ನಗರ ನಾಗರಿಕರ ಸಾರಿಗೆ ಸೌಲಭ್ಯಕ್ಕಾಗಿ 900 ಮಿನಿ ಬಸ್ ಖರೀದಿ: ರಾಮಲಿಂಗಾರೆಡ್ಡಿ
ಬೆಂಗಳೂರು, ಜೂ.1: ನಗರ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಸಂಸ್ಥೆಯು ಈ ವರ್ಷ 900 ಮಿನಿ ಬಸ್‌ಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬುಧವಾರ ನಗರದ ಶಾಂತಿನಗರದಲ್ಲಿ ಬಿಎಂಟಿಸಿ ಸಿಬ್ಬಂದಿಗೆ ನೂತನವಾಗಿ ನಿರ್ಮಿಸಿರುವ ವಸತಿಗೃಹಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಿನಿ ಬಸ್‌ಗಳನ್ನು ಖರೀದಿಸಲು ತಗಲುವ ಮೂಲ ಬಂಡವಾಳವನ್ನು ಬಿಎಂಟಿಸಿ ಸಂಸ್ಥೆ ಭರಿಸಲಿದೆ. ಸಾಲ ಪಡೆದ ಹಣಕ್ಕೆ ಸಂಪೂರ್ಣ ಬಡ್ಡಿಯನ್ನು ಸರಕಾರ ಭರಿಸಲಿದೆ. ಹೆಚ್ಚು ಜನಸಂದಣಿಯಿರುವ ಕಡೆ ಈ ಮಿನಿಬಸ್‌ಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.ಮೆಟ್ರೋ ಸಂಪರ್ಕ ಸಾರಿಗೆ ವ್ಯವಸ್ಥೆಯಿಂದ ಬಿಎಂಟಿಸಿ ಸಂಸ್ಥೆಗೆ ಪ್ರತಿ ದಿನ 60 ಸಾವಿರ ರೂ.ಗಳು ನಷ್ಟವಾಗುತ್ತಿದೆ. ಈ ಕುರಿತು ಪರಿಶೀಲಿಸಿ ನಷ್ಟವನ್ನು ತಡೆಗಟ್ಟಲು ಪ್ರಯತ್ನಿಸಲಾಗುವುದು. ಮೆಟ್ರೋ ಸಂಪರ್ಕ ಸಾರಿಗೆ ವ್ಯವಸ್ಥೆಗೆ ನಷ್ಟವಾಗುತ್ತಿರುವ ಸ್ಥಳಗಳಲ್ಲಿ ಬಸ್ ಸೇವೆಯನ್ನು ಮುಂದುವರಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಎಂದರು. ವಸತಿ ಗೃಹ ನಿರ್ಮಾಣ: ಬಿಎಂಟಿಸಿ ಸಿಬ್ಬಂದಿಗೆ ವಸತಿ ಕಲ್ಪಿಸಲು ನಗರದ ಮೂರು ಭಾಗಗಳಲ್ಲಿ 700 ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಈಗಾಗಲೇ 200 ಮನೆಗಳು ಸಿದ್ಧವಾಗಿವೆ. ಯಲಹಂಕ, ಕೊಡತಿ, ಜಿಗಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಸತಿ ಗೃಹಗಳಿಗೆ ರಾಜ್ಯ ಗೃಹಮಂಡಳಿ ಮತ್ತು ರಾಜ್ಯ ಸರಕಾರ ಸಹಾಯ ನೀಡಲಿದೆ. ಸದ್ಯದಲ್ಲೇ ಇನ್ನುಳಿದ ನೂತನ ವಸತಿ ಗೃಹಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದರು.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕರೂಪ್ ಕೌರ್ ಮಾತನಾಡಿ, ಉದ್ಘಾಟನೆಗೊಂಡ ನೂತನ ವಸತಿ ಕಟ್ಟಡವನ್ನು ಒಟ್ಟು 634 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಒಟ್ಟು 5.50 ಕೋಟಿ ರೂ.ಗಳಲ್ಲಿ ನಿರ್ಮಾಣಗೊಂಡಿರುವ ವಸತಿ ಸಮುಚ್ಚಯದಲ್ಲಿ ಗುಣಮಟ್ಟ ಮತ್ತು ಅತ್ಯಾಧುನಿಕ 24 ಗೃಹಗಳಿವೆ. ಈ ಮನೆಗಳನ್ನು ಸೇವಾ ಹಿರಿತನ ಅಧಾರದ ಮೇಲೆ ಸಿಬ್ಬಂದಿಗೆ ವಿತರಿಸಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಸಕ ಎನ್.ಎ.ಹಾರಿಸ್ ಸೇರಿದಂತೆ ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.