×
Ad

ಕಬ್ಬನ್‌ ಪಾರ್ಕ್‌- ಸಿಟಿ ರೈಲ್ವೆ ನಿಲ್ದಾಣದ ವರೆಗಿನ ಸುರಂಗ ನಮ್ಮ ಮೆಟ್ರೊ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತ

Update: 2016-04-30 15:16 IST

ಬೆಂಗಳೂರು.ಎ.30: ಕಬ್ಬನ್‌ ಪಾರ್ಕ್‌ನಿಂದ ಸಿಟಿ ರೈಲ್ವೆ ನಿಲ್ದಾಣದ ವರೆಗಿನ ಸುರಂಗ ನಮ್ಮ ಮೆಟ್ರೊ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿರುವುದು ಪ್ರಯಾಣಿಕರಲ್ಲಿ ಅಮಿತೋತ್ಸಾಹ ಉಂಟು ಮಾಡಿದೆ.

ಮೆಟ್ರೋ ಪ್ರಯಾಣ ಹೇಗಿರುತ್ತದೆ ಎನ್ನುವ ಕುತೂಹಲಕ್ಕೆ ನಮ್ಮ ಮೆಟ್ರೋ ಸಾಕ್ಷಿಯಾಗಿತ್ತು., ಮಕ್ಕಳು, ಯುವಕರು, ವೃದರಾದಿಯಾಗಿ ಎಲ್ಲ ಜನ ಸಮೂಹ ಮೆಟ್ರೋದಲ್ಲಿ ಪ್ರಯಾಣ ಮಾಡಿತು. ಮೊದಲ ದಿನ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರಿನ ಬಯ್ಯಪ್ಪನ ಹಳ್ಳಿಯಿಂದ ನಾಯಂಡಹಳ್ಳಿವರೆಗೆ ಪ್ರಯಾಣ ಮಾಡಿದ ಪ್ರಯಾಣಿಕರಲ್ಲಿ ಸಂತಸ ಎದ್ದು ಕಾಣುತ್ತಿತ್ತು. ಕರ್ಕಶ ಹಾರನ್‌ಗಳು, ಧೂಳು ಹೊಗೆಯ ಸಮಸ್ಯೆ ಇಲ್ಲದೇ ಅತ್ಯಂತ ಕಡಿಮೆ ಸಮಯದಲ್ಲಿ, ಸುಲಭ ಪ್ರಯಾಣ ದರದಲ್ಲಿ ಪ್ರಯಾಣಿಕರು ಅತ್ಯಂತ ಆಹ್ಲಾದಕರ ವಾತಾವರಣದಲ್ಲಿ ಪ್ರಯಾಣ ಮಾಡಿದರು.

ಮೊದಲ ದಿನದಲ್ಲಿ ಸೆಲ್ಫಿಯ ಭರಾಟೆ ಹೆಚ್ಚಾಗಿತ್ತು. ನಿಲ್ದಾಣದ ಮುಂಭಾಗ, ನಿಲ್ದಾಣದ ಒಳಗಡೆ, ರೈಲಿನ ಒಳಗಡೆ ಪ್ರಯಾಣಿಕರು ಸೆಲ್ಫಿ ತೆಗೆದುಕೊಳ್ಳುತ್ತಿದ್ದದ್ದು ಕಂಡು ಬಂತು. ಗಂಟೆಗಟ್ಟಲೆ ಟ್ರಾಫಿಕ್‌ಗಳಲ್ಲಿ ಸಿಲುಕಿ ಬಸವಳಿಯುತ್ತಿದ್ದ ಪ್ರಯಾಣಿಕರು ಇಂದು ಕೇವಲ 8-10 ನಿಮಿಷಗಳಲ್ಲಿ ಉದ್ಯೋಗದ ಸ್ಥಳಕ್ಕೆ ತಲುಪಿದ ಖುಷಿ ಅವರ ಮುಖದಲ್ಲಿ ಎದ್ದುಕಾಣುತ್ತಿತ್ತು.

