ಬ್ಯಾರೀಸ್ ಶಿಕ್ಷಣ ಸಂಸ್ಥೆಗಳು: ಕೋಡಿಯಿಂದ ಹೊರಟ ಶಿಕ್ಷಣದ ತಂಗಾಳಿಗೆ 110 ವರ್ಷ
ಸಾಮಾನ್ಯವಾಗಿ ಉದ್ಯಮಿಗಳಿಗೂ ಶಿಕ್ಷಣ ಕ್ಷೇತ್ರಕ್ಕೂ ಸಂಬಂಧ ಅಷ್ಟಕ್ಕಷ್ಟೇ. ಅವರು ಈ ಕ್ಷೇತ್ರಕ್ಕೆ ಬರುವುದು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು ಗಳನ್ನು ಮಾಡಲು ಮನಸ್ಸಾದಾಗ ಮಾತ್ರ. ಹಾಕಿದ ಬಂಡವಾಳವನ್ನು ಹಲವು ಪಟ್ಟು ಲಾಭದ ಜೊತೆ ಮರಳಿಪಡೆಯಲು ಅವಕಾಶವಿರುವ ಕ್ಷೇತ್ರಗಳತ್ತ ಮಾತ್ರ ಈಗ ಹೆಚ್ಚಿನ ಉದ್ಯಮಿಗಳ ಚಿತ್ತ. ಆದರೆ ಈ ಸಂಪ್ರದಾಯಕ್ಕೆ ಅಪವಾದದಂತೆ ಇರುವ ಬೆರಳೆಣಿಕೆಯ ಪ್ರತಿಷ್ಠಿತ ಉದ್ಯಮ ಸಂಸ್ಥೆಗಳಿವೆ. ಅಂತಹವುಗಳಲ್ಲಿ ಮೂಲತ: ಕುಂದಾಪುರದ ಕೋಡಿಯವರಾದ ಸೈಯದ್ ಮುಹಮ್ಮದ್ ಬ್ಯಾರಿಯವರ ಸಾರಥ್ಯದಲ್ಲಿ ಈಗ ಬೆಂಗಳೂರಿನಲ್ಲಿ ಬಹುದೊಡ್ಡ ಹೆಸರು ಮಾಡಿರುವ ಬ್ಯಾರೀಸ್ ಗ್ರೂಪ್ ಕೂಡ ಒಂದು. ಶೈಕ್ಷಣಿಕ ಕ್ಷೇತ್ರದಲ್ಲೂ ಉದ್ಯಮದಷ್ಟೇ ಅಥವಾ ಅದಕ್ಕಿಂತ ಒಂಚೂರು ಹೆಚ್ಚೇ ಆಸಕ್ತಿ, ಉತ್ಸಾಹದಿಂದ ಕೆಲಸ ಮಾಡುತ್ತಿರುವ ಈ ಸಮೂಹ ಸಂಸ್ಥೆ ಈಗ 22ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಇದರಲ್ಲಿ ಒಂದು ಇಂಜಿನಿಯರಿಂಗ್ ಹಾಗೂ ಆರ್ಕಿಟೆಕ್ಟ್ ಕಾಲೇಜುಗಳನ್ನು ಬಿಟ್ಟರೆ ಉಳಿದೆಲ್ಲವೂ ಪೂರ್ವ ಪ್ರಾಥಮಿಕ ಶಾಲೆ, ಪ್ರಾಥಮಿಕ, ಪ್ರೌಢ ಶಾಲೆಗಳು, ಪಿಯು, ಪದವಿ ಹಾಗೂ ಶಿಕ್ಷಕ ತರಬೇತಿ ಕಾಲೇಜುಗಳು ಮತ್ತು ಧಾರ್ಮಿಕ ಶಿಕ್ಷಣ ಸಂಸ್ಥೆಗಳು ಎಂಬುದು ಇದರ ವಿಶೇಷ. ರಿಯಲ್ ಎಸ್ಟೇಟ್‌ನಲ್ಲೂ ಪರಿಸರ ಸ್ನೇಹಿ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಈ ಸಂಸ್ಥೆ, ಜಗತ್ತಿನ ಪ್ರಪ್ರಥಮ ಪರಿಸರ ಸ್ನೇಹಿ ಹಸಿರು ಮಸೀದಿಯನ್ನು ಅವರ ತವರೂರಾದ ಕೋಡಿ ಕಡಲ ಕಿನಾರೆಯಲ್ಲಿ ನಿರ್ಮಿಸಿ ದೇಶಕ್ಕೆ ಒಂದು ಹೆಮ್ಮೆಯ ಕೊಡುಗೆಯನ್ನು ನೀಡಿದೆ. ಈ ಪ್ರತಿಷ್ಠಿತ ಸಮೂಹ ಸಂಸ್ಥೆಯ ಶೈಕ್ಷಣಿಕ ಯಶೋಗಾಥೆಗೆ ಈಗ 110 ವರ್ಷಗಳ ಸಂಭ್ರಮ. 19ನೆ ಶತಮಾನದ ಆರಂಭದ ದಶಕದಲ್ಲಿ ಕುಂದಾಪುರದ ಕೋಡಿಯ ಗುಡಿಸಲೊಂದರಲ್ಲಿ ಪ್ರಾರಂಭವಾದ ಪುಟ್ಟ ಶಾಲೆ ಈಗ ಸುಮಾರು ಎರಡು ಡಝನ್ ಶಿಕ್ಷಣ ಸಂಸ್ಥೆಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸುತ್ತಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಅವರೊಂದಿಗೆ ‘ವಾರ್ತಾಭಾರತಿ’ ನಡೆಸಿದ ಮಾತುಕತೆ ಇಲ್ಲಿದೆ.
ವಾರ್ತಾಭಾರತಿ : 1906ರಲ್ಲಿ ಕುಗ್ರಾಮವೊಂದರಲ್ಲಿ ಮುಸ್ಲಿಮ್ ಹಿರಿಯರೊಬ್ಬರು ಒಂದು ಶಾಲೆ ಆರಂಭಿಸಿದರೆನ್ನುವುದೇ ಒಂದು ವಿಸ್ಮಯದ ವಿಷಯ. ನಿಮ್ಮ ಮುತ್ತಾತನಿಗೆ ಇಂತಹ ಪ್ರೇರಣೆ ಸಿಕ್ಕಿದ್ದು ಹೇಗೆ?
ಸೈಯದ್ ಬ್ಯಾರಿ: ‘ನನ್ನ ಒಡೆಯನೇ, ನನ್ನ ಜ್ಞಾನವನ್ನು ಅನುದಿನವೂ ಹೆಚ್ಚಿಸು’ ಎಂಬ ಪ್ರಾರ್ಥನೆ ಕುರ್‌ಆನ್‌ನಲ್ಲೇ ಇದೆ. ಅಂದರೆ ಪ್ರತಿಯೊಬ್ಬನಿಗೂ ಜ್ಞಾನಾರ್ಜನೆ ಕಡ್ಡಾಯ ಎಂದು ಪ್ರತಿಪಾದಿಸುವ ಧರ್ಮ ನಮ್ಮದು. ಆದರೆ ಅಂದಿನ ದಿನಗಳಲ್ಲಿ ನಮ್ಮ ಗ್ರಾಮದ ಹೆಚ್ಚಿನವರು ಕಡುಬಡವರು. ಅವರಿಗೆ ದಿನದೂಡುವುದೇ ಬಹುದೊಡ್ಡ ಸಾಹಸ. ಇನ್ನು ವಿದ್ಯೆಯ, ಶಾಲೆಯ ಯೋಚನೆ ಎಲ್ಲಿಂದ ಬರಬೇಕು ? ಆದರೆ ನಮ್ಮ ಮುತ್ತಾತರಿಗೆ ಆ ದೇವರೇ ಇಲ್ಲೊಂದು ಶಾಲೆ ಪ್ರಾರಂಭಿಸು ಎಂದು ವಿವೇಕ ದಯಪಾಲಿಸಿದ. ಆದ್ದರಿಂದ ನೀವದನ್ನು ಅವರ ದೂರದೃಷ್ಟಿ ಎನ್ನಿ ಅಥವಾ ಕೇವಲ ದೇವರ ದಯೆಯೆನ್ನಿ. ವಿದ್ಯೆ ಇಲ್ಲದೆ ನಾವು ಮುಂದುವರಿಯಲು ಸಾಧ್ಯವಿಲ್ಲ ಎಂಬ ಯೋಚನೆಯನ್ನು ದೇವರು ನಮ್ಮ ಮುತ್ತಾತನ ಮನಸ್ಸಲ್ಲಿ ಭದ್ರ ಮಾಡಿ ಬಿಟ್ಟ. ನಮ್ಮ ಮೊದಲ ಶಾಲೆಯ ಪ್ರಾರಂಭಕ್ಕೆ ಅಲ್ಲೇ ಬುನಾದಿ ಬಿತ್ತು. ಹಾಗಾಗಿ ನಾನು ಯಾವತ್ತೂ ಹೇಳುತ್ತೇನೆ, ದೇವರು ಮನಸ್ಸು ಮಾಡಿದರು ಅದು ಆಗಿ ಹೋಯಿತು ಅಷ್ಟೇ.
