ಕೇಂದ್ರದ ಅನುದಾನ ಸಂಪೂರ್ಣ ಖರ್ಚು: ಸಿದ್ದರಾಮಯ್ಯ
ಹೊಸದಿಲ್ಲಿ, ಮೇ 12: ಬರ ಪರಿಹಾರ ಕಾಮಗಾರಿಗಳಿಗಾಗಿ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗುರುವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರವು ಕೇಂದ್ರದ ಅನುದಾನವನ್ನು ಖರ್ಚು ಮಾಡದೆ ಹಾಗೆ ಉಳಿಸಿಕೊಂಡಿದೆ ಎಂದು ಬಿಜೆಪಿ ನಾಯಕರು ಮಾಡುತ್ತಿರುವ ಆರೋಪಗಳು ನಿರಾಧಾರವಾದದ್ದು ಎಂದರು.
ಕೇಂದ್ರ ಸರಕಾರ ನೀಡಿರುವ ಅನುದಾನದಲ್ಲಿ ಒಂದು ರೂ.ಗಳನ್ನು ಬಾಕಿ ಉಳಿಸಿಕೊಂಡಿಲ್ಲ. ಎಲ್ಲ ಹಣವನ್ನು ಬರಪರಿಹಾರ ಕಾಮಗಾರಿಗಳಿಗಾಗಿ ಬಳಕೆ ಮಾಡಲಾಗಿದೆ. ರಾಜ್ಯ ಸರಕಾರ ಹಣ ಉಳಿಸಿಕೊಂಡಿರುವುದನ್ನು ಬಿಜೆಪಿ ನಾಯಕರು ತೋರಿಸಲಿ ಎಂದು ಸವಾಲು ಹಾಕಿದ ಅವರು, ಕೇಂದ್ರದ ಅನುದಾನದೊಂದಿಗೆ ರಾಜ್ಯ ಸರಕಾರವು ನೂರಾರು ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಲ್ಲಿರುವುದರಿಂದ ರಾಜ್ಯದ ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವರು ಸರಕಾರದ ಮೇಲೆ ಒತ್ತಡ ಹೇರಿ ರಾಜ್ಯಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಬೇಕು. ಅದನ್ನು ಬಿಟ್ಟು ಈ ರೀತಿ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಮುಂದಿನ ಅವಧಿಗೂ ನಾನೆ ಸಿಎಂ: ಮುಂದಿನ ಅವಧಿಗೂ ನಾನೆ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ. 2018ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯು ನನ್ನ ನೇತೃತ್ವದಲ್ಲೆ ನಡೆಯಲಿದೆ. ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತುರುವುದೆ ತನ್ನ ಗುರಿ ಎಂದು ಸಿದ್ದರಾಮಯ್ಯ ತಿಳಿಸಿದರು.
ಮಾಸಾಂತ್ಯಕ್ಕೆ ಸಚಿವ ಸಂಪುಟ ಪುನರ್ರಚನೆ ಮಾಡಲಾಗುವುದು. ಬಿಜೆಪಿಯ ಸಿದ್ಧಾಂತವು ಸುಳ್ಳಿನ ಸಿದ್ಧಾಂತವಾಗಿದೆ. ಬಿಜೆಪಿ ನಾಯಕರಿಗೆ ನಾಚಿಕೆ, ಗೊತ್ತು ಗುರಿ ಯಾವುದು ಇಲ್ಲ. ನನ್ನ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ಮುಖ್ಯಮಂತ್ರಿ ಕಿಡಿಗಾರಿದರು.
ಜನರ ಮನಸ್ಥಿತಿ ಬದಲಾದಾಗ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ. ದಲಿತರೂ ಮುಖ್ಯಮಂತ್ರಿ ಆಗಬೇಕು. ಆದರೆ, ಅದನ್ನು ಹೈಕಮಾಂಡ್ ಹಾಗೂ ಪಕ್ಷದ ಶಾಸಕರು ತೀರ್ಮಾನ ಕೈಗೊಳ್ಳುತ್ತಾರೆ ಸಿದ್ದರಾಮಯ್ಯ ಹೇಳಿದರು.