ಮಾಜಿ ಚಾಂಪಿಯನ್ ಕೆಕೆಆರ್ -ಸನ್‌ರೈಸರ್ಸ್‌ ಹಣಾಹಣಿ

Update: 2016-05-24 19:01 GMT

ಹೊಸದಿಲ್ಲಿ, ಮೇ 24: ಎರಡು ಬಾರಿ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್‌ ತಂಡ ಇಲ್ಲಿ ಬುಧವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಉಭಯ ತಂಡಗಳು ಟೂರ್ನಮೆಂಟ್‌ನಲ್ಲಿ 16 ಅಂಕಗಳನ್ನು ಗಳಿಸಿ ಮೂರು ಹಾಗೂ ನಾಲ್ಕನೆ ಸ್ಥಾನದೊಂದಿಗೆ ಎಲಿಮಿನೇಟರ್ ತಲುಪಿತ್ತು.
 ಈ ಆವೃತ್ತಿಯಲ್ಲಿ ಕೆಕೆಆರ್ ಮತ್ತು ಸನ್‌ರೈಸರ್ಸ್‌ ತಂಡ ಎರಡು ಬಾರಿ ಮುಖಾಮುಖಿಯಾಗಿತ್ತು. ಎರಡು ಪಂದ್ಯಗಳಲ್ಲಿ ಕೆಕೆಆರ್ ಜಯ ಗಳಿಸಿತ್ತು. ಕೆಕೆಆರ್ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ವಿರುದ್ಧ ಏಳು ವಿಕೆಟ್‌ಗಳ ಜಯ ಗಳಿಸಿತ್ತು. ಎರಡನೆ ಪಂದ್ಯದಲ್ಲಿ 22 ರನ್ ಅಂತರದಲ್ಲಿ ಜಯ ಗಳಿಸಿತ್ತು. ಈ ಗೆಲುವು ಕೆಕೆಆರ್‌ಗೆ ಎಲಿಮಿನೇಟರ್ ಹಾದಿಯನ್ನು ಸುಗಮಗೊಳಿಸಿತ್ತು.
 2011, 2012 , 2014ರಲ್ಲೂ ಕೆಕೆಆರ್ ತಂಡ ಸನ್‌ರೈಸರ್ಸ್‌ ವಿರುದ್ಧ ಗೆಲುವು ದಾಖಲಿಸಿತ್ತು. ಈ ಕಾರಣದಿಂದಾಗಿ ಕೆಕೆಆರ್ ಈ ಪಂದ್ಯದಲ್ಲೂ ಗೆಲುವಿನ ವಿಶ್ವಾಸದಲ್ಲಿದೆ. ಆದರೆ ಮೂರನೆ ಬಾರಿ ಪ್ರಶಸ್ತಿ ಗೆಲ್ಲುವ ಪ್ರಯತ್ನವನ್ನು ಕೊನೆಗೊಳಿಸುವುದು ಸನ್‌ರೈಸರ್ಸ್‌ ಯೋಜನೆಯಾಗಿದೆ. ಕೆಕೆಆರ್‌ನ್ನು ಸೋಲಿಸಲು ಸನ್‌ರೈಸರ್ಸ್‌ಗೆ ಇನ್ನೊಂದು ಅವಕಾಶ.
ಗೌತಮ್ ಗಂಭೀರ್ ನಾಯಕತ್ವದ ಕೆಕೆಆರ್ ತಂಡ ಕಠಿಣ ಪ್ರಯತ್ನದ ಮೂಲಕ ಎಲಿಮಿನೇಟರ್‌ಗೆ ತೇರ್ಗಡೆಯಾಗಿದೆ. ತಂಡದ ಯಶಸ್ಸಿನಲ್ಲಿ ಗಂಭೀರ್ ದೊಡ್ಡ ಕೊಡುಗೆ ನೀಡಿದ್ದಾರೆ.
 ಗಂಭೀರ್ ಅವರು ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗದ ಹಿನ್ನೆಲೆಯಲ್ಲಿ ಆಘಾತಗೊಂಡಿದ್ದಾರೆ. ಝಿಂಬಾಬ್ವೆ ಮತ್ತು ವೆಸ್ಟ್‌ಇಂಡೀಸ್‌ ಸರಣಿಗೆ ಸೋಮವಾರ ನಡೆದ ಟೀಮ್ ಇಂಡಿಯಾಕ್ಕೆ ಆಟಗಾರರ ಆಯ್ಕೆ ವೇಳೆ ಗೌತಮ್ ಗಂಭೀರ್ ಅವರನ್ನು ಪರಿಗಣಿಸಲಾಗಿಲ್ಲ. ಇದರಿಂದ ಗಂಭೀರ್ ಬಳಷ್ಟು ನೊಂದುಕೊಂಡಿದ್ದಾರೆ. ಈ ಕಾರಣದಿಂದಾಗಿ ಮುಂದಿನ ಪಂದ್ಯಗಳಲ್ಲಿ ತನ್ನ ಬ್ಯಾಟ್‌ನ ಮೂಲಕ ತನ್ನ ಸಾಮರ್ಥ್ಯವನ್ನು ಆಯ್ಕೆ ಸಮಿತಿಗೆ ತೋರಿಸಿಕೊಡಲು ಯೋಚಿಸುತ್ತಿದ್ದಾರೆ.