ದಿ.ಹಾಜಿ ಮೊಹಿದಿನ್ ಬ್ಯಾರಿ
ವಾರ್ತಾಭಾರತಿ: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಈವರೆಗಿನ ಶೈಕ್ಷಣಿಕ ಪಯಣದಲ್ಲಿ ನಿಮಗಾದ ಕೆಲವು ಪ್ರಮುಖ ಅನುಭವಗಳನ್ನು ತಿಳಿಸಿ.
ಸೈಯದ್ ಬ್ಯಾರಿ: 1906ರಲ್ಲಿ ಗುಡಿಸಲಿನಲ್ಲಿ ಶುರುವಾದ ಶಾಲೆಯನ್ನು 1948ರಲ್ಲಿ ನಮ್ಮ ಅಜ್ಜ ಸೂಫಿ ಸಾಹೇಬರು ಹೆಂಚಿನ ಶಾಲೆಯನ್ನಾಗಿ ಮಾರ್ಪಡಿಸಿದರು. ಆಗ ನಮ್ಮ ದಿವಂಗತ ತಂದೆ ಹಾಜಿ ಮೊಹಿದಿನ್ ಬ್ಯಾರಿ ಅವರು ಈ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದರು. ನಮ್ಮ ತಂದೆಯವರಿಗೆ ಅವರ ಇಬ್ಬರು ಸ್ನೇಹಿತರಾದ ಮಾರ್ಕ್ ಡಿಸೋಜ ಹಾಗೂ ತಿಮ್ಮಪ್ಪ ಶೇರಿಗಾರ್ ಅವರು ಸಕ್ರಿಯವಾಗಿ ಬೆಂಬಲಿಸಿ, ಸಹಕರಿಸಿದ್ದರು. ಅವರು ರಿಯಲ್ ಬದುಕಿನ ಅಮರ್-ಅಕ್ಬರ್-ಅಂಥೋಣಿಗಳಾಗಿದ್ದರು. ಶಾಲೆಯೊಳಗೂ ಅದೇ ವಾತಾವರಣವಿತ್ತು. ಜಾತಿ,ಧರ್ಮವೆಂಬ ಭೇದವಿಲ್ಲದೆ ಸರ್ವಧರ್ಮಗಳ ಮಕ್ಕಳು ಅದೇ ಶಾಲೆಯಲ್ಲಿ ಕಲಿಯುತ್ತಿದ್ದರು. ಪರಸ್ಪರರನ್ನು ಪ್ರೀತಿ, ಆತ್ಮೀಯತೆಯಿಂದ ಕಾಣುವುದನ್ನು ನಾವು ಅಲ್ಲೇ ಕಲಿತೆವು. ಆ ಪರಂಪರೆಯನ್ನು ಇಂದಿಗೂ ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಅದು ಕೋಡಿಯ ವೈಶಿಷ್ಟ. ಅದಕ್ಕೇ ಸುತ್ತಮುತ್ತಲ ಊರುಗಳಲ್ಲಿ ಕೋಮು ಹಿಂಸೆಯ ಘಟನೆಗಳಾದರೂ ಕೋಡಿಯಲ್ಲಿ ಅದರ ದುಷ್ಪರಿಣಾಮ ಕಾಣಿಸುವುದಿಲ್ಲ. ಇದು ಕೋಡಿಗೆ ದೇವರು ನೀಡಿರುವ ವರ. ಆದರೆ ಶಾಲೆ ನಡೆಸುವುದು ಸುಲಭವಿರಲಿಲ್ಲ. ಶಾಲೆಗೆ ಮಕ್ಕಳು ಬರುವಂತೆ ಮಾಡುವುದೇ ಬಹುದೊಡ್ಡ ಸವಾಲಾಗಿತ್ತು. ನಮ್ಮ ತಂದೆ ಪ್ರತಿಯೊಂದು ಮನೆಗೆ ಹೋಗಿ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪ್ರೇರೇಪಿಸುತ್ತಿದ್ದುದು ನನಗೀಗಲೂ ಚೆನ್ನಾಗಿ ನೆನಪಿದೆ. ಆದರೆ ಆ ಮನೆಯವರಿಗೂ ಮಕ್ಕಳನ್ನು ಕಳಿಸುವುದು ಸುಲಭವಿರಲಿಲ್ಲ. ಯಾವುದಾದರೂ ಕೆಲಸಕ್ಕೆ ಕಳಿಸಿ ಕೆಲವು ಆಣೆಗಳನ್ನು ಸಂಪಾದಿಸಿದರೆ ಬದುಕು ಒಂದಿಷ್ಟು ಸಹನೀಯವಾಗುತ್ತದೆ ಎಂಬುದು ಅವರ ಲೆಕ್ಕಾಚಾರ. ಆದರೆ ನಮ್ಮ ತಂದೆಯ ಪ್ರಯತ್ನ ನಿಧಾನವಾಗಿ ಫಲ ನೀಡಲಾರಂಭಿಸಿತು. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಏರುತ್ತಾ ಹೋಯಿತು.
ನಮ್ಮ ತಂದೆ ಅದ್ಭುತವಾಗಿ ಕತೆ ಹೇಳುತ್ತಿದ್ದರು. ಅವರು ರಸವತ್ತಾಗಿ ಹೇಳುತ್ತಾ ಹೋದಂತೆ ಪ್ರವಾದಿಯ ವಚನಗಳು,ಕನಕದಾಸರು, ಸತ್ಯ ಹರಿಶ್ಚಂದ್ರ, ಪುಣ್ಯ ಕೋಟಿ ಹೀಗೆ ಒಂದೊಂದೇ ಐತಿಹಾಸಿಕ ವ್ಯಕ್ತಿತ್ವಗಳು, ಪಾತ್ರಗಳು ನಮ್ಮಿಳಗೆ ಇಳಿಯುತ್ತಾ ಹೋದವು. ಆ ಕತೆಗಳನ್ನು ಕೇಳಲು ಮಕ್ಕಳ ಜೊತೆ ಅವರ ಹೆತ್ತವರೂ ಬರುತ್ತಿದ್ದರು. ಸತ್ಯ, ನ್ಯಾಯ , ಸಮಾನತೆಗಳಂತಹ ವಿಶ್ವಮಾನ್ಯ ವೌಲ್ಯಗಳನ್ನು ನಾವು ಕಲಿತು ಇಂದಿಗೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವುದು ಅಲ್ಲಿಂದಲೇ. ಪರಿಸರ ಹಾಗೂ ಹಸಿರಿನ ಜೊತೆ ನಮಗೆ ಭಾವನಾತ್ಮಕ ಸಂಬಂಧ ರೂಪಿಸುವಲ್ಲೂ ನಮ್ಮ ತಂದೆಯ ಪರಿಸರ ಪ್ರೀತಿ, ಪ್ರಾಮಾಣಿಕ ಕಾಳಜಿಯ ಬಹುದೊಡ್ಡ ಪಾತ್ರವಿದೆ. 1986 ನಮ್ಮ ಶಾಲೆಯ ಪಾಲಿನ ಸಂಕ್ರಮಣ ಕಾಲ. ಕೇವಲ 4 ವಿದ್ಯಾರ್ಥಿಗಳು ಹಾಗೂ 2 ಶಿಕ್ಷಕರಿದ್ದ ನಮ್ಮ ಶಾಲೆಯನ್ನು ಮುಚ್ಚಬೇಕು ಎಂದು ಡಿಡಿಪಿಐ ಆದೇಶ ನೀಡಿದ್ದರು. ಗಾಬರಿಗೊಂಡ ನನ್ನ ಹಿರಿಯಣ್ಣ ಮಾಸ್ಟರ್ ಮಹಮೂದ್ ಅವರು ನನಗೆ ಫೋನ್ ಮಾಡಿದರು. ನಾನು ಆಗಷ್ಟೇ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದ ಕಾಲ. ಆಗ ನನ್ನಲ್ಲಿದ್ದದ್ದು ಒಟ್ಟು 32,000 ರೂಪಾಯಿಗಳು. ಆದರೆ ಶಾಲೆಯನ್ನು ಮುಚ್ಚಲು ಬಿಡುವ ಪ್ರಶ್ನೆಯೇ ಇರಲಿಲ್ಲ. ನಮ್ಮಿಂದ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿ ಶಾಲೆಯನ್ನು ಉಳಿಸಿಕೊಂಡೆವು. ಅಲ್ಲಿಂದ ಪ್ರಾರಂಭವಾದ ಶೈಕ್ಷಣಿಕ ಕ್ಷೇತ್ರದ ಜೊತೆಗಿನ ನಮ್ಮ ಬಂಧ ನಮ್ಮನ್ನು ಇಲ್ಲಿಯವರೆಗೆ ಮುನ್ನಡೆಸಿಕೊಂಡು ಬಂದಿದೆ. ಇವತ್ತು ಬ್ಯಾರೀಸ್ ಸಮೂಹ ದಲ್ಲಿ ಪ್ರಾಥಮಿಕ ಶಾಲೆಯಿಂದ, ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಪದವಿ ಹಾಗೂ ಸ್ನಾತಕೋತ್ತರ ಪದವಿ ನೀಡುವ 22 ಶೈಕ್ಷಣಿಕ ಸಂಸ್ಥೆಗಳಿವೆ. ಅಲ್ಲಿ 5000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬದುಕಿನ ಪಾಠ ಹೇಳಿಸಿಕೊಳ್ಳುತ್ತಿದ್ದಾರೆ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತು ಇಂದು ಜಗತ್ತಿನೆಲ್ಲೆಡೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ, ಬದುಕು ರೂಪಿಸಿಕೊಂಡಿರುವ 23,000ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳನ್ನು ಭೇಟಿಯಾಗುವಾಗ ಸಿಗುವ ಆನಂದ ಹಾಗೂ ಸಂತೃಪ್ತಿಗೆ ಯಾವುದೂ ಸಾಟಿಯಲ್ಲ. ನನ್ನ ಪ್ರಕಾರ ಇದು ಕೇವಲ ದೇವರ ದಯೆಯಿಂದ ಸಾಧ್ಯವಾಗಿದೆ.
ವಾರ್ತಾಭಾರತಿ : ಬೆಂಗಳೂರಿನ ತೀವ್ರ ಪೈಪೋಟಿಯ ರಿಯಲ್ ಎಸ್ಟೇಟ್ ಉದ್ಯಮಕ್ಕೂ, ಕೋಡಿ-ಮಂಗಳೂರುಗಳ ಕಡಲ ಕಿನಾರೆಯ ಶೈಕ್ಷಣಿಕ ಯಶೋಗಾಥೆಗೂ ಎಲ್ಲಿಯ ಸಂಬಂಧ?
ಸೈಯದ್ ಬ್ಯಾರಿ: ನೋಡಿ, ರಿಯಲ್ ಎಸ್ಟೇಟ್ ಕ್ಷೇತ್ರ ಅತ್ಯಂತ ಸಂಕೀರ್ಣವಾದದ್ದು. ಆದರೆ ನಾವು ನಮ್ಮ ಪ್ರತಿ ಹೆಜ್ಜೆಯಲ್ಲೂ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಗೆ ಒತ್ತು ನೀಡುತ್ತಾ ಬಂದಿದ್ದೇವೆ. ನಿರಂತರ ಶ್ರೇಷ್ಠ ಗುಣಮಟ್ಟವನ್ನೇ ಗ್ರಾಹಕರಿಗೆ ನೀಡುವುದು ನಮ್ಮ ಧ್ಯೇಯ.
