15 ಖಾಸಗಿ ಬಸ್ ವಶಕ್ಕೆ
ಬೆಂಗಳೂರು, ಮೇ 17: ಸಂಚಾರ ನಿಯಮ ಉಲ್ಲಂಘಿಸಿ ವಾಣಿಜ್ಯ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಹದಿನೈದು ಖಾಸಗಿ ಬಸ್‌ಗಳನ್ನು ವಶಪಡಿಸಿಕೊಂಡು ಸಾರಿಗೆ(ಆರ್‌ಟಿಒ) ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಇಲ್ಲಿನ ಆನಂದರಾವ್ ವೃತ್ತದಲ್ಲಿ ಏಕಾಏಕಿ ದಾಳಿ ನಡೆಸಿದ ಸಾರಿಗೆ ಅಧಿಕಾರಿಗಳು, ಕಾನೂನು ಬಾಹಿರವಾಗಿ ವಾಣಿಜ್ಯ ಉತ್ಪನ್ನಗಳನ್ನು ಸಾಗಿಸುತ್ತಿದ್ದ ವಿವಿಧ ಟ್ರಾವೆಲ್ಸ್‌ಗಳಿಗೆ ಸೇರಿದ 15 ಖಾಸಗಿ ಬಸ್‌ಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದರು.
ತಮಿಳುನಾಡಿನಿಂದ ಆಗಮಿಸಿದ್ದ ಖಾಸಗಿ ಬಸ್‌ಯೊಂದರಲ್ಲಿ ಮೂರು ದ್ವಿಚಕ್ರ ವಾಹನ ಕೂಡ ಸಾಗಿಸಲಾಗುತಿತ್ತು ಎಂದು ತಿಳಿದುಬಂದಿದ್ದು, ಮೋಟಾರು ವಾಹನ ಕಾಯ್ದೆ ಪ್ರಕಾರ ಬಸ್‌ಗಳಲ್ಲಿ ಸರಕು ಸಾಗಿಸುವುದು ಅಪರಾಧವಾಗಿದೆ. ಅಲ್ಲದೆ, ಕೇವಲ ಪ್ರಯಾಣಿಕರ ಸರಕು ಮಾತ್ರ ಇರಿಸಿಕೊಳ್ಳಲು ಮಾತ್ರ ಕಾನೂನಿನಲ್ಲಿ ಅವಕಾಶ ಇದೆ. ಈ ಹಿಂದೆ ಇದೇ ರೀತಿ ವಾಣಿಜ್ಯ ಸರಕು ಹೊಂದಿದ್ದ ಎರಡು ಖಾಸಗಿ ವೋಲ್ವೋ ಬಸ್‌ಗಳು ಹಾವೇರಿ ಹಾಗೂ ಹೈದರಾಬಾದ್ ಸಮೀಪ ಬೆಂಕಿಗೆ ಆಹುತಿಯಾಗಿದ್ದನ್ನು ನೆನಪಿಸಿಕೊಳ್ಳಬಹುದಾಗಿದೆ.
ಇಂತಹ ದುರ್ಘಟನೆಗಳು ಮರುಕಳಿಸದಂತೆ ತಡೆಯಲು ಸಾರಿಗೆ ಇಲಾಖೆ ಅಧಿಕಾರಿಗಳು ಆಗಾಗ ದಾಳಿ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲೇ ತಮಿಳುನಾಡಿನಿಂದ ರಾಜ್ಯಕ್ಕೆ ಅಗಮಿಸಿದ ಬಸ್‌ಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.