ರಾಜ್ಯಸಭೆ ಚುನಾವಣೆ: ಅಡ್ಡ ಮತ ಹಾಕಲು ಕೋಟಿ ಕೋಟಿ ರೂ.ಬೇಡಿಕೆ
ಬೆಂಗಳೂರು, ಜೂ. 2: ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ರಾಜ್ಯಸಭೆ ಚುನಾವಣೆಗೆ ಮತ ಹಾಕಲು ಪಕ್ಷೇತರ ಹಾಗೂ ಜೆಡಿಎಸ್‌ನ ತಲಾ ಇಬ್ಬರು ಶಾಸಕರು ಕೋಟಿ-ಕೋಟಿ ರೂ.ಗಳ ಬೇಡಿಕೆಯಿಟ್ಟಿರುವುದು ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಕುಟುಕು ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದೆ.
ಬೀದರ್ ಜಿಲ್ಲೆ ಬಸವಕಲ್ಯಾಣದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ, ಕಲಬುರಗಿಯ ಆಳಂದ ಕ್ಷೇತ್ರದ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್, ಮೈಸೂರಿನ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹಾಗೂ ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಹೊಸದಿಲ್ಲಿ, ಬೆಂಗಳೂರಿನ ಪಂಚತಾರಾ ಹೊಟೇಲ್‌ಗಳಲ್ಲಿ ರಾಷ್ಟ್ರೀಯ ಸುದ್ದಿವಾಹಿನಿಯ ವಿಶೇಷ ತನಿಖಾ ತಂಡದ ಸದಸ್ಯರು ನಡೆಸಿದ ಕಾರ್ಯಾಚರಣೆಯಲಿ ಸಿಕ್ಕಿಬಿದಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಮೂರನೆ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿವೃತ್ತ ಪೊಲೀಸ್ ಅಧಿಕಾರಿ ಕೆ.ಸಿ.ರಾಮಮೂರ್ತಿ ಪರ ಅಡ್ಡಮತ ಹಾಕಲು ಮೇಲ್ಕಂಡ ನಾಲ್ಕು ಮಂದಿ ಶಾಸಕರು ಕೋಟ್ಯಂತರ ರೂಪಾಯಿಗಳ ಬೇಡಿಕೆಯಿಟ್ಟಿರುವ ದೃಶ್ಯ ಕುಟುಕು ಕಾರ್ಯಾಚರಣೆಯಿಂದ ಬಯಲಾಗಿದೆ.
ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜಿ.ಟಿ.ದೇವೇಗೌಡ ಪರ ಅವರ ಸಂಬಂಧ ನಗರದ ಪಂಚತಾರಾ ಹೊಟೇಲ್‌ವೊಂದಲ್ಲಿ ಅಡ್ಡಮತ ಹಾಕಲು 10 ಕೋಟಿ ರೂ.ಬೇಡಿಕೆಯಿಟ್ಟಿರುವುದು ಬೆಳಕಿಗೆ ಬಂದಿದೆ. ನಿನ್ನೆಯೆಷ್ಟೇ ಜೆಡಿಎಸ್ ಅಭ್ಯರ್ಥಿಪರ ಮತ ಚಲಾಯಿಸಲು ಕಾಂಗ್ರೆಸ್ ಪಕ್ಷದ ಶಾಸಕರಿಗೆ ಆಮಿಷವೊಡ್ಡಲಾಗಿದೆ ಎಂಬ ಸುದ್ದಿ ಬಿತ್ತರವಾಗಿತ್ತು.
ಸರಕಾರದ ವತಿಯಿಂದ ಶಾಸಕರ ಕ್ಷೇತ್ರಗಳಿಗೆ 100 ಕೋಟಿ ರೂ.ಅನುದಾನದ ಆಮಿಷವೊಡ್ಡಿದೆ. ಜೆಡಿಎಸ್‌ನಿಂದ ಒಂದು ಮತಕ್ಕೆ 7 ಕೋಟಿ ರೂ. ಆಮಿಷವೊಡ್ಡಿದ್ದಾರೆ ಎಂದು ಬೀದರ್ ಶಾಸಕ ಅಶೋಕ್ ಖೇಣಿ ಬಾಯ್ಬಿಟ್ಟಿದ್ದಾರೆ. ಭಟ್ಕಳ ಶಾಸಕ ಮಂಕಳ ಸುಬ್ಬವೈದ್ಯ ಹಣದ ವ್ಯವಹಾರದ ಕುರಿತು ಚರ್ಚೆ ನಡೆಸಿರುವುದು ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಇದೀಗ ರಾಷ್ಟ್ರೀಯ ಸುದ್ದಿವಾಹಿನಿಯ ಈ ಕುಟುಕು ಕಾರ್ಯಾಚರಣೆಯಲ್ಲಿ ಅಡ್ಡ ಮತದಾನ ಮಾಡಲು ಶಾಸಕರು ಕೋಟ್ಯಂತರ ರೂ.ಬೇಡಿಕೆಯಿಟ್ಟಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.