×
Ad

ವಿದ್ಯಾರ್ಥಿಗಳ ಹಿತರಕ್ಷಣೆಗೆ ಸರಕಾರ ಬದ್ಧ: ಸಚಿವ ಡಾ.ಶರಣ ಪ್ರಕಾಶ ಪಾಟೀಲ್

Update: 2016-05-01 18:19 IST

ಬೆಂಗಳೂರು, ಮೇ 1: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ಸಂಬಂಧ ರಾಜ್ಯದ ವಿದ್ಯಾರ್ಥಿಗಳ ಹಿತರಕ್ಷಣೆಗೆ ರಾಜ್ಯ ಸರಕಾರ ಬದ್ಧ. ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಆಭಯ ನೀಡಿದ್ದಾರೆ.


 ರವಿವಾರ ನಗರದಲ್ಲಿ ಕರ್ನಾಟಕ ಗ್ಯಾಸ್ಟ್ರೋ ಸೆಂಟರ್‌ನ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ‘ನೀಟ್’ ಪರೀಕ್ಷೆಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಾಗಿರುವ ಸೀಟ್‌ಗಳ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.


ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಏಕರೂಪ ಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ. ಸರಕಾರವು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಸೂಕ್ತ ತೀರ್ಮಾನ ತೆಗೆದುಕೊಂಡಿದೆ. ಏಕರೂಪ ಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟುಗಳ ಕಡಿಮೆ ಆಗುತ್ತವೆ ಎಂದು ಆತಂಕ ಪಡುವ ಅಗತ್ಯವಿಲ್ಲ ಎಂದರು.


ಜೀವನ ಶೈಲಿ ಬದಲು: ಇತ್ತೀಚಿನ ಬದಲಾದ ಜೀವನಶೈಲಿಯ ಹಿನ್ನೆಲೆಯಲ್ಲಿ ವಯಸ್ಸಿನ ವ್ಯತ್ಯಾಸವಿಲ್ಲದೆ ಎಲ್ಲ ವಯೋಮಾನದವರನ್ನು ಕಾಡುತ್ತಿರುವ ಸಮಸ್ಯೆಯೆಂದರೆ ಅಜೀರ್ಣತೆ. ಇದು ಈಗ ಸಾಮಾನ್ಯ. ಆದರೆ, ಈ ಜೀರ್ಣಾಂಗ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಕಡಿಮೆ ಇದೆ.


ಬಹುತೇಕರು ಈ ಸಮಸ್ಯೆ ಪರಿಹಾರಕ್ಕೆ ಮನೆಯಲ್ಲೇ ಮದ್ದು ತಯಾರಿಸಿಕೊಳ್ಳುತ್ತಾರೆ. ಇಲ್ಲವೇ ಅವೈಜ್ಞಾನಿಕ ರೀತಿಯ ಕ್ರಮಗಳನ್ನು ಅನುಸರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಜೀರ್ಣಾಂಗ ಸಮಸ್ಯೆಗೆ ಒಂದೇ ಸೂರಿನಡಿ ತಜ್ಞರಿಂದ ಸೂಕ್ತ ಔಷಧೋಪಚಾರದಿಂದ ಪರಿಹಾರದ ಅಗತ್ಯವಿದೆ ಎಂದು ಅವರು ತಿಳಿಸಿದರು.


ಉಪ ಮೇಯರ್ ಹೇಮಲತಾ ಗೋಪಾಲಯ್ಯ, ಡಾ.ಉಮೇಶ್ ಜಾಲಿಹಾಳ್, ಮಾಜಿ ಸಚಿವ ಸೋಮಣ್ಣ, ಮಾಜಿ ಶಾಸಕ ನೆ.ಲ.ನರೆಂದ್ರ ಬಾಬು ಪಾಲ್ಗೊಂಡಿದ್ದು, ತುಮಕೂರು ಸಿದ್ದಗಂಗಾ ಮಠದ ಪೀಠಾಧೀಪತಿ ಸಿದ್ದಗಂಗಾ ಸ್ವಾಮೀಜಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News