×
Ad

ಕನಿಷ್ಠ ವೇತನ ನೀಡದ ಹಿಮಾಲಯ ಡ್ರಗ್ ಕಂಪೆನಿ: ಆರೋಪ

Update: 2016-04-20 23:47 IST

ಬೆಂಗಳೂರು,ಎ.20: ನಗರದ ನೆಲಮಂಗಲ ದಲ್ಲಿರುವ ಹಿಮಾಲಯ ಡ್ರಗ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡುವಲ್ಲಿ ಆಡಳಿತ ಮಂಡಳಿ ನಿರ್ಲಕ್ಷ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಸಿಐಟಿಯು ಕಾರ್ಯದರ್ಶಿ ಇ.ಕೆ.ಎನ್.ರಾಜನ್ ಆರೋಪಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ದಶಕಗಳಿಂದ ಕೆಲಸ ನಿರ್ವಹಿಸುತ್ತಿದ್ದರೂ ಇದುವರೆಗೂ ಕನಿಷ್ಠ ವೇತನ ನೀಡುತ್ತಿಲ್ಲ. ಅಲ್ಲದೇ ವೇತನ ಹೆಚ್ಚಳದಲ್ಲಿಯೂ ನಿರ್ಲಕ್ಷ ಧೋರಣೆಯನ್ನು ಅನುಸರಿಸಲಾಗುತ್ತಿದೆ ಎಂದು ದೂರಿದರು.

ಕಂಪೆನಿಯ ನಿರ್ಲಕ್ಷ ಧೋರಣೆಯನ್ನು ಖಂಡಿಸಿ ಕಳೆದ 16 ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸಲಾಗುತ್ತಿದೆ. ಹಾಗೂ ಈ ಸಂಬಂಧ ಎರಡು ಬಾರಿ ಕಾರ್ಮಿಕ ಆಯುಕ್ತರು ಕರೆದಿದ್ದ ಸಭೆಯನ್ನು ಆಡಳಿತ ಮಂಡಳಿ ಕಡೆಗಣಿಸಿದೆ ಎಂದು ತಿಳಿಸಿದರು.

ಹೋರಾಟನಿರತ ಕಾರ್ಮಿಕರನ್ನು ಚದುರಿಸಲು ಆಡಳಿತ ಮಂಡಳಿ ಕಾರ್ಖಾನೆಗೆ ಸಂಬಂಧ ಪಡದೇ ಇರುವ ಪುಂಡರನ್ನು ಕರೆತಂದು ಅಶಾಂತಿಯನ್ನು ಸೃಷ್ಟಿ ಮಾಡುತ್ತಿದೆ. ಆದುದರಿಂದ ಕೂಡಲೇ ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಬೇಕು. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News