ್ಲಿಂದ ಎಲ್ಲಿಗೆ ಮುಂತಾಗಿ ಪುಂಖಾನುಪುಂಖವಾಗಿ ಪ್ರಶ್ನೆ ಕೇಳುತ್ತ ಕಿಂದರಿಜೋಗಿಯ ಹಿಂದೆ ಹೋದಂತೆ ಈ ಕಲಿತ ವಿಜ್ಞಾನಿ ಹೋಗಿಬಿಡುವ ವೇಳೆಗೆ ಕಾರಿನಲ್ಲಿ ಮರಿಯಾಳ ರಚ್ಚೆ: ಎಲ್ಲಿ ನನ್ನ ಗಂಡ, ಎಲ್ಲಿ ಕಳಿಸಿದಿ ಅವನನ್ನು?, ಏನಾದರೂ ಆದರೆ ಏನು ಗತಿ?, ಹ್ಞೂಂ ಹೋಗಿ, ಹುಡುಕಿ ತನ್ನಿ, ಅವನ ಮುಖ ಕಾಣುವವರೆಗೆ ನಾನು ಕಾರಿನಿಂದ ಕೆಳಗಿಳಿಯೊಲ್ಲ! ಇದಕ್ಕೆ ಕಾಂಟ್ರಾಸ್ಟ್ ಆಗಿ ಸಾಗುವ ಇಬ್ಬರು- ಕಿವುಡರ- ಸಂಭಾಷಣೆಯ-ಮೂಲಮಾದರಿ-ವಿನೋದ ಅಲ್ಲಿ, ನೆಲದಡಿ ಸಾಗುತ್ತಿದೆ: ಪರಸ್ಪರ ಭಾಷೆ ಬಾರದ ಮುದುಕ-ಅರೆ ಮುದುಕರಿಬ್ಬರೂ ಮರುಳು ಸಂಭಾಷಣೆ ನಡೆಸುತ್ತಿದ್ದಾರೆ. ರೋಮನ್ ಜಿಯಾಲಜಿ ಪ್ರಶ್ನೆ ಕೇಳುವುದು, ಆ ಸ್ಥಳೀಯ ಮುದುಕ ಹುಸೇನಿ ಕುಟುಂಬ ಪುರಾಣದ ಉತ್ತರ ಹೇಳುವುದು. ಮತ್ತೆ ನೋಡುಗರಿಗೆ ಸಬ್ ಟೈಟಲ್‌ಗಳು ದಯಪಾಲಿಸುವ ಆನಂದ!

