ಲೂಟಿ: ಆರೋಪಿಗಳಿಬ್ಬರ ಬಂಧನ
Update: 2016-04-15 23:41 IST
ಬೆಂಗಳೂರು, ಎ. 15: ಕಣ್ಣಿಗೆ ಖಾರದ ಪುಡಿ ಎರಚಿ ಹಣ ದೋಚಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲ್ಲಿನ ಆರ್‌ಎಂಸಿ ಯಾರ್ಡ್ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಇಲ್ಲಿನ ಎಪಿಎಂಸಿಯಾರ್ಡ್‌ನ 4ನೆ ಮುಖ್ಯರಸ್ತೆಯ ನಿವಾಸಿ ಬಾಲಮುರುಗ ಯಾನೆ ಬಾಲು(23) ಹಾಗೂ ಗೊರಗುಂಟೆ ಪಾಳ್ಯದ ಎಂ.ಎಸ್.ಕೆ.ನಗರದ ಚೇತನ್ ಯಾನೆ ವಿಕ್ಕಿ(23) ಎಂದು ಪೊಲೀಸರು ಗುರುತಿಸಿದ್ದಾರೆ.
ಬಂಧಿತ ಆರೋಪಿಗಳು ಮಾ. 28ರಂದು ರಾತ್ರಿ 8 ಗಂಟೆಯ ವೇಳೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ 4ನೆ ಗೇಟ್‌ನ ತಿಂಡಿ ಅಂಗಡಿಯೊಂದರ ರಸ್ತೆಯಲ್ಲಿ ಬರುತ್ತಿದ್ದ ಜೆ.ರಘುರಾಮ್ ಎಂಬವರ ಕಣ್ಣಿಗೆ ಖಾರದ ಪುಡಿ ಎರಚಿ 3 ಲಕ್ಷ ರೂ. ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಕೆ ಮಾಡಿದ್ದ ದ್ವಿಚಕ್ರ ವಾಹನ ಹಾಗೂ 52 ಸಾವಿರ ರೂ.ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಈ ಸಂಬಂಧ ಹೆಚ್ಚುವರಿ ತನಿಖೆ ಕೈಗೊಂಡಿದ್ದಾರೆ.