ಅಂಗವಿಕಲರಿಗೆ ವೈದ್ಯಕೀಯ ನೆರವು

Update: 2016-05-03 18:29 GMT

ಬೆಂಗಳೂರು, ಮೇ 3: ಅಂಗವಿಕಲತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವೈದ್ಯಕೀಯ ನಿವಾರಣಾ ಶಸ್ತ್ರ ಚಿಕಿತ್ಸೆಯಿಂದ ಗುಣಪಡಿಸಿಕೊಳ್ಳಲು ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿಯಿಂದ ಗರಿಷ್ಠ 1ಲಕ್ಷ ರೂ. ಧನ ಸಹಾಯಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಧನ ಸಹಾಯ ಪಡೆಯುವವರು ಬಡತನ ರೇಖೆಗಿಂತ ಕೆಳಮಟ್ಟದಲ್ಲಿರಬೇಕು. ಸಕ್ಷಮ ಪ್ರಾಧಿಕಾರದಿಂದ ಪಡೆದ ಅಂಗವಿಕಲರ ಗುರುತಿನ ಚೀಟಿ ಹೊಂದಿರಬೇಕು. ಬೆಂ.ಗ್ರಾ.ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ಹೊಸಕೋಟೆ ತಾಲೂಕಿನಲ್ಲಿ ವಾಸವಿರಬೇಕು. ಚಿಕಿತ್ಸಾ ವೆಚ್ಚದ ಅಂದಾಜು ಪಟ್ಟಿಯನ್ನು ಸಂಬಂಧಿಸಿದ ಆಸ್ಪತ್ರೆಯಿಂದ ಪಡೆದು ಸಲ್ಲಿಸಬೇಕು, ಶಸ್ತ್ರ ಚಿಕಿತ್ಸೆಯಿಂದ ಅಂಗವಿಕಲತೆ ಪ್ರಮಾಣ ಕಡಿಮೆಯಾಗುವ ಬಗ್ಗೆ ವೈದ್ಯಾಧಿಕಾರಿಗಳಿಂದ ಶಿಫಾರಸು ಪಡೆಯಬೇಕು. ಎಲ್ಲ ಸರಕಾರಿ ಆಸ್ಪತ್ರೆ, ಸುಸಜ್ಜಿತ ಖಾಸಗಿ ಆಸ್ಪತ್ರೆ ಅಥವಾ ಸಂಜಯ್ ಗಾಂಧಿ ಆಸ್ಪತ್ರೆಗಳ ಮುಖಾಂತರ ಶಸ್ತ್ರ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ, ಸಂಬಂಧಪಟ್ಟ ಆಸ್ಪತ್ರೆಯ ಮುಖ್ಯಸ್ಥರು ಶಸ್ತ್ರ ಚಿಕಿತ್ಸೆಯ ಬಗ್ಗೆ ದೃಢೀಕರಿಸಿ, ತಗಲುವ ವೆಚ್ಚವನ್ನು ನಮೂದಿಸಿ ಜಿಲ್ಲಾ ಅಂಗವಿಕಲರ ಪುನರ್‌ವಸತಿ ಕೇಂದ್ರ, ದೇವನಹಳ್ಳಿ ಇವರ ಮೂಲಕ ಸಲ್ಲಿಸಬೇಕು.

ಅರ್ಜಿಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ಸಮಿತಿಯಲ್ಲಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಸಮಿತಿ ಶಿಫಾರಸಿನಂತೆ ಮಂಜೂರಾತಿ ನೀಡಿ ಮೊತ್ತವನ್ನು ಸಂಬಂಧಪಟ್ಟ ಆಯಾ ಆಸ್ಪತ್ರೆಗಳಿಗೆ ಹೊಂದಾಣಿಕೆ ಮಾಡಲಾಗುವುದೆಂದು ಬೆಂ.ಗ್ರಾ.ಜಿಲ್ಲೆಯ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News