ಪ್ರಕೃತಿಯ ಮೋಸದಾಟ: ಉತ್ತರಾಖಂಡ ಕಾಡ್ಗಿಚ್ಚಿನ ಜ್ವಲಂತ ಪ್ರಶ್ನೆನಗಳು

Update: 2016-05-03 17:20 GMT

ತ್ತರಾಖಂಡದ ಅರಣ್ಯ ೆಬ್ರವರಿ ತಿಂಗಳಲ್ಲೇ ಕನಲುತ್ತಿತ್ತು. ಬಿಸಿಲ ಬೇಗೆ ಹೆಚ್ಚಿದಂತೆ ಪೂರ್ಣ ಪ್ರಮಾಣದಲ್ಲಿ ತನ್ನ ಪ್ರತಾಪ ತೋರಿಸಿತು. ರಾಜ್ಯ ಭೀಕರ ಕಾಡ್ಗಿಚ್ಚಿನ ವಿರುದ್ಧ ಸಮರ ಸಾರುತ್ತಿರುವುದು ಇದೇ ಮೊದಲ ಬಾರಿ ಅಲ್ಲದಿದ್ದರೂ, ಇದುವರೆಗೆ ರಾಜ್ಯದ 13 ಜಿಲ್ಲೆಗಳಲ್ಲಿ ಸುಮಾರು 2,300 ಹೆಕ್ಟೇರ್ ಅರಣ್ಯ ಭಸ್ಮವಾಗಿರುವ ಬಗ್ಗೆ ಅರಣ್ಯ ಇಲಾಖೆ ಅಕಾರಿಗಳು ಚಿಂತಿತರಾಗಿದ್ದಾರೆ. ಮೂರು ಮಂದಿ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದ್ದು, ಅಸಂಖ್ಯಾತ ವನ್ಯಜೀವಿಗಳು ಆಹುತಿಯಾಗಿವೆ. ಸಾಮಾನ್ಯವಾಗಿ ಕಾಡ್ಗಿಚ್ಚು ಮಾರ್ಚ್‌ನಲ್ಲಿ ಆರಂಭವಾಗಿ ಮುಂಗಾರು ಆಗಮನವಾಗುವ ಜುಲೈವರೆಗೂ ಇರುತ್ತದೆ. ಈ ಭೀಕರ ವಿಕೋಪ ಇಡೀ ಪ್ರದೇಶದ ಒಟ್ಟಾರೆ ಪರಿಸರದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಸ್ಥಳೀಯರು ಹೇಳುವಂತೆ ಉಷ್ಣತೆ ಸಾಮಾನ್ಯಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ರಾಜ್ಯದ ಬಹುತೇಕ ಭಾಗ ದಟ್ಟ ಹೊಗೆಯಿಂದ ಆವರಿಸಿದೆ. ಹಲವಾರು ಮಂದಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಈ ಇಡೀ ಘಟನಾವಳಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಕೆಲ ಪ್ರಶ್ನೆಗಳು ಸಹಜವಾಗಿಯೇ ಏಳುತ್ತವೆ.

