ಶಿವಸೇನೆಯನ್ನು ಮುಂಬೆ ಮನಪಾದಿಂದ ಕಿತ್ತೆಸೆಯಲು ಬಿಜೆಪಿ ರಣನೀತಿ

Update: 2016-05-02 18:36 GMT

ಮುಂದಿನ 2017ರ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆಯಿಂದ ಮನಪಾ ಆಡಳಿತವನ್ನು ಸೆಳೆದುಕೊಳ್ಳಲು ಬಿಜೆಪಿ ಈಗಲೇ ರಣನೀತಿ ಆರಂಭಿಸಿದೆ. ದಿಲ್ಲಿಯಿಂದ ಆದೇಶ ಸಿಗುತ್ತಲೇ ಆ್ಯಕ್ಷನ್ ಆರಂಭಿ ಸಲಾಗಿದೆ. ಇದಕ್ಕಾಗಿ ಮುಂಬೈಯ ಬಿಜೆಪಿ ನಾಯಕರ ಒಂದು ಗ್ರೂಪ್ ರಚಿಸಲಾಗಿದೆ. ಇದರ ನೇತೃತ್ವ ಮುಂಬೈ ಬಿಜೆಪಿ ಅಧ್ಯಕ್ಷ ಮತ್ತು ಶಾಸಕ ಆಶೀಷ್ ಶೇಲಾರ್ ಹಾಗೂ ಸಂಸದ ಕಿರೀಟ್ ಸೋಮೈಯ್ಯಾ ಅವರಿಗೆ ಒಪ್ಪಿಸಲಾಗಿದೆ.
ಮುಂಬೈ ಮತ್ತು ಮಹಾರಾಷ್ಟ್ರದ ಕೆಲವು ಪ್ರಮುಖ ನೇತಾರರು ಇತ್ತೀಚೆಗೆ ದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರ ಮನೆಯಲ್ಲಿ ಬೈಠಕ್ ನಡೆಸಿದ್ದಾರೆ. ಈ ಬೈಠಕ್‌ನಲ್ಲಿ ಮುಂಬೈಯಲ್ಲಿ ಶತ-ಪ್ರತಿಶತ ಬಿಜೆಪಿಯ ಲಕ್ಷ್ಯ ನಿಶ್ಚಯಿಸಲಾಗಿದೆ. ಮನಪಾ ಚುನಾವಣೆಯಲ್ಲಿ ಶಿವಸೇನೆಯ ಎದುರು ಸೀಟುಗಳ ಹಂಚುವಿಕೆಯ ಸಮಯ 50-50 ಸೀಟುಗಳ ವಿತರಣೆಯ ಪ್ರಸ್ತಾವ ಇರಿಸಬೇಕೆಂದೂ ಅಲ್ಲಿ ತಿಳಿಸಲಾಗಿದೆ. ಆದರೆ ಈ ವಿಷಯವಾಗಿ ಶಿವಸೇನೆ ಎಂದೂ ಒಪ್ಪಲಾರದು ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಹಾಗಾದರೆ ಮುಂಬೈ ಮನಪಾ ಚುನಾವಣೆಯಲ್ಲಿ ಬಿಜೆಪಿ ಎಲ್ಲ್ಲ 288 ಸೀಟುಗಳಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಲಿದೆ.

