ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಸರಕಾರ ಬದ್ಧ: ಸಿದ್ಧರಾಮಯ್ಯ

Update: 2016-05-01 13:27 GMT

ಬೆಂಗಳೂರು, ಮೇ 1: ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ನಿಷೇಧಿಸಲು ಮಹಾರಾಷ್ಟ್ರ ರಾಜ್ಯಕ್ಕಿಂತಲೂ ಬಲವಾದ ಕಾನೂನನ್ನು ಜಾರಿಗೊಳಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದಿಲ್ಲಿ ಘೋಷಿಸಿದ್ದಾರೆ.

ರವಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾಜಿ ಸಚಿವ ಪ್ರೊ.ಎ.ಲಕ್ಷ್ಮೀ ಸಾಗರ್ ದತ್ತಿ ಉಪನ್ಯಾಸಕ ಕಾರ್ಯಕ್ರಮದಲ್ಲಿ ‘ಮೂಢನಂಬಿಕೆಗಳು ವೈಜ್ಞಾನಿಕ ಮನೋಭಾವಕ್ಕೆ ಮಾರಕವೇ’ ಎಂಬ ವಿಷಯದ ಮೇಲೆ ಮಾತನಾಡಿದ ಅವರು, ಮೌಢ್ಯ ಪ್ರತಿಬಂಧಕ ವಿಧೇಯಕವನ್ನು ಶೀಘ್ರವೇ ವಿಧಾನ ಸಭೆಯಲ್ಲಿ ಮಂಡಿಸಿ ಅಂಗೀಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜನಸಾಮಾನ್ಯರು ವಿಚಾರವಂತರಾಗಬೇಕು. ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು. ಆ ಮೂಲಕ ಮೂಢನಂಬಿಕೆಗಳು ಹಾಗೂ ಕಂದಾಚಾರಗಳನ್ನು ಕೈಬಿಡಬೇಕು ಎಂದ ಸಿದ್ದರಾಮಯ್ಯ, ಜ್ಯೋತಿಷ್ಯ, ವಾಸ್ತುಶಾಸ್ತ್ರಗಳನ್ನು ನಂಬಬಾರದು ಎಂದು ಸಲಹೆ ನೀಡಿದರು.

ವಾಸ್ತುಶಾಸ್ತ್ರ ಹೇಳುವ ಕೆಲವರು ಮನೆಗೆ ಬಂದು ತಿಂಡಿ ತಿಂದು, ಕಾಫಿ ಕುಡಿದು ನಿಮ್ಮ ಮನೆಯ ವಾಸ್ತು ಸರಿಯಿಲ್ಲ ಎಂದು ಸುಖಾಸುಮ್ಮನೆ ಇರುವವರಿಗೆ ಹುಳ ಬಿಡುವ ಕೆಲಸ ಮಾಡುತ್ತಾರೆ. ಮನೆಯಲ್ಲಿನ ಹೆಣ್ಣು ಮಕ್ಕಳು ಕೂಡಲೇ ಇದನ್ನು ನಂಬುತ್ತಾರೆ. ಇಂತಹ ವಿಚಾರಗಳಿಗೆ ಜನತೆ ಸೊಪ್ಪು ಹಾಕಬಾರದು ಎಂದು ಸಿದ್ದರಾಮಯ್ಯ ನುಡಿದರು.

ಜ್ಯೋತಿಷ್ಯ, ರಾಹುಕಾಲ, ಗುಳಿಕಾಲ ಇವುಗಳನ್ನು ದೂರವಿಡಬೇಕು. ಆ ಹಿನ್ನೆಲೆಯಲ್ಲೇ ತಾನು ರಾಹುಕಾಲದಲ್ಲೆ ಬಜೆಟ್ ಮಂಡಿಸಿದೆ ಎಂದ ಅವರು, ರಾಹುಕಾಲದಲ್ಲೇ ರಾಜ್ಯದ ಜನತೆಗೆ ಒಳ್ಳೆಯ ಯೋಜನೆಗಳನ್ನು ಪ್ರಕಟಿಸಿದ್ದೇನೆ ಎಂದರು.

ಸಮಾಜವಾದಿ ಹಿನ್ನೆಲೆಯಿಂದಲೇ ಬಂದಿದ್ದ ಜೆ.ಎಚ್.ಪಟೇಲ್ ಮುಖ್ಯಮಂತ್ರಿ ಆಗಿದ್ದಾಗ ಮೂಢನಂಬಿಕೆಗೆ ಜೋತು ಬಿದ್ದು ಚಾಮರಾಜನಗರಕ್ಕೆ ಹೋಗದೆ ಹೊಸ ಜಿಲ್ಲೆಯನ್ನು ಮಹದೇಶ್ವರ ಬೆಟ್ಟದಿಂದಲೇ ಘೋಷಿಸಿ, ಉದ್ಘಾಟಿಸಿದ್ದರು ಎಂದು ಸಿದ್ಧರಾಮಯ್ಯ ಇದೇ ವೇಳೆ ಸ್ಮರಿಸಿದರು.

ಅಧಿಕಾರದಲ್ಲಿರುವವರು ಹೆಚ್ಚು ವೈಚಾರಿಕತೆ ಹಾಗೂ ಪ್ರಗತಿ ವಿಚಾರಗಳನ್ನು ಅಳವಡಿಸಿಕೊಂಡರೆ ಅದನ್ನು ಜನ ಒಪ್ಪುತ್ತಾರೆ ಎಂದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಸಚಿವ ಪ್ರೊ.ಎ.ಲಕ್ಷ್ಮಿ ಸಾಗರ್ ಪ್ರಾಮಾಣಿಕ ಹಾಗೂ ಸರಳ ವ್ಯಕ್ತಿ. ವೈಚಾರಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದ ಅಪರೂಪದ ವ್ಯಕ್ತಿ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗ ಮುರುಘ ಮಠದ ಡಾ.ಶಿವಮೂರ್ತಿ ಮುರುಘ ಶರಣರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ್, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎ.ಆರ್.ಪಾಟೀಲ್, ಮಧುಸೂದನ್ ನಾಯಕ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News