ಕನಸು ಬೀಳುವ ಸವಿನಿದ್ದೆ ತಪ್ಪಿದರೆ ನಿಮ್ಮ ಜ್ಞಾಪಕ ಶಕ್ತಿಗೇ ಕುತ್ತು!

Update: 2016-05-17 05:31 GMT

ದಶಕಗಳಿಂದ ವಿಜ್ಞಾನಿಗಳು ಕನಸುಗಳು ಬೀಳುವ ನಿದ್ದೆಯ ಅವಧಿಗೂ ಸ್ಮರಣಶಕ್ತಿ ರೂಪುಗೊಳ್ಳುವುದಕ್ಕೂ ಸಂಬಂಧವಿದೆಯೇ ಎಂದು ಸಂಶೋಧನೆ ನಡೆಸುತ್ತಲೇ ಇದ್ದಾರೆ. ಈಗ ಹೊಸ ಅಧ್ಯಯನವೊಂದು ಈ ನಿಟ್ಟಿನಲ್ಲಿ ಸಾಕ್ಷ್ಯಗಳನ್ನು ಕೊಟ್ಟಿದೆ. ಸರಿಯಾಗಿ ನಿದ್ದೆ ಬಾರದೆ ಇರುವುದು ಅಲ್ಜೀಮರ್ ಮತ್ತು ಪಾರ್ಕಿನ್ಸನ್ ರೋಗದಂತಹ ವಿವಿಧ ಮೆದುಳಿನ ರೋಗಗಳ ಜೊತೆಗೆ ಸಂಬಂಧ ಹೊಂದಿದೆ.

ಅಧ್ಯಯನದ ಫಲಿತಾಂಶಗಳು ಹೇಳಿರುವ ಪ್ರಕಾರ ನಿದ್ದೆಯ ಅತೀ ಮುಖ್ಯ ಭಾಗದಲ್ಲಿ ವ್ಯತ್ಯಾಸವಾದರೆ ನೇರವಾಗಿ ನೆನಪಿನ ಶಕ್ತಿಯ ಮೇಲೆ ಪರಿಣಾಮವಾಗುತ್ತದೆ. ಇದು ಅಲ್ಜೀಮರ್ ರೋಗದ ಚಿಹ್ನೆಯೂ ಆಗಿದೆ. ಸಾಮಾನ್ಯ ಮೆದುಳಿನ ನೆನಪು ರೂಪುಗೊಳ್ಳುವಿಕೆಗೆ ಆರ್‌ಇಎಂ ನಿದ್ದೆಯು ಅತೀ ನಿರ್ಣಾಯಕ ಎನ್ನುವುದನ್ನು ನಾವು ಮೊತ್ತ ಮೊದಲ ಬಾರಿಗೆ ಸಾಬೀತು ಮಾಡಲು ಸಾಧ್ಯವಾಗಿದೆ ಎಂದು ಅಧ್ಯಯನಕಾರರಾಗಿರುವ ಕೆನಡಾದ ಮಾಂಟ್ರಿಯಲ್ ನ ಮೆಕ್ಗಿಲ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಸಿಲ್ವೈನ್ ವಿಲಿಯಮ್ಸ್ ಹೇಳಿದ್ದಾರೆ.

ಮಾನವರೂ ಸೇರಿದಂತೆ ಎಲ್ಲಾ ಸಸ್ತನಿಗಳಲ್ಲೂ ಈ ಹಂತದ ನಿದ್ದೆಯು ಅತೀ ನಿರ್ಣಾಯಕವಾಗಿರುತ್ತದೆ. ಅಧ್ಯಯನಕ್ಕಾಗಿ ಸಂಶೋಧಕರು ಇತ್ತೀಚೆಗೆ ಅಭಿವೃದ್ಧಿಪಡಿಸಿದ ತಂತ್ರಜ್ಞಾನವಾದ ಅಪ್ಟೊಜೆನೆಟಿಕ್ಸ್ ಬಳಸಿದ್ದರು. ಇದರಿಂದ ಹಲವು ನರಗಳನ್ನು ಗುರಿಯಿಟ್ಟು ಬೆಳಕಿನ ಮೂಲಕ ಅದರ ಚಟುವಟಿಕೆಯನ್ನು ನಿಯಂತ್ರಿಸಲು ಸಾಧ್ಯವಿದೆ.

