×
Ad

ರಾಜ್ಯಸಭೆ-1, ಮೇಲ್ಮನೆ-2 ನಾಮಪತ್ರ ತಿರಸ್ಕೃತ

Update: 2016-06-01 23:57 IST

ಬೆಂಗಳೂರು, ಜೂ. 1: ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿರುವ ರಾಜ್ಯಸಭೆ ಹಾಗೂ ಮೇಲ್ಮನೆ ಚುನಾವಣೆ ಹಿನ್ನೆಲೆಯಲ್ಲಿ ಶಾಸಕರ ಖರೀದಿಗೆ ‘ಕುದುರೆ ವ್ಯಾಪಾರ’ ಆರಂಭವಾಗಿದೆ. ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ 10 ಮಂದಿ ಶಾಸಕರಿಗೆ ಹಣದ ಆಮಿಷ ಒಡ್ಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್ ಹಾಗೂ ರಾಜ್ಯಸಭೆಗೆ ಕ್ರಮವಾಗಿ ಜೂ.10 ಮತ್ತು 11ರಂದು ಚುನಾವಣೆ ನಡೆಸಲಿದ್ದು, ಆಡಳಿತ ಪಕ್ಷದ ಶಾಸಕರಿಗೆ ಜೆಡಿಎಸ್ ಆಮಿಷವೊಡ್ಡಿದೆ ಎಂಬ ಅಂಶವನ್ನು ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ ಎಂದು ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.ದರೆ, ಜೆಡಿಎಸ್ ಆಮಿಷವೊಡ್ಡಿದೆ ಎಂಬುದನ್ನು ಕಾಂಗ್ರೆಸ್ ಪಕ್ಷದ ಶಾಸಕರು ನಿರಾಕರಿಸಿದ್ದಾರೆ. ‘ತಮ್ಮನ್ನು ಜೆಡಿಎಸ್‌ನ ಯಾವೊಬ್ಬ ಮುಖಂಡನೂ ಸಂಪರ್ಕಿಸಿಲ್ಲ. ತಮ್ಮ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಕುಚೋದ್ಯಕ್ಕಾಗಿ ಈ ಸುಳ್ಳು ಸುದ್ದಿಯನ್ನು ಸೃಷ್ಟಿಸಲಾಗಿದೆ’ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎ.ಬಿ.ಮಾಲಕ ರೆಡ್ಡಿ ‘ವಾರ್ತಾಭಾರತಿ’ಗೆ ಸ್ಪಷ್ಟನೆ ನೀಡಿದರು.
ನಾಮಪತ್ರ ತಿರಸ್ಕೃತ: ವಿಧಾನಸಭೆಯಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಪಕ್ಷದ ಮೂವರು, ಜೆಡಿಎಸ್ ಹಾಗೂ ಬಿಜೆಪಿ ತಲಾ ಒಬ್ಬರು ಅಭ್ಯರ್ಥಿಯ ನಾಮಪತ್ರ ಅಂಗೀಕೃತವಾಗಿದೆ. ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿದೆ ಎಂದು ಚುನಾವಣಾಧಿಕಾರಿ ಎಸ್.ಮೂರ್ತಿ ತಿಳಿಸಿದ್ದಾರೆ.
ವಿಧಾನ ಪರಿಷತ್ತಿಗೆ 11 ಮಂದಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಿದ್ದು, ಆ ಪೈಕಿ ಕೆ.ಎ. ಮೋಹನ್ ಹಾಗೂ ವಿರಾಟಯ್ಯ ಹಿರೇಮಠ್ ಅವರ ನಾಮಪತ್ರಗಳಿಗೆ ಸೂಚಕರ ಸಹಿ ಇಲ್ಲದ ಹಾಗೂ ಹೆಚ್ಚುವರಿ ಪ್ರಮಾಣ ಪತ್ರ ಸಲ್ಲಿಸದ ಕಾರಣ ನಾಮಪತ್ರ ತಿರಸ್ಕರಿಸಲಾಗಿದೆ ಎಂದು ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯಸಭೆಗೆ ಕಾಂಗ್ರೆಸ್ ಪಕ್ಷದ ಆಸ್ಕರ್ ಫೆರ್ನಾಂಡಿಸ್, ಜೈರಾಂ ರಮೇಶ್, ಕೆ.ಸಿ. ರಾಮಮೂರ್ತಿ, ಬಿಜೆಪಿಯ ನಿರ್ಮಲಾ ಸೀತಾರಾಮನ್ ಹಾಗೂ ಜೆಡಿಎಸ್‌ನ ಬಿ.ಎಂ.ಫಾರೂಕ್ ಕಣದಲ್ಲಿದ್ದಾರೆ. ಮೇಲ್ಮನೆಗೆ ವೀಣಾ ಅಚ್ಚಯ್ಯ, ಅಲ್ಲಂ ವೀರಭದ್ರಪ್ಪ, ಆರ್.ಬಿ.ತಿಮ್ಮಾಪುರ್, ರಿಝ್ವಾನ್ ಅರ್ಶದ್ (ಕಾಂಗ್ರೆಸ್), ನಾರಾಯಣಸ್ವಾಮಿ, ಡಾ.ವೆಂಕಟಾಪತಿ(ಜೆಡಿಎಸ್), ವಿ.ಸೋಮಣ್ಣ ಮತ್ತು ಲೆಹರ್ ಸಿಂಗ್(ಬಿಜೆಪಿ) ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದರು.


ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಐದು ಮಂದಿ ಹಾಗೂ ವಿಧಾನ ಪರುಷತ್ತಿನ ಏಳು ಸ್ಥಾನಗಳಿಗೆ 9 ಮಂದಿ ನಾಮಪತ್ರ ಸಲ್ಲಿಸಿದ್ದು, ಜೂ.3 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಆ ಅವಧಿಯೊಳಗೆ ಯಾರಾದರೂ ನಾಮಪತ್ರ ಹಿಂಪಡೆದರೆ ಅವಿರೋಧ ಆಯ್ಕೆಯಾಗಲಿದೆ, ಇಲ್ಲವಾದರೆ ಚುನಾವಣೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News