ಜೂನ್ 10ರಂದು ಬೆಂಗಳೂರು-ಮೈಸೂರು ಓಟದ ಬೆಸುಗೆ

Update: 2016-05-23 07:09 GMT

* ಪ್ರತಿ ವೃತ್ತಿಪರ ರಿಲೇ ತಂಡದಲ್ಲಿ 8 ಓಟಗಾರರು

* ಓಪನ್ ಲೀಗ್‌ನಲ್ಲಿ 12 ಸ್ಪರ್ಧಿಗಳ ಒಂದು ತಂಡ

ಬೆಂಗಳೂರು, ಮೇ 23: ಉದ್ಯಾನ ನಗರಿ ಹಾಗೂ ಅರಮನೆ ನಗರಿಯ ನಡುವೆ ಓಟದ ಬೆಸುಗೆಯಾಗಲಿದೆ. ಇದು ಸಾಧ್ಯವಾಗಲಿರುವುದು ದೇಶವು ಹಿಂದೆಂದೂ ಕಂಡರಿಯದ 120 ಕಿ.ಮೀ ದೂರದ "ಟ್ವಿನ್ ಸಿಟಿ" ರಿಲೇ ಓಟದ ಉತ್ಸಾಹದ ಮೂಲಕ. ಬೆಂಗಳೂರು-ಮೈಸೂರು ಹೆದ್ದಾರಿಯು ವಾಹನಗಳೋಟದ ಹೊರತಾಗಿ ಓಟಗಾರರ ವೇಗಕ್ಕೂ ಅಂದು ಸಾಕ್ಷಿಯಾಗಲಿದೆ. ಜೂನ್ 10ರಂದು ಬೆಂಗಳೂರಿನಿಂದ ಆರಂಭವಾಗಿ ಜೂನ್ 11ರಂದು ಮೈಸೂರಿನಲ್ಲಿ ರಿಲೇ ಸ್ಪರ್ಧೆ ಕೊನೆಗೊಳ್ಳಲಿದೆ.

ಇನ್ವೆಂಟರ್ಸ್ ಇಂಡಿಯಾ ರಿಸರ್ಚ್ ಪ್ರತಿಷ್ಠಾನವು ಸೋಸಿಯೋ ಫಿಟ್ನೆಸ್ ಸಹಯೋಗದಲ್ಲಿ ಆಯೋಜಿಸುತ್ತಿರುವ ಈ ರಿಲೇಯು ಸಾಮರ್ಥ್ಯ, ತಂಡ ನಿರ್ವಹಣೆ ಹಾಗೂ ನಾಯಕತ್ವಕ್ಕೆ ಸವಾಲಾಗುವಂಥ ಸಂಯೋಜಿತ ಓಟವಾಗಿದೆ. ವೃತ್ತಿಪರ ವಿಭಾಗದಲ್ಲಿ 8 ಓಟಗಾರರ ಒಂದು ತಂಡಕ್ಕೆ ಅವಕಾಶವಿದ್ದು, ಓಪನ್ ಲೀಗ್‌ನಲ್ಲಿ 12 ಸದಸ್ಯರ ಒಂದು ತಂಡವಾಗಿ ಟ್ವಿನ್ ಸಿಟಿ ರಿಲೇಯಲ್ಲಿ ಓಡಲು ಅವಕಾಶ ಮಾಡಿಕೊಡಲಾಗಿದೆ.

ವೃತ್ತಿಪರ ಹಾಗೂ ಓಪನ್ ಲೀಗ್ ಎರಡೂ ವಿಭಾಗದಲ್ಲಿ ಮಹಿಳೆ ಹಾಗೂ ಪುರುಷರ ಪ್ರತ್ಯೇಕ ತಂಡಗಳ ಜತೆಗೆ ಪುರುಷ-ಮಹಿಳೆ ಸಂಯೋಜನೆಯ ಮಿಶ್ರ ತಂಡಗಳೂ ಪಾಲ್ಗೊಳ್ಳಬಹುದಾಗಿದೆ. ಪ್ರತಿಯೊಂದು ವಿಭಾಗದ ತಂಡವು ತನ್ನ ನಾಯಕತ್ವ ವಹಿಸುವವರು ಯಾರೆನ್ನುವುದನ್ನು ತಾನೇ ನಿರ್ಧಾರ ಮಾಡಿಕೊಂಡು ರೀಲೆಯ ವಿವಿಧ ಲೆಗ್‌ನಲ್ಲಿ ಓಡುವವರನ್ನು ನಿರ್ಧಾರ ಮಾಡಿಕೊಳ್ಳಬೇಕು.