ಹಿಪ್ಪೊಕಾಮಸ್ ಚಟುವಟಿಕೆಯನ್ನು ನಿಯಂತ್ರಿಸುವ ನರಗಳನ್ನು ಗುರಿ ಮಾಡಿದ್ದೆವು. ಹಿಪ್ಪೊಕಾಮಸ್ ನಲ್ಲೇ ನೆನಪು ರೂಪುಗೊಳ್ಳುವುದು. ಇದು ಮೆದುಳಿನ ಜಿಪಿಎಸ್ ವ್ಯವಸ್ಥೆ.

ಇಲಿಯ ಮೇಲೆ ಮಾಡಿದ ಪ್ರಯೋಗದಲ್ಲಿ ಧೀರ್ಘಕಾಲೀನ ಸ್ಪೇಷಿಯಲ್ ನೆನಪಿನ ಪರೀಕ್ಷೆ ನಡೆಸಲಾಗಿದೆ. ನಿಯಂತ್ರಿತ ಪರಿಸರದಲ್ಲಿ ಇಡಲಾದ ಒಂದೇ ಗಾತ್ರ ಮತ್ತು ಆಕಾರದ ಹೊಸ ವಸ್ತುಗಳನ್ನು ಗುರುತಿಸಲು ಇಲಿಗಳಿಗೆ ತರಬೇತಿ ಕೊಡಲಾಯಿತು. ಇಲಿಗಳು ಪರಿಚಿತ ವಸ್ತುವಿನ ಬದಲು ಆದರ್ಶ ವಸ್ತುವನ್ನು ಹುಡುಕಿದ್ದವು. ಅದು ಕಲಿಕೆ ಮತ್ತು ನೆನಪನ್ನು ಸೂಚಿಸುತ್ತದೆ. ಈ ಇಲಿಗಳು ಆರ್‌ಇಎಂ ನಿದ್ದೆಯಲ್ಲಿದ್ದಾಗ ಬೆಳಕಿನ ಪಲ್ಸ್ ಗಳನ್ನು ಬಳಸಿ ಸಂಶೋಧಕರು ಅವುಗಳ ನೆನಪಿನ ನರಗಳನ್ನು ಆಫ್ ಮಾಡಿದ್ದರು. ಅದು ನೆನಪಿನ ಸಂಗ್ರಹದ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ತಿಳಿಯುವ ಪ್ರಯತ್ನವಾಗಿತ್ತು ಇದು. ಮರುದಿನ ಅದೇ ಇಲಿಗಳು ಹಿಂದಿನ ದಿನ ಕಲಿತ ನೆನಪಿನ ಕೆಲಸ ಮಾಡಲು ವಿಫಲವಾದವು. ಅವುಗಳ ನೆನಪು ಅಳಿಸುಹೋಗಿತ್ತು ಅಥವಾ ವಿಕಲವಾಗಿತ್ತು. ಆದರೆ ಆರ್‌ಇಎಂ ಅಧ್ಯಾಯವಲ್ಲದೆ ಇದ್ದ ಸಮಯದಲ್ಲಿ ಇದೇ ನರಗಳನ್ನು ಆಫ್ ಮಾಡುವುದರಿಂದ ನೆನಪಿನ ಮೇಲೆ ಪರಿಣಾಮವಾಗುವುದಿಲ್ಲ. ಇದರಿಂದ ಸಾಮಾನ್ಯ ನೆನಪು ಸಂಗ್ರಹಕ್ಕೆ ಆರ್‌ಇಎಂ ನಿದ್ದೆ ಅಗತ್ಯ ಎಂದು ತಿಳಿಯುತ್ತದೆ ಎಂದು ಮೆಕ್ಗಿಲ್ ವಿಶ್ವವಿದ್ಯಾನಿಲಯದ ಮುಖ್ಯ ಅಧ್ಯಯನಕಾರ ರಿಚರ್ಡ್ ಬಾಯ್ಸಾ ಹೇಳಿದ್ದಾರೆ.

ಕೃಪೆ: www.financialexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News