×
Ad

ಬಂಡೀಪುರ ಅಭಯಾರಣ್ಯದೊಳಗೆ ಸಫಾರಿ ಬಂದ್

ಅರಣ್ಯ ಇಲಾಖೆ ಆದಾಯಕ್ಕೆ ಹೊಡೆತ

Update: 2025-12-05 14:56 IST

ಚಾಮರಾಜನಗರ : ಜಿಲ್ಲೆಯ ಅಭಯಾರಣ್ಯದೊಳಗೆ ಸಫಾರಿ ಬಂದ್ ಆಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಬರುತ್ತಿದ್ದ ಆದಾಯಕ್ಕೆ ಕುತ್ತು ಬಂದಂತಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದ ಅಭಯಾರಣ್ಯದೊಳಗೆ ಸಫಾರಿಯಿಂದಲೇ ವರ್ಷಕ್ಕೆ ಕೋಟಿ ಗಟ್ಟಲೆ ಆದಾಯವೂ ಬರುತ್ತಿತ್ತು, ಇದನ್ನೇ ನಂಬಿಕೊಂಡು ಅದೆಷ್ಟೋ ಬಡ ಕುಟುಂಬಗಳು ಜೀವನ ಸಾಗಿಸುತ್ತಿದ್ದವು.

ಕೆಲವು ತಿಂಗಳಿಂದ ಕಾಡಿನಿಂದ ಹುಲಿ, ಚಿರತೆಗಳು ಹೊರ ಬಂದು ಕಾಡಂಚಿನ ಗ್ರಾಮಗಳಲ್ಲಿ ದಾಳಿ ನಡೆಸಿದ್ದಲ್ಲದೆ ಪ್ರಾಣ ಹಾನಿಯನ್ನುಂಟು ಮಾಡಿತ್ತು. ಇದರಿಂದ ಬೇಸತ್ತ ಗ್ರಾಮಸ್ಥರು ಮತ್ತು ರೈತರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡಿದ್ದರು. ಕಾಡಿನಲ್ಲಿರಬೇಕಾದ ವನ್ಯ ಜೀವಿಗಳು ಕಾಡಂಚಿನ ಗ್ರಾಮದೊಳಗೆ ಬಂದು ಪ್ರಾಣ ಹಾನಿಯನ್ನುಂಟು ಮಾಡುತ್ತಿದೆ. ಇದಕ್ಕೆ ಅಭಯಾರಣ್ಯದೊಳಗೆ ಸಫಾರಿ ಮಾಡುವುದರಿಂದಲೇ ಎಂದು ಆರೋಪಿಸಿದ್ದರಿಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಬಂಡೀಪುರ ಮತ್ತು ಮೈಸೂರು ಜಿಲ್ಲೆಯ ನಾಗರಹೊಳೆಯಲ್ಲಿ ಸಫಾರಿ ಬಂದ್ ಮಾಡುವಂತೆ ಸೂಚನೆ ನೀಡಿದ್ದರು.

ಅರಣ್ಯ ಸಚಿವರ ಸೂಚನೆಯಂತೆ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಯನ್ನು ಬಂದ್ ಮಾಡಿದ್ದಾರೆ ಇದರಿಂದಾಗಿ ಎರಡೂ ರಾಷ್ಟ್ರೀಯ ಉದ್ಯಾನವನದಲ್ಲೂ ಸಫಾರಿ ಕೇಂದ್ರಗಳು ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದ್ದು, ಸಫಾರಿ ಕೇಂದ್ರಗಳಲ್ಲಿ ಇದೀಗ ಮೌನ ಆವರಿಸಿದೆ. ವಾರಾಂತ್ಯ ಮತ್ತು ಸಾಲು ಸಾಲು ರಜೆ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರಿಗೆ ಸಫಾರಿ ಇಲ್ಲದೇ ಇರುವುದರಿಂದ ಬೇಸರದಿಂದ ಬೇರೆ ಪ್ರವಾಸಿ ತಾಣಗಳತ್ತ ಸಾಗುತ್ತಿದ್ದಾರೆ.

ಇನ್ನು ಹದಿನೈದು ದಿನಗಳು ಕಳೆದಂತೆ ವರ್ಷಾಂತ್ಯ ಹಾಗೂ ಹೊಸ ವರ್ಷ ಬರಲಿದೆ. ಈ ಸಮಯದಲ್ಲಿ ಬಂಡೀಪುರಕ್ಕೆ ಸಾಗರೋಪಹಾದಿಯಲ್ಲಿ ಪ್ರವಾಸಿಗರು ಆಗಮಿಸುವರು. ಪ್ರವಾಸಕ್ಕೆ ಬರುವವರು ಕಾನನದೊಳಗೆ ಸಫಾರಿ ಮಾಡುವುದು ವಾಡಿಕೆಯನ್ನು ಮಾಡಿಕೊಂಡಿರುವವರಿಗೆ ಇದೀಗ ಸಪಾರಿ ಬಂದ್‌ನಿಂದ ಬಾರಿ ನಿರಾಸೆಯಾಗುವಂತ್ತಿದೆ.

