‘ಸಂಸ್ಕೃತಿ ರಕ್ಷಣೆಯಲ್ಲಿ ಜಿ.ನಾರಾಯಣರ ಪಾತ್ರ ದೊಡ್ಡದು’
Update: 2016-04-15 23:48 IST
ಬೆಂಗಳೂರು, ಎ.15: ಕನ್ನಡ ನೆಲಮೂಲ ಸಂಸ್ಕೃತಿ ರಕ್ಷಣೆ ಮಾಡುವಲ್ಲಿ ನಾಡೋಜ ಜಿ.ನಾರಾಯಣರವರ ಪಾತ್ರದೊಡ್ಡದು ಎಂದು ಸಾಹಿತಿ ನೇ.ಭ.ರಾಮಲಿಂಗ ಶೆಟ್ಟಿ ಬಣ್ಣಿಸಿದ್ದಾರೆ.
ನಗರದಲ್ಲಿ ಕನ್ನಡ ಯುವಜನ ಸಂಘ ಆಯೋಜಿಸಿದ್ದ ಜಿ.ನಾರಾಯಣರವರ ಬದುಕು-ಬರಹ ಕುರಿತ ಉಪನ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿ.ನಾರಾಯಣರವರು ಜಾನಪದ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಮಯದಲ್ಲಿ ಜನಪದ ರಕ್ಷಣೆ ಮತ್ತು ಗ್ರಾಮೀಣ ವಿಚಾರಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದರು ಎಂದು ಹೇಳಿದರು.
ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಅನೇಕ ಸಂಘಟನೆಗಳನ್ನು ಹುಟ್ಟಿಹಾಕಿದರು. ಕನ್ನಡ ಲೇಖಕರ ಸಂಘ, ಉದಯಬಾನು ಕಲಾ ಸಂಘ, ಬಿ.ಎಂ.ಶ್ರೀ.ಕಲಾ ಸಂಘಗಳನ್ನು ಕಟ್ಟಿ ಕನ್ನಡ ಸಾಹಿತ್ಯವನ್ನು ಪ್ರಚುರಪಡಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಜನರ ಗಮನ ಸೆಳೆದಿದ್ದರು ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ರು.ಬ.ಬಸಪ್ಪ, ಕನ್ನಡ ಯುವಜನ ಸಂಘದ ಅಧ್ಯಕ್ಷ ಜಗದೀಶರೆಡ್ಡಿ ಉಪಸ್ಥಿತರಿದ್ದರು.