ರೈಲ್ವೆಯಿಂದ ‘ಬೈಂಸ್ ಬಚಾವೋ!’, ‘ಅದೃಷ್ಟ’ದ ನೆಪಕ್ಕೆ ಆಮೆಗಳು ಬಲಿ!

Update: 2016-05-23 18:30 GMT

ರೈಲು ಓಡಾಟಕ್ಕೆ ಎಮ್ಮೆಗಳ ಭಯ
ಪ್ರತಿಷ್ಠಿತ ರೈಲುಗಳಲ್ಲಿ ರಾಜಧಾನಿ ಎಕ್ಸ್‌ಪ್ರೆಸ್‌ಗೆ ತನ್ನದೇ ಆದ ಮಹತ್ವವಿದೆ. ಆದರೆ ಈ ದಿನಗಳಲ್ಲಿ ರಾಜಧಾನಿ ಎಕ್ಸ್‌ಪ್ರೆಸ್‌ಗೆ ಎಮ್ಮೆಗಳಿಂದ ಭಯ ಶುರುವಾಗಿದೆಯಂತೆ. ರೈಲು ಹಳಿಗಳಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಎಮ್ಮೆಗಳ ಕಾರಣ ಕಿರಿಕಿರಿ ಉಂಟಾಗಿದೆಯಂತೆ. ಮುಂಬೈಯ ಲೋಕಲ್ ರೈಲುಗಳಿಗೆ ಎಮ್ಮೆಗಳು ಎದುರಾದರೆ ಬ್ರೇಕ್ ಹಾಕುವುದಕ್ಕೆ ಅಷ್ಟೊಂದು ಕಷ್ಟವಾಗಲಾರದು. ಆದರೆ ಅತಿವೇಗದಲ್ಲಿ ಓಡಾಡುವ ರಾಜಧಾನಿ ಎಕ್ಸ್ ಪ್ರೆಸ್‌ಗೆ ಬ್ರೇಕ್ ಹಾಕುವುದು ಅಷ್ಟು ಸುಲಭವಿಲ್ಲ. ಹೀಗಾಗಿ ರೈಲು ಹಳಿಗಳಲ್ಲಿ ಎಮ್ಮೆಗಳು ಸಾವನ್ನಪ್ಪುವ ದೃಶ್ಯಗಳು ಹೆಚ್ಚುತ್ತಿವೆ.
ರೈಲು ಹಳಿಗಳಲ್ಲಿ ಜಾನುವಾರುಗಳು ಎದುರಾಗುವ ಘಟನೆಗಳ ಅಂಕಿಅಂಶ ಗಮನಿಸಿದರೆ ಕಳೆದ ಮೂರು ತಿಂಗಳಿನಲ್ಲಿ 50ರಷ್ಟು ಎಮ್ಮೆಗಳು ರೈಲು ಹಳಿಯಲ್ಲಿ ಸಾವನ್ನಪ್ಪಿವೆ. ಈ ಎಲ್ಲಾ ಘಟನೆಗಳು ವಿರಾರ್-ಡಹಾಣೂ ರೋಡ್ ಸ್ಟೇಷನ್‌ಗಳ ನಡುವೆ ಕಂಡು ಬಂದಿವೆ. ಈ ಘಟನೆಗಳಿಂದ ರೋಸಿ ಹೋದ ರೈಲ್ವೆ ಪೊಲೀಸರು ತಬೇಲಾ (ಎಮ್ಮೆ ಹಟ್ಟಿಗಳ) ಮಾಲಕರ ಜೊತೆ ಬೈಠಕ್ ನಡೆಸಿ ಜಾಗೃತ ಅಭಿಯಾನ ನಡೆಸುತ್ತಿದ್ದಾರೆ. ಇದರಲ್ಲಿ ವಿರಾರ್-ಡಹಾಣೂ ಗ್ರಾಮಗಳಲ್ಲಿ ಬರುವ ಸರಪಂಚ ಸಹಿತ ಅನ್ಯ ತಬೇಲಾ ಮಾಲಕರೂ ಭಾಗವಹಿಸಿದ್ದಾರೆ. ದುರ್ಘಟನೆಗಳು ನಡೆದ ನಂತರ ರೈಲು ಓಡಾಟಕ್ಕೆ ಇನ್ನಷ್ಟು ವಿಳಂಬವಾಗುತ್ತದೆ. ಪಾಲ್‌ಘರ್, ಕೆಲ್ವೆ, ಬೊಯ್ಸರ್ ಮತ್ತು ವಾನ್‌ಗಾಂವ್ ವಿಭಾಗಗಳಲ್ಲಿ ಅತಿ ಹೆಚ್ಚಿನ ಜಾನುವಾರು ದುರ್ಘಟನೆಗಳು ನಡೆಯುತ್ತವೆ. ಈ ರೈಲು ಹಳಿಗಳ ಅಕ್ಕ ಪಕ್ಕ ತಬೇಲಾಗಳಿವೆ. ಹೀಗಾಗಿ ಕೆಲವೊಮ್ಮೆ ಎಮ್ಮೆಗಳೂ ರೈಲು ಹಳಿಗಳತ್ತ ಬರುವುದಿದೆ. ಪಶ್ಚಿಮ ರೈಲ್ವೆ ಆರ್.