4 ನೇ ದಿನವೂ ಹಾರಲು ಚಡಪಡಿಸಿದ ಇಂಡಿಗೋ!
ರೀಫಂಡ್ ಮಾಡಿ ಕೈತೊಳೆದುಕೊಂಡ ವಿಮಾನಯಾನ ಸಂಸ್ಥೆ
ಇಂಡಿಗೋ | Photo Credit : PTI
ಇಂಡಿಗೊ ಸಂಸ್ಥೆಗೆ ಶೇ 60ರಷ್ಟು ಪ್ರಯಾಣಿಕರನ್ನು ನಿಭಾಯಿಸುವ ಏಕಸ್ವಾಮ್ಯವನ್ನು ಸ್ಥಾಪಿಸಲು ಅವಕಾಶ ನೀಡಲಾಗಿದೆ. ಬೃಹತ್ ಪ್ರಮಾಣದ ಕಾರ್ಯಾಚರಣೆಗಳು ಮತ್ತು ಹೆಚ್ಚಿನ ಫ್ರೀಕ್ವೆನ್ಸಿ ಇರುವ ಜಾಲ, ಗಮನಾರ್ಹ ಸಂಖ್ಯೆಯ ತಡರಾತ್ರಿ ಮತ್ತು ಬೆಳಗಿನ ಜಾವ ಹಾರಾಟಗಳು ಮತ್ತು ವಿಮಾನ ಮSತ್ತು ಸಿಬ್ಬಂದಿ ಬಳಕೆಯ ಪ್ರಮಾಣ ಹೆಚ್ಚಾಗಿರುವ ಅದರ ಕಾರ್ಯಕಾರಿ ಮಾದರಿಯೇ ವೈಫಲ್ಯಕ್ಕೆ ಕಾರಣ!
ಇಂಡಿಗೋ ಕುಸಿತವು ಒಂದು ಕಟು ಸತ್ಯವನ್ನು ಹೇಳುತ್ತದೆ. ಕಂಪೆನಿಗಳು ತಮ್ಮ ಜವಾಬ್ದಾರಿಯನ್ನು ಅನಾಯಾಸವಾಗಿ ಮರೆತುಬಿಡುತ್ತವೆ. ಆದರೆ ಗ್ರಾಹಕರು ಅದರ ಹಾನಿಯನ್ನು ಸಹಿಸಿಕೊಳ್ಳುತ್ತಾರೆ. ಮಕ್ಕಳು, ಹಿರಿಯರು ವಿಮಾನ ನಿಲ್ದಾಣದಲ್ಲೇ ಮಲಗಿ ವಿಮಾನಗಳು ಹೊರಡಲು ಕಾಯುತ್ತಿದ್ದರೆ, ದುಬಾರಿ ಬೆಲೆ ತೆತ್ತು ಇತರ ವಿಮಾನಗಳನ್ನು ಬುಕ್ ಮಾಡಲು ಹೆಣಗಾಡುತ್ತಿದ್ದರೆ ಇಂಡಿಗೊ ಕಂಪೆನಿ “ನಿಮ್ಮ ಹಣ ರೀಫಂಡ್ ಆಗಿದೆ” ಎಂದು ಒಂದು ಸಂದೇಶ ಕಳುಹಿಸುವ ಮೂಲಕ ತನ್ನ ಕರ್ತವ್ಯವನ್ನು ಮುಗಿಸಿದೆ! ಗುರುವಾರ 1232ಕ್ಕೂ ಅಧಿಕ ವಿಮಾನಗಳನ್ನು ಇಂಡಿಗೊ ರದ್ದುಗೊಳಿಸಿದೆ. ಶುಕ್ರವಾರವೂ ಪ್ರಯಾಣಿಕರು ಪರದಾಡಿದ್ದಾರೆ.