ಬೆಳಗ್ಗೆ 6 ಗಂಟೆಗೆ ಸಂಚಾರ ಆರಂಭವಾದಾಗ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.ಕಾಲ ಕ್ರಮೇಣ ಪ್ರಯಾಣಿಕರ ಸಂಖ್ಯೆ ಹೆಚ್ಚಾಯಿತು. ಕಚೇರಿ ಸಮಯ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ರೈಲು ಸಂಪೂರ್ಣ ಪ್ರಯಾಣಿಕರಿಂದ ತುಂಬಿತ್ತು. ಮೊದಲ ದಿನ ಕುತೂಹಲದಿಂದ ಪ್ರಯಾಣ ಮಾಡಿದವರ ಸಂಖ್ಯೆಯೇ ಹೆಚ್ಚಾಗಿತ್ತು. 

ಮನೆಯಿಂದ ಕಚೇರಿಗೆ ಎಷ್ಟು ಸಮಯದಲ್ಲಿ ತಲುಪುತ್ತೇವೆ. ಮಾಸಿಕ ಎಷ್ಟು ಖರ್ಚು ವೆಚ್ಚವಾಗುತ್ತದೆ. ಮೆಟ್ರೋದಲ್ಲಿ ಸಂಚರಿಸಿದರೆ ಆರೋಗ್ಯ ಹೇಗೆ ಸುಧಾರಿಸುತ್ತದೆ. ಹೀಗೆ ಹತ್ತು ಹಲವು ಸಂಗತಿಗಳ ಬಗ್ಗೆ ತಮ್ಮಲ್ಲೇ ಚರ್ಚೆ ನಡೆಸುತ್ತಿದ್ದದ್ದು ಕಂಡು ಬಂತು.

ದಕ್ಷಿಣ ಭಾರತದಲ್ಲೇ ಮೊದಲ ಸುರಂಗ ಮಾರ್ಗ ಇದಾಗಿದ್ದು, ಕಬ್ಬನ್‌ಪಾರ್ಕ್ ಮತ್ತು ಸಿಟಿ ರೈಲು ನಿಲ್ದಾಣದ ನಡುವೆ ಐದು ನಿಲ್ದಾಣಗಳಿವೆ. ಮೆಜೆಸ್ಟಿಕ್ ನಿಲ್ದಾಣದಲ್ಲಿ ಮೊಬೈಲ್ ನೆಟ್‌ವರ್ಕ್ ದೊರೆತರೆ ಉಳಿದ ನಿಲ್ದಾಣಗಳಲ್ಲಿ ಇನ್ನಷ್ಟೆ ಮೊಬೈಲ್ ನೆಟ್‌ವರ್ಕ್ ದೊರೆಯಬೇಕಾಗಿದೆ.

ಹಳೆ ಮದ್ರಾಸ್ ರಸ್ತೆಯ ಬೈಯಪ್ಪನಹಳ್ಳಿಯಿಂದ ಹಾಗೂ ನಾಯಂಡನಹಳ್ಳಿಯಿಂದ ವಿಧಾನಸೌಧ, ಎಂ.ಎಸ್. ಬಿಲ್ಡಿಂಗ್, ವಿಶ್ವೇಶ್ವರಯ್ಯ ಗೋಪುರ, ಪ್ರಧಾನ ಅಂಚೆ ಕಚೇರಿಗಳಿಗೆ ಉದ್ಯೋಗಕ್ಕಾಗಿ ಬರುವವರು ಮೆಟ್ರೊ ರೈಲಿನಲ್ಲೇ ಆಗಮಿಸುತ್ತಿದ್ದದ್ದು ಕಂಡುಬಂತು.

ಬೈಯಪ್ಪನಹಳ್ಳಿಯಿಂದ ನಾಯಂಡನಹಳ್ಳಿಯವರೆಗೆ 18 ಕಿ.ಮೀ.ದೂರದ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿದ್ದು, 30 ನಿಮಿಷಗಳಲ್ಲಿ ತಲುಪಬಹುದು. ಪ್ರತಿ 10 ನಿಮಿಷಕ್ಕೊಂದು ರೈಲು ಸಂಚರಿಸುತ್ತಿದ್ದು, ಪ್ರತಿ ರೈಲು ಕೂಡ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಪ್ರತಿ ನಿಲ್ದಾಣದಲ್ಲಿ ಒಂದು ನಿಮಿಷ ರೈಲು ನಿಲುಗಡೆಯಾಗುತ್ತದೆ. ಭದ್ರತೆಗೆ ಸಾಕಷ್ಟು ಸಂಖ್ಯೆಗೆ ಖಾಸಗಿ ಭದ್ರತಾ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ. ಬಿಗಿ ಭದ್ರತೆಗಾಗಿ ಎಲ್ಲಾ ಕಡೆ ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ. ಮೆಜೆಸ್ಟಿಕ್ ನಿಲ್ದಾಣದಲ್ಲಿ ಕಾರ್ಮಿಕರು ಸ್ವಚ್ಛತೆ, ಮತ್ತಿತರ ಕೆಲಸದಲ್ಲಿ ನಿರತರಾಗಿರುವುದು ಕಂಡುಬಂತು. ಕಬ್ಬನ್ ಪಾರ್ಕ್ ನಿಲ್ದಾಣದ ಹೊರಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗಿತ್ತು.