ಪಿ.ಎಫ್. ಇದೀಗ ‘ಭೈಂಸ್ ಬಚಾವೋ’ ಅಭಿಯಾನ (ಎಮ್ಮೆಗಳನ್ನು ಉಳಿಸಿರಿ) ಹಮ್ಮಿಕೊಂಡಿದೆ ಎಂದು ರೈಲ್ ಮಂಡಲ ಸುರಕ್ಷಾ ಆಯುಕ್ತ ಆನಂದ ವಿಜಯ್ ಝಾ ತಿಳಿಸಿದ್ದಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆಯಂತೆ.

* * *

ಮಂತ್ರಾಲಯದಲ್ಲಿ ಮಂತ್ರಿಗಳಿಲ್ಲ!
ಮಹಾರಾಷ್ಟ್ರ ಸರಕಾರದ ಆಡಳಿತ ಕೇಂದ್ರ ಮಂತ್ರಾಲಯದಲ್ಲಿ ಈಗ ರಜಾ ಕಾಲ. ಹೀಗಾಗಿ ಮಂತ್ರಿಗಳಿಲ್ಲದ ಮಂತ್ರಾಲಯ ಈಗ ಬಿಕೋ ಅನ್ನುತ್ತಿದೆ. ಈ ಮಂತ್ರಿಗಳ ಕಚೇರಿಯ ಎದುರೂ ಜನರಿಲ್ಲ. ಸಿಬ್ಬಂದಿಯೂ ರಜೆ ಮೇಲೆ ತೆರಳಿದ್ದಾರೆ. ಒಳಗೆ ಪ್ರವೇಶಕ್ಕಾಗಿ ಪಾಸ್ ತೆಗೆದುಕೊಳ್ಳುವ ಜನರ ಕ್ಯೂ ಕೂಡಾ ಇಲ್ಲ. ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಮಂತ್ರಿಗಳ ಕಚೇರಿಯ ಬಾಗಿಲು ತೆರೆದಿದೆ. ಅನೇಕ ಮಂತ್ರಿಗಳು ತಮ್ಮ ತಮ್ಮ ಕ್ಷೇತ್ರಗಳ ಬರಗಾಲ ಪೀಡಿತ ಜನರನ್ನು ಸಂತೈಸಲು ತೆರಳಿದ್ದಾರೆ. ಹೇಗೂ ಶಾಲಾ-ಕಾಲೇಜುಗಳಿಗೂ ರಜೆ ತಾನೆ. ದೊಡ್ಡ ಸಂಖ್ಯೆಯಲ್ಲಿ ಮಂತ್ರಿಗಳ-ಕಾರ್ಯದರ್ಶಿಗಳ ಕ್ಯಾಬಿನ್ ಬಾಗಿಲು ಲಾಕ್ ಆಗಿದೆ. ಅತ್ತ ಬೇಸಿಗೆಯ ಬಿಸಿಗೂ ರಸ್ತೆಯಲ್ಲಿ ಓಡಾಡುವುದು ಕಷ್ಟವಾಗುತ್ತಿದೆ. ಇತ್ತ ಮಂತ್ರಾಲಯ ನೌಕರರ ಮೀಟಿಂಗ್ ತಾಣವಾದ ಕ್ಯಾಂಟೀನ್ ಕೂಡಾ ಬಿಕೋ ಅನ್ನುತ್ತಿದೆ. ಸದ್ಯಕ್ಕೆ ಒಬ್ಬ ವೈಟರ್ ಕಾಣಿಸುತ್ತಿದ್ದಾನೆ. ಕಾರಣ ಕ್ಯಾಂಟೀನ್‌ನ ಸಿಬ್ಬಂದಿಯೂ ರಜೆ ಮೇಲೆ ತೆರಳಿದ್ದಾರೆ.
ಮಂತ್ರಾಲಯದ ಒಳಗಡೆ ಪ್ರತೀದಿನ ಆಯೋಜಿಸಲಾಗುತ್ತಿದ್ದ ಸುದ್ದಿಗೋಷ್ಠಿ ಕೂಡಾ ಈಗ ನಡೆಯುತ್ತಿಲ್ಲ. ಹೀಗಾಗಿ ಮಂತ್ರಾಲಯದ ವರದಿ ಮಾಡುತ್ತಿರುವ ಪತ್ರಕರ್ತರಿಗೂ ಸ್ವಲ್ಪಬಿಡುವು. ಸಾಧ್ವಿ ಪ್ರಜ್ಞಾ ಬಿಡುಗಡೆಗೆ ಪ್ರತಿಕ್ರಿಯೆ ನೀಡಲೂ ಪ್ರಮುಖ ಮಂತ್ರಿಗಳು ಕಂಡು ಬರಲಿಲ್ಲ.
ಮಂಗಳವಾರ ಮಂತ್ರಿ ಮಂಡಲದ ಬೈಠಕ್‌ನ ದಿನವಾಗಿರುತ್ತದೆ. ಮುಖ್ಯಮಂತ್ರಿ ಫಡ್ನವೀಸ್ ಅವರು ಮಂತ್ರಿಗಳಿಗೆ ಹಾಜರಿ ಇರುವಂತೆ ಕಠಿಣ ಶಬ್ದಗಳಿಂದ ತಿಳಿಸಿದರೂ ಸದ್ಯಕ್ಕೆ ಪ್ರಭಾವ ಮಾತ್ರ ಬೀರಿದಂತೆ ಕಾಣುತ್ತಿಲ್ಲ.
* * *
ಗುಡ್‌ಲಕ್ ಸ್ಟಾರ್ ಆಮೆಗಳ ಸಂಕಟ
ಅಂಧವಿಶ್ವಾಸ ಹಳ್ಳಿಗಳಲ್ಲಿ ಹೆಚ್ಚು ಎನ್ನುವುದು ಮಾಮೂಲಿ ಮಾತು. ಆದರೆ ನಗರ ಪ್ರದೇಶಗಳ ವಿದ್ಯಾವಂತರಲ್ಲೂ ಅದಕ್ಕಿಂತ ಹೆಚ್ಚಿನ ಅಂಧವಿಶ್ವಾಸಗಳನ್ನು ಈ ದಿನಗಳಲ್ಲಿ ಕಾಣಬಹುದಾಗಿದೆ. ಮುಂಬೈಯಂತಹ ಮಹಾನಗರದಲ್ಲಿ ಅನೇಕರು ಇಂದು ಸ್ಟಾರ್ ಆಮೆಗಳು ತಮ್ಮ ಗುಡ್‌ಲಕ್ ಎಂದು ತಿಳಿಯುತ್ತಿದ್ದಾರೆ. ಜನರಲ್ಲಿ ಸ್ಟಾರ್ ಆಮೆಗಳ ಬಗ್ಗೆ ಹೆಚ್ಚುತ್ತಿರುವ ಕ್ರೇಜ್‌ನ ಕಾರಣ ಮುಂಬೈಯಲ್ಲಿ ಈ ಸಮಯ ಸ್ಟಾರ್ ಆಮೆಗಳ ಕಳ್ಳ ಸಾಗಾಣೆ ವರದಿಗಳು ಕೇಳಿ ಬಂದಿವೆ. ಮನುಷ್ಯರಿಗೆ ಗುಡ್‌ಲಕ್ ಆಗಿರುವ ಈ ಸ್ಟಾರ್ ಆಮೆಗಳಿಗೆ ಈಗ ಬ್ಯಾಡ್‌ಲಕ್ ಕಾಲ.
