ರಾಜ್ಯ ಬಿಜೆಪಿ ನಾಯಕರ ‘ಉಪಾಹಾರ ಸಭೆ’ ಎಂದು?
ರಾಜ್ಯ ಕಾಂಗ್ರೆಸ್‌ನೊಳಗಿನ ಭಿನ್ನಮತದ ಕಾರಣದಿಂದ ಸರಕಾರ ಬೀಳಬಹುದೋ ಎಂದು ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದ್ದ ಬಿಜೆಪಿ ನಾಯಕರಿಗೆ ನಿರಾಸೆಯಾಗಿದೆ. ಇದೀಗ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯವರು ಜೊತೆಯಾಗಿ ಉಪಾಹಾರ ಮಾಡಿದ ತಟ್ಟೆಯಲ್ಲಿ ಉಳಿದ ಆಹಾರಗಳ ರುಚಿ ನೋಡಿ ಅದರಲ್ಲಿ ತಪ್ಪು ಹುಡುಕಲು ಹೊರಟಿದ್ದಾರೆ. ಉಪಾಹಾರದ ಸಂದರ್ಭದಲ್ಲಿ ಮಾಂಸಾಹಾರ ಯಾಕೆ ತಿಂದಿರಿ? ಹನುಮಜಯಂತಿಯ ದಿನ ಕೋಳಿ ತಿಂದದ್ದು ಯಾಕೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾ ಸ್ವತಃ ಬಿಜೆಪಿ ನಾಯಕರೇ ಹಾಸ್ಯಾಸ್ಪದರಾಗುತ್ತಿದ್ದಾರೆ. ಸರಕಾರವನ್ನು ಟೀಕಿಸುವುದಕ್ಕೆ ಬಿಜೆಪಿ ನಾಯಕರ ಬಳಿ ವಿಷಯಗಳೇ ಇಲ್ಲವೇ ಎಂದು ಜನಸಾಮಾನ್ಯರು ಪ್ರಶ್ನಿಸುವಂತಾಗಿದೆ. ಇದೇ ಸಂದರ್ಭದಲ್ಲಿ ಬಿಜೆಪಿಯ ತಳಸ್ತರದ ಕಾರ್ಯಕರ್ತರು ರಾಜ್ಯ ಬಿಜೆಪಿ ನಾಯಕರಿಗೆ ‘‘ನಿಮ್ಮ ನಡುವಿನ ಉಪಾಹಾರ ಕಾರ್ಯಕ್ರಮ ಯಾವಾಗ?’’ ಎಂದು ಕೇಳುತ್ತಿದ್ದಾರೆ. ‘‘ಉಪಾಹಾರದಲ್ಲಿ ಏನನ್ನಾದರೂ ತಿನ್ನಿ. ಆದರೆ ದಯವಿಟ್ಟು ಜೊತೆ ಕೂತು ಮಾತುಕತೆ ನಡೆಸಿ ರಾಜ್ಯ ಬಿಜೆಪಿಯೊಳಗಿನ ಭಿನ್ನಾಭಿಪ್ರಾಯಕ್ಕೆ ಈಗಲಾದರೂ ಪರಿಹಾರವನ್ನು ಹುಡುಕಿ’’ ಎಂದು ಅವರು ಮನವಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ನೊಳಗಿನ ಭಿನ್ನಾಭಿಪ್ರಾಯಗಳಿಗೆ ತೆರೆಬಿದ್ದ ಬೆನ್ನಿಗೇ, ಇತ್ತ ರಾಜ್ಯ ಬಿಜೆಪಿಯ ಒಂದು ಗುಂಪು ದಿಲ್ಲಿಗೆ ಪ್ರಯಾಣ ಬೆಳೆಸಿದೆ. ರಾಜ್ಯಾಧ್ಯಕ್ಷರ ಬದಲಾವಣೆಯಾಗಬೇಕು ಎನ್ನುವ ಕೂಗು ಬಿಜೆಪಿಯೊಳಗೆ ಮತ್ತೆ ಎದ್ದಿದೆ. ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಕುಮಾರ ಬಂಗಾರಪ್ಪ, ಬಿ.