ಗಂಭೀರ್ 14 ಪಂದ್ಯಗಳಲ್ಲಿ 473 ರನ್ ಗಳಿಸಿದ್ದಾರೆ. ಐದು ಅರ್ಧಶತಕ ಗಳಿಸಿದ್ದಾರೆ. ಅವರೊಂದಿಗೆ ಇನಿಂಗ್ಸ್ ಆರಂಭಿಸುತ್ತಿದ್ದ ರಾಬಿನ್ ಉತ್ತಪ್ಪ ಅವರು 383 ರನ್ ಮತ್ತು ಆಲ್‌ರೌಂಡರ್ ಯೂಸುಫ್ ಪಠಾಣ್ 359 ರನ್ ಗಳಿಸಿದ್ದರೂ ಆಯ್ಕೆ ಸಮಿತಿ ಅವರನ್ನು ಕಡೆಗಣಿಸಿದೆ.
ಕೆಕೆಆರ್‌ನ ಯುವ ಆಟಗಾರ ಮನೀಷ್ ಪಾಂಡೆ 11 ಪಂದ್ಯಗಳಲ್ಲಿ 212 ರನ್ ಗಳಿಸಿದ್ದಾರೆ. ಅವರಿಗೆ ಝಿಂಬಾಬ್ವೆ ಸರಣಿಗೆ ತಂಡದಲ್ಲಿ ಅವಕಾಶ ಸಿಕ್ಕಿದೆ. ಇದು ವಿದೇಶದಲ್ಲಿ ಸಾಮರ್ಥ್ಯವನ್ನು ಸಾಬೀತುಪಡಿಸಲು ಇನ್ನೊಂದು ಅವಕಾಶ ಸಿಕ್ಕಿದೆ.
 ಕೆಕೆಆರ್‌ನ ಆಲ್‌ರೌಂಡರ್ ಆ್ಯಂಡ್ರೆ ರಸ್ಸೆಲ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಬುಧವಾರದ ಪಂದ್ಯದಲ್ಲಿ ಅವರು ಆಡುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಕುತೂಹಲ ಕೆರಳಿಸಿದೆ. ಕೆಕೆಆರ್ ಅವರು ಈ ಮಹತ್ವದ ಪಂದ್ಯಕ್ಕೆ ರಸ್ಸೆಲ್ ನೆರವಿನ ನಿರೀಕ್ಷೆಯಲ್ಲಿದೆ.
  ಕೆಕೆಆರ್ ಸ್ಪಿನ್ನರ್‌ಗಳಿಂದಾಗಿ ಯಶಸ್ಸು ಸಾಧಿಸಿದೆ. ವಿಂಡೀಸ್‌ನ ಸುನೀಲ್ ನರೇನ್ ಮತ್ತು ಯುವ ಬೌಲರ್ ಕುಲದೀಪ್ ಯಾದವ್ ಅವರು ಕಳೆದ ಪಂದ್ಯದಲ್ಲಿ ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಉಡಾಯಿಸುವ ಮೂಲಕ ಕೆಕೆಆರ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
    ಸನ್‌ರೈಸರ್ಸ್‌ ತಂಡ ಕಳೆದ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದೆ. ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ಕೆಕೆಆರ್ ವಿರುದ್ಧ ಸೋತಿರುವ ಹಿನ್ನೆಲೆಯಲ್ಲಿ ತಂಡದ ಶಕ್ತಿಯನ್ನು ಪರೀಕ್ಷಿಸುವಂತಾಗಿದೆ.
ಗಂಭೀರ್ ಕೆಕೆಆರ್ ತಂಡದ ಬ್ಯಾಟಿಂಗ್‌ನ ಶಕ್ತಿ ಆಗಿದ್ದಾರೆ. ಅದೇ ರೀತಿ ಸನ್ ರೈಸ್ ತಂಡಕ್ಕೂ ನಾಯಕ ಡೇವಿಡ್ ವಾರ್ನರ್ ತಂಡದ ಬೆನ್ನೆಲುಬು ಆಗಿದ್ದಾರೆ. ಆಸ್ಟ್ರೇಲಿಯದ ಆಟಗಾರ ವಾರ್ನರ್ 14 ಪಂದ್ಯಗಳಲ್ಲಿ 658 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿರುವ ಆಟಗಾರರ ಪೈಕಿ ಎರಡನೆ ಸ್ಥಾನದಲ್ಲಿದ್ದಾರೆ.