ಒಂದು ವರ್ಷಕ್ಕೂ ಮೊದಲು ವಿಧಿಸಲಾಗಿದ್ದ ನಿಯಮವನ್ನು ಪಾಲಿಸಲು ಸಾಧ್ಯವಾಗದೆ ಕೊನೆ ಕ್ಷಣದಲ್ಲಿ ವಿಮಾನಗಳನ್ನು ರದ್ದುಮಾಡಿರುವುದು ಯಾರ ತಪ್ಪು? ಉಳಿದೆಲ್ಲ ವಿಮಾನ ಯಾನ ಸಂಸ್ಥೆಗಳು ಅನುಸರಿಸಿದ ನಿಯಮವನ್ನು ಅನುಸರಿಸಲಾಗದೆ ಕೊನೆಯ ಕ್ಷಣದಲ್ಲಿ ಕಳೆದ ಕೆಲವು ದಿನಗಳಲ್ಲಿ ಅಸಂಖ್ಯಾತ ವಿಮಾನಗಳನ್ನು ರದ್ದುಮಾಡಿರುವ ‘ಇಂಡಿಗೊ’ ಪ್ರಯಾಣಿಕರ ಪರದಾಟಕ್ಕೆ ಕಾರಣವಾಗಿದೆ.
►ಹೊಸ ನೀತಿ ಅಳವಡಿಸಿಕೊಳ್ಳಲು ವಿಫಲ
ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಭಾರತದ ಶೇ 60ರಷ್ಟು ದೇಸಿ ಪ್ರಯಾಣಿಕರನ್ನು ನಿಭಾಯಿಸುತ್ತಿದೆ. ಹೊಸ ಸಂಸ್ಥೆಯಲ್ಲಿ ವಿಮಾನ ಕರ್ತವ್ಯದ ಸಮಯದ ಮಿತಿ (ಎಫ್ಡಿಟಿಎಲ್) ನಿಯಮಗಳನ್ನು ಅನುಸರಿಸಿದ ಕಾರಣ ಸಿಬ್ಬಂದಿ ಕೊರತೆ ಕಾಣಿಸಿಕೊಂಡಿದೆ. “ವಿಮಾನಗಳ ಕೆಲಸದ ಹೊಸ ನೀತಿ ಮತ್ತು ಪೈಲಟ್ಗಳ ವಿಶ್ರಾಂತಿ ನೀತಿ” ನಿಯಮ ಪಾಲನೆಗೆ ಸಂಸ್ಥೆಗೆ ಸರ್ಕಾರ ಎರಡು ವರ್ಷಗಳ ಕಾಲಾವಕಾಶ ಒದಗಿಸಿತ್ತು ಆದರೂ ಸಂಸ್ಥೆ ಹೊಸ ನೇಮಕಾತಿಗಳನ್ನು ಸ್ಥಗಿತಗೊಳಿಸಿತ್ತು” ಎಂದು ಭಾರತೀಯ ಪೈಲಟ್ಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.
ಏಕಸ್ವಾಮ್ಯದ ಕಾರ್ಯಕಾರಿ ಮಾದರಿಯೇ ವೈಫಲ್ಯಕ್ಕೆ ಕಾರಣ
ಉದ್ಯಮ ಮೂಲಗಳ ಪ್ರಕಾರ ಇಂಡಿಗೊ ಶೇ 60ರಷ್ಟು ಪ್ರಯಾಣಿಕರನ್ನು ನಿಭಾಯಿಸುತ್ತಿರುವುದು ಮುಖ್ಯ ಕಾರಣ. ಇಷ್ಟೊಂದು ವ್ಯಾಪಕವಾಗಿ ವಿಮಾನಯಾನ ಕ್ಷೇತ್ರದಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸಲು ಅವಕಾಶ ನೀಡಲಾಗಿದೆ. ಇಂಡಿಗೋದ ಬೃಹತ್ ಪ್ರಮಾಣದ ಕಾರ್ಯಾಚರಣೆಗಳು ಮತ್ತು ಹೆಚ್ಚಿನ ಫ್ರೀಕ್ವೆನ್ಸಿ ಇರುವ ಜಾಲ, ಗಮನಾರ್ಹ ಸಂಖ್ಯೆಯ ತಡರಾತ್ರಿ ಮತ್ತು ಬೆಳಗಿನ ಜಾವ ಹಾರಾಟಗಳು ಮತ್ತು ಅದರ ವಿಮಾನ ಮತ್ತು ಸಿಬ್ಬಂದಿ ಬಳಕೆಯ ಪ್ರಮಾಣ ಹೆಚ್ಚಾಗಿರುವ ಅದರ ಕಾರ್ಯಕಾರಿ ಮಾದರಿಯೇ ವೈಫಲ್ಯಕ್ಕೆ ಕಾರಣವಾಗಿದೆ.