ಆಶ್ಚರ್ಯವೆಂದರೆ ಈಗ ಮುಂಬೈ ಮನಪಾದಲ್ಲಿ ಶಿವಸೇನೆ-ಬಿಜೆಪಿ ಆಡಳಿತವಿದೆ. ಅದೇ ಮಹಾನಗರ ಪಾಲಿಕೆಯ ಭ್ರಷ್ಟಾಚಾರವನ್ನು ಬಿಜೆಪಿ ಚುನಾವಣೆ ವೇಳೆ ಬಹಿರಂಗ ಪಡಿಸುವ ಸಾಧ್ಯತೆಗಳಿವೆಯಂತೆ! ಇದಕ್ಕೆಲ್ಲ ಶಿವಸೇನೆಯನ್ನೇ ಹೊಣೆಯಾಗಿಸುವ ಸಾಧ್ಯತೆಗಳಿವೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿಯೇ ಈ ದಿನಗಳಲ್ಲಿ ಬಿಜೆಪಿಯು ನಾಲೆ ಸ್ವಚ್ಛತೆ, ರಸ್ತೆ ರಿಪೇರಿ, ನೀರು, ತ್ಯಾಜ್ಯ ವಿಲೇವಾರಿಯಲ್ಲಿ ಭ್ರಷ್ಟಾಚಾರ ಇತ್ಯಾದಿಗಳನ್ನು ಜೋರಾಗಿ ಎತ್ತಿಕೊಳ್ಳುತ್ತಿದೆ. ಈ ರಣನೀತಿಯ ಕಾರಣವೇ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಬಿಜೆಪಿಯ ಶಾಸಕರು ವಿಧಾನಸಭೆಯಲ್ಲಿ ಮನಪಾದ ಗುತ್ತಿಗೆಯಲ್ಲಿ ಶಿವಸೇನೆಯ ಮೇಲೆ ಪರೋಕ್ಷವಾಗಿ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡಾ ಮನಪಾ ಕೆಲಸ ಕಾರ್ಯಗಳ ಬಗ್ಗೆ ತನ್ನ ಬೇಸರ ವ್ಯಕ್ತಪಡಿಸಿ ಈ ಆರೋಪಗಳನ್ನು ಬೆಂಬಲಿಸಿದ್ದರು. ಇಲ್ಲಿ ಮನಪಾ ಆಡಳಿತದಲ್ಲಿ ಶಿವಸೇನೆ ಜೊತೆ ಬಿಜೆಪಿಯೂ ಇದೆ. ಹಾಗಿರುವಾಗ ಭ್ರಷ್ಟಾಚಾರ ನಡೆದದ್ದು ಹೇಗೆ? ಗುತ್ತಿಗೆ ನೀಡುವಾಗ ಬಿಜೆಪಿ ಕಾರ್ಪೊರೇಟ್‌ಗಳು ಯಾಕೆ ಧ್ವನಿ ಎತ್ತಲಿಲ್ಲ? ಮನಪಾದಲ್ಲಿ ಬಿಜೆಪಿಯ 32 ನಗರ ಸೇವಕರಿದ್ದಾರೆ. ಮನಪಾದಲ್ಲಿ ಶಿವಸೇನೆ ಭ್ರಷ್ಟಾಚಾರ ಆರೋಪದಿಂದ ಕಿರಿಕಿರಿಗೊಂಡಿದ್ದರೆ ಇದೀಗ ಶಿವಸೇನೆ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದ್ದು ಇತ್ತೀಚೆಗೆ ಚೆಂಬೂರು ಶಿವ ಸೇನೆಯ ಮಾಜಿ ಶಾಖಾ ಪ್ರಮುಖ ನಾಗೇಶ್ ತವಟೆ ಸಹಿತ 300 ಶಿವಸೈನಿಕರು ಬಿಜೆಪಿಗೆ ಸೇರಿಕೊಂಡಿದ್ದಾರೆ. ಬಿಜೆಪಿ ಮೇ 1 ರ ಮಹಾರಾಷ್ಟ್ರ ದಿನದಂದು ಮುಂಬೈಯ 227 ವಾರ್ಡ್‌ಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಇದು ಮುಂಬೈ ಮಹಾ ನಗರ ಪಾಲಿಕೆ ಚುನಾವಣೆ ಪ್ರಚಾರದ ಉದ್ಘಾಟನೆ ಎಂದೂ ಹೇಳಲಾಗಿದೆ. ಏಕಮೇವ ಧ್ಯೇಯ ಮುಂಬೈಯ ಪ್ರಗತಿ ಎನ್ನುವ ಘೋಷಣೆ ಬಿಜೆಪಿ ಮಾಡಿದೆ. ಅದಲ್ಲದೆ ಹಿಂದಿನ ದಿನ ಎಪ್ರಿಲ್ 30ರಂದು ಸಂಜೆಗೆ ಮುಂಬೈ ವಿಮಾನ ನಿಲ್ದಾಣದ ಬಳಿಯ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯ ಬಳಿ ವಿಶೇಷ ಕಾರ್ಯಕ್ರಮ ಬಿಜೆಪಿ ಆಯೋ ಜಿಸಿತ್ತು. ವರ್ತಮಾನದಲ್ಲಿ ಮುಂಬೈ ಮನಪಾದಲ್ಲಿ ಶಿವಸೇನೆ 75, ಬಿಜೆಪಿ 32, ಕಾಂಗ್ರೆಸ್ 52, ಎಂಎನ್‌ಎಸ್ 27, ಎನ್‌ಸಿಪಿ 13 , ಎಸ್ ಪಿ 9 ನಗರಸೇವಕರನ್ನು ಹೊಂದಿದೆ.

