×
Ad

ಪ್ರಚಾರಕ್ಕಾಗಿ ನನ್ನ ವಿರುದ್ಧ ಆಧಾರರಹಿತ ಆರೋಪ: ಸಚಿವ ಯು.ಟಿ. ಖಾದರ್

Update: 2016-05-21 17:03 IST

ಬೆಂಗಳೂರು, ಮೇ 21: ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್‌ಎಚ್‌ಎಂ)ದ ಅಡಿ ಬಡವರಿಗೆ ಉಚಿತ ಔಷಧ ಮತ್ತು ಚಿಕಿತ್ಸೆಗೆ ಕೇಂದ್ರ ಬಿಡುಗಡೆ ಮಾಡಿದ್ದ ಅನುದಾನ ದುರ್ಬಳಕೆ ಆರೋಪ ಆಧಾರರಹಿತ. ಆ ಹಿನ್ನೆಲೆಯಲ್ಲಿ ರಾಜಕೀಯಪ್ರೇರಿತ ಆರೋಪಗೈದ ಪಾಲಿಕೆ ಮಾಜಿ ಸದಸ್ಯ ಎನ್.ಆರ್.ರಮೇಶ್ ವಿರುದ್ಧ ಮೊಕದ್ದಮೆ ಹೂಡಲು ಚಿಂತನೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಶನಿವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಎಚ್‌ಎಂ ಯೋಜನೆಯಡಿ ಪ್ರಸಕ್ತ ಸಾಲಿಗೆ 1,247.99 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಆ ಪೈಕಿ ರಾಜ್ಯಾದ್ಯಂತ ಔಷಧ ಮತ್ತು ಉಪಕರಣಗಳ ಖರೀದಿಗೆ 43 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಆ ಪೈಕಿ ಔಷಧಿ ಖರೀದಿಗೆ 15.79 ಕೋಟಿ ರೂ.ಇರಿಸಲಾಗಿದೆ.

ಬಿಬಿಎಂಪಿ 8 ಕೋಟಿ ರೂ.ಗಳನ್ನು ಔಷಧಿ ಖರೀದಿಗೆ ಒದಗಿಸಿದ್ದು, ಆ ಪೈಕಿ ಕೇವಲ 1.87 ಕೋಟಿ ರೂ. ಮೊತ್ತದ ಔಷಧಗಳನ್ನು ಪಾರದರ್ಶಕ ಕಾಯ್ದೆಯನ್ವಯ ಡ್ರಗ್ಸ್ ಲಾಗಿಸ್ಟಿಕ್ ಆ್ಯಂಡ್ ವೇರ್ ಹೌಸಿಂಗ್‌ನಿಂದ ಖರೀದಿಸಿ ಪೂರೈಕೆ ಮಾಡಲಾಗಿದೆ. ವಾಸ್ತವ ಸತ್ಯ ಹೀಗಿರುವಾಗ ಎನ್.ಆರ್.ರಮೇಶ್ 1,463 ಕೋಟಿ ರೂ.ಅವ್ಯವಹಾರ ನಡೆದಿದೆ ಎಂದು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟನೆ ನೀಡಿದರು.

ಗೊಂದಲ ನಿವಾರಣೆಗೆ ಗೋಷ್ಠಿ

ಆರೋಪಕ್ಕೆ ಉತ್ತರ ನೀಡಲು ತಾನು ಸುದ್ದಿಗೋಷ್ಠಿ ಕರೆದಿಲ್ಲ. ಬದಲಿಗೆ ರಾಜ್ಯದ ಜನತೆಯಲ್ಲಿ ಗೊಂದಲ ನಿವಾರಣೆ ಉದ್ದೇಶಕ್ಕೆ ಪತ್ರಿಕಾಗೋಷ್ಠಿ ಕರೆದಿದ್ದೇನೆ ಎಂದು ಸ್ಪಷ್ಟನೆ ನೀಡಿದ ಅವರು, ಈ ಪ್ರಕರಣದಲ್ಲಿ ಯಾವುದೇ ತನಿಖೆಗೂ ತಾನು ಸಿದ್ಧ ಎಂದು ಪುನರುಚ್ಚರಿಸಿದರು.

