ಸಿಬಿಐ ತನಿಖೆಗೆ ವಿಪಕ್ಷ ನಾಯಕ ಶೆಟ್ಟರ್ ಆಗ್ರಹ
ಬೆಂಗಳೂರು, ಎ. 15: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಲ್ಲಿ ‘ಬದಲಿ ನಿವೇಶನ’ ನೀಡುವ ನೆಪದಲ್ಲಿ ಸಾವಿರಾರು ಕೋಟಿ ರೂ.ಅವ್ಯವಹಾರ ನಡೆದಿದ್ದು, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡಿಎ ಆಯುಕ್ತ ಶ್ಯಾಮ್‌ಭಟ್ ಅವರೇ ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದು, ಅವರನ್ನು ಕೂಡಲೇ ಅಮಾನತು ಮಾಡಬೇಕು. ಇದಕ್ಕೆ ಸಿಎಂ ಸಿದ್ದರಾಮಯ್ಯನವರ ಕುಮ್ಮಕ್ಕು ಇರುವ ಸಾಧ್ಯತೆಗಳಿವೆ ಎಂದು ದೂರಿದರು.
ಪುತ್ರನ ಸ್ನೇಹಿತನಿಗೆ ಭೂಮಿ: ಸಿಎಂ ಸಿದ್ದರಾಮಯ್ಯರ ಪುತ್ರನ ಮಿತ್ರ ಡಾ. ರಾಜೇಶ್ ಗೌಡ ಒಡೆತನದ ಶಾಂತಾ ಇಂಡಸ್ಟ್ರಿಯಲ್ ಎಂಟರ್ ಪ್ರೈಸಸ್‌ಗೆ ನಿಯಮ ಉಲ್ಲಂಘಿಸಿ ಹೆಬ್ಬಾಳ ಕೆರೆ ಸಮೀಪದಲ್ಲಿ 2.19 ಎಕರೆ ಬದಲಿ ಭೂಮಿ ನೀಡಲಾಗಿದೆ. ಈ ಪ್ರಕರಣದಲ್ಲಿ ಸ್ವಜನಪಕ್ಷಪಾತ ನಡೆದಿರುವುದು ನಿಶ್ಚಿತ ಎಂದು ಶೆಟ್ಟರ್ ಆರೋಪಿಸಿದರು.
1977ರಲ್ಲಿ ಮಹಾಲಕ್ಷ್ಮೀ ಲೇಔಟ್, ಕೇತಮಾರ ನಹಳ್ಳಿ ಗ್ರಾಮ ಸರ್ವೇ ನಂ.174, 175ರಲ್ಲಿ ಎರಡು ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದು, ಅದಕ್ಕೆ ಪರಿಹಾರದ ಬದಲಿಗೆ ಬದಲಿ ಭೂಮಿ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಲಾಗಿತ್ತು. ಆದರೆ, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಬಳಿಕ ಬದಲಿ ಭೂಮಿ ಮಂಜೂರು ಮಾಡಲಾಗಿದೆ ಎಂದು ಆಕ್ಷೇಪಿಸಿದರು.
ಬದಲಿ ಮಾಫಿಯಾ: ಜೆಡಿಎಸ್‌ನ ಮುಖಂಡ ಎಂ.ಎಂ.ಹನುಮಂತೇಗೌಡ ಬಿಡಿಎಯಲ್ಲಿ ಬದಲಿ ನಿವೇಶನದ ಹೆಸರಿನಲ್ಲಿ 40ರಿಂದ 50 ನಿವೇಶನಗಳನ್ನು ಪಡೆದಿದ್ದು, ಬಿಡಿಎಗೆ ಕೋಟ್ಯಂತರ ರೂ.ವಂಚಿಸಿದ್ದಾರೆ. ಆದುದರಿಂದ ಈ ಬಗ್ಗೆ ಸಮಗ್ರ ತನಿಖೆ ಆಗಲೇಬೇಕೆಂದು ಅವರು ಒತ್ತಾಯಿಸಿದರು.
ಹನುಮಂತೇಗೌಡ, ಹೊರ ವಲಯದ ರೈತರಿಂದ ಬಿಡಿಎ ವಶಪಡಿಸಿಕೊಳ್ಳುವ ಭೂಮಿಯನ್ನು ಅಗ್ಗದ ಬೆಲೆಗೆ ತಮ್ಮ ಪತ್ನಿ ಹೆಸರಿಗೆ ಜಿಪಿಎ ಪಡೆದು, ಆ ಬಳಿಕ ತನ್ನ ಹೆಸರಿಗೆ ಮಾರಾಟ ಕ್ರಯಪತ್ರ ಮಾಡಿಸಿ, ಬಿಡಿಎಯಿಂದ ಅಕ್ರಮವಾಗಿ ನಿವೇಶನಗಳನ್ನು ಪಡೆದಿದ್ದಾರೆ. ಇದಕ್ಕೆ ಅಧಿಕಾರಿಗಳ ಕುಮ್ಮಕ್ಕು ಇರುವುದು ನಿಶ್ಚಿತ ಎಂದು ವಿವರಣೆ ನೀಡಿದರು.
ಭೂಮಿ ಮಂಜೂರು: ‘ಮೆಟ್ರೋಪಾಲಿಟನ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್‌ಗೆ ಯಶವಂತಪುರ ಹೋಬಳಿ ಸೀಗೆಹಳ್ಳಿ ಕೆಂಪೇಗೌಡ ಲೇಔಟ್‌ಗೆ ಸೇರಿದ 25ರಿಂದ 33 ಎಕರೆ ಭೂಮಿಯನ್ನು ಸಗಟು ಹಂಚಿಕೆ ತೀರ್ಮಾನ ಕೈಗೊಂಡಿದ್ದು, ಈ ಪ್ರಕರಣದಲ್ಲಿ ಬಿಡಿಎ ನಿಯಮ ಉಲ್ಲಂಘಿಸಲಾಗಿದೆೆ ಎಂದು ಶೆಟ್ಟರ್ ದಾಖಲೆ ಬಿಡುಗಡೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಗೋವಿಂದ ಎಂ.ಕಾರಜೋಳ, ಲಕ್ಷ್ಮಣ ಸವದಿ, ಶಾಸಕರಾದ ಎಸ್.ಆರ್.ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.