ಟೋಲ್ ನಾಕಾದಲ್ಲಿ ವಿಐಪಿ ಪಾಸ್ ಭ್ರಷ್ಟಾಚಾರ

  ಟೋಲ್‌ನಾಕಾಗಳಲ್ಲಿ ಸಾಮಾನ್ಯವಾಹನ ಚಾಲಕರಿಗೆ ಟೋಲ್ ಹೊರೆ ಕಿರಿಕಿರಿ ತಂದರೆ ಮಹಾರಾಷ್ಟ್ರ ರಾಜ್ಯದ ಎಲ್ಲ್ಲ ಟೋಲ್ ನಾಕಾಗಳಲ್ಲಿ ಪ್ರತೀದಿನ ಸಾವಿರಾರು ಸಂಖ್ಯೆಯಲ್ಲಿ ಉಚಿತ ವಿಐಪಿ ವಾಹನಗಳು ಓಡಾಡುತ್ತಿವೆ. ಇದರ ಫಲಿತಾಂಶ ಏನೆಂದರೆ ಸಾಮಾನ್ಯ ವಾಹನ ಚಾಲಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಆರ್.ಟಿ.ಐ. ಕಾರ್ಯಕರ್ತ ಸಂಜಯ್ ಶಿರೋಡ್ಕರ್ ಅವರು ಮಹಾರಾಷ್ಟ್ರ ರಾಜ್ಯ ರಸ್ತೆ ವಿಕಾಸ ನಿಗಮದ (ಎಂ.ಎಸ್.ಆರ್.ಡಿ.ಸಿ.) ಬಳಿ ವಿಐಪಿ ವಾಹನ ಚಾಲಕರಿಗೆ ಸಂಬಂಧಿಸಿದ ಮಾಹಿತಿ ಕೇಳಿದ್ದರು. ಆದರೆ ವಿಐಪಿ ವಾಹನ ಚಾಲಕರು ಯಾರೆಲ್ಲ ಇದ್ದಾರೆ, ಅವರ ಸಂಖ್ಯೆ ಎಷ್ಟು ಎನ್ನುವ ಸ್ಪಷ್ಟ ಮಾಹಿತಿ ತನ್ನಲ್ಲಿಲ್ಲ ಎಂಬ ಉತ್ತರ ಬಂದಿದೆ. ಎಂ.ಎಸ್.ಆರ್.ಡಿ.ಸಿ.ಯು ವಿಐಪಿ ಪಾಸ್‌ನ ಪ್ರಕರಣದಲ್ಲಿ ರಾಜ್ಯ ಮಾಹಿತಿ ಆಯೋಗದ ಮುಂದೆ ಪ್ರತಿಕ್ರಿಯಿಸುತ್ತಾ ವಿಐಪಿ ಪಾಸ್ ವಿತರಣೆ ಮಾಡುವ ಜವಾಬ್ದಾರಿ ಗುತ್ತಿಗೆದಾರರಿಗೆ ಒಪ್ಪಿಸಲಾಗಿದೆ. ಹೀಗಾಗಿ ಎಂ.ಎಸ್.ಆರ್.ಡಿ.ಸಿ ಬಳಿ ಇದರ ಮಾಹಿತಿ ಉಪಲಬ್ದವಿಲ್ಲ ಎಂದಿದೆ. ಈ ಕಾರಣ ಆರ್.ಟಿ.ಐ. ಕಾರ್ಯಕರ್ತ ಶಿರೋಡ್ಕರ್ ಅವರಿಗೆ ಎಂ.ಎಸ್.ಆರ್.ಡಿ.ಸಿ. ಯಿಂದ ವಿಐಪಿ ವಾಹನಗಳ ಮಾಹಿತಿ ನೀಡಲು ನಿರಾಕರಿಸಲಾಗಿದೆ. ಇದರ ಸೂಚನೆಯನ್ನು ರಾಜ್ಯ ಮಾಹಿತಿ ಆಯೋಗಕ್ಕೆ ಕಳುಹಿಸಲಾಗಿದೆ. ಆದರೆ ಗುತ್ತಿಗೆದಾರರ ಬಗ್ಗೆ ಮತ್ತು ಟೋಲ್ ವಸೂಲಿಯ ಮುಖ್ಯ ಕೆಲಸ ಎಂ.ಎಸ್.ಆರ್.ಡಿ.ಸಿ. ಯದ್ದೇ ಆಗಿರುತ್ತದೆ.