120 ಕಿ.ಮೀ ಅಂತರದ ರಿಲೇ ಇದಾಗಿರುವ ಕಾರಣ ಪ್ರತಿಯೊಂದು ಲೆಗ್ ಅನ್ನು ವಿಭಿನ್ನ ಅಂತರಗಳಲ್ಲಿ ವಿಂಗಡಿಸಲಾಗಿದೆ. ಹೆಚ್ಚು ದೂರ ಓಡುವಂಥ ಸಾಮರ್ಥ್ಯದ ಓಟಗಾರರನ್ನು ತಂಡದ ನಾಯಕತ್ವ ವಹಿಸಿಕೊಂಡವರು ದೂರದ ಓಟಕ್ಕೆ ಹಾಗೂ ಕಡಿಮೆ ಸಾಮರ್ಥ್ಯದ ಓಟಗಾರರನ್ನು ಅಲ್ಪ ಅಂತರದ ಓಟಕ್ಕೆ ನಿಗದಿ ಮಾಡಿಕೊಳ್ಳಲು ಸ್ವತಂತ್ರರಾಗಿರುತ್ತಾರೆ. ಇದು ಸ್ಪರ್ಧಿಸುವ ಆಯಾ ತಂಡದಲ್ಲಿನ ಓಟಗಾರರ ದೂರ ಕ್ರಮಿಸುವ ಶಕ್ತಿಯನ್ನು ಅವಲಂಬಿಸಿರುತ್ತದೆ. ವೃತ್ತಿಪರ ಲೀಗ್‌ನಲ್ಲಿ ಒಂದು ಲೆಗ್ ಕನಿಷ್ಠ 7.5 ಕಿ.ಮೀ ಯಿಂದ ಗರಿಷ್ಠ 23 ಕಿ.ಮೀ ವರೆಗೆ ವಿಭಾಗಿತಗೊಂಡಿರುತ್ತದೆ. ಓಪನ್ ಲೀಗ್‌ನಲ್ಲಿ ಕನಿಷ್ಠ ಲೆಗ್ 7.5 ಕಿ.ಮೀ ಹಾಗೂ ಗರಿಷ್ಠ ಲೆಗ್ 12 ಕಿ.ಮೀ ಆಗಿರುತ್ತದೆ. ಪ್ರತಿಯೊಂದು ವಿಭಾಗದ ಸ್ಪರ್ಧೆಯಲ್ಲಿ ಅಗ್ರ ಮೂರು ತಂಡಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಅಷ್ಟೇ ಅಲ್ಲ ವಿವಿಧ ವರ್ಗದಲ್ಲಿ ವೈಯಕ್ತಿಕ ಉತ್ತಮ ಪ್ರದರ್ಶನ ನೀಡುವವರಿಗೆ ಪ್ರತ್ಯೇಕವಾಗಿ ಬಹುಮಾನ ನೀಡಲಾಗುವುದು.

ಟ್ವಿನ್ ಸಿಟಿ ರಿಲೇ ಆರಂಭವಾಗುವುದು ಜೂನ್ 10ರ ಸಂಜೆ 7 ಗಂಟೆಗೆ ಬೆಂಗಳೂರು ಸಮೀಪದ ಮೈಸೂರು ರಸ್ತೆಯಲ್ಲಿನ ಡೆಕಥ್ಲಾನ್‌ನಿಂದ. ಕೊನೆಗೊಳ್ಳುವುದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜೂನ್ 11ರಂದು ಬೆಳಗಿನ ಹೊತ್ತಿಗೆ. ಪ್ರಶಸ್ತಿ ಪ್ರದಾನ ಸಮಾರಂಭವು ಅದೇ ದಿನ ಬೆಳಿಗ್ಗೆ 9 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿದೆ.

events@twincityrelay.org ದೇಶದ ಮೊಟ್ಟ ಮೊದಲ ಸುದೀರ್ಘ ರಿಲೇಯಲ್ಲಿ ಪಾಲ್ಗೊಳ್ಳಲು ಬಯಸುವವರು ತಮ್ಮ ತಂಡವನ್ನು ಸೌಮ್ಯಶ್ರೀ ರಾವ್ (9986659875) ಅಥವಾ ನೋಂದಣಿ ಕೇಂದ್ರ (8884342842, 8884343247) ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಇ-ಮೇಲ್ ವಿಳಾಸವನ್ನು ಸಂಪರ್ಕಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News