ನಮ್ಮ ತಂದೆ ನಮ್ಮಲ್ಲಿ ಬಾಲ್ಯದಲ್ಲೇ ಬೆಳೆಸಿದ ಶಿಕ್ಷಣದ ಕುರಿತ ಪ್ರೀತಿ ನಮ್ಮನ್ನು ಆ ಕ್ಷೇತ್ರದ ಜೊತೆಜೊತೆಗೇ ಬೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ನಮಗೆ ರಿಯಲ್ ಎಸ್ಟೇಟ್ ಎಂಬುದು ಸಂಪಾದನೆಯ ದಾರಿ. ಆದರೆ ಶಿಕ್ಷಣ ಹಾಗಲ್ಲ. ಅದು ಮೋಕ್ಷದ ದಾರಿ. ನಾವು ವೃತ್ತಿ ಜೀವನದಲ್ಲಿ ಅದೆಷ್ಟೇ ಸಾಧನೆ ಮಾಡಿದರೂ ನಮಗೆ ನಿಜವಾದ ಸಂತೃಪ್ತಿ ಸಿಗುವುದು ಶಿಕ್ಷಣ ಕ್ಷೇತ್ರದಲ್ಲಿ. ನಾವು ನಮ್ಮ ಸಂಸ್ಥೆಗಳಲ್ಲಿ ಡೊನೇಶನ್, ಕ್ಯಾಪಿಟೇಶನ್ ಫೀ ಗಳನ್ನು ತೆಗೆದುಕೊಳ್ಳುವುದಿಲ್ಲ. ಇದರಿಂದ ನಮಗೆ ಆರ್ಥಿಕವಾಗಿ ಸವಾಲುಗಳು ಎದುರಾಗುತ್ತವೆ. ಆದರೆ ನಮ್ಮ ಬದುಕನ್ನು ಅರ್ಥಪೂರ್ಣಗೊಳಿಸುವುದು ಶೈಕ್ಷಣಿಕ ಕ್ಷೇತ್ರ. ಅದಕ್ಕಾಗಿಯೇ ನಾನು ನನ್ನ ಅರ್ಧಕ್ಕೂ ಹೆಚ್ಚು ಸಮಯವನ್ನು ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿಯೇ ಕಳೆಯುತ್ತೇನೆ.
ವಾರ್ತಾಭಾರತಿ: ಇದು ಗುರು-ಶಿಷ್ಯರ ಹಾಗೆಯೇ ಶಾಲೆ - ಪೋಷಕರ ನಡುವಿನ ಸಂಬಂಧ ವಾಣಿಜ್ಯೀಕರಣಗೊಂಡಿರುವ ಕಾಲ. ಈ ಸವಾಲನ್ನು ಬ್ಯಾರೀಸ್ ಶಿಕ್ಷಣ ಸಂಸ್ಥೆಗಳು ಹೇಗೆ ಎದುರಿಸುತ್ತವೆ?