ವೈಲ್ಡ್ ಲೈಫ್ ಕ್ರೈಂ ಕಂಟ್ರೋಲ್ ಬ್ಯೂರೋ ಈ ತಿಂಗಳಲ್ಲಿ ಮುಂಬೈ ಮತ್ತು ಥಾಣೆಯಲ್ಲಿ ಸ್ಟಾರ್ ಆಮೆಗಳ ಕಳ್ಳ ಸಾಗಾಣಿಕೆಯ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿದೆ. ಇಂದು ಸ್ಟಾರ್ ಆಮೆ ಒಂದಕ್ಕೆ ಮೂವತ್ತು ಸಾವಿರ ರೂಪಾಯಿ ತನಕ ಕೊಟ್ಟು ಖರೀದಿಸುವವರಿದ್ದಾರೆ.

ಮೇ ತಿಂಗಳ ಆರಂಭದಲ್ಲಿ ವೈಲ್ಡ್ ಲೈಫ್ ಕ್ರೈಂ ಕಂಟ್ರೋಲ್ ಬ್ಯೂರೋ ಮತ್ತು ಪ್ಲಾಂಟ್ ಆ್ಯಂಡ್ ವೆಲ್ಫೇರ್ ಸೊಸೈಟಿ ತಮ್ಮ ಜಂಟಿ ಕಾರ್ಯಾಚರಣೆಯಲ್ಲಿ ಥಾಣೆ, ಮುಂಬೈಯ ಬಾಂದ್ರಾ ಮತ್ತು ವರ್ಸೋವಾ ಕ್ಷೇತ್ರದಲ್ಲಿ ನಡೆಯುತ್ತಿರುವ ಸ್ಟಾರ್ ಆಮೆಗಳ ಕಳ್ಳ ಸಾಗಾಣೆೆಯನ್ನು ಬೆಳಕಿಗೆ ತರಲಾಯಿತು. ಹಾಗೂ ಹತ್ತೊಂಬತ್ತು ಆಮೆಗಳನ್ನು ಮುಕ್ತಗೊಳಿಸಲಾಯಿತು. ವೈಲ್ಡ್ ಲೈಫ್ ಕ್ರೈಂ ಕಂಟ್ರೋಲ್ ಬ್ಯೂರೋದ ಪಶ್ಚಿಮ ವಿಭಾಗದ ಉಪಸಂಚಾಲಕ ಎಂ. ಮಾರ್ನಕೋ ಅವರ ಅಧ್ಯಕ್ಷತೆಯಲ್ಲಿನ ಈ ಕಾರ್ಯಾಚರಣೆಯಲ್ಲಿ ಇಬ್ಬರು ಸ್ಮಗ್ಲರ್‌ಗಳನ್ನು ಬಂಧಿಸಲಾಗಿದೆ. ಪ್ಲ್ಯಾಂಟ್ಸ್ ಆ್ಯಂಡ್ ಎನಿಮಲ್ ವೆಲ್ಫೇರ್ ಸೊಸೈಟಿಯ ಸುನೀಶ್ ಸುಬ್ರಹ್ಮಣ್ಯಂ ಅವರ ಪ್ರಕಾರ ದಕ್ಷಿಣ ಭಾರತದಿಂದ ಸ್ಟಾರ್ ಆಮೆಗಳನ್ನು ಮುಂಬೈಗೆ ತರಲಾಗುತ್ತಿದೆ. ರಸ್ತೆ ಮತ್ತು ರೈಲು ಮಾರ್ಗವನ್ನು ಇಲ್ಲಿ ಬಳಸುತ್ತಿದ್ದಾರೆ. ಜನರಲ್ಲಿರುವ ಅಂಧ ವಿಶ್ವಾಸದ ಲಾಭವನ್ನು ಈ ಸ್ಮಗ್ಲರ್‌ಗಳು ಬಳಸಿಕೊಳ್ಳುತ್ತಿದ್ದಾರೆ. ರಾತ್ರೋ ರಾತ್ರಿಗೆ ಶ್ರೀಮಂತರಾಗುವ ಇಚ್ಛೆ ಇರಿಸುವ ಈ ಅಂಧವಿಶ್ವಾಸದ ಜನರು ಕೇಳಿದಷ್ಟು ಸ್ಮಗ್ಲರ್‌ಗಳಿಗೆ ಹಣ ನೀಡಿ ಈ ಸ್ಟಾರ್ ಆಮೆಗಳನ್ನು ಖರೀದಿಸುತ್ತಿದ್ದಾರಂತೆ.
