ಮತ್ತೆ ಲೋಕಾಯುಕ್ತಕ್ಕೆ ಎಸ್.ಆರ್.ನಾಯಕ್ ಶಿಫಾರಸ್ಸು: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2016-05-20 16:43 GMT

ಬೆಂಗಳೂರು, ಮೇ 20: ಲೋಕಾಯುಕ್ತಕ್ಕೆ ಎಸ್.ಆರ್.ನಾಯಕ್ ಅವರ ಹೆಸರಿನ ಶಿಫಾರಸು ಪತ್ರವನ್ನು ಮತ್ತೆ ರಾಜ್ಯಪಾಲರಿಗೆ ರವಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ನಗರದ ಜಿಕೆವಿಕೆಯಲ್ಲಿನ ತೋಟಗಾರಿಕಾ ವಿವಿ ಲೋಕಾರ್ಪಣೆ ಮತ್ತು ವಿದ್ಯಾರ್ಥಿ ನಿಲಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಸ್.ಆರ್.ನಾಯಕ್ ಅವರು ಕನ್ನಡಿಗರು ಎಂಬುದು ಪ್ರಮುಖ ಅಂಶ. ಅಲ್ಲದೆ, ರಾಜ್ಯಪಾಲರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ವಿವರ ನೀಡಿ ಮತ್ತೆ ಅವರ ಹೆಸರನ್ನು ಶಿಫಾರಸು ಮಾಡಿ ಕಳುಹಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಬಲ ಕುಗ್ಗಿಲ್ಲ. ಬಿಜೆಪಿಗಿಂತ ಉತ್ತಮವಾಗಿದ್ದೇವೆ. ಬಿಜೆಪಿ 65 ಸ್ಥಾನ ಗೆದ್ದಿದ್ದಾರೆ, ನಾವು 115 ಸ್ಥಾನ ಗೆದ್ದಿದ್ದೇವೆ ಎಂದು ಸಮರ್ಥಿಸಿಕೊಂಡರು. ಅಸ್ಸಾಂನಲ್ಲಿ ಆಡಳಿತ ವಿರೋ ಚಟುವಟಿಕೆ ನಡೆದಿದ್ದರಿಂದ ಅಲ್ಲಿ ಸೋಲುಂಟಾಗಿದೆ. ಕೇರಳದಲ್ಲಿ ಕಾಂಗ್ರೆಸ್ ಮೆತ್ರಿ ಕೂಟ ಇತ್ತು. ಈಗ ಬಿಜೆಪಿ ಮೆತ್ರಿಕೂಟ ಅಕಾರಕ್ಕೆ ಬಂದಿದೆ. ಹಾಗಾಗಿ ಅಂತಹ ಬದಲಾವಣೆ ಏನು ಆಗಿಲ್ಲ ಎಂದರು.
ಕಾಂಗ್ರೆಸ್ ತಳಮಟ್ಟದಿಂದ ಸಂಘಟನೆಯಾಗಿರುವ ಪಕ್ಷ. ಹಾಗಾಗಿ ನಮ್ಮ ಪಕ್ಷ ಎಂದಿಗೂ ನಾಶವಾಗುವುದಿಲ್ಲ ಎಂದು ತಿಳಿಸಿದರು.
ರಾಜ್ಯಸಭೆಗೆ ಮೂರನೇ ಅಭ್ಯರ್ಥಿ ಆಯ್ಕೆ ಕುರಿತು ದೆಹಲಿಯಲ್ಲಿ ಹೈಕಮಾಂಡ್ ಜತೆ ಚರ್ಚಿಸುತ್ತೇನೆ. ಇಂದು ಬೆಳಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನನ್ನನ್ನು ಭೇಟಿ ಮಾಡಿದ್ದರು. ಆದರೆ, ಈ ಬಗ್ಗೆ ನಾವು ಚರ್ಚಿಸಲಿಲ್ಲ. ಪೊಲೀಸ್ ಅಕಾರಿಗಳ ವರ್ಗಾವಣೆ ಬಗ್ಗೆ ಮಾತನಾಡಿದೆವು ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News