ಹುಸೇನಿಯ ಚಿಕ್ಕಮ್ಮನ ಮನೆ ಮುಟ್ಟುವ ವೇಳೆಗೆ ಸಂಜೆಯಾಗಿದೆ. ತಾವು ಮೂವರು ಭೂಮಿಯ ಮೇಲೆ ಚಲಿಸುತ್ತ ಬಂದರೆ, ರೋಮನ್ ಕೆಳಗೆ, ಆ ಹಿರಿಯನೊಟ್ಟಿಗೆ ಭೂಮಿಯ ಒಳಗಿನ ಕಾಲುವೆಯಲ್ಲಿ ಸಾಗುತ್ತ ಬಂದು ಜತೆ ಸೇರುವ ಸಾಧ್ಯತೆ ಇರುವುದನ್ನು ಈ ಇಬ್ಬರು ಹುಡುಗರು ಮರಿಯಾಗೆ ಹೇಳಿ ಹೇಳಿ ಸುಸ್ತಾಗಿದ್ದಾರೆ. ಅದೇಕೋ ಈ ಮಧ್ಯೆ ಹುಸೇನಿ ಸ್ವಲ್ಪ ಮೆತ್ತಗಾಗಿದ್ದಾನೆ. ಚಿಕ್ಕಮ್ಮನನ್ನು ಹೇಗೆ ಎದುರಿಸುವುದು ಎಂದು ಆತ ಅಳುಕುತ್ತಿರುವುದು ಗೋಚರಿಸುತ್ತಿದೆ. ಆಗ ಬರುತ್ತದೆ, ಅತಿಥಿಗಳನ್ನು ಎದುರುಗೊಳ್ಳಲು ಬಾಗಿಲಿಗೆ ಬಂದ, ಮಮತಾಮಯಿ ಚಿಕ್ಕಮ್ಮನ ಮುನಿಸು ಮುಗಿದು ಬೇಟಿಗೆ ಬಂದೆಯಾ ಮಗನೇ? ಈ ತಾಯಿಯಲ್ಲಿ ವಿಶ್ವಾಸ ಹುಟ್ಟಿತೆ? ಎಂದು ಸಾರುವ ಮಮತೆ, ನೋವು, ನಿರಾಳ, ವಿಷಾದ ಮಿಶ್ರಿತ ನೋಟದ ಚಿತ್ರಿಕೆ. (ಏನೇ ರೋಡ್ ಸಿನೆಮಾ ಅಂದರೂ, ಬೆರಳುಕಚ್ಚುವ ಸಿನೆಮೆಟಾಗ್ರಫಿ ಮಾಡಿದರೂ, ಅಂತಿಮವಾಗಿ ಸಿನೆಮಾ, ಮನುಷ್ಯ ಸಂಬಂಧ, ಅದನ್ನು ಸುತ್ತುವರಿದ ನೂರು ಭಾವನೆ, ತಾಕಲಾಟ, ಒಳತೋಟಿಯ ಕುರಿತಾಗಿರುತ್ತದೆ, ಆಗಿರಬೇಕು ಅನ್ನುವ ನಿರ್ದೇಶಕರ ಭಾವನಾತ್ಮಕ ಬುದ್ಧಿಮತ್ತೆಯ ದ್ಯೋತಕ. (ಮುಂದೆ ಹೇಳಲ್ಪಡುವ ಹುಸೇನಿ ಕುಟುಂಬ ವಿರಸದ ಕತೆ ಸಂಪೂರ್ಣವಾಗಿ ಅರ್ಥವಾಗಲು ಈ ಸಂದರ್ಭದ ಚಿತ್ರಣ ಒಂದು ಭದ್ರ ಅಡಿಪಾಯ). ಒಂದು ಹಟಮಾರಿ ಹೆಂಗಸು ಸಹ ಮನೆಗೆ ಬಂದ ಅಭ್ಯಾಗತರಲ್ಲಿ ಒಬ್ಬಳು ಎಂದು ತಿಳಿದ ಚಿಕ್ಕಮ್ಮ, ಆಕೆಯನ್ನು ಕಾರಿನಿಂದ ಎಬ್ಬಿಸಿಕೊಂಡು ಹೋಗುವ ಜಬರ್ದಸ್ತನ್ನು ನೋಡಿಯೇ ಸವಿಯಬೇಕು. ಆಕೆಯ ಧಾರ್ಷ್ಟ್ಯದ ಮುಂದೆ ಮರಿಯಾ ಮುದುರಿದ ಬೆಕ್ಕು! ***

ದಣಿದು ಬಂದ ಅತಿಥಿಗಳಿಗೆ ನಡೆಯುವ, ಸವಿ ತಿನಿಸು, ಮೆತ್ತನೆ ಹಾಸಿಗೆ ಹೊದಿಕೆಗಳ ರಾಜೋಪಚಾರದ ದೃಶ್ಯಗಳೂ ಕಣ್ಣಿಗೆ ಹಬ್ಬ. ಬಸ್ಸಲ್ಲಿ ಭೇಟಿಯಾದ ಚೆಲುವೆ ಅಲ್ಲಿ ಅನಿರೀಕ್ಷಿತ ಅನಿಸುವಂತೆ (ನಿರೀಕ್ಷಿತವಾಗಿ) ಬರುವುದು, ಮೋರ್ಷಾ ಆಕೆಯ ಸಂಗಕ್ಕೆ ಕಾತರಿಸುವುದು ನವಿರು ನೇಹವನ್ನೂ ಸೇರಿಸುತ್ತದೆ. ಹುಸೇನಿಯ ಸ್ವಂತ ಅಮ್ಮನೇ ತಂಗಿಗಾಗಿ ಹೆತ್ತುಕೊಟ್ಟ ಇನ್ನೊಬ್ಬ ಮಗ, ಹುಸೇನಿಯ ಸೋದರ, ಸೈನಿಕನ ದಿರಿಸಿನಲ್ಲಿ ಪಟವಾಗಿ ಗೋಡೆ ಏರಿರುವುದು ಯಾಕಾಗಿ? ಹೀಗೆ ಮುಂತಾದ ವಿವರಣೆ ಎಲ್ಲರಿಗೂ ಸಿಗುತ್ತದೆ. ಸಹೋದರನ ಸಾವಿಗೆ ನಿಷ್ಪಾಪಿ ಚಿಕ್ಕಮ್ಮನನ್ನು ಹೊಣೆಯಾಗಿಸುವುದು ತಪ್ಪಲ್ಲವೆ ಎಂದು ಹುಸೇನಿಗೂ ಅರಿವಾಗಿ, ಚಿಕ್ಕ ತಾಯಿ-ಮಗನ ನಡುವಣ ದುಗುಡ-ದುಮ್ಮಾನಕ್ಕೊಂದು ಕೊನೆ ಪ್ರಾಪ್ತವಾಗುತ್ತದೆ. ಬೆಳ್ಳಂಬೆಳಗ್ಗೆ ಪೊಲೀಸರು ಬಂದು, ಎಲ್ಲಿ ಆ ತರುಣರು? ಗಣ್ಯ ವಿದೇಶಿ ಅತಿಥಿಗಳನ್ನು ಅವರೇನಾದರೂ ಕಿಡ್ನಾಪ್ ಮಾಡಿಕೊಂಡು ಹೋಗಿಲ್ಲ ತಾನೆ? ಎಂದೆಲ್ಲ ರೂಢಿಗತ ತನಿಖೆ ನಡೆಸುವುದು, ಚಿಕ್ಕಮ್ಮ ಅವರನ್ನು ದಬಾಯಿಸಿ ಸಾಗಹಾಕುವುದು ನಡೆಯುತ್ತದೆ. ***