ವೈಲ್ಡ್ ಲೈಫ್ ಪ್ರೊಟೆಕ್ಷನ್ ಆ್ಯಕ್ಟ್ 1972ರ ಅನುಸಾರ ಸ್ಟಾರ್ ಆಮೆಗಳ ಮಾರಾಟ ಖರೀದಿ ಹಾಗೂ ಅಕ್ರಮವಾಗಿ ಇರಿಸುವುದು ಕಾನೂನಿನಂತೆ ಅಪರಾಧವಾಗಿದೆ. ಸಂಬಂಧಿಸಿದ ವ್ಯಕ್ತಿಗೆ 3 ವರ್ಷದ ಸಜೆ ಕೂಡಾ ವಿಧಿಸಬಹುದಾಗಿದೆ.
* * *
ವರ್ಗಾವಣೆಯಾದರೂ ಹೋಗಲು ಒಪ್ಪದ ಪೊಲೀಸರು

ಮುಂಬೈ ಸಮೀಪದ ನವಿಮುಂಬೈಯ ಮಾಜಿ ಪೊಲೀಸ್ ಆಯುಕ್ತ ಪ್ರಭಾತ್ ರಂಜನ್ ಅವರು ಹಿಂದೆ ಕೆಲವು ಪೊಲೀಸರನ್ನು ವರ್ಗಾವಣೆ ಮಾಡಿದ್ದರು. ಆದರೆ ಈ ಪೊಲೀಸರು ಮತ್ತೆ ತಮ್ಮ ಮೊದಲಿನ ಠಾಣೆಗಳಲ್ಲೇ ಡ್ಯೂಟಿ ಮಾಡುತ್ತಿದ್ದು ವರ್ಗಾವಣೆಯಾದ ಸ್ಥಳಕ್ಕೆ ಹೋಗಿರಲೇ ಇಲ್ಲ. ಇದು ತಿಳಿಯುತ್ತಲೇ ಇಂತಹ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ತಕ್ಷಣ ವರ್ಗಾವಣೆಯಾದ ಸ್ಥಳಕ್ಕೆ ಹೋಗುವಂತೆ ಆದೇಶ ಜಾರಿಗೊಳಿಸಬೇಕಾಯಿತು. ಪೊಲೀಸ್ ಆಯುಕ್ತಾಲಯದಿಂದ ದೊರೆತ ಮಾಹಿತಿಯಂತೆ ಸುಮಾರು 50 ರಿಂದ 60 ಪೊಲೀಸರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ಈ ಪೊಲೀಸರು ಅಲ್ಲಿಗೆ ಹೋಗಿರಲೇ ಇಲ್ಲ. ಈ ಮಾಹಿತಿ ಹೊಸ ಪೊಲೀಸ್ ಆಯುಕ್ತ ಹೇಮಂತ್ ನಗ್‌ರಾಲೆ ಅವರಿಗೆ ತಿಳಿಯುತ್ತಲೇ ಈ ಪೊಲೀಸರನ್ನು ತೀವ್ರ ತರಾಟೆಗೆ ಎಳೆದರು. ತಮ್ಮ ಹೊಸ ಹುದ್ದೆ ಸ್ವೀಕರಿಸುತ್ತಲೇ ಆಯುಕ್ತ ಹೇಮಂತ್ ನಗ್‌ರಾಲೆ ಅವರು ಎಲ್ಲ ಅಧಿಕಾರಿಗಳ ಬೈಠಕ್ ಕರೆದರು. ಅಲ್ಲಿ ಅಧಿಕಾರಿಗಳ ವರ್ಗಾವಣೆ ಸುದ್ದಿ ತಿಳಿದು ಬಂದಿತು ಹಾಗೂ ಈ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ಟೀಕೆ ವ್ಯಕ್ತವಾಯಿತು. ಮಾಜಿ ಪೊಲೀಸ್ ಆಯುಕ್ತ ಪ್ರಭಾತ್ ರಂಜನ್‌ರು 114 ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದರು. ಅವರಲ್ಲಿ 50-60ರಷ್ಟು ಪೊಲೀಸರು ಹೊಸ ಸ್ಥಳಕ್ಕೆ ಹೋಗಲೇ ಇಲ್ಲ. ತಾವು ಇಲ್ಲೇ ಇರ್ತೇವೆ ಎಂದು ಕೆಲವರು ಉಪ ಆಯುಕ್ತರಿಗೆ ಪತ್ರವನ್ನೂ ನೀಡಿದ್ದರಂತೆ!