ಮುಂಬೈ ಪತ್ರಿಕೆಗಳಲ್ಲಿ ಕೇಜ್ರಿವಾಲ್ ಸರಕಾರದ ಜಾಹೀರಾತು ಖರ್ಚೆಷ್ಟು?

ಮುಂಬೈಯ ಅನೇಕ ದೈನಿಕಗಳಲ್ಲಿ ಇತ್ತೀಚೆಗೆ ದಿಲ್ಲಿ ಸರಕಾರದ ಒಂದು ವರ್ಷ ಕಾರ್ಯಾವಧಿಯ ಬಹಳಷ್ಟು ಜಾಹೀರಾತುಗಳು ಪ್ರಕಟವಾಗಿತ್ತು. ಮುಂಬೈ ಮಾತ್ರವಲ್ಲ, ದೇಶದಾದ್ಯಂತ ಪ್ರಮುಖ ಪತ್ರಿಕೆಗಳಲ್ಲಿ ಈ ಜಾಹೀರಾತು ಬಂದಿತ್ತು. ಆದರೆ ಈ ಜಾಹೀರಾತುಗಳ ಖರ್ಚು ಎಷ್ಟಾಗಿದೆ? ಈ ಬಗ್ಗೆ ಆರ್.ಟಿ.ಐ ಕಾರ್ಯಕರ್ತ ಅನಿಲ್ ಗಲಗಲಿ ಅವರು ಮಾಹಿತಿ ಕೇಳಿದರೆ ಒಟ್ಟು ಖರ್ಚು ಸದ್ಯ ಉಪಲಬ್ದ ಇಲ್ಲ ಎಂಬ ಉತ್ತರ ಬಂದಿದೆ.
ಗಲಗಲಿ ಅವರು ದಿಲ್ಲಿ ಸರಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯಿಂದ ಜಾಹೀರಾತುಗಳ ಖರ್ಚಿನ ಮಾಹಿತಿ ಕೇಳಿದ್ದರು. ಕೇಜ್ರಿವಾಲ್ ಸರಕಾರದ ಜೊತೆಗೆ ಅವರಿಗಿಂತ ಮೊದಲಿನ ಶೀಲಾ ದೀಕ್ಷಿತ್ ಸರಕಾರದ ಬಳಿಯೂ ಗಲಗಲಿ ಅವರು ಜಾಹೀರಾತಿನ ಖರ್ಚಿನ ಮಾಹಿತಿ ಕೇಳಿದ್ದರು.

ವಾರ್ತಾ ಇಲಾಖೆಯ ಉಪ ನಿರ್ದೇಶಕ ರಾಜೀವ್ ಕುಮಾರ್ ಅವರು ಗಲಗಲಿಯ ಅರ್ಜಿಯನ್ನು 15 ಮಾರ್ಚ್ 2016 ರಂದು ತನ್ನ ಅಧೀನದ ಮೂರು ವಿಭಾಗಗಳಿಗೆ ಹಸ್ತಾಂತರಿಸಿದ್ದರು. 17 ಮಾರ್ಚ್ 2016 ರಂದು ಕ್ಷೇತ್ರೀಯ ಪ್ರಚಾರ ಯೂನಿಟ್‌ನ ಉಪನಿರ್ದೇಶಕ ಎಂ.ಸಿ. ಮೌರ್ಯ ಅವರು ಎರಡು ದಿನಗಳ ಒಳಗೆ ಉತ್ತರ ನೀಡಿದ್ದರು. ಅಲ್ಲಿ ದಾಖಲೆಗಳ ನಿರೀಕ್ಷೆ ಮಾಡುವಂತೆ ಸಲಹೆ ಇತ್ತು. ಮೂರೂ ವಿಭಾಗಗಳ ದಾಖಲೆ ಬಂದ ನಂತರವೇ ಉತ್ತರ ಎಂದಿತ್ತು.
 ಕೇಜ್ರಿವಾಲರ ಸರಕಾರ ಪಾರದರ್ಶಕತೆಯಿಂದ ಕೂಡಿದೆ ಎಂದು ತಾನು ನಂಬಿದ್ದೆ. ಆದರೆ ಜಾಹೀರಾತುಗಳ ಖರ್ಚಿನ ಅಂಕಿ ಅಂಶ ಹೋಗಲಿ, ತನ್ನನ್ನು ದಿಲ್ಲಿಗೆ ಕರೆದು ಫೈಲುಗಳ ಸರ್ವೇ ಮಾಡಲು ಸಲಹೆ ನೀಡಿದ್ದಾರೆ. ಇದು ಆರ್.ಟಿ.ಐ ಕಾನೂನಿನ ಉಲ್ಲಂಘನೆ ಎಂದಿದ್ದಾರೆ ಅನಿಲ್ ಗಲಗಲಿ.