ವಿ. ನಾಯಕ್, ಬಿ. ಪಿ. ಹರೀಶ್ ಸೇರಿದಂತೆ ಹಲವರು ದಿಲ್ಲಿಗೆ ತೆರಳಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸುವ ಪ್ರಯತ್ನ ಸಂಪೂರ್ಣ ವಿಫಲವಾಗಿ ಯತ್ನಾಳ್ ಸೇರಿದಂತೆ ಹಲವರ ವಿರುದ್ಧ ಬಿಜೆಪಿ ವರಿಷ್ಠರು ಶಿಸ್ತು ಕ್ರಮ ತೆಗೆದುಕೊಂಡ ಬಳಿಕ ಭಿನ್ನಮತೀಯರು ತಣ್ಣಗಾಗಿದ್ದರು. ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸುವ ಇಂಗಿತವನ್ನು ವರಿಷ್ಠರು ವ್ಯಕ್ತಪಡಿಸಿದ್ದರಾದರೂ, ವಿಜಯೇಂದ್ರ ಪರವಾಗಿ ಚುನಾವಣೆಗೆ ನಿಲ್ಲುವ ಧೈರ್ಯವನ್ನು ಯಾವ ಭಿನ್ನಮತೀಯರೂ ಪ್ರದರ್ಶಿಸಲಿಲ್ಲ. ಸ್ವತಃ ಯತ್ನಾಳ್ ಕೂಡ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿ ಬಿಟ್ಟರು. ವಿಜಯೇಂದ್ರ ಅವರನ್ನು ಬದಲಿಸಲು ಕೇಶವ ಕೃಪಾದಲ್ಲಿ ಸಂಚುಗಳು ರೂಪುಗೊಳ್ಳುತ್ತಿದ್ದವಾದರೂ, ಬಹಿರಂಗವಾಗಿ ಅವರ ವಿರುದ್ಧ ಮಾತನಾಡುವ ಧೈರ್ಯವನ್ನು ಈವರೆಗೆ ಪ್ರದರ್ಶಿಸಿಲ್ಲ. ಬಿಜೆಪಿಯೊಳಗಿರುವ ಕೆಲವು ಶೂದ್ರ, ಲಿಂಗಾಯತ, ಒಕ್ಕಲಿಗ ನಾಯಕರನ್ನು ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಆರೆಸ್ಸೆಸ್ ನಾಯಕರು ಬಳಸುತ್ತಾ ಬಂದಿದ್ದಾರೆ. ಸಿ. ಟಿ. ರವಿ, ಅಶೋಕ್, ಶೆಟ್ಟರ್ ಸೇರಿದಂತೆ ಹಿರಿಯ ನಾಯಕರಿಗೆ ವಿಜಯೇಂದ್ರ ನಾಯಕತ್ವ ಅಪಥ್ಯವಾಗಿದೆಯಾದರೂ ಅದನ್ನು ಬಹಿರಂಗವಾಗಿ ಪ್ರಕಟಿಸಲು ಸಾಧ್ಯವಾಗದೆ ಈಗಾಗಲೇ ಮುನ್ನೆಲೆಯಲ್ಲಿರುವ ಭಿನ್ನಮತೀಯರನ್ನು ಒಳಗೊಳಗೆ ಬೆಂಬಲಿಸುತ್ತಾ ಬರುತ್ತಿದ್ದಾರೆ. ಇವೆಲ್ಲವೂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರಿಗೆ ತಿಳಿಯದ ವಿಷಯವೇನೂ ಅಲ್ಲ. ಲಿಂಗಾಯತ ಜಾತಿ ಬಲವನ್ನು ಮುಂದಿಟ್ಟುಕೊಂಡು ವಿಜಯೇಂದ್ರ ಅವರು ಎಲ್ಲ ಸಂಚುಗಳನ್ನು ವಿಫಲಗೊಳಿಸುತ್ತಾ ಬಂದಿದ್ದಾರೆ. ವಿಜಯೇಂದ್ರ ಅವರನ್ನು ಬದಲಾಯಿಸುವ ಒಲವು ವರಿಷ್ಠರಿಗೆ ಇದೆಯಾದರೂ, ರಾಜ್ಯ ಬಿಜೆಪಿಯೊಳಗೆ ಅದು ಉಂಟು ಮಾಡಬಹುದಾದ ಅನಾಹುತಗಳಿಗೆ ಹೆದರಿ ಅವರು ಮೌನವಾಗಿದ್ದಾರೆ.