ಸಫಾರಿಗೆ ತಡೆ ನೀಡಿರುವುದರಿಂದ ಕಾಡಂಚಿನ ಗ್ರಾಮಸ್ಥರು ಮತ್ತು ರೈತರು ಪ್ರತಿಭಟನೆ ಮಾಡುವುದು ನಿಲ್ಲಿಸಿದರೆ, ಮತ್ತೊಂದು ಕಡೆ ಸಫಾರಿ ಬಂದ್‌ನಿಂದ ಇದನ್ನೇ ನೆಚ್ಚಿಕೊಂಡು ವ್ಯಾಪಾರ ವಹಿವಾಟು ಮಾಡುವ ಬಡ ಕುಟುಂಬಗಳ ಜೀವನಕ್ಕೆ ಆರ್ಥಿಕ ಹೊಡೆತವಾಗಿದೆ. ಮಗದೊಂದು ಕಡೆ ಸಫಾರಿಗೆ ತೆರಳುವ ಪ್ರವಾಸಿಗರಿಂದ ಬರುವ ಆದಾಯವು ಅರಣ್ಯ ಇಲಾಖೆಯ ಖಜಾನೆ ತುಂಬುತ್ತಿದ್ದು, ಇದೀಗ ಬರಿದಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದರ ನಡುವ ಸದ್ಯಕ್ಕೆ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸ್ಥಗಿತಗೊಂಡಿರುವ ಸಫಾರಿಯನ್ನು ಮತ್ತೆ ಆರಂಭಿಸಬೇಕೇ ಬೇಡವೇ ಎನ್ನುವ ಬಗ್ಗೆ ಹಿರಿಯ ಅರಣ್ಯಾಧಿಕಾರಿಗಳಲ್ಲಿ ಚರ್ಚೆ ಆರಂಭವಾಗಿದ್ದು, ಅಂತಿಮ ತೀರ್ಮಾನ ಇನ್ನೂ ಕೈಗೊಂಡಿಲ್ಲ ಎನ್ನಲಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿ ಹಾವಳಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸರಕಾರದ ಸೂಚನೆಯಂತೆ ಸಫಾರಿ ಸ್ಥಗಿತಗೊಳಿಸಲಾಗಿದೆ. ವಾರಾಂತ್ಯದಲ್ಲಿ ಹೆಚ್ಚಿನ ಪ್ರವಾಸಿಗರು ಸಫಾರಿಗೆ ತೆರಳುತ್ತಿದ್ದರು. ಪ್ರಸ್ತುತ ಸಫಾರಿ ಸ್ಥಗಿತಗೊಳಿಸಿದ್ದರಿಂದ ಪ್ರವಾಸಿಗರು ಇಲ್ಲದಂತಾಗಿದೆ. ಸರಕಾರ ನಿದೇರ್ಶನ ನೀಡುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

-ಎನ್.ಪಿ.ನವೀನ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಂಡೀಪುರ

ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಸ್ಥಗಿತಗೊಳಿಸಿದ್ದರಿಂದ ಕಾಡು ಪ್ರಾಣಿಗಳು ಕಾಡಿನಲ್ಲಿ ಇರುತ್ತವೆ. ಮತ್ತೆ ಸಫಾರಿ ಆರಂಭಿಸುವ ಬಗ್ಗೆ ಇಲಾಖೆಯ ಮೇಲೆ ಒತ್ತಡ ಹೇರಲಾಗುತ್ತಿದೆ. ಸರಕಾರ ಕನಿಷ್ಟ ಒಂದು ವರ್ಷವಾದರೂ ಸಫಾರಿಯನ್ನು ಸ್ಥಗಿತಗೊಳಿಸಿದರೆ ಕಾಡಂಚಿನ ಗ್ರಾಮಗಳಲ್ಲಿ ವನ್ಯ ಜೀವಿಗಳ ಹಾವಳಿಯನ್ನು ನಿಯಂತ್ರಣಕ್ಕೆ ತರಬಹುದು

-ಮಹದೇವಪ್ಪ ಶಿವಪುರ, ರೈತ ಮುಖಂಡರು ಗುಂಡ್ಲುಪೇಟೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಾ.ಅಶ್ವಥ್ ಕುಮಾರ್

contributor

Similar News