ಮಹಿಳಾ ಅಪರಾಧಿಗಳ ಸಂಖ್ಯೆ ವೃದ್ಧಿ

 ಮಾಯಾನಗರಿ ಮುಂಬೈಯಲ್ಲಿ ಮಹಿಳಾ ಅಪರಾಧಿಗಳ ಸಂಖ್ಯೆಯಲ್ಲಿ ಹೆಚ್ಚಳ ವಾಗುತ್ತಿದೆ. ನೇಶನಲ್ ಕ್ರೈಂ ರಿಕಾರ್ಡ್ ಬ್ಯೂರೋ (ಎನ್.ಸಿ.ಆರ್.ಬಿ) ಇತ್ತೀಚೆಗೆ ಜಾರಿಗೊಳಿಸಿದ ಅಂಕಿಅಂಶದಲ್ಲಿ ಮಹಿಳಾ ಅಪರಾಧಿಗಳ ಸಂಖ್ಯೆಯಲ್ಲಿ 2014 ರಲ್ಲಿ 23.1 ಶೇಕಡಾ ವೃದ್ಧಿಯಾಗಿದೆ. ಪುರುಷ ಅಪರಾಧಿಗಳ ಸಂಖ್ಯೆಯಲ್ಲಿ 22.9 ಶೇಕಡಾ ವೃದ್ಧಿಯಾಗಿದೆ. ಅನ್ಯ ರಾಜ್ಯಗಳ ಎದುರು ಮಹಾರಾಷ್ಟ್ರದ ಮಹಿಳೆಯರು ಅಪರಾಧಗಳಲ್ಲಿ ಮುಂದಿದ್ದಾರೆ.
ಹೆಚ್ಚಿನ ಮಹಿಳೆಯರು ಕಳ್ಳತನ, ಗಾಯಗೊಳಿಸುವುದು, ವಂಚನೆ, ಹಲ್ಲೆ, ಅಪಹರಣ ನಡೆಸಿದ್ದಕ್ಕೆ ಬಂಧಿತರಾಗಿದ್ದಾರೆ. ಮುಂಬೈಯಲ್ಲಿ 2013 ರಲ್ಲಿ 3,115 ಮಹಿಳಾ ಅಪರಾಧಿಗಳನ್ನು ಬಂಧಿಸಲಾಗಿತ್ತು. 2014 ರಲ್ಲಿ 3,834 ಮಹಿಳೆಯರನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದಲ್ಲಿ 2014 ರಲ್ಲಿ ಒಟ್ಟು 30568 ಮಹಿಳೆಯರನ್ನು ಬಂಧಿಸಲಾಗಿತ್ತು. ಇದು ಅನ್ಯ ರಾಜ್ಯಗಳ ತುಲನೆಯಲ್ಲಿ ಎಲ್ಲಕ್ಕಿಂತ ಅಧಿಕವಾಗಿದೆ. ಎರಡನೆ ಸ್ಥಾನದಲ್ಲಿ ಆಂಧ್ರ ಪ್ರದೇಶವಿದೆ.

