ಹೋರಾಟದ ಮೂಲಕ ಒಳ ಮೀಸಲಾತಿ ಪಡೆಯಿರಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

Update: 2016-05-22 15:37 GMT

ಬೆಂಗಳೂರು, ಮೇ 22: ದಲಿತ ಸಮುದಾಯ ಒಗ್ಗಟ್ಟು ಮತ್ತು ಹೋರಾಟದ ಮೂಲಕವೆ ಒಳ ಮೀಸಲಾತಿ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕರೆ ನೀಡಿದ್ದಾರೆ. ರವಿವಾರ ವಸಂತನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಮಾದಿಗ ದಂಡೋರ ಆಯೋಜಿಸಿದ್ದ ಮಾದಿಗ ಸಮಾಜದ ಚುನಾಯಿತ ಜನಪ್ರತಿನಿಧಿಗಳ ರಾಜ್ಯಮಟ್ಟದ ಪ್ರಥಮ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಸಮಾಜದಲ್ಲಿ ಸಂಘಟಿತರಾಗದಿದ್ದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಸರಕಾರಗಳೂ ಹಿಂದುಳಿದ ಸಮುದಾಯದ ಜನರನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದ ಅವರು, ಒಳ ಮೀಸಲಾತಿ ಸಂಬಂಧ ಎಲ್.ಜಿ.ಹಾವನೂರು, ನ್ಯಾ.ಎ.ಜೆ. ಸದಾಶಿವ ಆಯೋಗಗಳು ವರದಿ ನೀಡಿವೆ. ಯಾವ ಸಮುದಾಯ ಹಿಂದುಳಿದಿವೆಯೋ ಅವುಗಳನ್ನು ಗುರುತಿಸಿ ಮುಂದೆ ತರುವ ಕೆಲಸ ಮಾಡಬೇಕು ಎಂದರು. ಆಂಧ್ರದಲ್ಲಿ ಒಳ ಮೀಸಲಾತಿ ಕಲ್ಪಿಸಲಾಗಿತ್ತು. ಆ ಪ್ರಕರಣ ಸುಪ್ರೀಂ ಕೋರ್ಟ್‌ಗೆ ಹೋಗಿತು. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಕೇಂದ್ರ ಸರಕಾರಕ್ಕೆ ನ್ಯಾಯಾಲಯ ಆದೇಶಿಸಿತು. ಆದರೆ, ಇದುವರೆಗೆ ಕೇಂದ್ರ ಸರಕಾರ ನಿರ್ಧಾರವನ್ನು ಪ್ರಕಟಿಸಿಲ್ಲ ಎಂದು ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಸಚಿವ ಆಂಜನೇಯ ಮಾತನಾಡಿ, ಸಮುದಾಯದ ತ ರಕ್ಷಣೆಗೆ ಬದ್ಧವಾಗಿದ್ದೇವೆ. ನ್ಯಾ.ಎ.ಜೆ.ಸದಾಶಿವ ವರದಿ ಜಾರಿಯ ಸಂಬಂಧ ಸಂಪುಟದ ಮುಂದೆ ಬರಲಿದ್ದು, ಆ ಸಂದರ್ಭದಲ್ಲಿ ಚರ್ಚೆ ನಡೆಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

  ಕೆಪಿಎಸ್ಸಿ ನೇಮಕಾತಿ ಹಗರಣದಲ್ಲಿ ಮಾಜಿ ಅಧ್ಯಕ್ಷ ಗೋನಾಳ್ ಭಿಮಪ್ಪ ಅವರನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬೇಡಿ ಎಂದು ಸಭೀಕರು ಗಲಾಟೆ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವ ಆಂಜನೇಯ, ದೇವೇಗೌಡರ ಸಲಹೆ ಮೇರೆಗೆ ಗೋನಾಳ್ ಭೀಮಪ್ಪರನ್ನು ರಕ್ಷಣೆ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತೇನೆಂದು ಭರವಸೆ ನೀಡಿದರು.

 ಸಭೀಕರ ಕಾರ್ಯಕ್ರಮದಲ್ಲೇ ಸಚಿವರನ್ನು ಪ್ರಶ್ನೆ ಮಾಡಲು ಮುಂದಾದಾಗ ಗರಂ ಆದ ಆಂಜನೇಯ, ‘ನಿಮ್ಮ ಪ್ರಶ್ನೆಗಳಿಗೆ ನಾನು ಉತ್ತರಿಸಲು ಸಿದ್ದನಿದ್ದೇನೆ. ಆದರೆ ಹೀಗೆಲ್ಲ ಬಹಿರಂಗವಾಗಿ ಕೇಳಿ ಅಶಿಸ್ತು ಪ್ರದರ್ಶಿಸಬೇಡಿ. ನನ್ನ ಮನೆ ಅಥವಾ ಕಚೇರಿಗೆ ಬನ್ನಿ ಎಂದು ತಾಕೀತು ಮಾಡಿ ಸುಮ್ಮನಾಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News