×
Ad

ಇಬ್ಬರು ಆರೋಪಿಗಳ ಬಂಧನ

Update: 2016-04-18 23:48 IST

ಬೆಂಗಳೂರು, ಎ. 18: ಗೋವಾ ಸೇರಿ ಇತರೆ ಪ್ರವಾಸಿ ತಾಣ ಗಳಿಗೆ ಹೋಗಿ ಮೋಜು ಮಾಡಲು ಶ್ರೀಮಂತರ ಮನೆಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಆರೋಪದಲ್ಲಿ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಹನುಮಂತನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಕೆಂಗೇರಿಯ ಕೊಮ್ಮಘಟ್ಟದ ಮಂಜ ಯಾನೆ ಮಂಜುನಾಥ(33)ಹಾಗೂ ಆತನ ಸಹಚರ ತಮಿಳುನಾಡು ಮೂಲದ ತಿರ್‌ಪತ್ತೂರ್‌ನ ಮಾಲಾಶ್ರೀ ಯಾನೆ ಮಣಿಕಂಠ(27) ಎಂದು ಪೊಲೀಸರು ಗುರುತಿಸಿದ್ದಾರೆ.

ಆರೋಪಿ ಕೊಮ್ಮಘಟ್ಟ ಮಂಜ ಹಗಲು ವೇಳೆ ಬೀಗ ಹಾಕಿರುವ ಐಷಾರಾಮಿ ಮನೆಗಳನ್ನು ಗುರುತಿಸಿ, ಸಂಜೆ 6ರ ನಂತರ ಲೈಟ್ ಹಾಕಿರುವ ನಾಲ್ಕೈದು ಬಾರಿ ನೋಡಿ ಖಚಿತಪಡಿಸಿಕೊಂಡು ಮಧ್ಯರಾತ್ರಿ ಸಮಯದಲ್ಲಿ ಅಂತಹ ಮನೆಗಳ ಬೀಗಗಳನ್ನು ಕಬ್ಬಿಣದ ರಾಡ್‌ಗಳಿಂದ ಮೀಟಿ, ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ಹಣವನ್ನು ಕಳವು ಮಾಡಿ ಪರಾರಿಯಾಗುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಕಳವು ಮಾಡಿದ ಆಭರಣಗಳನ್ನು ಮಾರಾಟ ಮಾಡಿ ಗೋವಾ, ಊಟಿ ಸೇರಿ ಇನ್ನಿತರೆ ಪ್ರವಾಸಿ ತಾಣಗಳಿಗೆ ಹೋಗಿ ಐಷಾರಾಮಿ ಲಾಡ್ಜ್‌ಗಳಲ್ಲಿ ವೈಭೋಗ ಜೀವನ ನಡೆಸುತ್ತಿದ್ದನು. ಆರೋಪಿ ಮಂಜ ಹಾಗೂ ಆತನ ಸಹಚರರ ವಿರುದ್ಧ ನಗರದ ಸುಮಾರು 10ರಿಂದ 15 ಪೊಲೀಸ್ ಠಾಣೆಗಳಲ್ಲಿ 45-50 ಕಳವು ಪ್ರಕರಣಗಳು ದಾಖಲಾಗಿದ್ದು, 30 ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಫೆ.14ರಂದು ಬುಲ್ ಟೆಂಪಲ್ ರಸ್ತೆಯ ಶೇಷಾಗಣಪತಿ ದೇವಾಲಯದ ಬಳಿಯ ಮನೆಯ ಬೀಗ ಹಾಕಿಕೊಂಡು ಕೃಷ್ಣಸ್ವಾಮಿ ಅವರು ಸಂಸಾರ ಸಮೇತ ಕೇರಳಕ್ಕೆ ಪ್ರವಾಸ ಹೋಗಿದ್ದಾಗ ಅವರ ಮನೆಗೆ ನುಗ್ಗಿ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ಯಾಚರಣೆ ನಡೆಸಿದ ಹನುಮಂತನನಗರ ಪೊಲೀಸರು, ಕಳವು ಮಾಡಿದ ಚಿನ್ನಾಭರಣಗಳನ್ನು ಖರೀದಿಸುತ್ತಿದ್ದ ಗಣೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮಂಜನ ಸುಳಿವು ಪತ್ತೆಯಾಗಿ ಆತನನ್ನು ಸಹಚರನ ಜೊತೆ ಬಂಧಿಸಲಾಯಿತು.

ಆರೋಪಿಗಳಿಂದ ಸುಮಾರು ನಲವತ್ತೈದು ಲಕ್ಷ ರೂ. ಬೆಲೆ ಬಾಳುವ 1ಕೆ.ಜಿ. ಚಿನ್ನಾಭರಣಗಳು, 20 ಕೆ.ಜಿ. ಬೆಳ್ಳಿ, ದೇವರ ಪೂಜಾ ಸಾಮಾನುಗಳು ಮತ್ತು ನಗದು ಹಣ, ವಿದೇಶಿ ಕರೆನ್ಸಿ ನೋಟು ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್‌ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News