BPಯನ್ನು ಔಷಧೀ ಇಲ್ಲದೆಯೇ ನಿಯಂತ್ರಿಸುವುದು ಹೇಗೆ?

Update: 2016-05-18 08:05 GMT

ನಿಮ್ಮ ಅಧಿಕ ರಕ್ತದೊತ್ತಡವನ್ನು ನಿವಾರಿಸುವಲ್ಲಿ ಜೀವನ ಶೈಲಿ ಅತೀ ಮುಖ್ಯ ಪಾತ್ರ ವಹಿಸುತ್ತದೆ. ಆರೋಗ್ಯಕರ ಜೀವನಶೈಲಿಯ ಮೂಲಕ ಅಧಿಕ ರಕ್ತದೊತ್ತಡ ನಿವಾರಿಸಬಹುದು. ವೈದ್ಯಕೀಯ ಸೇವೆಯ ಅಗತ್ಯವನ್ನೂ ಕಡಿಮೆ ಮಾಡಬಹುದು. ಇಲ್ಲಿದೆ ಕೆಲವು ಸಲಹೆಗಳು

7 ಗಂಟೆ ನಿದ್ದೆ ಮಾಡಿ

5 ಗಂಟೆ ಅಥವಾ ಕಡಿಮೆ ನಿದ್ದೆ ಮಾಡುವ ಮಂದಿಗೆ ಅಧಿಕ ರಕ್ತದೊತ್ತಡ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ರಾತ್ರಿಯಿಡೀ ಕೆಲಸ ಮಾಡುವುದು ಮತ್ತು ನಿದ್ದೆ ಇಲ್ಲದಿರುವುದು ನಿಮ್ಮ ದೇಹದ ಸಾಮರ್ಥ್ಯ ಕಡಿಮೆ ಮಾಡಬಹುದು. ಒತ್ತಡದ ಹಾರ್ಮೋನುಗಳನ್ನು ನಿಯಂತ್ರಿಸಿ ಅಧಿಕ ರಕ್ತದೊತ್ತಡ ತರಲಿದೆ. ನೀವು ಎಷ್ಟು ನಿದ್ದೆ ಮಾಡುತ್ತೀರಿ ಎನ್ನುವುದು ಮುಖ್ಯವಾಗುವುದಿಲ್ಲ, ಆದರೆ ರಾತ್ರಿ ಎಂತಹ ಗುಣಮಟ್ಟದ ನಿದ್ದೆ ಬಂದಿರುತ್ತದೆ ಎನ್ನುವುದು ಅಧಿಕ ರಕ್ತದೊತ್ತಡದ ಸಮಸ್ಯೆಗೆ ಕಾರಣವಾಗುತ್ತದೆ. ಸಂಶೋಧಕರು ಹೇಳುವ ಪ್ರಕಾರ ಕಡಿಮೆ ನಿದ್ದೆ ಇರುವವರು ಮತ್ತು ನಿದ್ದೆಯೇ ಇಲ್ಲದವರಿಗೆ ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚು. ಯಾವುದೇ ವಯಸ್ಸಿನಲ್ಲೂ ಈ ಸಮಸ್ಯೆ ಬರಬಹುದು. ವಯಸ್ಸಾದಂತೆ ಆಳವಾದ ನಿದ್ದೆ ಬರುವುದಿಲ್ಲ. ಹೀಗಾಗಿ ಹೆಚ್ಚು ನಿದ್ದೆಗೆ ಯತ್ನಿಸಿ.

ಕಡಿಮೆ ಉಪ್ಪು ತಿನ್ನಿ

ಉಪ್ಪು ದೇಹದಲ್ಲಿ ನೀರನ್ನು ಉಳಿಸುತ್ತದೆ. ಅಧಿಕ ಉಪ್ಪು ಸೇವಿಸಿದಲ್ಲಿ ದೇಹದಲ್ಲಿ ಹೆಚ್ಚು ನೀರಿನಂಶ ಸಂಗ್ರಹವಾಗಿ ರಕ್ತದೊತ್ತಡ ಏರಿಸುತ್ತದೆ. ಈಗಾಗಲೇ ನಿಮಗೆ ಅಧಿಕ ರಕ್ತದೊತ್ತಡ ಇದ್ದರೆ ಸಮಸ್ಯೆ ಇನ್ನಷ್ಟು ಗಂಭೀರವಾಗಬಹುದು. ನೀವು ಹೆಚ್ಚು ತೂಕ ಹೊಂದಿದ್ದರೆ, ಅಧಿಕ ಉಪ್ಪು ಸೇವನೆ ನಿಮ್ಮ ಹೃದಯದ ರೋಗವನ್ನು ಹೆಚ್ಚಿಸಲಿದೆ. ಅಲ್ಲದೆ, ಅತಿಯಾಗಿ ಉಪ್ಪು ತಿನ್ನುವುದರಿಂದ ರಕ್ತದೊತ್ತಡಕ್ಕೆ ತೆಗೆದುಕೊಳ್ಳುವ ಔಷಧಿಗಳಾದ ಡಿಯುರೆಟಿಕ್ಸ್ ಕೆಲಸ ಮಾಡದಂತೆ ಆಗುತ್ತದೆ. ಹೆಚ್ಚು ಉಪ್ಪಿರುವ ಸಂಸ್ಕರಿತ ಮಾಂಸ ಮತ್ತು ಮೀನು ತಿನ್ನಬೇಡಿ. ಊಟಕ್ಕೆ ಕೂತಾಗ ಉಪ್ಪು ಹಾಕಿಕೊಳ್ಳುವುದು ಬಿಡಿ.

