ಚಹಾ ಮಾರಿ ಪ್ರಧಾನಿಯಾದ ಮೋದಿಯಿಂದ ದೇಶ ಮಾರಾಟಕ್ಕೆ ಹುನ್ನಾರ: ಸಿದ್ದನಗೌಡ ಪಾಟೀಲ್
ಬೆಂಗಳೂರು, ಮೇ 1: ಕೇಂದ್ರ ಸರಕಾರ ‘ಮೇಕ್ ಇನ್ ಇಂಡಿಯಾ’ ಹೆಸರಿನಲ್ಲಿ ವಿದೇಶಿ ಬಂಡವಾಳಕ್ಕೆ ಆಹ್ವಾನ ನೀಡಿದ್ದು, ಸರಕಾರಿ ಉದ್ಯೋಗ ಸೃಷ್ಟಿಯಲ್ಲಿ ಹಾಗೂ ಕಾರ್ಮಿಕ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ‘ಹೊಸತು’ ಮಾಸಪತ್ರಿಕೆಯ ಸಂಪಾದಕ ಡಾ.ಸಿದ್ದನಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿವಾರ ಇಲ್ಲಿನ ಸರಕಾರಿ ಕಲಾ ಕಾಲೇಜು ಮೈದಾನದಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಮೇ ದಿನಾಚರಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ‘ಗಾರ್ಮೆಂಟ್ಸ್ ಕಾರ್ಮಿಕರೊಂದಿಗೆ ಸೌಹಾರ್ದತ ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ತಳಮಳ ಹೆಚ್ಚಾಗಿದ್ದು, ಈ ಪರಿಸ್ಥಿತಿಯಲ್ಲಿ ಕಾರ್ಮಿಕ ವರ್ಗ, ವರ್ಗ ಹೋರಾಟವೂ ಸೇರಿದಂತೆ ಸಾಮಾಜಿಕ ಚಳವಳಿಗೆ ಎಲ್ಲ ಕಾರ್ಮಿಕರು ಮುಂದಾಗಬೇಕು ಎಂದು ಸಿದ್ದನಗೌಡ ಪಾಟೀಲ್ ಇದೇ ವೇಳೆ ಕರೆ ನೀಡಿದರು.
ಸಾಮಾಜಿಕ ನ್ಯಾಯ ಮತ್ತು ಕೋಮು ಸೌಹಾರ್ದ ಕಾಪಾಡಲು ಹೋರಾಟ ನಡೆಸಬೇಕು. ಪ್ರಧಾನಿ ನಿಜವಾದ ದೇಶಪ್ರೇಮಿಯಾಗಿದ್ದರೆ ಎಚ್‌ಎಂಟಿಯಂತಹ ದೇಶೀಯ ಕೈಗಾರಿಕೆಗಳನ್ನು ಮುಚ್ಚಿ ವಿದೇಶಿ ಕಂಪೆನಿಗಳಿಗೆ ಆಹ್ವಾನ ನೀಡುತ್ತಿರಲಿಲ್ಲ. ಚಹಾ ಮಾರಿ ಪ್ರಧಾನಿಯಾದ ಮೋದಿ ಅವರು ದೇಶವನ್ನು ಮಾರದೆ ಇನ್ನೇನು ಮಾಡುತ್ತಾರೆಂದು ಸಿದ್ದನಗೌಡ ಪಾಟೀಲ್ ಲೇವಡಿ ಮಾಡಿದರು.