ನಾಳೆ ಚಿತ್ರಕಲಾ ಪರಿಷತ್‌ನಲ್ಲಿ ಛಾಯಾಚಿತ್ರ ಪ್ರದರ್ಶನ

Update: 2016-05-03 18:29 GMT

ಬೆಂಗಳೂರು, ಮೇ 3: ಕರ್ನಾಟಕ ಚಿತ್ರಕಲಾ ಪರಿಷತ್‌ನ ಸುವರ್ಣ ಮಹೋತ್ಸವ ಸಂಭ್ರಮ ಮತ್ತು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮಶತಮಾನೋತ್ಸವದ ಸ್ಮರಣಾರ್ಥ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಮೇ 5ರಿಂದ ಆರು ದಿನಗಳ ಕಾಲ ಪರಿಷತ್‌ನ ಬೆಳವಣಿಗೆಯ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಮಂಗಳವಾರ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪರಿಷತ್‌ನ ಅಧ್ಯಕ್ಷ ಬಿ.ಎಲ್.ಶಂಕರ್ ಈ ಕುರಿತು ಮಾಹಿತಿ ನೀಡಿದರು.

1960ರಲ್ಲಿ ಮೈಸೂರು ಪ್ರದೇಶ ಚಿತ್ರಕಲಾ ಪರಿಷತ್ ಎಂಬ ಹೆಸರಿನಲ್ಲಿ ಸ್ಥಾಪನೆಯಾದ ಪರಿಷತ್ 1972ರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ಎಂದು ಮರು ನಾಮಕಾರಣಗೊಂಡಿತ್ತು. ನಂತರ 1976ರಲ್ಲಿ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಪರಿಷತ್‌ಗೆ ಪ್ರತ್ಯೇಕವಾದ ಕಟ್ಟಡ ನಿರ್ಮಾಣಕ್ಕೆ ಕುಮಾರ ಕೃಪ ರಸ್ತೆಯಲ್ಲಿ ಮೂರು ಎಕರೆ ಭೂಮಿಯನ್ನು ಮಂಜೂರು ಮಾಡಿದರು. ಅಲ್ಲದೆ ಅಂದು ಪರಿಷತ್‌ನ ನಿರ್ಮಾಣಕ್ಕೆ ಮೂರು ಕೋಟಿ ರೂ.ಗಳ ಅನುದಾನ ನೀಡಿದ್ದರು ಎಂದು ತಿಳಿಸಿದರು.

ಹೀಗಾಗಿ ಪರಿಷತ್ತಿನ ಸುವರ್ಣ ಮಹೋತ್ಸವದ ಸಂಭ್ರಮ ಮತ್ತು ಮಾಜಿ ಮುಖ್ಯಮಂತ್ರಿ ಡಿ. ದೇವರಾಜು ಅರಸು ಅವರ ಜನ್ಮಶತಮಾನೋತ್ಸವ ಸ್ಮರಣಾರ್ಥ ಚಿತ್ರಕಲಾ ಪರಿಷತ್‌ನ ಬೆಳವಣಿಗೆಯ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ಚಿತ್ರ ಪ್ರದರ್ಶನದಲ್ಲಿ 600ಕ್ಕೂ ಅಧಿಕ ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಡಲಾಗುವುದು ಎಂದು ತಿಳಿಸಿದರು. ಛಾಯಾಚಿತ್ರ ಪ್ರದರ್ಶನದಲ್ಲಿ ಪರಿಷತ್‌ನ ಹುಟ್ಟು, ಬೆಳವಣಿಗೆ, ಸಾಧನೆ, ಚಿತ್ರ ಸಂತೆ, ಕಲಾ ಪ್ರದರ್ಶನಗಳ ತುಣುಕು, ಪರಿಷತ್‌ನಲ್ಲಿ ನಡೆದಿರುವ ಸಮ್ಮೇಳನಗಳ ಜೊತೆಗೆ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಬದುಕು, ಸಾಧನೆ ಕುರಿತ ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಡಲಾಗುವುದು ಎಂದು ತಿಳಿಸಿದರು.

ಛಾಯಾಚಿತ್ರ ಪ್ರದರ್ಶನವನ್ನು ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಉದ್ಘಾಟಿಸಲಿದ್ದಾರೆ. ಈ ವೇಳೆ ಖ್ಯಾತ ಕಲಾವಿದೆ ಪ್ರೊ.ಎ.ಅಲ್ಫಾನ್ಸೋ, ವಾರ್ತಾ ಸಚಿವ ರೋಷನ್ ಬೇಗ್, ಡಿ.ದೇವರಾಜ ಅರಸು ಜನ್ಮಶತಮಾನೋತ್ಸವ ಸಮಿತಿಯ ಅಧ್ಯಕ್ಷ ಎಚ್.ವಿಶ್ವನಾಥ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಡಾ.ಡಿ.ಕೆ.ಚೌಟ, ಉಪಾಧ್ಯಕ್ಷರಾದ ಟಿ.ಪ್ರಭಾಕರ್, ಪ್ರೊ.ಕೆ.ಇ.ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News