ಹೊಸ ವಿಮಾನಗಳು ಬರುವುದು ವಿಳಂಬವಾಗಿರುವುದು ಮತ್ತು ತಪಾಸಣೆಗಾಗಿ ವಿಮಾನಗಳನ್ನು ಹಾರಾಟದಿಂದ ಹೊರಗಿಟ್ಟಿರುವುದು ಮೊದಲಾದ ಕಾರಣದಿಂದ ಉಳಿದ ವಿಮಾನಯಾನ ಸಂಸ್ಥೆಗಳ ವಾಯುಯಾನ ಬಳಕೆ ಪ್ರಮಾಣ (24 ಗಂಟೆಗಳಲ್ಲಿ ವಾಸ್ತವದಲ್ಲಿ ಹಾರಾಟದ ಪ್ರಮಾಣವನ್ನು ಗಮನಿಸಿದರೆ) ಕಡಿಮೆ ಇದೆ. ಇದರಿಂದಾಗಿ ಅವರಿಗೆ ಸಿಬ್ಬಂದಿಗಳ ಬಳಕೆಯ ಆವರ್ತನದಲ್ಲಿ ಹೆಚ್ಚು ಹೊಂದಾಣಿಕೆಗೆ ಅವಕಾಶ ದೊರೆತಿದೆ.
ಹೊಸ ಎಫ್ಡಿಟಿಎಲ್ ನಿಯಮಗಳು ಮತ್ತು ಇಂಡಿಗೊ
ಹೊಸ ನಿಯಮಗಳ ಪ್ರಕಾರ ವಿಮಾನದ ಪೈಲಟ್ಗಳಿಗೆ ವಾರದ ವಿಶ್ರಾಂತಿ ಅವಧಿಯನ್ನು 36ರಿಂದ 48 ಗಂಟೆಗಳಿಗೆ ಏರಿಸಲಾಗಿದೆ. ಹಾಗೆಯೇ ರಾತ್ರಿ ಲ್ಯಾಂಡಿಂಗ್ ಗಳನ್ನು ಆರರಿಂದ ಎರಡಕ್ಕೆ ಇಳಿಸಲಾಗಿದೆ. ಇದರಿಂದಾಗಿ ಇಂಡಿಗೊ ಸಂಸ್ಥೆಯಲ್ಲಿ ಸಿಬ್ಬಂದಿ ಆವರ್ತನದಲ್ಲಿ ಸಮಸ್ಯೆಯಾಗಿದೆ.
ಹೊಸ ನಿಯಮಗಳನ್ನು ವಾಯುಯಾನದ ಸುರಕ್ಷತೆಗಾಗಿ ಮತ್ತು ಪೈಲಟ್ಗಳ ಸುಸ್ತನ್ನು ಕಡಿಮೆ ಮಾಡುವ ಉದ್ದೇಶದಿಂದ ತರಲಾಗಿದೆ. 2024ರಿಂದಲೇ ಈ ನಿಯಮ ಜಾರಿಯಲ್ಲಿದೆ. ಇಂಡಿಗೊ ಮತ್ತು ಇತರ ಕೆಲವು ವಿಮಾನಯಾನ ಸಂಸ್ಥೆಗಳು ಈ ನಿಯಮ ಕಡ್ಡಾಯವಾಗಿ ಜಾರಿಗೆ ತರುವ ಸಮಯವನ್ನು ಮುಂದೆ ಹಾಕುತ್ತಲೇ ಬಂದಿದ್ದವು. ಹೊಸ ನಿಯಮಗಳಿಗೆ ಇನ್ನಷ್ಟು ಪೈಲಟ್ಗಳನ್ನು ನೇಮಿಸಿಕೊಳ್ಳಬೇಕಾಗುತ್ತದೆ ವಿಸ್ತರಿತ ಅವಧಿಯಲ್ಲಿ ಹಂತ-ಹಂತವಾಗಿ ಸಿಬ್ಬಂದಿ ನೇಮಕಾತಿಗೆ ಅವಕಾಶ ಬೇಕು ಎಂದು ಸಂಸ್ಥೆಗಳು ಯಾಚಿಸಿದ್ದವು.
