×
Ad

ಪೊಲೀಸರ ಬೇಡಿಕೆ ಈಡೇರಿಸಲು ಸರಕಾರ ಬದ್ಧಪ್ರತಿಭಟನೆಯಲ್ಲಿ ಪಾಲ್ಗೊಳ್ಳದಿರಲು ಸಚಿವ ಪರಮೇಶ್ವರ್ ಮನವಿ

Update: 2016-06-01 23:56 IST

ಬೆಂಗಳೂರು, ಜೂ.1: ಪೊಲೀಸರ ಬೇಡಿಕೆಗಳನ್ನು ಮುಕ್ತವಾಗಿ ಈಡೇರಿಸಲು ಸರಕಾರ ಬದ್ಧವಾಗಿದೆ. ಹೀಗಾಗಿ ಜೂ.4 ರಂದು ಅನಧಿಕೃತ ಸಂಘಟನೆ ಕರೆ ನೀಡಿರುವ ಪ್ರತಿಭಟನೆಯಲ್ಲಿ ಪೊಲೀಸ್ ಸಿಬ್ಬಂದಿ ಪಾಲ್ಗೊಳ್ಳಬಾರದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮನವಿ ಮಾಡಿದ್ದಾರೆ.
ಬುಧವಾರ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹಮ್ಮಿಕೊಂಡಿದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ, ಪೊಲೀಸರು ಶಿಸ್ತನ್ನು ಕಾಪಾಡಬೇಕು. ನಿಮ್ಮ ಜೊತೆ ನಾವೀದ್ದೇವೆ. ಜೂ.4ರಂದು ಅನಧಿಕೃತ ಸಂಘಟನೆ ಮತ್ತು ಪೊಲೀಸ್ ಇಲಾಖೆಯಿಂದ ಉಚ್ಚಾಟನೆಗೊಂಡಿರುವ ವ್ಯಕ್ತಿಗಳು ಕರೆಕೊಟ್ಟಿರುವ ಪತ್ರಿಭಟನೆಗೆ ಕಿವಿಗೊಡಬಾರದು. ನಿನ್ನೆ ಸರಕಾರಕ್ಕೆ ಸಲ್ಲಿಸಿರುವ 30 ಬೇಡಿಕೆಗಳಲ್ಲಿ ಈಗಾಗಲೇ 10 ಬೇಡಿಕೆಗಳನ್ನು ಈಡೇರಿಸಲಾಗಿದೆ. ಇನ್ನುಳಿದ ಬೇಡಿಕೆಗಳನ್ನು ಈಡೇರಿಸಲು ಜೂ.4ರ ನಂತರ ಪೊಲೀಸ್ ಇಲಾಖೆೆಯ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರಜೆ ಅರ್ಜಿಗಳು ಹಿಂಪಡೆದ ಪೊಲೀಸ್ ಸಿಬ್ಬಂದಿ: ಅನಧಿಕೃತ ಸಂಘಟನೆ ನೀಡಿರುವ ಪ್ರತಿಭಟನೆಯಲ್ಲಿ ಸಾಮೂಹಿಕ ರಜೆ ಹಾಕಿ ಪಾಲ್ಗೊಳ್ಳುವ ಸಿಬ್ಬಂದಿ ವಿರುದ್ಧ ಎಸ್ಮಾ ಜಾರಿ ಮಾಡಲು ಆದೇಶ ಹೊರಡಿಸಲಾಗಿದೆ. ಹೀಗಾಗಿ ರಜೆ ಕೋರಿ ಅರ್ಜಿ ಸಲ್ಲಿಸಿದ್ದವರಲ್ಲಿ ಶೇ.50ರಷ್ಟು ಪೊಲೀಸ್ ಸಿಬ್ಬಂದಿ ಹಿಂಪಡೆದಿದ್ದಾರೆ. ಅಲ್ಲದೆ ಪೊಲೀಸ್ ಸಿಬ್ಬಂದಿಯನ್ನು ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಮನವಿ ಮಾಡಲಾಗಿದೆ. ಸಿಬ್ಬಂದಿಯಿಂದ ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದಿವೆ. ಒಂದು ವೇಳೆ ಸರಕಾರದ ಆದೇಶವನ್ನು ಮೀರಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತ್ಯೇಕ ಸಮಿತಿ ರಚನೆ: ಪೊಲೀಸ್ ಇಲಾಖೆಯಲ್ಲಿನ ಕೆಲ ನಿಯಮಗಳನ್ನು ಸಡಿಲಗೊಳಿಸಲು ಸರಕಾರ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ನಿಯಮಗಳ ಸಡಿಲಿಕೆಗೆ ಸರಕಾರ ಪ್ರತ್ಯೇಕ ಸಮಿತಿಯನ್ನು ರಚಿಸಲು ಚಿಂತನೆ ನಡೆಸಿದೆ ಎಂದು ಗೃಹ ಸಚಿವರು ತಿಳಿಸಿದರು.
ರೈಲ್ವೆ ಡಿಐಜಿ ವೆಂಕಟೇಶ್ ಅವರು ಪೊಲೀಸ್ ಸಿಬ್ಬಂದಿಯನ್ನು ತನ್ನ ವೈಯಕ್ತಿಕ ಕೆಲಸಗಳಿಗೆ ಬಳಿಸಿಕೊಂಡಿರುವ ಕುರಿತು ಮಾಧ್ಯಮಗಳಲ್ಲಿ ಬಿತ್ತರವಾಗಿರುವ ವರದಿಯನ್ನು ಆಧರಿಸಿ ಅವರನ್ನು ಬೇರೊಂದು ಇಲಾಖೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಸಭೆ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಪಕ್ಷ ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ನಮ್ಮಲ್ಲಿ ಕುದುರೆ ವ್ಯಾಪಾರ ನಡೆಯೋದಿಲ್ಲ. ಯಾಕೆಂದರೆೆ ನಮ್ಮಲ್ಲಿ ಕುದುರೆಗಳೇ ಇಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಮಾತನಾಡಿ, ಪೊಲೀಸ್ ಸಿಬ್ಬಂದಿಗೆ ಇಲಾಖೆಗೆ ಸಂಬಂದಿಸದವರು ತಪ್ಪು ಸಂದೇಶ ನೀಡುತ್ತಿದ್ದಾರೆ. ಇದಕ್ಕೆ ಸಿಬ್ಬಂದಿ ಕಿವಿಗೊಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಪ್ರಚೋದನೆ ನೀಡುತ್ತಿರುವವರನ್ನು ಗಮನಿಸಲಾಗುತ್ತಿದೆ ಎಂದರು.ಲಾಖೆ ಶಿಸ್ತನ್ನು ಉಲ್ಲಂಘಿಸಿ ಸಾಮೂಹಿಕ ರಜೆ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಸಿಬ್ಬಂದಿಯನ್ನು ದಾರಿ ತಪ್ಪಿಸುವವರ ಮತ್ತು ಇಲಾಖೆಯ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಮೇಘರಿಕ್, ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್‌ಗುಂಡೂರಾವ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News