ಟಿ.ಆರ್.ಪೂಂಜಾ
ಮಂಗಳೂರು, ಡಿ.18 : ಜೆಪ್ಪಿನಮೊಗರು ತಾರ್ದೂಲ್ಯ ನಿವಾಸಿ ಮುಂಬೈಯಲ್ಲಿ ಉದ್ಯಮಿಯಾಗಿರುವ ಟಿ.ರಘು ಪೂಂಜಾ (ಟಿ.ಆರ್. ಪೂಂಜಾ) (84) ಡಿ.17ರಂದು ಬುಧವಾರ ಮುಂಬೈಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರಿ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕೈಗಾರಿಕೋದ್ಯಮಿಯಾಗಿದ್ದ ಇವರು ರಪ್ತು ವ್ಯವಹಾರದಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು. ಕೊಡುಗೈದಾನಿಯಾಗಿದ್ದ ಇವರು, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ತೊಡಗಿಸಿಕೊಂಡಿದ್ದರು. ಹರೇಕಳ ಸಂಪಿಗೆದಡಿ ಮನೆತನದ ಹಿರಿಯರಾಗಿದ್ದ ಅವರು ಸಂಪಿಗೆದಡಿ ಅರ್ಧನಾರೀಶ್ವರ ದೇವಸ್ಥಾನದ ಪುನರ್ ನಿರ್ಮಾಣದಲ್ಲಿ ತೊಡಗಿಸಿಕೊಂಡು ಅದರ ಗೌರವಾಧ್ಯಕ್ಷರಾಗಿ ದೇವಸ್ಥಾನಕ್ಕೆ ಸ್ಥಳದಾನ ನೀಡಿದ್ದರು. ಕೊರೊನಾ ಸಂದರ್ಭದಲ್ಲಿ ಮುಂಬೈಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ವೈದ್ಯಕೀಯ, ಆರ್ಥಿಕ ಸಹಕಾರ ನೀಡಿದ್ದ ಅವರು ಮಂಗಳೂರು ಮತ್ತು ಮುಂಬೈಯಲ್ಲಿ ಅನೇಕ ಸಂಘ ಸಂಸ್ಥೆಗಳಿಗೆ, ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಿಗೆ ಆರ್ಥಿಕ ಸಹಕಾರ ನೀಡಿದ್ದರು. ಮೃತರ ಅಂತ್ಯ ಸಂಸ್ಕಾರ ಡಿ.19ರಂದು ಮುಂಬೈಯ ಮುಲುಂದ್ ನಲ್ಲಿ ನಡೆಯಲಿದೆ.
ಇವರ ನಿಧನಕ್ಕೆ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ವಿಜಯ ಕುಮಾರ್ ಶೆಟ್ಟಿ, ಶ್ರೀ ದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ್ ಶೆಟ್ಟಿ, ಎಂ.ಜಿ.ಹೆಗ್ಡೆ, ಟಿ.ಕರುಣಾಕರ ಶೆಟ್ಟಿ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.