ಧಾರಾವಿ ವಿಕಾಸಕ್ಕೆ ಆಸಕ್ತಿ ತೋರದ ಬಿಲ್ಡರ್‌ಗಳು

ಏಶ್ಯಾದ ಬಹುದೊಡ್ಡ ಸ್ಲಮ್‌ಕ್ಷೇತ್ರ ಮುಂಬೈಯ ಧಾರಾವಿಯನ್ನು ಶಾಂಘಾ ಮಾಡುವ ಕನಸು ಕಾಣುತ್ತಿರುವ ಸರಕಾರಕ್ಕೆ ಮೊನ್ನೆ ನಿರಾಶೆಯಾಯಿತು. ಧಾರಾವಿ ರೀಡೆವೆಲಪ್‌ಮೆಂಟ್‌ಗಾಗಿ ವಿಶ್ವ ಸ್ತರದಲ್ಲಿ ಕರೆಯಲಾದ ಟೆಂಡರ್‌ನಲ್ಲಿ ಯಾವ ಬಿಲ್ಡರ್ ಕೂಡಾ ಆಸಕ್ತಿ ತೋರಿಸಲಿಲ್ಲ. ಇ-ಟೆಂಡರಿಂಗ್‌ನ ಮೂಲಕ ಕರೆಯಲಾದ ಟೆಂಡರ್‌ನ್ನು ಕಳೆದವಾರ ತೆರೆದಾಗ ಅದರಲ್ಲಿ ಶೂನ್ಯ ಫಲಿತಾಂಶ ಕಂಡು ಧಾರಾವಿ ವಿಕಾಸ ಪ್ರಕಲ್ಪದ ಅಧಿಕಾರಿಗಳು ಬೆಚ್ಚಿ ಬಿದ್ದರು! ವಿಶೇಷವೆಂದರೆ ಟೆಂಡರ್‌ನ ಮೊದಲಲ್ಲಿ 16 ಬಿಲ್ಡರ್‌ಗಳು ಇದರಲ್ಲಿ ಆಸಕ್ತಿ ತೋರಿಸಿದ್ದರು. ಆದರೆ ಅವರ್ಯಾರೂ ಇಲ್ಲಿ ಬರಲೇ ಇಲ್ಲ. 535 ಎಕರೆಯಲ್ಲಿ ಹರಡಿರುವ ಸ್ಲಮ್‌ಕ್ಷೇತ್ರ ಧಾರಾವಿಯ ರೀ ಡೆವೆಲಪ್‌ಮೆಂಟ್‌ಗಾಗಿ ನಾಲ್ಕು ಸೆಕ್ಟರ್‌ಗಾಗಿ ವಿಶ್ವ ಮಟ್ಟದಲ್ಲಿ ಟೆಂಡರ್ ಕರೆಯಲಾಗಿತ್ತು. ಮೂರು ತಿಂಗಳ ನಂತರ ಮ್ಹಾಡಾ ಕಾರ್ಯಾಲಯದಲ್ಲಿ ಧಾರಾವಿ ವಿಕಾಸ ಪ್ರಕಲ್ಪ ಅಧಿಕಾರಿಗಳು ಟೆಂಡರ್ ತೆರೆದಾಗ ಒಬ್ಬನೇ ಒಬ್ಬ ಬಿಲ್ಡರ್ ಕಾಣಿಸಿಕೊಳ್ಳಲಿಲ್ಲ.


 ಮುಂಬೈಯಲ್ಲಿ ಪ್ರತೀದಿನ ಸರಾಸರಿ 95 ಗರ್ಭಪಾತ!

ದೇಶದ ಆರ್ಥಿಕ ರಾಜಧಾನಿ ಮುಂಬೈಯಲ್ಲಿ ಕಳೆದ ಐದು ವರ್ಷಗಳಲ್ಲಿ ಗರ್ಭಪಾತದ ಸಂಖ್ಯೆಯಲ್ಲಿ ಎರಡು ಪಟ್ಟು ವೃದ್ಧಿಯಾಗಿದೆ. ಮುಂಬೈಯಲ್ಲಿ ಪ್ರತೀದಿನ ಸರಾಸರಿ 95 ಗರ್ಭಪಾತಗಳನ್ನು ಮಾಡಲಾಗುತ್ತದೆ ಎಂದು ಮುಂಬೈ ಮನಪಾದ ಫ್ಯಾಮಿಲಿ ವೆಲ್‌ಫೇರ್ ವಿಭಾಗದ ವತಿಯಿಂದ ಜ್ಯಾರಿಗೊಳಿಸಿದ ಅಂಕಿಅಂಶದಲ್ಲಿ ತಿಳಿದು ಬಂದಿದೆ. ಈ ವರದಿಯಲ್ಲಿ ವರ್ಷ 2011-12 ರಲ್ಲಿ 15,959 ಗರ್ಭಪಾತಗಳು ನಡೆದಿತ್ತು. ಎಪ್ರಿಲ್ 2015 ರಿಂದ ಮಾರ್ಚ್ 2016 ರ ತನಕ ಗರ್ಭಪಾತದ ಸಂಖ್ಯೆ 34,790 ತಲುಪಿದೆ. ಅಂದರೆ ಐದು ವರ್ಷಗಳಲ್ಲಿ ದ್ವಿಗುಣ ಆಗಿರುವುದನ್ನು ಗಮನಿಸಬಹುದು. ಭಾರತ ಸರಕಾರದ ಕಾನೂನಿನ ಪ್ರಕಾರ ಮೊದಲ ಬಾರಿ ಗರ್ಭಪಾತ ಮಾಡಿಸಿಕೊಳ್ಳುವವರು ಡಾಕ್ಟರ್‌ರ ಸಲಹೆ ಪಡೆಯುವುದು ಅನಿವಾರ್ಯವಾಗಿದೆ. ಎರಡನೇ ಬಾರಿ ಗರ್ಭಪಾತಕ್ಕೆ ಇಬ್ಬರು ಡಾಕ್ಟರ್‌ಗಳ ಸಲಹೆ ಪಡೆಯುವುದು ಆವಶ್ಯಕ.