ಆದರೆ ಈ ವರ್ಷ ದಿಲ್ಲಿ ಹೈಕೋರ್ಟ್ ನಿರ್ದೇಶನದ ಮೇರೆಗೆ ಡಿಜಿಸಿಎ ನಿಯಮವನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತಂದಿದೆ. ಆಗಲೂ ಜುಲೈ ಮತ್ತು ನವೆಂಬರ್ ನಲ್ಲಿ ಎರಡು ಹಂತದಲ್ಲಿ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಮೊದಲ ಹಂತದ ಸಿಬ್ಬಂದಿಗೆ ದೀರ್ಘ ವಿಶ್ರಾಂತಿ ಅವಧಿಯನ್ನು ಇಂಡಿಗೊ ಯಾವುದೇ ಸಮಸ್ಯೆ ಇಲ್ಲದೆ ಜಾರಿಗೆ ತಂದಿದೆ. ಆದರೆ ಎರಡನೇ ಹಂತದಲ್ಲಿ ರಾತ್ರಿ ಸಮಯದಲ್ಲಿ ಸಿಬ್ಬಂದಿ ಬಳಕೆ ಪ್ರಮಾಣ ಕಡಿಮೆ ಮಾಡಿರುವುದು ಬೃಹತ್ ಪ್ರಮಾಣದಲ್ಲಿ ವ್ಯವಹರಿಸುತ್ತಿದ್ದ ಇಂಡಿಗೊಗೆ ಸಮಸ್ಯೆ ಒಡ್ಡಿತ್ತು.
400ಕ್ಕೂ ಅಧಿಕ ವಿಮಾನಗಳನ್ನು ಹೊಂದಿರುವ ಇಂಡಿಗೊ ದಿನಂಪ್ರತಿ 2,300 ಹಾರಾಟವನ್ನು ನಿರ್ವಹಿಸುತ್ತದೆ. 90 ದೇಸಿ ವಲಯದ ಮತ್ತು 45 ಅಂತಾರಾಷ್ಟ್ರೀಯ ವಲಯದ ಹಾರಾಟವನ್ನು ನಡೆಸುತ್ತದೆ. ಆದರೆ ಕಡಿಮೆ ಸಿಬ್ಬಂದಿಗಳನ್ನು ಬಳಸಿಕೊಂಡು ಅಗ್ಗದ ಹಾರಾಟವನ್ನು ನೀಡುತ್ತಿತ್ತು. ಇಂಡಿಗೊ ತನ್ನ ಶೇ 10ರಷ್ಟು ವಿಮಾನ ರದ್ದು ಮಾಡುವುದೆಂದರೆ 230 ವಿಮಾನಗಳನ್ನು ರದ್ದು ಮಾಡಬೇಕು. ಅದಕ್ಕೆ ವ್ಯತಿರಿಕ್ತವಾಗಿ ಎರಡನೇ ಅತಿದೊಡ್ಡ ವಾಯುಯಾನ ಸಮೂಹ ಏರ್ ಇಂಡಿಯಾ ಅದರ ಅರ್ಧಕ್ಕೂ ಕಡಿಮೆ ಸಂಖ್ಯೆಯ ಹಾರಾಟಗಳನ್ನು ನಡೆಸುತ್ತದೆ.