ಮಹಾನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ; ತವರಿಗೆ ಮರಳುತ್ತಿರುವ ಕರಾವಳಿಗರು!
ಸಾಂದರ್ಭಿಕ ಚಿತ್ರ | Photo Credit : PTI
ಒಂದು ಕಾಲದಲ್ಲಿ ಪ್ರಗತಿ ಮತ್ತು ಏಳಿಗೆಯ ಪ್ರತೀಕವಾಗಿದ್ದ ಮಹಾನಗರಗಳು ಇದೀಗ ತಮ್ಮ ಹೊಳಪನ್ನು ಕಳೆದುಕೊಳ್ಳುತ್ತಿವೆ. ಇತ್ತೀಚೆಗೆ ತೀವ್ರ ಮಳೆ ಮತ್ತು ವಾಯುಗುಣಮಟ್ಟದ ಸೂಚ್ಯಂಕ ಕುಸಿಯುತ್ತಿರುವುದರಿಂದ ಮಹಾನಗರಗಳಲ್ಲಿ ನೆಲೆಸಿರುವ ಕರ್ನಾಟಕದ ಜನತೆ ತವರಿನ ಕಡೆಗೆ ಮರಳುತ್ತಿದ್ದಾರೆ.
ಮಹಾನಗರಗಳಲ್ಲಿ ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯುಐ) ನಿವಾಸಿಗರಿಗೆ ಸ್ವಚ್ಛ ಹವಾಮಾನವಿರುವ ಪ್ರದೇಶಗಳಿಗೆ ಪ್ರಯಾಣ ಬೆಳೆಸಲು ಹೊಸ ಕಾರಣವಾಗುತ್ತಿದೆ. ವಾಯುಮಾಲಿನ್ಯ ಮತ್ತು ಗಾಳಿಯ ಗುಣಮಟ್ಟದ ಕೊರತೆಯಿಂದಾಗಿ ವರ್ಷಾನುಗಟ್ಟಲೆ ದಿಲ್ಲಿ ಮತ್ತು ಮುಂಬೈಗಳಲ್ಲಿ ನೆಲೆಸಿದ್ದ ಕರ್ನಾಟಕದ ಜನತೆ ತವರಿಗೆ ಮರಳುತ್ತಿದ್ದಾರೆ.
ಇಂತಹ ವಾಪಾಸಾತಿ ಟ್ರೆಂಡ್ನಲ್ಲಿ ಮೂರು ಮುಖ್ಯ ಅಂಶಗಳನ್ನು ಗುರುತಿಸಬಹುದು. ಮೊದಲನೆಯದಾಗಿ ವರ್ಕ್ ಫ್ರಂ ಹೋಮ್ ಆಯ್ಕೆಗಳು ಇತ್ತೀಚೆಗೆ ಜನಪ್ರಿಯವಾಗಿರುವುದು. ಎರಡನೆಯದು ದೂರದ ಊರಿನಲ್ಲಿ ಮುಂದಿನ ತಲೆಮಾರಿಗೆ ಉತ್ತಮ ಭವಿಷ್ಯದ ಕೊರತೆ ಕಂಡುಬರುತ್ತಿರುವುದು ಮತ್ತು ಮೂರನೆಯದು ಹೊಸ ತಲೆಮಾರಿನ ಪ್ರಯಾಣದ ಹಸಿವು.