1. ಎಲ್ಲಿಹೋದವು ಬೆಂಕಿ ಗೆರೆಗಳು?
ಸಾಮಾನ್ಯವಾಗಿ ಕಾಡ್ಗಿಚ್ಚು ಕಾಣಿಸಿಕೊಳ್ಳುವುದು ಅರಣ್ಯ ಪ್ರದೇಶದ ಸಸ್ಯಗಳು ತೀರಾ ಒಣಗಿದ ಜಾಗದಲ್ಲಿ. ಹೀಗೆ ಕಾಡ್ಗಿಚ್ಚು ಹರಡುವುದನ್ನು ತಡೆಯಲು ಬ್ರಿಟಿಷರ ಕಾಲದಿಂದಲೇ ಬೆಂಕಿ ಗೆರೆ ( ಲೈನ್ಸ್) ವ್ಯವಸ್ಥೆ ಜಾರಿಯಲ್ಲಿತ್ತು. ಅಂದರೆ ಅರಣ್ಯ ಪ್ರದೇಶದ ಗಡಿಭಾಗದಲ್ಲಿ ಒಣಗಿದ ಸಸ್ಯಗಳನ್ನು ತೆರವುಗೊಳಿಸಿ ಬೆಂಕಿ ಹರಡದಂತೆ ತಡೆಯುವ ವ್ಯವಸ್ಥೆ ಇದಾಗಿತ್ತು. ಅಂದರೆ ಅರಣ್ಯ ಪ್ರದೇಶವಾಗಿ ಗುರುತಿಸಿದ ಗಡಿಭಾಗದ ಎಲ್ಲ ಒಣ ಸಸ್ಯಗಳನ್ನೂ ತೆರವು ಮಾಡಲಾಗುತ್ತಿತ್ತು. ಬಳಿಕ ಅವುಗಳನ್ನು ನಿಯಂತ್ರಿತ ವಿಧಾನದಲ್ಲಿ ಸುಡಲಾಗುತ್ತಿತ್ತು. ಆದರೆ ಆಡಳಿತ ಯಂತ್ರ ಇಂಥ ಬೆಂಕಿ ಗೆರೆಗಳನ್ನು ನಿರ್ವಹಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ. ಬೆಂಕಿ ಗೆರೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಕಾಡ್ಗಿಚ್ಚು ಹರಡುವ ಸಾಧ್ಯತೆ ಇರುವುದಿಲ್ಲ. ಆದರೆ ಕಳೆದ ನಾಲ್ಕು ದಶಕಗಳಿಂದಲೂ ಈ ಕಾರ್ಯ ಆಗಿಲ್ಲ ಎನ್ನುವುದು ನಾಗರಿಕರ ಆರೋಪ. ಉತ್ತರಾಖಂಡ ಪ್ರತ್ಯೇಕ ರಾಜ್ಯವಾಗಿ ರೂಪುಗೊಳ್ಳುವ ಪೂರ್ವದಲ್ಲಿ (2000 ನವೆಂಬರ್ 9ರಿಂದ ಮೊದಲು) ಉತ್ತರ ಪ್ರದೇಶ ಸರಕಾರ ಇಂತಹ ಬೆಂಕಿ ಗೆರೆಗಳನ್ನು ನಿರ್ಮಿಸಲು ನೀಡುತ್ತಿದ್ದ ಅನುದಾನವನ್ನು ಸ್ಥಗಿತಗೊಳಿಸಿತ್ತು. 1970ರ ದಶಕ ದಲ್ಲೇ ಈ ಉದ್ದೇಶಕ್ಕಿದ್ದ ಅನುದಾನ ಕಡಿತ ಮಾಡಲಾಗಿತ್ತು ಎಂದು ನಿವೃತ್ತ ಐಎಎಸ್ ಅಕಾರಿ ಎಸ್.ಎಸ್.ಪಂಗ್ತಿ ಹೇಳುತ್ತಾರೆ.
2. ಸ್ಥಳೀಯ ಜನರು ಅರಣ್ಯಕ್ಕೆ ಬೆಂಕಿ ಇಟ್ಟರೇ?
ಭಾರತದ ದಂಡಸಂಹಿತೆ ಪ್ರಕಾರ, ಅರಣ್ಯಕ್ಕೆ ಕೊಳ್ಳಿ ಇಡುವುದು ಶಿಕ್ಷಾರ್ಹ ಅಪರಾಧ. ಆದರೆ ಗ್ರಾಮಸ್ಥರು ಹೊಸ ಚಿಗುರು ಬರಬೇಕು ಎಂಬ ಉದ್ದೇಶದಿಂದ ಒಣಗುತ್ತಿರುವ ಗಿಡಗಳಿಗೆ ಬೆಂಕಿ ಹಚ್ಚುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಉತ್ತರಾಖಂಡದ ಅರಣ್ಯಗಳಲ್ಲಿ ಇರುವ ಮರಗಿಡಗಳಲ್ಲಿ ಶೇಕಡ 45ರಿಂದ 50ರಷ್ಟು ದೇವದಾರು (ಪೈನ್) ಮರಗಳು. ಸ್ಥಳೀಯವಾಗಿ ಜನರು ಇವುಗಳ ಕಡ್ಡಿಗಳನ್ನು ಉದುರಿಸಿ ನೆಲಕ್ಕೆ ಹರಡುತ್ತಾರೆ. ಇದು ಅನಗತ್ಯ ಕಳೆಗಳು ಬೆಳೆಯುವುದನ್ನು ತಡೆಯುತ್ತದೆ. ಹೊಸ ಗಿಡಗಳು ಚಿಗುರುವ ಸಲುವಾಗಿ ಗ್ರಾಮಸ್ಥರು ಒಣ ಹುಲ್ಲಿಗೆ ಬೆಂಕಿ ಹಚ್ಚುತ್ತಾರೆ. ಕೆಲವೊಮ್ಮೆ ಇದು ನಿಯಂತ್ರಣಕ್ಕೆ ಸಿಗದೇ, ಅರಣ್ಯಕ್ಕೆ ಪಸರಿಸುವುದೂ ಇದೆ ಎಂದು ಅರಣ್ಯ ಸಂರಕ್ಷಣಾಕಾರಿ ಜಿ.ಸೋನಾರ್ ಹೇಳುತ್ತಾರೆ. ಒಣ ಗಿಡಗಳಿಗೆ ಬೆಂಕಿ ಹಚ್ಚದಂತೆ ಗ್ರಾಮಸ್ಥರಿಗೆ ಸದಾ ಜಾಗೃತಿ ಮೂಡಿಸಲಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಜಗನ್ಮೋಹನ ಸಿಂಗ್ ಹೇಳುತ್ತಾರೆ.

