ಕೊಲ್ಯ ಮೂಕಾಂಬಿಕ ಮಠದ ರಮಾನಂದ ಸ್ವಾಮೀಜಿ ನಿಧನ

Update: 2016-05-23 14:45 GMT

ಉಳ್ಳಾಲ, ಮೇ 23: ಕೊಲ್ಯ ಶ್ರೀ ಮೂಕಾಂಬಿಕಾ ಮಠದ ಮಠಾಧೀಶ ರಾಜಯೋಗಿ ಶ್ರೀ ರಮಾನಂದ ಸ್ವಾಮೀಜಿ (67) ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ ನಿಧನರಾದರು.

ಕಳೆದ ಒಂದು ತಿಂಗಳಿನಿಂದ ಸ್ವಾಮೀಜಿಯವರ ಆರೋಗ್ಯದಲ್ಲಿ ಏರುಪೇರಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ರಕ್ತದೊತ್ತಡ ಮತ್ತು ಮಧುಮೇಹದ ತೊಂದರೆಯಿಂದ ಬಳಲುತ್ತಿದ್ದರು. ಸೋಮವಾರ ಮಧ್ಯಾಹ್ನ ಎರಡು ಗಂಟೆ ಹೊತ್ತಿಗೆ ಸ್ವಾಮೀಜಿಗಳ ಆರೋಗ್ಯದಲ್ಲಿ ತೀರಾ ಏರುಪೇರಾಗಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಸ್ವಾಮೀಜಿಯವರ ಅಕಾಲಿಕ ಅಗಲಿಕೆಯಿಂದ ಕೊಲ್ಯ ಮೂಕಾಂಬಿಕ ದೇವಸ್ಥಾನದ ಭಕ್ತರು ಸೇರಿದಂತೆ ಸ್ವಾಮೀಜಿಯವರ ಅಪಾರ ಅನುಯಾಯಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ.

9-12-1949ರಂದು ಕಾಸರಗೋಡು ತಾಲೂಕಿನ ಬದಿಯಡ್ಕದ ಉಬ್ರಂಗಳ ಗ್ರಾಮದ ನಡುಮೂಲೆ ಎಂಬಲ್ಲಿ ಕುಂಞಂಬು ಮಣಿಯಾಣಿ ಮತ್ತು ಮಾಕು ಅಮ್ಮ ದಂಪತಿಗೆ ಜನಿಸಿದವರು. ಕುಂಞಂಬು ಅವರು ಯಾದವ ಸಮಾಜದ ಮುಖಂಡರಾಗಿದ್ದು, ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು. ಮೂರು ಮಂದಿ ಪುತ್ರರು ಹಾಗೂ ಮೂರು ಮಂದಿ ಪುತ್ರಿಯರಲ್ಲಿ ಕೊಲ್ಯ ಶ್ರೀಗಳು ಐದನೆಯ ಪುತ್ರನಾಗಿದ್ದು, ರಮಾನಂದ ಎಂದು ಹೆಸರಿಡಲಾಗಿತ್ತು. ಹುಟ್ಟಿದ ಕೆಲವು ತಿಂಗಳುಗಳಲ್ಲಿ ರಮಾನಂದ ಮೂರ್ಛೆ ತಪ್ಪಿ ಬಿದ್ದಿದ್ದರು. ಹೆತ್ತವರು ಎಷ್ಟು ಪ್ರಯತ್ನಿಸಿದರೂ ಮಗುವಿಗೆ ಸ್ಮತಿಯೇ ಬಂದಿರಲಿಲ್ಲ. ಶ್ರೀದೇವಿ ಕೃಪೆಯಿಂದ ಪಡೆದ ಮಗುವಿನ ಸ್ಥಿತಿಯನ್ನು ಕಂಡು ತಾಯಿ ರೋಧಿಸಿ, ಮಗು ಬದುಕುಳಿದಲ್ಲಿ ದೇವಿಯ ಸೇವೆಗೆ ಕಳುಹಿಸುವುದಾಗಿ ಸಂಕಲ್ಪಿಸಿದಾಗ ಇದ್ದಕ್ಕಿದ್ದಂತೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗು ಎಚ್ಚೆತ್ತುಕೊಂಡು ಅಳಲು ಆರಂಭಿಸಿತ್ತು. ಎಳೆಯ ವಯಸ್ಸಿನಲ್ಲಿ ತಂದೆಯ ಜತೆಗೆ ಪೂಜೆಗೆ ಕುಳಿತು ಗಂಟೆಗಳ ಕಾಲ ಪೂಜೆಯಲ್ಲಿ ತಲ್ಲೀನರಾಗುತ್ತಿದ್ದರು. ಇದರಿಂದ ದೈವ ಭಕ್ತಿ ಅವರ ಹುಟ್ಟುಗುಣವಾಗಿತ್ತು. ಬಾಲ್ಯದಲ್ಲಿ ಮಕ್ಕಳ ಜತೆಗೆ ಆಡುವ ಬದಲು ಸಾಧುಸಂತರ ಬಳಿಯಲ್ಲಿ ಕುಳಿತು ಅವರಾಡುವ ಮಾತುಗಳನ್ನು ಆಲಿಸುತ್ತಾ ಧಾರ್ಮಿಕತೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು.