ವರ್ಕ್ ಫ್ರಂ ಹೋಂ ಆರಿಸುತ್ತಿರುವ ಜನತೆ
ಇತ್ತೀಚೆಗೆ ಕಾರ್ಪೋರೇಟ್ ಕಂಪೆನಿಗಳಲ್ಲಿ ವಾರಕ್ಕೆ ಮೂರು ದಿನ ಕಚೇರಿ ಮತ್ತು ಉಳಿದ ದಿನ ಮನೆಯಿಂದ ಕೆಲಸ ಮಾಡುವ ಅವಕಾಶ ಕೊಡಲಾಗುತ್ತಿದೆ. ಇನ್ನು ಕೆಲವು ಕಡೆ ತಿಂಗಳಲ್ಲಿ ಎರಡು ವಾರ ಕಚೇರಿ ಮತ್ತು ಇನ್ನೆರಡು ವಾರ ಮನೆಯಿಂದ ಕೆಲಸ ಮಾಡುವ ಅವಕಾಶವಿದೆ. ಮೂಲತಃ ಕೊಡಗಿನ ನಿವಾಸಿಯಾಗಿದ್ದು, ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಕಿಶನ್ ವಾರಕ್ಕೆ ಮೂರೇ ಬಾರಿ ಕಚೇರಿಗೆ ಹೋಗುವುದು. ಉಳಿದ ಮೂರು ದಿನ ಬೆಂಗಳೂರಿನ ಮನೆಯಿಂದಲೇ ಕೆಲಸ ಮಾಡುತ್ತಾರೆ. ಕೋವಿಡ್ ಸಂದರ್ಭದಲ್ಲಿ ಅವರು ಸಂಪೂರ್ಣವಾಗಿ ಕೊಡಗಿನಲ್ಲಿ ನೆಲೆಸಿ ಕೆಲಸ ಮಾಡಿದ್ದರು.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರಿನ ನಿವಾಸಿಯೊಬ್ಬರು ಇಂತಹುದೇ ಆಯ್ಕೆಯನ್ನು ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ ವರ್ಷಾನುಗಟ್ಟಲೆ ನೆಲೆಸಿದ್ದ ಅವರು ಇದೀಗ ತಮ್ಮ ಕಚೇರಿಯಲ್ಲಿ ತಿಂಗಳ ಮೊದಲೆರಡು ವಾರ ಮಾತ್ರ ಕೆಲಸ ಮಾಡುತ್ತಾರೆ. ಮುಂದಿನ ಎರಡು ವಾರ ತಮ್ಮ ಊರಿನಲ್ಲೇ ಮನೆಯಲ್ಲಿ ಕುಳಿತು ಕೆಲಸ ಮಾಡುತ್ತಾರೆ. ಉಡುಪಿಯಿಂದ ಮುಂಬೈಗೆ ಪ್ರಯಾಣ ಬೆಳೆಸುವುದು ಸುಲಭವಾಗಿರುವುದರಿಂದ ಅವರಿಗೆ ಈ ಆಯ್ಕೆ ಇಷ್ಟವಾಗಿದೆ.
ಮೂಲತಃ ಮಂಗಳೂರಿನವರಾದ ಕಳೆದ ಎರಡು ದಶಕಗಳಿಂದ ದಿಲ್ಲಿಯಲ್ಲಿ ವೃತ್ತಿಪರರಾಗಿರುವ ಪ್ರಕಾಶ್ ಶೆಟ್ಟಿ ಪ್ರಕಾರ, “ನನ್ನ ಸಂಪೂರ್ಣ ಕುಟುಂಬ ಅಲಿಗಢ್ನಲ್ಲಿದೆ. ನಾನು ವಾರಾಂತ್ಯದಲ್ಲಿ ಅಲ್ಲಿಗೆ ಹೋಗಿ ಬರುತ್ತೇನೆ. ವಾಯುಮಾಲಿನ್ಯ, ಮಳೆ ಮೊದಲಾಗಿ ದಿಲ್ಲಿಯ ಪರಿಸರ ಕೆಟ್ಟು ಹೋಗಿರುವ ಕಾರಣದಿಂದಾಗಿ ನನ್ನ ಹತ್ತು ವರ್ಷ ವಯಸ್ಸಿನ ಮಗ ನನ್ನನ್ನೂ ಪೂರ್ಣವಾಗಿ ಅಲಿಗಢ್ಗೆ ಬಂದು ನೆಲೆಸುವಂತೆ ಒತ್ತಾಯಿಸುತ್ತಿರುತ್ತಾನೆ. ಆದರೆ ಕೆಲಸದ ಕಾರಣದಿಂದ ನಾನು ಇನ್ನೂ ದಿಲ್ಲಿಯಲ್ಲಿ ಉಳಿದಿರುವೆ” ಎನ್ನುತ್ತಾರೆ.