3. ನೈಸರ್ಗಿಕ ಕಾರಣ ಎಂದು ಹೇಳಬಹುದೇ?
ಸಿಡಿಲು ಬಡಿಯುವುದು ಅಥವಾ ಒಣ ಮರಗಳ ಪರಸ್ಪರ ಘರ್ಷಣೆಯಿಂದ ಉಂಟಾಗುವ ಬೆಂಕಿ ಕಾಡ್ಗಿಚ್ಚಾಗಿ ಹರಡುವುದು ಮುಂತಾದ ನೈಸರ್ಗಿಕ ಅಂಶಗಳು ಕೂಡಾ ದೊಡ್ಡ ಪ್ರಮಾಣದ ಕಾಡ್ಗಿಚ್ಚಿಗೆ ಕಾರಣವಾಗಬಹುದು. ಕುಮಾನ್ ಮೂಲದ ಪರಿಸರ ತಜ್ಞ ಅಜಯ್ ಎರಿಕ್ ಲಾಲ್ ಹೇಳುವಂತೆ, ಈ ವರ್ಷದ ಭೀಕರ ಕಾಡ್ಗಿಚ್ಚಿಗೆ ಇದು ಕಾರಣವಾಗಿರುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟವಾಗಿ ತಳ್ಳಿಹಾಕುತ್ತಾರೆ. ಇಲ್ಲಿ ಆಗಿರುವ ಹಾನಿಯ ಪ್ರಮಾಣವನ್ನು ನೋಡಿದರೇ ಇದು ಮಾನವ ನಿರ್ಮಿತ ದುರಂತ ಎಂದು ಸ್ಪಷ್ಟವಾಗಿ ಹೇಳಬಹುದು ಎನ್ನುವುದು ಅವರ ವಿಶ್ಲೇಷಣೆ.

4. ದುರಂತಕ್ಕೆ ಹವಾಮಾನದ ಕೊಡುಗೆ ಎಷ್ಟು?
ರಾಜ್ಯದ ಅಗ್ನಿಶಾಮಕ ದಳದಲ್ಲಿ ಸೇವೆ ಸಲ್ಲಿಸುತ್ತಿರುವ ಸೇನೆಯ ನಿವೃತ್ತ ಮೇಜರ್ ವಿ.ಎಸ್.ಥಾಪಾ ಅವರ ಪ್ರಕಾರ, ತೀರಾ ಉಷ್ಣ ಹವಾಮಾನ ಹಾಗೂ ಒಣಗಿದ ಸಸ್ಯಗಳು ಈ ಕಾಡ್ಗಿಚ್ಚಿನ ಭೀಕರತೆ ಹೆಚ್ಚಲು ಗಣನೀಯ ಕೊಡುಗೆ ನೀಡಿವೆ. ಪ್ರವಾಸಿಗಳು ಹಾಗೂ ಚಾರಣಿಗರು ಕೂಡಾ ಇದಕ್ಕೆ ಕಾರಣವಾಗುತ್ತಾರೆ. ಇವರು ಕಾಡಿನಲ್ಲಿ ಬಿಟ್ಟುಹೋಗುವ ಬಾಟಲಿಯಂಥ ವಸ್ತುಗಳು ಬೆಂಕಿ ಹರಡಲು ಕಾರಣವಾಗುತ್ತವೆ. ಸೂರ್ಯನ ಕಿರಣ ಈ ಬಾಟಲಿಗಳ ಮೇಲೆ ಬೀಳುತ್ತದೆ. ಆಗ ಉಷ್ಣ ಪ್ರಖರವಾಗುತ್ತಾ ಬೆಂಕಿಯ ಕಿಡಿ ಹೊತ್ತಿಕೊಳ್ಳಲು ಸಾಧ್ಯತೆ ಇದೆ. ಒಣ ಗಿಡಮರಗಳಿಗೆ ಇಂಥ ಕಿಡಿ ಹತ್ತಿಕೊಂಡಾಗ ಅದು ಭೀಕರ ಬೆಂಕಿಯಾಗಿ ರೂಪುಗೊಳ್ಳುವ ಸಾಧ್ಯತೆ ಇರುತ್ತದೆ ಎನ್ನುವುದು ಥಾಪಾ ಅವರ ವಾದ. ಇದರ ಜತೆಗೆ ಒಣ ಹವೆ ಮತ್ತಷ್ಟು ಹೆಚ್ಚಿದ್ದು, ಅರಣ್ಯದ ಮೇಲ್ಮೆನಲ್ಲಿ ವಾತಾವರಣದ ತೇವಾಂಶ ಸಂಪೂರ್ಣ ಕಡಿಮೆಯಾಗಿದೆ. ಇದರಿಂದಾಗಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಅಕ ಎಂದು ಅವರು ಸ್ಪಷ್ಟಪಡಿಸುತ್ತಾರೆ.