ಮೇ-ಜೂನ್‌ನಲ್ಲಿ ವಿವಾಹಕ್ಕೆ ಮುಹೂರ್ತವಿಲ್ಲವಂತೆ!

ಮುಂಬೈಯಲ್ಲಿ ಮದುವೆ ಸಮಾರಂಭಗಳು ಸದ್ಯ ಕಡಿಮೆಯಾಗುವ ಲಕ್ಷಣಗಳು ಗೋಚರವಾಗಿವೆ. ಈ ವರ್ಷ ಎಪ್ರಿಲ್ 29 ರಿಂದ ಜೂನ್ 30 ರ ತನಕ ಸರಿಯಾದ ಮುಹೂರ್ತ ಇಲ್ಲವೆಂದು ಜ್ಯೋತಿಷ್ಯರು ಹೇಳಿದ್ದಾರೆ. ಶುಕ್ರ ಮತ್ತು ಗುರು ಅಸ್ತರಿದ್ದಾಗ ವಿವಾಹ ಯೋಗ ಇರುವುದಿಲ್ಲವಂತೆ. ಹಾಗಾಗಿ ಪ್ರಮುಖ ಸಭಾಗೃಹಗಳು ಹಿಂದಿನ ವರ್ಷದಂತೆ ಬುಕ್ ಆಗಿಲ್ಲ. ವಿವಾಹ ಸಮಾರಂಭಗಳು ಕಡಿಮೆಯಾದಾಗ ಮುಂಬೈಯ ಬ್ಯಾಂಡ್ ಸೆಟ್ ತಂಡದವರಿಗೂ ಕೆಲಸಗಳು ಕಡಿಮೆ ಸಿಗುತ್ತವೆ. ಮೇ ಮತ್ತು ಜೂನ್ ತಿಂಗಳು ಇವರಿಗೆ ಸಂಪಾದನೆಯ ತಿಂಗಳು. ವಿವಾಹದ ಬ್ಯುಸಿ ಸೀಜನ್ ವರ್ಷದಲ್ಲಿ ಈ ಎರಡು ತಿಂಗಳು ಮಾತ್ರ ಇವರಿಗೆ ಬಿಡುವಿಲ್ಲದ ಕೆಲಸ. ಈ ಬಾರಿ ಹಿಂದಿನ ವರ್ಷದ ತುಲನೆಯಲ್ಲಿ ಶೇ.50 ರಷ್ಟು ಇಳಿಕೆಯಾಗಿದೆಯಂತೆ.
ಅದೇ ರೀತಿ ಮಂಟಪ ಡೆಕೋರೇಟರ್‌ಗಳಿಗೂ ಕೆಲಸ ಕಡಿಮೆ ಸಿಕ್ಕಿದೆ. ಕೆಲವು ಶಾಲಾ ಅಂಗಳಗಳೂ ರಜೆಯಲ್ಲಿ ಈ ಎರಡು ತಿಂಗಳೂ ಬುಕ್ ಆಗುತ್ತಿದ್ದರೆ ಈ ಬಾರಿ ಆ ದೃಶ್ಯಗಳು ಕಂಡುಬಂದಿಲ್ಲ.