ಪಯಣವನ್ನು ಕೇಂದ್ರವಾಗಿಸಿಕೊಂಡ ರಸ್ತೆ ಸಿನೆಮಾಗಳ ಎರಡನೆ ಪದರ, ಪ್ರಯಾಣಿಸುವವರ ಬೆಳವಣಿಗೆ, ಮಾರ್ಪಾಡು, ಅರಿವಿನ ವಿಕಾಸವನ್ನೂ ಯಾತ್ರೆಯೊಡನೆ ತಳುಕು ಹಾಕುವುದು...ಈ ನಿಟ್ಟಿನಲ್ಲಿ ನೋಡುವುದಾದರೆ, ಒಂದೆಡೆ ತಂಗಿ, ವಿಶ್ರಮಿಸಿ, ಮತ್ತೆ ಗುರಿ ಮುಟ್ಟಲು ಹೊರಡುವ ಘಟ್ಟದಲ್ಲಿ ಆ ನಾಲ್ವರೂ ಸ್ವಲ್ಪ ಬದಲಾಗಿರುವುದನ್ನು ತೋರಿಸಬೇಕು. ನಿರ್ದೇಶಕರ ಜೀವನಸಂದರ್ಭಗಳ ಆಳವಾದ ತಿಳಿವಳಿಕೆ ಇಲ್ಲಿ ಮತ್ತೆ ಸಹಾಯಕ್ಕೆ ಬರುತ್ತದೆ: ಅಪರಿಚಿತ ಆತಿಥೇಯರಿಂದ ಷೋಡಶೋಪಚಾರಗೊಂಡು ನಕ್ಷತ್ರ ಖಚಿತ ನೀಲಿ ಬಾನಿನಡಿ ಪವಡಿಸಿರುವ ವಿಜ್ಞಾನಿ ದಂಪತಿ ಅಚಾನಕ್ಕಾಗಿ ಎಂಬಂತೆ, ತಮ್ಮ ಬೆಳೆದ ಮಗ ಮಾರ್ಕ್‌ನ ಸಾವನ್ನು ನೆನೆದುಕೊಂಡು ಸಂತಾಪಿಸುತ್ತಾರೆ. ಜೀವನೋತ್ಸಾಹ ಹೀರಿಬಿಟ್ಟಿರುವ ಈ ದುರ್ಘಟನೆಯಿಂದ ತಾನು ಹೆಚ್ಚು ಘಾಸಿಗೊಂಡಿದ್ದೇನೆ ಎಂದು ಮರಿಯಾ ಅಂದುಕೊಂಡಿರುವುದು ಸಹ ಅದೆಷ್ಟು ಸುಳ್ಳು! ಪ್ರಕೃತಿಯ ಸಾಂತ್ವನವೀಯುವ ನೀರವದಲ್ಲಿ, ರೋಮನ್, ಪ್ರೇಕ್ಷಕರಿಗೆ ಮಾತ್ರ ಗೊತ್ತಾಗುವಂತೆ ಹನಿಗಣ್ಣಾಗುತ್ತಾನೆ. ಎಲ್ಲ ಅರಗಿಸಿಕೊಂಡು ಮುಂದೆ ಸಾಗಿದಂತೆ, ಅತಿ ಚಟುವಟಿಕೆಯಿಂದ ತೋರಿಸಿಕೊಳ್ಳುವ ತಾನು, ದುಃಖಾರ್ತನಾಗಿ ಕರಗಿಹೋಗಿರುವುದು ಹೆಂಡತಿಗೆ ಗೊತ್ತಾಗಬಾರದು ಎಂದು ಎಚ್ಚರವಾಗಿದ್ದೀಯ ಎಂಬ ಆಕೆಯ ಪ್ರಶ್ನೆಗೆ ಉತ್ತರಿಸದೆ ಸುಮ್ಮನಿದ್ದುಬಿಡುತ್ತಾನೆ. ಹುಸೇನಿ ಸಹ ಮೊದಲಿನಂತಿಲ್ಲ. ಪ್ರಯಾಣದಲ್ಲಿ ಇಬ್ಬರೇ ಉಳಿದಾಗ ಬೆಳೆದ ವಿಚಿತ್ರ ಬಂಧದಲ್ಲಿ ಕಚ್ಚಾಡುತ್ತಿದ್ದ ಹುಸೇನಿ-ಮರಿಯಾ ನಡುವೆ ಸೌಹಾರ್ದ ಸದ್ದಿಲ್ಲದೇ ಅರಳಿದೆ. ನಮ್ಮ ಮಾರ್ಕ್ ಸಹ ಹೀಗೇ ಇದ್ದ...