5. ಟಿಂಬರ್ ಮಾಫಿಯಾ ಕಾರಣವೇ?
ಇದು ಪರಿಸರವಾದಿಗಳು ಹೆಚ್ಚಿನದಾಗಿ ಎತ್ತುತ್ತಿರುವ ಪ್ರಶ್ನೆ. ಉತ್ತರಾಖಂಡದ ಅರಣ್ಯದಲ್ಲಿ ವಾಣಿಜ್ಯವಾಗಿ ಲಾಭದಾಯಕವಾದ ಮರಗಳು ದಟ್ಟವಾಗಿವೆ. ನಿತ್ಯ ಹರಿದ್ವರ್ಣದ ಓಕ್, ಸಾಲ್, ಅಕೇಶಿಯಾ ಹಾಗೂ ಕೋನಿಪರ್ ಮರಗಳ ಮೇಲೆ ಮರಗಳ ಮಾರಾಟಗಾರರು ಸದಾ ಕಣ್ಣಿಟ್ಟಿರುತ್ತಾರೆ. ಆದರೆ ಕಾಡ್ಗಿಚ್ಚು ಅವರಿಗೆ ಹೇಗೆ ಲಾಭದಾಯಕವಾಗಲು ಸಾಧ್ಯ? ಉದಾಹರಣೆಗೆ ಒಂದು ದೇವದಾರು ಮರದ ಮೊದಲ ಕೆಲ ಮೀಟರ್ ಕಾಂಡವಷ್ಟೇ ಉರಿಯುತ್ತದೆ. ಅದರ ಮೇಲ್ಭಾಗ ಮರಮಟ್ಟುಗಳಿಗೆ ಬಳಕೆಯಾಗುತ್ತದೆ ಎಂದು ಎರಿಕ್ ಲಾಲ್ ವಿವರಿಸುತ್ತಾರೆ. ಟಿಂಬರ್ ಮಾಫಿಯಾದ ಮಂದಿ ಇಂಥ ಮರಗಳನ್ನು ಆ ಪ್ರದೇಶವನ್ನು ಸ್ವಚ್ಛಗೊಳಿಸುವ ನೆಪದಲ್ಲಿ ಇವುಗಳನ್ನು ಸಂಗ್ರಹಿಸಿಮಾರಾಟ ಮಾಡುತ್ತಾರೆ
ಇವೆಲ್ಲದರ ಜತೆ, ಹಳ್ಳಿಗಾಡಿನ ಮಕ್ಕಳು ಕೂಡಾ ಕೆಲಮೊಮ್ಮೆ ಬೆಂಕಿ ಹಚ್ಚುತ್ತಾರೆ. ಏಕೆಂದರೆ ಉಷ್ಣತೆ ಹೆಚ್ಚುವುದರಿಂದ ದೇವ ದಾರು ಮರದ ಒಳರೆಂಬೆಗಳು ಹೆಚ್ಚಾಗಿ ಬೀಳುತ್ತವೆ. ಇವುಗಳನ್ನು ಸಂಗ್ರಹಿಸಿ ಮಾರುಕಟ್ಟೆಯಲ್ಲಿ ಉರುವಲಾಗಿ ಮಾರಾಟ ಮಾಡುತ್ತಾರೆ.

Writer - ಅನುಪಮ್ ತ್ರಿವೇದಿ

contributor

Editor - ಅನುಪಮ್ ತ್ರಿವೇದಿ

contributor

Similar News