ಅರಬ್ ಜಗತ್ತಿನ ಉನ್ನತ ಭಾರತೀಯ ನಾಯಕರ ಫೋರ್ಬ್ಸ್ ಪಟ್ಟಿಯಲ್ಲಿ ತುಂಬೆ ಮೊಯ್ದಿನ್

Update: 2016-05-04 18:42 GMT

ಮಂಗಳೂರು, ಮೇ 4: ಪ್ರತಿಷ್ಠಿತ ತುಂಬೆ ಸಮೂಹದ ಸ್ಥಾಪಕ ಅಧ್ಯಕ್ಷ ತುಂಬೆ ಮೊಯ್ದಿನ್ ಸತತ ಎರಡನೆ ವರ್ಷವೂ ಫೋರ್ಬ್ಸ್‌ನ ‘ಅರಬ್ ಜಗತ್ತಿನಲ್ಲಿಯ ಉನ್ನತ ಭಾರತೀಯ ನಾಯಕರು’ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. ಮಂಗಳವಾರ ದುಬೈನ ಪಾಮ್ ಜುಮೈರಾದ ವಾಲ್ಡಾರ್ಫ್ ಅಸ್ಟೋರಿಯಾದಲ್ಲಿ ಮಧ್ಯಪ್ರಾಚ್ಯದಲ್ಲಿನ ಅತ್ಯಂತ ಯಶಸ್ವಿ ಭಾರತೀಯ ನಾಯಕರ ಗೌರವಾರ್ಥ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ತುಂಬೆ ಮೊಯ್ದಿನ್‌ರಿಗೆ ಪ್ರದಾನ ಮಾಡಲಾಯಿತು.
ಯುಎಇಗೆ ಭಾರತದ ರಾಯಭಾರಿಯಾಗಿರುವ ಟಿ.ಪಿ. ಸೀತಾರಾಂ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು
 . ಮಧ್ಯ ಪ್ರಾಚ್ಯದಲ್ಲಿ ಪ್ರದೇಶದ ಆರ್ಥಿಕತೆಯ ವೃದ್ಧಿಗೆ ಅಮೂಲ್ಯ ಕೊಡುಗೆಗಳನ್ನು ಸಲ್ಲಿಸುತ್ತಿರುವ ಅತ್ಯಂತ ಯಶಸ್ವಿ ಕಂಪೆನಿಗಳನ್ನು ಸ್ಥಾಪಿಸಿರುವ ಅರಬ್ ಜಗತ್ತಿನಲ್ಲಿನ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಗತಿಪರ ಭಾರತೀಯ ನಾಯಕರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡುವ ಈ ಸಮಾರಂಭ ಕಳೆದ ನಾಲ್ಕು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ.
 ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ತುಂಬೆ ಮೊಯ್ದಿನ್, ಸತತ ಎರಡನೆ ವರ್ಷವೂ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಗೌರವದ ವಿಷಯವಾಗಿದೆ. ಇಂತಹ ಪ್ರಶಸ್ತಿಗಳು ನಮ್ಮನ್ನು ಇನ್ನಷ್ಟು ಉತ್ತೇಜಿಸುವ ಜೊತೆಗೆ ನಮಗೆ ಹೆಚ್ಚಿನ ಹೊಣೆಗಾರಿಕೆಯನ್ನು ನೀಡುತ್ತವೆ ಎಂದು ಹೇಳಿದರು. ಫೋರ್ಬ್ಸ್ ಹಾಗೂ ತನ್ನ ಉದ್ಯಮ ಸಮೂಹದ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ ಅವರು, ಯುಎಇ ಆಡಳಿತಗಾರರ ಬೆಂಬಲವನ್ನೂ ಸ್ಮರಿಸಿದರು.
1998ರಲ್ಲಿ ತುಂಬೆ ಮೊಯ್ದಿನ್‌ರಿಂದ ಸ್ಥಾಪನೆಗೊಂಡ ತುಂಬೆ ಸಮೂಹವು ಡಿಐಎಫ್‌ಸಿ-ದುಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಂತಾರಾಷ್ಟ್ರೀಯ ವಾಣಿಜ್ಯ ಸಂಸ್ಥೆಯಾಗಿದೆ. ಕೇವಲ 17 ವರ್ಷಗಳಲ್ಲಿ 14 ವಿಭಿನ್ನ ಕ್ಷೇತ್ರಗಳಲ್ಲಿ ಅದು ಮುಂಚೂಣಿಯಲ್ಲಿದೆ. ಸಮೂಹದಲ್ಲಿ ಪ್ರಸ್ತುತ 3,500 ಸಿಬ್ಬಂದಿಯಿದ್ದು, ಮುಂದಿನೆರಡು ವರ್ಷಗಳಲ್ಲಿ 6,000ಕ್ಕೆ ಮತ್ತು 2020ರ ವೇಳೆಗೆ 15,000ಕ್ಕೆ ಹೆಚ್ಚಲಿದೆ.
ಬಿಎ ಗ್ರೂಪ್‌ನ ಸ್ಥಾಪಕ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್‌ರ ಪುತ್ರರಾಗಿರುವ ತುಂಬೆ ಮೊಯ್ದಿನ್‌ರವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಹಳೆಯ ವಿದ್ಯಾರ್ಥಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News