ಮುಂದಿನ ತಲೆಮಾರಿನ ಭವಿಷ್ಯದ ಚಿಂತೆ
ಈ ಹಿಂದೆ ದಿಲ್ಲಿ ಮತ್ತು ಮುಂಬೈ ಓದು ಮತ್ತು ವೃತ್ತಿಗೆ ಬಹಳ ಅನುಕೂಲಕರ ಆಯ್ಕೆಯಾಗಿತ್ತು. ಆದರೆ ವಾಯುಮಾಲಿನ್ಯ ಮತ್ತು ಮಳೆಯಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳು ಜನರನ್ನು ತವರಿನತ್ತ ಮರಳಿ ಕರೆಯುತ್ತಿದೆ.
ದಿಲ್ಲಿಯಲ್ಲಿ ಸುಮಾರು 2 ದಶಕಗಳ ಕಾಲ ನೆಲೆಸಿದ್ದ ರಾಘವ ಶರ್ಮ ತಮ್ಮ ಕುಟುಂಬದ ಆರೋಗ್ಯ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ತವರಿಗೆ ಮರಳಿದ್ದಾರೆ. “ದಿಲ್ಲಿಯಲ್ಲಿ ಪ್ರತಿ ವರ್ಷ ಮಾಲಿನ್ಯದ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಆಡಳಿತ ಪಕ್ಷ-ವಿಪಕ್ಷಗಳು ಈ ವಿಷಯದಲ್ಲಿ ಕಿತ್ತಾಡುತ್ತವೆಯೇ ವಿನಃ ಪರಿಹಾರ ಕಂಡುಕೊಳ್ಳಲು ಕೆಲಸ ಮಾಡುವುದಿಲ್ಲ. ಸುಪ್ರೀಂಕೋರ್ಟ್ ನಲ್ಲೂ ಇದು ಚರ್ಚೆಗೆ ಬರುತ್ತದೆ, ಆದರೆ ಅಂತಿಮವಾಗಿ ಸಾಧಿಸುವುದು ಏನೂ ಇಲ್ಲ. ಅವರು ಸರ್ಕಾರಕ್ಕೆ ಬಯ್ಯುತ್ತಾರೆ, ಸರ್ಕಾರ ಕೂಳೆ ಸುಡುವುದರಿಂದ ಹೀಗಾಗುತ್ತದೆ ಎಂದು ಕೈತೊಳೆದು ಕೂರುತ್ತದೆ. ದಿಲ್ಲಿ ಈಗಾಗಲೇ ಬದುಕಲು ಯೋಗ್ಯವಲ್ಲದ ನಗರ ಎಂಬ ಕುಖ್ಯಾತಿಗೆ ಗುರಿಯಾಗಿದೆ” ಎನ್ನುತ್ತಾರೆ ನಿಡ್ಲೆ ನಿವಾಸಿಯಾಗಿರುವ ಪತ್ರಕರ್ತರಾದ ರಾಘವ ಶರ್ಮ.
ಅವರ ಪ್ರಕಾರ, “ನವೆಂಬರ್-ಡಿಸೆಂಬರ್-ಜನವರಿ ತಿಂಗಳಲ್ಲಿ ಆವರಿಸುವ ದಟ್ಟ ಮಾಲಿನ್ಯ ಕಂಡಾಗ ಭಯವಾಗುತ್ತದೆ. ಮಕ್ಕಳಿಗೆ, ವೃದ್ಧರಿಗೆ ಬಿಡಿ, ಈಗ ಯುವಕರಿಗೂ ಈ ಮಾಲಿನ್ಯ ಅನಾರೋಗ್ಯ ತಂದಿಡುತ್ತಿದೆ. ನಾವು ದಿಲ್ಲಿ ಬಿಡಲು ಮಾಲಿನ್ಯ ಕೂಡ ಕಾರಣ. 18 ವರ್ಷಗಳ ವಾಸ್ತವ್ಯ ನಮ್ಮ ಆರೋಗ್ಯದ ಮೇಲೆ ಏನೆಲ್ಲ ಪರಿಣಾಮ ಬೀರಿದೆಯೋ ದೇವರೇ ಬಲ್ಲ. ನಾನು ಊರಿಗೆ ವಾಪಸ್ ಆಗಲು ಯೋಚಿಸಿದ್ದರ ಹಿಂದೆ ಮಗಳ ಆರೋಗ್ಯ ಕಾಪಾಡುವುದು ಕೂಡ ಒಂದು ಕಾರಣ ಆಗಿತ್ತು.”