ವಾರ್ನರ್ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಶಿಖರ್ ಧವನ್ ಅವರಿಗೆ ಉತ್ತಮ ಬೆಂಬಲ ನೀಡುತ್ತಿದ್ದಾರೆ. ಅವರು 463 ರನ್ ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ 82 ರನ್ .
ಸನ್‌ರೈಸರ್ಸ್‌ ತಂಡದಲ್ಲಿ ಯುವರಾಜ್ ಸಿಂಗ್, ಮೊಯ್ಸಿಸ್ ಹೆನ್ರಿಕ್ಸ್, ಮತ್ತು ಇಯಾನ್ ಮೊರ್ಗನ್ ಅವರಂತಹ ಅತ್ಯುತ್ತಮ ಆಟಗಾರರಿದ್ದಾರೆ. ಆಶೀಷ್ ನೆಹ್ರಾ ಗಾಯಗೊಂಡಿದ್ದಾರೆ. ಈ ಕಾರಣದಿಂದಾಗಿ ಅವರು ತಂಡದಿಂದ ಹೊರಗುಳಿದಿದ್ದಾರೆ. ಎಡಗೈ ವೇಗಿ ಬರಿಂದರ್ ಸ್ರಾನ್ ಮತ್ತು ಮುಸ್ತಫಿಝರ್ರಹ್ಮಾನ್ ಮತ್ತು ಭುವನೇಶ್ವರ ಕುಮಾರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್‌ : ಗೌತಮ್ ಗಂಭೀರ್(ನಾಯಕ), ರಾಬಿನ್ ಉತ್ತಪ್ಪ, ಮನೀಷ್ ಪಾಂಡೆ, ಸೂರ್ಯಕುಮಾರ್ ಯಾದವ್, ಯೂಸುಫ್ ಪಠಾಣ್, ಶಾಕಿಬ್ ಅಲ್ ಹಸನ್, ಪಿಯೂಷ್ ಚಾವ್ಲಾ, ಸುನೀಲ್ ನರೇನ್, ಜಾಸನ್ ಹೋಲ್ಡರ್, ಮೊರ್ನೆ ಮೊರ್ಕೆಲ್, ಅಂಕಿತ್ ರಜಪೂತ್, ಆ್ಯಂಡ್ರೆ ರಸ್ಸೆಲ್, ಕ್ರಿಸ್ ಲಿನ್, ಬ್ರಾಡ್ ಹಾಗ್, ಕಾಲಿನ್ ಮುನ್ರೊ, ಶಾನ್ ಟೇಟ್, ಉಮೇಶ್ ಯಾದವ್, ಶೆಲ್ಡಾನ್ ಜಾಕ್ಸನ್, ಕುಲದೀಪ್ ಯಾದವ್, ಮನನ್ ಶರ್ಮ, ರಾಜ್‌ಗೋಪಾಲ್ ಸತೀಶ್ ಮತ್ತು ಜಯದೇವ್ ಉನದ್ಕಟ್.
ಸನ್‌ರೈಸರ್ಸ್‌ ಹೈದರಾಬಾದ್: ಡೇವಿಡ್ ವಾರ್ನರ್(ನಾಯಕ), ಶಿಖರ್ ಧವನ್, ಯುವರಾಜ್ ಸಿಂಗ್, ಮೊಯ್ಸಿಸ್ ಹೆನ್ರಿಕ್ಸ್, ಇಯಾನ್ ಮೊರ್ಗನ್, ದೀಪಕ್ ಹೂಡಾ, ನಮನ್ ಓಜಾ, ಕರಣ್ ಶರ್ಮ, ಮುಸ್ತಫಿಝುರ್ರಹ್ಮಾನ್, ಭುವನೇಶ್ವರ ಕುಮಾರ್, ಬರೀಂದರ್ ಸ್ರಾನ್, ಟ್ರೆಂಟ್ ಬೌಲ್ಟ್, ಬೆನ್ ಕಟ್ಟಿಂಗ್, ಕೇನೆ ವಿಲಿಯಮ್ಸನ್, ಆಶೀಷ್ ರೆಡ್ಡಿ,ರಿಕಿ ಭುಯ್, ಬಿಪುಲ್ ಶರ್ಮ, ಸಿದ್ದಾರ್ಥ ಕೌಲ್, ಅಭಿಮನ್ಯು ಮಿಥುನ್, ವಿಜಯ್ ಶಂಕರ್, ಟಿ.ಸುಮನ್, ಆದಿತ್ಯ ತಾರೆ.
ಪಂದ್ಯದ ಸಮಯಃ ರಾತ್ರಿ 8:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News