ಶಾಲೆಗೆ ರಜೆ ಇರುವುದರಿಂದ ಮಕ್ಕಳ ಸಂಖ್ಯೆಯೂ ಹೆಚ್ಚಾಗಿತ್ತು. ಮಹಿಳೆಯರು, ಮಕ್ಕಳು, ಯುವಕರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವರ್ಗದ ಜನರೂ ಸುರಂಗ ಮಾರ್ಗ ಸಂಚಾರದ ಅನುಭವ ಪಡೆಯಲು ಆಗಮಿಸಿದ್ದರು. ವಿಶೇಷವಾಗಿ ಮಕ್ಕಳ ಹರ್ಷಕ್ಕೆ ಪಾರವೇ ಇರಲಿಲ್ಲ.

ಎಲ್ಲಾ ನಿಲ್ದಾಣಗಳಲ್ಲೂ ಟಿಕೆಟ್ ಕೌಂಟರ್ ತೆರೆಯಲಾಗಿತ್ತು. ಕೌಂಟರ್ ಮುಂದೆ ಟಿಕೆಟ್‌ಗಾಗಿ ಸಾಲು ಗಟ್ಟಿ ಪ್ರಯಾಣಿಕರು ನಿಂತಿರುವ ದೃಶ್ಯ ಎಲ್ಲಾ ನಿಲ್ದಾಣಗಳಲ್ಲೂ ಕಂಡುಬಂತು. ಮೆಟ್ರೋ ಸುರಂಗ ಮಾರ್ಗ ಸಂಚಾರ ಖುಷಿ ನೀಡಿದೆ. ಮುಂದಿನ ದಿನಗಳಲ್ಲಿ ನಗರದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಹೆಚ್ಚಿನ ಪ್ರಯಾಣಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದದ್ದು ಕಂಡು ಬಂತು.

ರಾತ್ರಿ 10 ಗಂಟೆಯವರೆಗೂ ರೈಲು ಸಂಚಾರ ಇರುತ್ತದೆ. ಸುರಂಗದಲ್ಲಿ ರೈಲು 38 ಕಿ.ಮೀ.ವೇಗದಲ್ಲಿ ಸಂಚರಿಸುತ್ತಿದೆ. ರೈಲು ಮಾರ್ಗದ ಫ್ಲಾಟ್‌ಫಾರ್ಮ್‌ಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ, ಹಳದಿ ಬಣ್ಣದ ಗೆರೆಗಳನ್ನು ದಾಟಿ ಹೋಗದಂತೆ ಎಚ್ಚರವಹಿಸಲಾಗಿದೆ. ಎಸ್ಕಲೇಟರ್, ಮೆಟ್ಟಿಲುಗಳ ಮೂಲಕ ನಿಲ್ದಾಣಗಳಿಗೆ ಪ್ರಯಾಣಿಕರು ಆಗಮಿಸಿದರು.

ಮದ್ಯಪಾನ ಮಾಡಿ ತೂರಾಡುವವರಿಗೆ ಮೆಟ್ರೋದಲ್ಲಿ ಅವಕಾಶವಿಲ್ಲ. ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸುವರ ಮೇಲೂ ಕಣ್ಗಾವಲು ಹಾಕಲಾಗಿದೆ. ಪ್ರಯಾಣಿಕರು ಸಭ್ಯತೆಯಿಂದ ವರ್ತಿಸಬೇಕು ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.

ಹೆಚ್ಚಿನ ಲೆಗ್ಗೇಜ್ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಸ್ಕ್ಯಾನರ್ ಯಂತ್ರದೊಳಗೆ ತೂರುವ ಸಣ್ಣಪುಟ್ಟ ಬ್ಯಾಗ್, ಚೀಲಗಳನ್ನು ಒಯ್ಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News