ವಾರಕ್ಕೆ 150 ನಿಮಿಷ ವ್ಯಾಯಾಮ ಮಾಡಿ

ವಯಸ್ಕರಿಗೆ 150 ನಿಮಿಷದ ವ್ಯಾಯಾಮ ಬೇಕು. ತಜ್ಞರ ಸಲಹೆಯಂತೆ ವಿವಿಧ ವ್ಯಾಯಾಮ ಆರಿಸಿಕೊಳ್ಳಬಹುದು. ವ್ಯಾಯಾಮವು ಅಧಿಕ ರಕ್ತದೊತ್ತಡಕ್ಕೆ ಔಷಧವಿಲ್ಲದ ಚಿಕಿತ್ಸೆಯಾಗಿದೆ. ನಿತ್ಯದ ದೈಹಿಕ ಚಟುವಟಿಕೆ ಹೃದಯವನ್ನು ದೃಢಗೊಳಿಸುತ್ತದೆ. ದೃಢ ಹೃದಯ ಹೆಚ್ಚು ರಕ್ತವನ್ನು ಪಂಪ್ ಮಾಡುತ್ತದೆ. ಹೀಗೆ ಆರೋಗ್ಯಕರವಾಗಿರುತ್ತೀರಿ.

ನಿತ್ಯ 10 ನಿಮಿಷ ಧ್ಯಾನ ಮಾಡಿ

ಒತ್ತಡವು ನಿಮ್ಮ ದೇಹದ ಸಹಜವಾದ ಅಲಾರಂ ವ್ಯವಸ್ಥೆಯಾಗಿದೆ. ಅದು ಅಡ್ರೆನಲಿನ್ ಎನ್ನುವ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ. ಅದು ಉಸಿರಾಟವನ್ನು ತ್ವರಿತಗೊಳಿಸುತ್ತದೆ. ಇದರಿಂದ ಹೃದಯ ಬಡಿತ ಮತ್ತು ರಕ್ತದೊತ್ತಡ ಏರುತ್ತದೆ. ಇತ್ತೀಚೆಗಿನ ಅಧ್ಯಯನದ ಪ್ರಕಾರ ಜೀವನದ ಕಡೆಗೆ ಸಕಾರಾತ್ಮಕ ದೃಷ್ಟಿ ಇರುವುದು, ಮನಸ್ಸನ್ನು ಖಿನ್ನತೆ, ಒತ್ತಡದಿಂದ ದೂರವಿಡುವುದು ಮತ್ತು ರಿಲ್ಯಾಕ್ಸ್ ಆಗಿರುವುದು ರಕ್ತದೊತ್ತಡ ನಿವಾರಿಸುತ್ತದೆ. ಧ್ಯಾನವು ಉತ್ತಮ ನಿದ್ದೆಗೆವ ನೆರವಾಗುತ್ತದೆ.

ಹೆಚ್ಚು ಹಣ್ಣು ಮತ್ತು ತರಕಾರಿ ಸೇವಿಸಿ

ಅಧ್ಯಯನಗಳ ಪ್ರಕಾರ ಕಡಿಮೆ ಕೊಬ್ಬಿರುವ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದು ರಕ್ತದೊತ್ತಡವನ್ನು ದೂರವಿಡುತ್ತದೆ. ವಿಟಮಿನ್, ಲವಣ ಮತ್ತು ಫೈಬರ್ ಇರುವ ಇವು ದೇಹಕ್ಕೆ ಉತ್ತಮ.

ಕಡಿಮೆ ತೂಕ

ಕೊಬ್ಬು ಇರುವ ವ್ಯಕ್ತಿಗಳು ಅಧಿಕ ಕೊಬ್ಬಿನ ಅಂಗಾಂಶಗಳನ್ನು ಹೊಂದಿದ್ದು, ಹೃದಯ ಸಂಬಂಧ ಸಮಸ್ಯೆಗೆ ತುತ್ತಾಗುತ್ತಾರೆ. ಹೆಚ್ಚು ತೂಕವಿದ್ದರೆ 2-3 ಕೆ.ಜಿ ಕಡಿಮೆಯಾಗುವುದರಿಂದ ರಕ್ತದೊತ್ತಡ ಕಡಿಮೆಯಾಗಲಿದೆ. ಕಡಿಮೆ ತೂಕಕ್ಕೆ ಕ್ಯಾಲರಿಗಳು ಕಡಿಮೆಯಾಗುವ ಆಹಾರ ಸೇವಿಸಬೇಕು. ನಿಧಾನವಾಗಿ ಶಿಸ್ತಿನ ಆಹಾರ ಅಭ್ಯಾಸ ಮಾಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News