ಸೈಯದ್ ಬ್ಯಾರಿ: ಉಳಿದೆಲ್ಲ ಕ್ಷೇತ್ರಗಳು ಸಂಪೂರ್ಣ ವಾಣಿಜ್ಯೀಕರಣ ಗೊಂಡಿರುವ ಇಂದಿನ ದಿನಗಳಲ್ಲಿ ಶಿಕ್ಷಣ ರಂಗವೂ ಅದರಿಂದ ಹೊರತಾಗಿಲ್ಲ. ಇಲ್ಲಿರುವ ಸಮಸ್ಯೆಯೇನೆಂದರೆ, ಶಿಕ್ಷಣ ನೀಡುವ ಸಂಸ್ಥೆಗಳು ಹಾಗೂ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ಈ ವಾಣಿಜ್ಯೀಕರಣದ ಬಲಿಪಶುಗಳಾಗಿದ್ದಾರೆ. ಎರಡೂ ಕಡೆಯಿಂದ ಶಿಕ್ಷಣವನ್ನು ಬಳಸಿಕೊಂಡು ಆರ್ಥಿಕ ಲಾಭ ಗಳಿಸುವ ಹಾಗೂ ಪ್ರತಿಷ್ಠೆಯನ್ನು ಗಳಿಸುವ ಹುನ್ನಾರ ನಡೆಯುತ್ತಿರುವುದು ಕಾಣುತ್ತಿದೆ. ಇದರ ಪರಿಣಾಮವನ್ನು ನಾವು ಕಾಣುತ್ತಿದ್ದೇವೆ. 120 ಕೋಟಿಗೂ ಹೆಚ್ಚು ಮಾನವ ಸಂಪನ್ಮೂಲವಿರುವ ಭಾರತದ ಒಂದೇ ಒಂದು ವಿಶ್ವವಿದ್ಯಾನಿಲಯ ಜಗತ್ತಿನ ಶ್ರೇಷ್ಠ 100 ವಿವಿಗಳ ಪಟ್ಟಿಯಲ್ಲಿ ಇಲ್ಲ. ಇದು ನಮ್ಮ ದುರಂತ. ಜಗತ್ತಿನ ಸಣ್ಣಪುಟ್ಟ ದೇಶಗಳು ನಾಯಕರು, ವಿಜ್ಞಾನಿಗಳನ್ನು, ಬುದ್ಧಿಜೀವಿಗಳನ್ನು, ಸಂಶೋಧಕರನ್ನು, ತಾಂತ್ರಿಕ ಸಾಧಕರನ್ನು ಜಗತ್ತಿಗೆ ನೀಡುತ್ತಿದ್ದರೆ ನಾವು ಕೇವಲ ಯಶಸ್ವಿ ಮ್ಯಾನೇಜರ್‌ಗಳನ್ನು ನೀಡುತ್ತಿದ್ದೇವೆ. ಇದನ್ನು ಸರಿಪಡಿಸಬೇಕಾದರೆ ಶಿಕ್ಷಣದ ಉದ್ದೇಶವನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಅದಕ್ಕಾಗಿಯೇ ನಾವು ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಜ್ಞಾನಾರ್ಜನೆಗೆ ಒತ್ತು ನೀಡುತ್ತೇವೆಯೇ ವಿನಃ ಅದರಿಂದ ಸಿಗುವ ಹಣಕ್ಕೆ ಅಲ್ಲ. ಈಗಾಗಲೇ ಹೇಳಿದಂತೆ ನಾವು ಡೊನೇಶನ್ ಹಾಗೂ ಕ್ಯಾಪಿಟೇಶನ್ ಫೀ ತೆಗೆದುಕೊಳ್ಳುವುದಿಲ್ಲ. ನಮ್ಮ ಸಂಸ್ಥೆಗಳಲ್ಲಿ ಪ್ರತಿಭಾ ಪರೀಕ್ಷೆಗಳನ್ನು ನಡೆಸಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ರಿಯಾಯಿತಿಗಳ ಮೂಲಕ ಪ್ರೋತ್ಸಾಹಿಸುತ್ತೇವೆ. ಇನ್ನು ಕಳೆದ ಮೂರು ದಶಕಗಳಿಂದ ಉದ್ಯಮ ರಂಗದಲ್ಲಿ ನಮ್ಮ ಸಂಪರ್ಕದ ಮೂಲಕ ಯಶಸ್ವಿ ಉದ್ಯಮಿಗಳನ್ನು, ಕೈಗಾರಿಕಾ ಕ್ಷೇತ್ರದ ನಾಯಕರನ್ನು, ವ್ಯಕ್ತಿತ್ವ ವಿಕಸನ ತಜ್ಞರನ್ನು, ಚಿಂತಕರನ್ನು ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಆಹ್ವಾನಿಸಿ ವಿದ್ಯಾರ್ಥಿಗಳೊಂದಿಗೆ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವಂತೆ ಮಾಡುತ್ತೇವೆ. ಇದರಿಂದ ತರಗತಿ, ಕೊಠಡಿಯಾಚೆಗಿನ ಸ್ಪರ್ಧಾತ್ಮಕ ಜಗತ್ತಿನ ಪರಿಚಯ ವಿದ್ಯಾರ್ಥಿಗಳಿಗಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಭವಿಷ್ಯದ ಜಾಗತಿಕ ನಾಯಕರನ್ನು ರೂಪಿಸುವುದು ನಮ್ಮ ಉದ್ದೇಶ.