ಡಾಕ್ಟರ್‌ರ ಪತ್ರದಿಂದ ಜೈಲ್‌ನ ಗುಟ್ಟು ಬಹಿರಂಗ

2015 ರಿಂದ ಆರ್ಥರ್ ರೋಡ್ ಜೈಲ್‌ನಲ್ಲಿ ಮುಖ್ಯ ಡಾಕ್ಟರ್‌ರ ರೂಪದಲ್ಲಿ ಕೆಲಸ ಮಾಡುತ್ತಿದ್ದ ಡಾ. ರಾಹುಲ್ ಧುಲೆ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ರಿಗೆ ಪತ್ರ ಬರೆದು ಜೈಲ್‌ನ ಒಳಗಿನ ಸ್ಥಿತಿ ವಿವರಿಸಿದ ನಂತರ ಆರ್ಥರ್ ರೋಡ್ ಜೈಲ್‌ನ ಜೈಲ್ ಅಧೀಕ್ಷಕ ಭರತ್ ಭೋಸ್ಲೆಯ ವಿರುದ್ಧ ವಿಭಾಗೀಯ ತನಿಖೆ ಆರಂಭಿಸಲಾಗಿದೆ.

ಆರ್ಥರ್ ರೋಡ್ ಜೈಲ್‌ನಲ್ಲಿ ಕೈದಿಗಳಿಗೆ ಯಾವ ಪ್ರಕಾರ ವಿಐಪಿ ಸೇವೆ ನೀಡಲಾಗುತ್ತದೆ ಎನ್ನುವ ಗುಟ್ಟು ಈಗ ಬಹಿರಂಗವಾಗಿದೆ. ಬ್ಯಾರಕ್ ನಂಬರ್ 3, 12 ಮತ್ತು 14 ರಲ್ಲಿ ವಿಐಪಿ ಸೇವೆ ಕೈದಿಗಳಿಗೆ ನೀಡಲಾಗುತ್ತದೆಯಂತೆ.
ಯಾವನೇ ಕೈದಿ ತಿಂಗಳಿಗೆ 2 ರಿಂದ 3 ಅಥವಾ ನಾಲ್ಕು ಲಕ್ಷ ರೂ. ನೀಡಿದರೆ ಆತನಿಗೆ ಮನೆಯ ಊಟ, ಟಿವಿ ಸೌಲಭ್ಯ... ಇತ್ಯಾದಿಗಳನ್ನೆಲ್ಲ ನೀಡಲಾಗುತ್ತದೆ.

ಯಾವನಾದರೂ ಕೈದಿ 5 ಲಕ್ಷಕ್ಕಿಂತ ಹೆಚ್ಚಿಗೆ ಹಣ ನೀಡಿದರೆ ಅರ್ಥಾತ್ 10, 15 ಅಥವಾ 20 ಲಕ್ಷ ರೂ. ನೀಡಿದರೆ ಆ ಕೈದಿಗೆ ಎಲ್ಲ್ಲ ರೀತಿಯ ವಿಐಪಿ ಸೌಲಭ್ಯಗಳನ್ನು ನೀಡ ಲಾಗುತ್ತದೆ. ಶರಾಬು, ಡ್ರಗ್ಸ್ ಕೂಡಾ ಸಿಗುತ್ತದೆ ಎನ್ನುವ ವಿಷಯ ಅದರಲ್ಲಿದೆಯಂತೆ.

ಡಾ. ರಾಹುಲ್ ಧುಲೆ ಅವರು ಯಾವ ಕೈದಿಗಳು ಎಷ್ಟು ಹಣ ನೀಡಿದ್ದಾರೆ ಎನ್ನುವ ವಿವರವನ್ನೂ ಪತ್ರದಲ್ಲಿ ತಿಳಿಸಿದ್ದಾರೆ. ಜೈಲ್ ಅಧೀಕ್ಷಕರು ಕೈದಿಗಳಿಂದ ಹಣ ಪಡೆದು ಸೈಂಟ್ ಜಾರ್ಜ್, ರಾಜಾವಾಡಿ ಆಸ್ಪತ್ರೆಯಲ್ಲಿ ಜೈಲ್ ಡಾಕ್ಟರ್‌ನ ಅನುಮತಿ ಪಡೆಯದೆಯೇ ಭರ್ತಿಗೊಳಿಸುತ್ತಿದ್ದಾರೆಂದೂ ಪತ್ರದಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News