ಯುಬಿ ಕಂಪೆನಿಯ ಸಾಮ್ರಾಟ್ ಛಡ್ಡಾ ಬಂಧನ
ಬೆಂಗಳೂರು, ಮೇ 17: ಮದ್ಯದ ಅಮಲಿನಲ್ಲಿ ತನ್ನ ದುಬಾರಿ ಕಾರು ಚಾಲನೆ ಮಾಡಿ, ಆಟೊವೊಂದಕ್ಕೆ ಢಿಕ್ಕಿ ಹೊಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುಬಿ ಕಂಪೆನಿಯ ಮದ್ಯ ಮಾರಾಟ ವಿಭಾಗದ ಉಪಾಧ್ಯಕ್ಷ ಸಾಮ್ರಾಟ್ ಛಡ್ಡಾನನ್ನು ಇಲ್ಲಿನ ಇಂದಿರಾನಗರ ಸಂಚಾರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಸಾಮ್ರಾಟ್ ಛಡ್ಡಾ ಕಳೆದ ಶನಿವಾರ ರಾತ್ರಿ ತನ್ನ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ ಎದುರಿಗೆ ಬಂದ ಆಟೊಗೆ ಢಿಕ್ಕಿ ಹೊಡೆದ ಪರಿಣಾಮ ಆಟೊ ಚಾಲಕ ಸೇರಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದವು. ಘಟನೆಯ ನಂತರ ತಲೆಮರೆಸಿಕೊಂಡಿದ್ದ ಛಡ್ಡಾನನ್ನು ಇಂದು ವಶಕ್ಕೆ ಪಡೆದಿರುವ ಇಂದಿರಾನಗರ ಸಂಚಾರಿ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಬೈ ಮೂಲದ ಉದ್ಯಮಿ ಸಾಮ್ರಾಟ್ ಛಡ್ಡಾ ವಿರುದ್ಧ ಇದೀಗ ಇಂದಿರಾನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಛಡ್ಡಾ ಚಾಲನೆ ವೇಳೆ ಮದ್ಯಪಾನ ಮಾಡಿರುವುದು ಕಂಡುಬಂದಿದ್ದು, ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.