ಶಿಕ್ಷಣ ಪ್ರೇಮಿ

ಸ್ವಾಮೀಜಿ ಮಠದ ಹೆಸರಲ್ಲಿ ಹಲವು ವರುಷಗಳ ಹಿಂದೆಯೇ ದೇವಸ್ಥಾನದ ಆವರಣದಲ್ಲಿ ಪ್ರಾಥಮಿಕ ಶಾಲೆಯೊಂದನ್ನು ನಿರ್ಮಿಸಿ ಸರಕಾರದ ಅನುದಾನದಡಿ ಊರಿನ ಅನೇಕ ಮಕ್ಕಳು ವಿದ್ಯಾರ್ಜನೆಗೈಯಲು ಸಹಕರಿಸಿದ್ದರು. ಈ ಶಾಲೆಯಲ್ಲಿ ಕಲಿತವರು ಇಂದು ಸಮಾಜದ ಉತ್ತುಂಗದ ಸ್ಥಾನಗಳನ್ನು ಅಲಂಕರಿಸಿದ್ದಾರೆ. ರಜಾ ದಿನಗಳಲ್ಲಿ ಇಲ್ಲಿ ಉಚಿತ ಹೊಲಿಗೆ ತರಬೇತಿಯನ್ನೂ ನೀಡುತ್ತಿದ್ದರು.

ಶ್ರೀಗಳಿಗೆ 1976ರಲ್ಲಿ ಆಂಧ್ರಪ್ರದೇಶದ ಪುಟ್ಟಪರ್ತಿಯ ಭಗವಾನ್ ಶ್ರೀ ಸತ್ಯಸಾಯಿಬಾಬಾರು ಅಭಿವನ ದತ್ತಾತ್ರೇಯ ಬಿರುದು ನೀಡಿ ಸನ್ಮಾನಿಸಿದ್ದರು. 2001ರಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ವೀರ ಸನ್ಯಾಸಿ ಎಂದು ಉಪಾದಿಸಿ ಸನ್ಮಾನಿಸಿದ್ದರು. 1996ರಲ್ಲಿ ಕೊಲ್ಯ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಕ್ತರೆಲ್ಲರು ಸನ್ಮಾನಿಸಿ ರಾಜಯೋಗಿ ಬಿರುದನ್ನು ನೀಡಿದ್ದರು.

11 ವರ್ಷಗಳ ಹಿಂದೆಯೇ ತನ್ನ ಸಮಾಧಿ ನಿರ್ಮಾಣ

ಕೊಲ್ಯ ರಮಾನಂದ ಶ್ರೀಗಳು 2005ರ ಜುಲೈ 7ರಂದೇ ಮಠದ ಒಳಗಿನ ಕೋಣೆಯಂದರಲ್ಲಿ ತಮ್ಮ ಸಮಾಧಿಯನ್ನು ಕೊರೆಸಿದ್ದರು. ಇಂದು ಅದೇ ಸಮಾಧಿಯಲ್ಲಿ ಸ್ವಾಮೀಜಿಯವರ ಅಂತಿಮ ವಿಧಿವಿಧಾನಗಳು ನಡೆಯಲಿವೆ

ಗಣ್ಯರಿಂದ ಸಂತಾಪ

ಸ್ವಾಮೀಜಿಯವರ ನಿಧನಕ್ಕೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ, ಶಾಸಕರಾದ ಜೆ.ಆರ್.ಲೋಬೋ, ಮೊಯ್ದಿನ್ ಬಾವ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಮೂಡ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಸಂತಾಪ ಸೂಚಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