ವಿಜಯೇಂದ್ರ ಅವರಿಗೆ ಜಾತಿ ಬಲ, ಹಣ ಬಲ ಎರಡೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಯಡಿಯೂರಪ್ಪ ಅವರ ಆಶೀರ್ವಾದ ಅವರಿಗಿದೆ. ಆದರೆ ಬಿಜೆಪಿಯೊಳಗಿರುವ ಹಿರಿಯರಿಗೆ ಹೋಲಿಸಿದರೆ ರಾಜಕೀಯ ಅನುಭವ ತೀರಾ ಕಡಿಮೆ. ವಿಜಯೇಂದ್ರ ಅವರ ಸೂಚನೆಗಳನ್ನು, ಆದೇಶಗಳನ್ನು ಪಾಲಿಸಲು ಬಿಜೆಪಿಯ ಬಹುತೇಕ ಹಿರಿಯರು ಮಾನಸಿಕವಾಗಿ ಸಿದ್ಧರಿಲ್ಲ. ಆದುದರಿಂದಲೇ ಪಕ್ಷ ಸಂಘಟನೆಯ ಕುರಿತಂತೆ ವಿಜಯೇಂದ್ರ ಸಲಹೆ ಸೂಚನೆಗಳನ್ನು ನೀಡುವುದನ್ನು ಇತ್ತೀಚೆಗೆ ಸಂಪೂರ್ಣ ಕೈ ಬಿಟ್ಟಿದ್ದಾರೆ. ಯತ್ನಾಳ್ ಅವರಂತೂ ವಿಜಯೇಂದ್ರ ವಿರುದ್ಧ ಏಕವಚನದಲ್ಲಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಬಿಜೆಪಿಯೊಳಗಿರುವ ಹಿರಿಯರೇ ವಿಜಯೇಂದ್ರ ಅವರಿಗೆ ಅತಿ ದೊಡ್ಡ ತಲೆನೋವಾಗಿದ್ದಾರೆ. ಈ ಹಿರಿಯರನ್ನು ಕೈ ಬಿಟ್ಟು ಪಕ್ಷವನ್ನು ಮುಂದಕ್ಕೆ ಒಯ್ಯುವಂತೆಯೂ ಇಲ್ಲ. ಪರಿಣಾಮವಾಗಿ ಒಂದು ವಿರೋಧ ಪಕ್ಷವಾಗಿ ಬಿಜೆಪಿಯು ರಾಜ್ಯದಲ್ಲಿ ಸಂಪೂರ್ಣ ವಿಫಲವಾಗಿದೆ. ಇದರ ಲಾಭವನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ತನ್ನದಾಗಿಸುತ್ತಾ ಬರುತ್ತಿದೆ. ಬಿಜೆಪಿಯ ಈ ಅಸಹಾಯಕ ಸ್ಥಿತಿಯ ಕಾರಣದಿಂದಲೇ ಕಾಂಗ್ರೆಸ್‌ನೊಳಗಿರುವ ಭಿನ್ನಮತ ರಾಜ್ಯದ ಜನತೆಗೆ ವಿಶೇಷವೆಂದು ಅನ್ನಿಸುತ್ತಿಲ್ಲ. ಅದೆಷ್ಟೇ ಭಿನ್ನಮತವಿದ್ದರೂ ಕಾಂಗ್ರೆಸ್ ನಾಯಕರು ಮಾಧ್ಯಮಗಳಲ್ಲಿ ಬಹಿರಂಗ ಹೇಳಿಕೆಯನ್ನು ಈವರೆಗೆ ನೀಡಿಲ್ಲ. ಅಸಮಾಧಾನಗಳನ್ನು ವರಿಷ್ಠರ ಮುಂದೆ ತೋಡಿಕೊಂಡಿದ್ದಾರಾದರೂ ಡಿ. ಕೆ. ಶಿವಕುಮಾರ್ ಅವರು ಮಾಧ್ಯಮಗಳ ಮುಂದೆ ಸದಾ ಒಗ್ಗಟ್ಟಿನ ಮಾತುಗಳನ್ನು ಆಡುತ್ತಾ ಬಂದಿದ್ದಾರೆ.