ಅವರಂತೆ ದಿಲ್ಲಿ ಮತ್ತು ಮುಂಬೈನಿಂದ ತವರಿಗೆ ಮರಳುವವರ ಸಂಖ್ಯೆ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.
ಹೊಸ ತಲೆಮಾರಿನ ಪ್ರಯಾಣದ ಹಸಿವು
ದಿಲ್ಲಿ ನಿವಾಸಿಯಾಗಿರುವ ರೂಪಾಲಿ ಹೇಳುವ ಪ್ರಕಾರ, ವರ್ಷಕ್ಕೆ ಒಂದು ಬಾರಿ ಒಂದು ವಾರ ದಿಲ್ಲಿಯಿಂದ ದೂರ ಹೋಗುವುದನ್ನು ಕಡ್ಡಾಯವಾಗಿ ಪಾಲಿಸುತ್ತಿದ್ದೇನೆ. ಕಳೆದ ವರ್ಷ ಕರ್ನಾಟಕದ ಕರಾವಳಿಗಳಲ್ಲಿ ಸುತ್ತಾಡಿದ್ದೇನೆ. ಈ ವರ್ಷ ಉದಯ್ಪುರಕ್ಕೆ ತೆರಳಿದ್ದೇನೆ. ಮುಂದಿನ ವರ್ಷ ಮಹಾರಾಷ್ಟ್ರ ಅಥವಾ ಈಶಾನ್ಯ ಪ್ರದೇಶಗಳಿಗೆ ಹೋಗುವ ಆಸಕ್ತಿ ಇದೆ.
ಇತ್ತೀಚೆಗೆ ವರ್ಕ್ ಫ್ರಂ ಹೋಂ ಆಯ್ಕೆಯನ್ನು ತೆಗೆದುಕೊಂಡು ಪ್ರಯಾಣ ಬೆಳೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಚಿಕ್ಕಮಗಳೂರು ಜಿಲ್ಲೆಯಂತೂ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ರೆಸಾರ್ಟ್ಗಳಲ್ಲಿ ಒಂದೆರಡು ವಾರ ಬಂದು ನೆಲೆಸಿ ಅತ್ತ ಕೆಲಸವೂ ಸರಿ ಮತ್ತು ಇತ್ತ ಪ್ರಯಾಣವೂ ಆದಂತಾಗುತ್ತದೆ ಎಂದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಪ್ರಕಾಶ್ ಶೆಟ್ಟಿಯವರು ಇತ್ತೀಚೆಗೆ ಸುರತ್ಕಲ್- ಮುಲ್ಕಿ ನಡುವೆ ಇರುವ ಸಸಿಹಿತ್ಲು ಕಡಲತೀರದ ರೆಸಾರ್ಟ್ ಒಂದಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಸಿಬ್ಬಂದಿಗಳು ಹೇಳುವ ಪ್ರಕಾರ, “ಇತ್ತೀಚೆಗೆ ದಿಲ್ಲಿ ಮತ್ತು ಮುಂಬೈನಲ್ಲಿ ನೆಲೆಸಿರುವಂತಹ ಬಹುತೇಕ ಕರಾವಳಿ ನಿವಾಸಿಗರು ವಾರಗಟ್ಟಲೆ ರೆಸಾರ್ಟ್ನಲ್ಲಿ ಬಂದು ಉಳಿಯುತ್ತಿದ್ದಾರೆ. ರೆಸಾರ್ಟ್ನಿಂದಲೇ ಕೆಲಸ ಮಾಡುವುದು ಮತ್ತು ಸುಂದರ ಪ್ರಕೃತಿಯ ಮಡಲಿನ ಅನುಭವವನ್ನು ಪಡೆದು ಮರಳುತ್ತಿರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ.”