* * *
ನೈಜೀರಿಯನ್‌ಗಳ ಅಪರಾಧ ಪೃವೃತ್ತಿ
ಆಗಾಗ ಪತ್ರಿಕೆಗಳಲ್ಲಿ ನೈಜೀರಿಯನ್‌ಗಳ ಒಂದಲ್ಲ ಒಂದು ಸುದ್ದಿ ಬರುತ್ತಲೇ ಇರುತ್ತದೆ. ಅದು ಮುಂಬೈ ಅಥವಾ ಬೆಂಗಳೂರು ಕೂಡಾ ಇರಬಹುದು. ಇಮೇಲ್ ವಂಚನೆ ಅಥವಾ ಚರಸ್ ಮಾರಾಟ ದಂಧೆಯಲ್ಲಿ ಈ ನೈಜೀರಿಯನ್‌ಗಳ ಪಾತ್ರ ಆಗಾಗ ಚರ್ಚೆಯಾಗುತ್ತದೆ. ಮುಂಬೈಯಲ್ಲಿ ಅನಧಿಕೃತ ರೂಪದಿಂದ ಇಂದು ಹೆಚ್ಚಿನ ಸಂಖ್ಯೆಯಲ್ಲಿ ನೈಜೀರಿಯನ್‌ಗಳು ಓಡಾಡುತ್ತಿದ್ದಾರೆ. ಅವರ ಮುಖ್ಯ ತಾಣ ಮುಂಬೈ ಆಗುತ್ತಿರುವುದಾಗಿ ಹೇಳಲಾಗಿದೆ. ಆನ್‌ಲೈನ್ ವಂಚನೆಯಲ್ಲಿ ಕೇಳಿ ಬರುವ ಮುಂಚೂಣಿಯ ಹೆಸರು ಇವರದ್ದೇ.
ಇದೀಗ ಮುಂಬೈ ಪೊಲೀಸರು 16 ಪುಟಗಳ ಒಂದು ವರದಿಯನ್ನು ತಯಾರಿಸಿದ್ದಾರೆ. ಇದರಲ್ಲಿ ಒಂದು ವಿಶೇಷತೆ ಇದೆ. ಮುಂಬೈಗೆ ಬರುವ ನೈಜೀರಿಯನ್‌ಗಳು ಉದ್ದೇಶಪೂರ್ವಕವಾಗಿ ತಮ್ಮ ರಣನೀತಿಯಂತೆ ಪೊಲೀಸರಿಂದ ಬಂಧಿಸಲ್ಪಟ್ಟು ಜೈಲು ಸೇರುತ್ತಾರೆ. ಅದಕ್ಕಾಗಿ ಏನಾದರೂ ಒಂದು ಘಟನೆ ಸೃಷ್ಟಿಸುತ್ತಾರೆ. ಹಾಗೂ ಅಲ್ಲಿಂದ ಯಾವ ರೀತಿ ಹೊರಬರಬಹುದು ಎಂದು ಮೊದಲೇ ಅದಕ್ಕೆ ತಯಾರಿ ಕೂಡಾ ನಡೆಸುತ್ತಾರೆ. ಜೈಲ್‌ಗೆ ಸೇರುವ ಉದ್ದೇಶ ಅಂದರೆ ಒಳಗಿರುವ ಅಪರಾಧ ಮನೋಭಾವದ ಜನರಿಂದ ಯಾವೆಲ್ಲ ರೀತಿಯಲ್ಲಿ ವಂಚನೆಗಳನ್ನು ನಡೆಸಬಹುದು ಎಂದು ತರಬೇತಿ ಪಡೆಯುವುದಾಗಿದೆ. ಅರ್ಥಾತ್ ಫ್ರಾಡ್‌ನ ತರಬೇತಿ ಪಡೆಯುವುದಕ್ಕೆ ಇತರ ನೈಜೀರಿಯನ್‌ಗಳ ಭೇಟಿ!