ಸದ್ಯ ಅಧಿಕಾರದಲ್ಲಿರುವುದು ಕಾಂಗ್ರೆಸ್. ಆದರೂ ಭೀಕರ ಕಚ್ಚಾಟ ನಡೆಯುತ್ತಿರುವುದು ಬಿಜೆಪಿಯೊಳಗೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೇ ಚಾಲ್ತಿಯಲ್ಲಿರುವ ಈ ಕಚ್ಚಾಟಕ್ಕೆ ಔಷಧಿ ಹುಡುಕುವಲ್ಲಿ ಬಿಜೆಪಿ ನಾಯಕರು ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯಾಧ್ಯಕ್ಷರ ವಿರುದ್ಧ ಯತ್ನಾಳ್ ಪದೇ ಪದೇ ಅವಾಚ್ಯ ಹೇಳಿಕೆಗಳನ್ನು ನೀಡುತ್ತಿರುವಾಗಲೂ ಬಿಜೆಪಿ ವರಿಷ್ಠರು ಮೌನ ಪಾಲಿಸಿದ್ದರು. ಇನ್ನು ಸಹಿಸಲಾಗುವುದಿಲ್ಲ ಎಂಬ ಎಚ್ಚರಿಕೆಯನ್ನು ಯಡಿಯೂರಪ್ಪ ಮತ್ತು ವಿಜಯೇಂದ್ರ ವರಿಷ್ಠರಿಗೆ ಪ್ರತಿಯಾಗಿ ರವಾನಿಸಿದಾಗ ಅನಿವಾರ್ಯವಾಗಿ ಯತ್ನಾಳ್ ಮತ್ತು ಅವರ ಸಂಗಡಿಗರ ವಿರುದ್ಧ ಶಿಸ್ತುಕ್ರಮ ತೆಗೆದುಕೊಂಡವರಂತೆ ನಟಿಸಿದ್ದಾರೆ. ಒಂದು ವೇಳೆ ಅಂದೇ ಕಠಿಣ ಕ್ರಮ ತೆಗೆದುಕೊಂಡಿದ್ದರೆ ಇಂದು ಮತ್ತೆ ಭಿನ್ನಮತೀಯರು ವಿಜಯೇಂದ್ರ ವಿರುದ್ಧ ದಿಲ್ಲಿಗೆ ದೂರು ಹಿಡಿದುಕೊಂಡು ಹೋಗುತ್ತಿರಲಿಲ್ಲ. ಅತ್ಯುತ್ತಮ ಆಡಳಿತ ನಡೆಸಲು ಸರಕಾರದೊಳಗೆ ಹೇಗೆ ಭಿನ್ನಮತಗಳು ಇರಬಾರದೋ ಹಾಗೆಯೇ ಅತ್ಯುತ್ತಮ ವಿರೋಧ ಪಕ್ಷವಾಗಿ ಸರಕಾರಕ್ಕೆ ಮಾರ್ಗದರ್ಶನ ಮಾಡಲು ಬಿಜೆಪಿಯೊಳಗೂ ಭಿನ್ನಮತ ತಣ್ಣಗಾಗಬೇಕಾಗಿದೆ. ವಿಜಯೇಂದ್ರ ಅವರ ನೇತೃತ್ವದಲ್ಲಿ ಸರಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಬಿಜೆಪಿ ಇನ್ನಾದರೂ ಸಿದ್ಧವಾಗಬೇಕು. ಭಿನ್ನಮತದ ಶಮನದ ವಿಷಯದಲ್ಲಿ ಕಾಂಗ್ರೆಸ್‌ನ ನಾಯಕರನ್ನು ಮಾದರಿಯಾಗಿರಿಸಿಕೊಂಡು, ವಿಜಯೇಂದ್ರ, ಯತ್ನಾಳ್, ಜಾರಕಿ ಹೊಳಿ, ಈಶ್ವರಪ್ಪ, ಸಿ.ಟಿ. ರವಿ ಮೊದಲಾದವರಿಗೆ ಒಂದೇ ಟೇಬಲ್‌ನಲ್ಲಿ ಅಪ್ಪಟ ಸಸ್ಯಾಹಾರಿ ಉಪಾಹಾರ ವ್ಯವಸ್ಥೆಯನ್ನು ಬಿಜೆಪಿ ವರಿಷ್ಠರು ಮಾಡಿಕೊಡಬೇಕಾಗಿದೆ.