 ಸರಕಾರಿ ಆಸ್ಪತ್ರೆಗಳಿಗೆ ಪೂರೈಸಿರುವ ಔಷಧಿಗಳನ್ನು ಹತ್ತರಿಂದ ಹದಿನೈದು ಪಟ್ಟು ದುಪ್ಪಟ್ಟು ಬೆಲೆಗೆ ಖರೀದಿಸಲಾಗಿದೆ ಎಂಬುದು ಸುಳ್ಳು. ಮಾರುಕಟ್ಟೆ ದರಕ್ಕಿಂತಲೂ ಕಡಿಮೆ, ಸಗಟು ಬೆಲೆಗೆ ಔಷಧಗಳನ್ನು ಖರೀದಿಸಲಾಗಿದೆ. ಅಮೊಕ್ಸೊಲಿನ್ 500 ಎಂಜಿ ಮಾತ್ರೆಯನ್ನು 266.99 ರೂ.ಗೆ ಖರೀದಿಸಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ವಾಸ್ತವದಲ್ಲಿ ಆ ಕ್ಯಾಪ್ಸೂಲ್‌ನ್ನು ಕೇವಲ 2.66 ರೂ.ಗೆ ಖರೀದಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಪ್ರತಿಷ್ಠಿತ ಸಂಸ್ಥೆಗಳಿಂದಲೇ ಔಷಧಗಳನ್ನು ಇ-ಪ್ರೊಕ್ಯೂರ್‌ಮೆಂಟ್ ಮುಖಾಂತರ ಟೆಂಡರ್ ಆಹ್ವಾನಿಸಿ ಅತ್ಯುತ್ತಮ ಔಷಧ ಗುಣಮಟ್ಟವನ್ನು ನಾಲ್ಕೈದು ಹಂತದ ಪರಿಶೀಲನೆ ಬಳಿಕ ಖರೀದಿಸಲಾಗುತ್ತಿದೆ ಎಂದ ಅವರು, ತಜ್ಞ ವೈದ್ಯರ ಪ್ರಮಾಣ ಪತ್ರವಿಲ್ಲದ ಯಾವುದೇ ಔಷಧಗಳನ್ನು ಖರೀದಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಈ ಸಂಬಂಧ ಆರೋಗ್ಯ ಇಲಾಖೆಯೇತರ ಅಧಿಕಾರಿಗಳಿಂದ ಸೂಕ್ತ ತನಿಖೆ ನಡೆಸಲಾಗುವುದು. ಅಲ್ಲದೆ, ತಪ್ಪಿತಸ್ಥರೆಂದು ಕಂಡಬಂದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಔಷಧ ಖರೀದಿ ಹಾಗೂ ಎನ್‌ಎಚ್‌ಎಂ ಯೋಜನೆಯ ಹಣ ಸದ್ಬಳಕೆ ಸಂಬಂಧ ಶೀಘ್ರದಲ್ಲೇ ಶ್ವೇತಪತ್ರ ಹೊರಡಿಸಲಾಗುವುದು. ಬಿಬಿಎಂಪಿಯ ಆರೋಗ್ಯ ವಿಭಾಗಕ್ಕೂ ಮತ್ತು ರಾಜ್ಯ ಆರೋಗ್ಯ ಇಲಾಖೆಗೂ ಸಂಬಂಧವಿಲ್ಲ. ಆದರೂ, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಮೇಯರ್‌ಗೆ ಮನವಿ ಮಾಡಲಾಗುವುದು. ಆರೋಗ್ಯ ಇಲಾಖೆಯಲ್ಲಿ ಅವ್ಯವಹಾರಕ್ಕೆ ಅವಕಾಶವಿಲ್ಲ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಜಾಹಿದ್ ಪಾಷ ಸೇರಿದಂತೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

‘ಕೆಲವರಿಗೆ ದೇಹ ಬೆಳೆದಿರುತ್ತದೆಯೇ ಹೊರತು, ಮೆದುಳು ಬೆಳವಣಿಗೆ ಆಗಿರುವುದಿಲ್ಲ. ಇಂತಹವರ ಆರೋಗ್ಯ ಸುಧಾರಣೆಗಾಗಿ ರಾಜ್ಯ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿನ ನಿಮ್ಹಾನ್ಸ್ ಅಥವಾ ದಕ್ಷಿಣ ಕನ್ನಡದ ಕಂಕನಾಡಿಯ ಆಸ್ಪತ್ರೆಗೆ ಸೇರಿಸಿ ಅವರ ಕಾಯಿಲೆಯನ್ನು ಗುಣ ಪಡಿಸುವ ಕೆಲಸ ಮಾಡುತ್ತೇವೆ’.

ಯು.ಟಿ.ಖಾದರ್ ,ಆರೋಗ್ಯ ಸಚಿವರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News