ನೆಲದ ಮೇಲೆ ಕೂತರೆ ನಿನ್ನ ತರಹಾನೇ ಕಡ್ಡಿ ಹಿಡಿದು ಚಿತ್ರ ಕೊರೆಯುತ್ತಿದ್ದ ಎಂದು ಮರಿಯಾ ಅವನಿಗೆ ಅರ್ಥವಾಗದ ಭಾಷೆಯಲ್ಲೇ ಆರ್ದ್ರಗೊಂಡರೂ ಅದು ಹೇಗೋ ಅವನ ಹೃದಯತಂತಿಯನ್ನು ಮೀಟಿದೆ. ಈಗ ಆಕೆ ಮೊದಲಿನ ದರ್ಪಿಷ್ಟ ವಿದೇಶಿ ಪ್ರವಾಸಿಯಾಗಿ ಆವನ ಕಣ್ಣಿಗೆ ಕಾಣುತ್ತಿಲ್ಲ. ಹುಡುಗಾಟಿಕೆಯೇ ಮೂರ್ತಿಯಾಗಿದ್ದ ಮೋರ್ಷಾ, ಟೂರಿಸ್ಟ್ ಗೈಡ್, ವೇಯ್ಟರ್ ಹಂತ ದಾಟಿ, ಒಂದೊಳ್ಳೆ ಕೆಲಸ ಗಿಟ್ಟಿಸಿ, ದಿಟ್ಟ ಚೆಲುವೆಯ ಕೈ ಹಿಡಿದು ಬದುಕಿನಲ್ಲಿ ನೆಲೆಗೊಳ್ಳಬೇಕು ಎಂಬ ಕನಸನ್ನು ನೇಯುತ್ತಿದ್ದಾನೆ. ಉದಾಸವೇ ಲಕ್ಷಣವಾಗಿದ್ದ ಮರಿಯಾ, ಹುಸೇನಿಯನ್ನು ಹಿಂದಿನ ಸೀಟಿಗೆ ಕಳಿಸಿ ಸ್ಟಿಯರಿಂಗ್ ಹಿಡಿದು, ಭಯಂಕರ ವೇಗದಲ್ಲಿ ಕಾರು ಓಡಿಸುತ್ತ ತನ್ನ ಹೊಸ ಸ್ವರೂಪ ದರ್ಶನ ಮಾಡಿದ್ದಾಳೆ. ಕಳೆದ ರಾತ್ರಿ ಪತಿಯಿಂದ ದೊರೆತ ಆಪ್ತ ಸಮಾಲೋಚನೆಯಿಂದ ಪ್ರಭಾವಿತಳಾಗಿ, ಬೆಳಗ್ಗೆ ಹೋಟೆಲಿಗೆ ಕರೆ ಮಾಡಿದ್ದ ಅಜ್ಞಾತ ಸಂಬಂಧಿಯನ್ನು ಸಂಪರ್ಕಿಸಲೂ ಯತ್ನಿಸುತ್ತಿದ್ದಾಳೆ! ಕಾರು ಯಾವುದೋ ಮರಳ ದಿಬ್ಬದಲ್ಲಿ ಹೂತುಹೋಗಿ, ನಗುತ್ತಾ, ಕೆಲೆಯುತ್ತಾ ಆ ನಾಲ್ವರೂ ಕೆಳಗಿಳಿದು, ಹತ್ತಿರವೇ ಇರುವ ವಿರಾಟ್ ಮರುಭೂಮಿಯೆಡೆಗೆ ಕುಬ್ಜ ಆಕೃತಿಗಳಾಗಿ ಸಾಗುವುದೇ ಪರದೆ ತುಂಬುವ ಮಹೋನ್ನತ, ಮನೋಜ್ಞ ಮುಕ್ತಾಯ ದೃಶ್ಯ.

[ khaste nabashid- Dont be tired- Directed by Mohsen Gharaie/Afshin Hashemi/

Writer - ವಿ.ಎನ್. ವೆಂಕಟಲಕ್ಷ್ಮೀ

contributor

Editor - ವಿ.ಎನ್. ವೆಂಕಟಲಕ್ಷ್ಮೀ

contributor

Similar News