ಎ.19ರಂದು ‘ಅಹಿಂಸೆ, ವಿಶ್ವ ಶಾಂತಿ’ ಜಾಥಾ
ಬೆಂಗಳೂರು, ಎ.15: ಭಗವಾನ್ ಮಹಾವೀರರ ಜಯಂತಿ ಅಂಗವಾಗಿ ಎ.19ರಂದು ನಗರದ ಟೌನ್‌ಹಾಲ್ ಬಳಿಯಿಂದ ಸ್ವಾತಂತ್ರ ಉದ್ಯಾನದವರೆಗೆ ‘ಅಹಿಂಸೆ ಮತ್ತು ವಿಶ್ವ ಶಾಂತಿ’ ಜಾಥಾ ಆಯೋಜಿಸಲಾಗಿದೆ ಎಂದು ಜೈನ್ ಯುವ ಸಂಘಟನೆಯ ಅಧ್ಯಕ್ಷ ಜೈನ್ ಸುರೇಶ್ ಮಂದೊತ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಥಾಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಕೆ.ಎಸ್.ಆರ್.ಚರಣ್‌ರೆಡ್ಡಿ ಚಾಲನೆ ನೀಡಲಿದ್ದಾರೆ. ನಂತರ ಜಾಥಾವು ಚಿಕ್ಕಪೇಟೆ, ನಗರ್ತಪೇಟೆ, ಅವೆನ್ಯೂ ರಸ್ತೆ ಮತ್ತು ಅರಮನೆ ರಸ್ತೆ ಮಾರ್ಗವಾಗಿ ಸಾಗಿ ಫ್ರೀಡಂಪಾರ್ಕ್‌ನಲ್ಲಿ ಸಭೆ ಸೇರಲಿದೆ ಎಂದರು.
ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿರುವ ಮಹಾವೀರ ಜಯಂತಿ ಹಾಗೂ ಅಹಿಂಸೆ ಮತ್ತು ವಿಶ್ವ ಶಾಂತಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತಕುಮಾರ್, ಸಂಸದ ಪಿ.ಸಿ. ಮೋಹನ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್, ಕ್ರೀಡೆ ಮತ್ತು ಯುವ ಸಬಲೀ ಕರಣ ಸಚಿವ ಅಭಯ್‌ಚಂದ್ರ ಜೈನ್ ಸೇರಿದಂತೆ ಅನೇಕ ಜೈನ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.