ದೇಶಾದ್ಯಂತ ‘ನೀಟ್’ ಪರೀಕ್ಷೆ ಬರೆದ ವಿದ್ಯಾರ್ಥಿಗಳು

Update: 2016-05-01 13:53 GMT

ಬೆಂಗಳೂರು, ಮೇ 1: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕೆ ಮೊದಲ ಹಂತದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ಬೆಂಗಳೂರು ಸೇರಿದಂತೆ ದೇಶಾದ್ಯಂತ ರವಿವಾರ ನಡೆಯಿತು.

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಪ್ರವೇಶಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಏಕರೂಪದ ಪರೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್ ಎ.28ರಂದು ಆದೇಶ ನೀಡಿತ್ತು. ಆ ಹಿನ್ನೆಲೆಯಲ್ಲಿ ದೇಶಾದ್ಯಂತ ಪರೀಕ್ಷೆ ನಡೆದಿದ್ದು, ಸುಮಾರು 6.5 ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ದೇಶದ 391 ಕೇಂದ್ರಗಳಲ್ಲಿ ‘ನೀಟ್’ ಪರೀಕ್ಷೆ ನಡೆಯಿತು. ಬೆಂಗಳೂರಲ್ಲಿ ಸುಮಾರು 8ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಬೆಳಗ್ಗೆ 9:45ರಿಂದ ಮಧ್ಯಾಹ್ನ 1ಗಂಟೆಯವರೆಗೆ ಪರೀಕ್ಷೆಗೆ ಸಮಯ ನಿಗದಿ ಮಾಡಲಾಗಿತ್ತು.

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗೆ ಸೇರುವ ವಿದ್ಯಾರ್ಥಿಗಳು ಈ ವರ್ಷ ರಾಜ್ಯ ಸರಕಾರ ನಡೆಸುವ ಸಿಇಟಿ ಮತ್ತು ದೇಶವ್ಯಾಪಿ ನಡೆಯಲಿರುವ ನೀಟ್ ಎರಡನ್ನೂ ಬರೆಯುವುದು ಕಡ್ಡಾಯ. ಮೊದಲ ಹಂತದ ಪರೀಕ್ಷೆ ಇಂದು ನಡೆದರೆ, ಜುಲೈ 24ರಂದು ಎರಡನೆ ಹಂತದ ಪರೀಕ್ಷೆ ನಡೆಯಲಿದೆ. ಮೊದಲ ಹಂತದಲ್ಲಿ ಪರೀಕ್ಷೆ ಬರೆಯದೇ ಇರುವ ವಿದ್ಯಾರ್ಥಿಗಳು ಎರಡನೆ ಹಂತದಲ್ಲಿ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯಬಹುದಾಗಿದೆ.

ನೀಟ್ ಪರೀಕ್ಷೆಯ ಆದೇಶದಲ್ಲಿ ಮಾರ್ಪಾಡು ಮಾಡಬೇಕೆಂದು ವಿದ್ಯಾರ್ಥಿಗಳು ಶನಿವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಆದರೆ ವಿದ್ಯಾರ್ಥಿಗಳ ಕೋರಿಕೆಯನ್ನು ಸುಪ್ರೀಂ ಕೋರ್ಟ್ ಮನ್ನಿಸಿಲ್ಲ. ಆ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಮೇ 3ಕ್ಕೆ ಅರ್ಜಿಗಳು ವಿಚಾರಣೆಗೆ ಬರಲಿವೆ.

ಪ್ರವೇಶ ನಿರಾಕರಣೆ

ಇಲ್ಲಿನ ಶಿವಾಜಿನಗರದ ಆರ್ಮಿ ಪಬ್ಲಿಕ್ ಸ್ಕೂಲ್‌ನಲ್ಲಿನ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿತ್ತು. ನಿಗದಿತ ಸಮಯಕ್ಕೆ ಕೇಂದ್ರಕ್ಕೆ ತಲುಪದ ಮೂವರು ವಿದ್ಯಾರ್ಥಿಗಳಿಗೆ ಕೇಂದ್ರದೊಳಗೆ ಪ್ರವೇಶಿಸಲು ಭದ್ರತಾ ಸಿಬ್ಬಂದಿ ನಿರಾಕರಿಸಿದ್ದರಿಂದ ವಿದ್ಯಾರ್ಥಿನಿಯೊಬ್ಬಳು ಕಾಂಪೌಂಡ್ ಹಾರಿ ಕೇಂದ್ರಕ್ಕೆ ಪ್ರವೇಶಿಸಲು ಪ್ರಯತ್ನಿಸಿದರು. ಆದರೆ ಭದ್ರತಾ ಸಿಬ್ಬಂದಿ ತಡೆದ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗದೆ ಅವರೆಲ್ಲರೂ ಬರಿಗೈಯಲ್ಲಿ ವಾಪಾಸಾದರು. ವಿದ್ಯಾರ್ಥಿಗಳ ಪೋಷಕರು ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕೇವಲ ನಾಲ್ಕು ನಿಮಿಷ ತಡವಾಗಿತ್ತು. ಆದರೂ ಪ್ರವೇಶ ನೀಡಿಲ್ಲ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News