ಇತ್ತೀಚೆಗೆ ದಕ್ಷಿಣ ಮುಂಬೈ ಪೊಲೀಸರ ಒಂದು ತಂಡ ಮಸ್ಜಿದ್ ಬಂದರ್ ಮತ್ತು ಭೈಕಲಾದಲ್ಲಿ ದಾಳಿ ನಡೆಸಿ ಕೊಕೇನ್ ಮಾರಾಟ ಮಾಡುತ್ತಿದ್ದ ನಾಲ್ವರು ನೈಜೀರಿಯನ್‌ಗಳನ್ನು ಸಿನೆಮಾ ಮಾದರಿಯಲ್ಲಿ ಬಂಧಿಸಿದ್ದರಲ್ಲವೇ? ಅವರ ತನಿಖೆಯಲ್ಲಿ ಈ ಮಾತು ಬೆಳಕಿಗೆ ಬಂದಿದೆ. ಬಂಧಿತ ನಾಲ್ವರು ನೈಜೀರಿಯನ್‌ಗಳೂ ಯಾವುದೇ ದಾಖಲೆಗಳಿಲ್ಲದೆ ಮುಂಬೈಯಲ್ಲಿ ವಾಸಿಸುತ್ತಿದ್ದರು.
ಬಂಧಿತ ನೈಜೀರಿಯನ್‌ಗಳು ತಮ್ಮ ಬಿಡುಗಡೆಗಾಗಿ ವಕೀಲರಿಗೆ ಮೊದಲೇ ಹಣವನ್ನು ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದರು. ಎಲ್ಲರಿಗೂ ಅವರವರ ಏರಿಯಾ ಯಾವುದೆಂದೂ ತಮ್ಮಿಳಗೆ ಹಂಚಿಕೊಳ್ಳುತ್ತಾರೆಂದೂ ವರದಿಯಲ್ಲಿ ಹೇಳಲಾಗಿದೆ. ಮುಂಬೈ ಪೊಲೀಸ್ ಕಮಿಶನರ್ ದತ್ತಾ ಪಡ್ಸಲ್ಗೀಕರ್ ಅವರು ಈ ವರದಿಯ ಅಧ್ಯಯನ ಮಾಡಲಾಗುತ್ತಿದೆ ಹಾಗೂ ಮುಂಬೈ ಮತ್ತು ಮಹಾರಾಷ್ಟ್ರದ ಇತರ ಕ್ಷೇತ್ರಗಳಲ್ಲಿರುವ ಅಕ್ರಮ ನೈಜೀರಿಯನ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಸ್ತಾವ ತರಲಾಗುತ್ತಿದೆ ಎಂದಿದ್ದಾರೆ.
ವರದಿಯಲ್ಲಿ ಇನ್ನೊಂದು ಸಂಗತಿಯೂ ಇದೆ. ಈ ನೈಜೀರಿಯನ್‌ಗಳು ಅಕ್ರಮವಾಗಿ ವಾಸಿಸುತ್ತಿದ್ದಾರೆಂದು ತಿಳಿದು ಬಂದ ನಂತರ ಇವರ ದೇಶಕ್ಕೆ ವಾಪಸು ಕಳುಹಿಸುವ ಬಗ್ಗೆ ಯಾವುದೇ ನಿಯಮ ಇಲ್ಲವಂತೆ. ಇದು ಮುಂಬೈ ಪೊಲೀಸರಿಗೆ ತಲೆನೋವಿನ ಸಂಗತಿಯಾಗಿದೆ.
* * *

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News