ವಾರ್ತಾಭಾರತಿ : ಈಗ ಉತ್ತಮ ಶಿಕ್ಷಕರು ಸಿಗುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರವೇನು ?
ಸೈಯದ್ ಬ್ಯಾರಿ: ಇಂದು ಆರೋಗ್ಯ, ಆಹಾರ ಹಾಗೂ ಶಿಕ್ಷಣದಂತಹ ಕ್ಷೇತ್ರಗಳೂ ಭ್ರಷ್ಟಗೊಂಡಿವೆ. ಇದು ನಿಜಕ್ಕೂ ಅಪಾಯಕಾರಿ. ಪ್ರಾಮಾಣಿಕ ಕಾಳಜಿಯುಳ್ಳ, ತಮ್ಮ ವೃತ್ತಿಗೆ ಪೂರ್ಣ ನಿಷ್ಠೆಯುಳ್ಳ ಶಿಕ್ಷಕರು ಸಿಗುವುದು ಇಂದು ಬಹುದೊಡ್ಡ ಸವಾಲಾಗಿದೆ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ನಾವು ‘‘ಪರಿಶುದ್ಧ ಮನಸ್ಸು, ಸ್ಪಷ್ಟ ವಿಚಾರ’’ ಎಂಬ ಧ್ಯೇಯದೊಂದಿಗೆ ಹೋಗುತ್ತಿದ್ದೇವೆ. ಆದ್ದರಿಂದ ನಾವು ಶಿಕ್ಷಕರಲ್ಲಿ ಬುದ್ಧಿವಂತಿಕೆ ಹಾಗೂ ನೈತಿಕತೆ ಎರಡನ್ನೂ ನೋಡುತ್ತೇವೆ. ಇದೇ ಉದ್ದೇಶವಿಟ್ಟುಕೊಂಡು ನಾವು ಬ್ಯಾರೀಸ್ ಫೌಂಡೇಶನ್ ಫಾರ್ ಟೀಚರ್ಸ್ ಟ್ರೈನಿಂಗ್, ಬ್ಯಾರೀಸ್ ಕಾಲೇಜ್ ಆಫ್ ಎಜುಕೇಶನ್ ಹಾಗೂ ಹಿಸ್‌ಗ್ರೇಸ್ ಅಕಾಡಮಿ ಆಫ್ ಮೊಂಟೆಸರಿ ಲರ್ನಿಂಗ್‌ಗಳನ್ನು ಪ್ರಾರಂಭಿಸಿದೆವು. ವೃತ್ತಿನಿಷ್ಠೆ ಮತ್ತು ನೈತಿಕ ಬದ್ಧತೆ ಇವೆರಡನ್ನು ಶಿಕ್ಷಕರಲ್ಲಿ ಬೆಳೆಸುವುದು ಅತ್ಯಗತ್ಯ. ಶಿಕ್ಷಕರು ಹೊಸ ತಲೆಮಾರುಗಳು ತಮ್ಮಿಂದ ತರಬೇತುಗೊಳ್ಳುತ್ತಿರುವುದರಲ್ಲಿ ಸಂತೃಪ್ತಿಯನ್ನು ಕಂಡಾಗ ಅವರು ನಿಜವಾದ ಶಿಕ್ಷಕರಾಗುತ್ತಾರೆ. ಇತ್ತೀಚೆಗೆ ನಾನು ಗಮನಿಸಿದ ವರದಿಯೊಂದರ ಪ್ರಕಾರ, ಹೆಚ್ಚಿನ ಸಾಧಕರು ಗ್ರಾಮೀಣ ಭಾಗದಿಂದ ಬಂದಿರುತ್ತಾರೆ, ಅವರ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರುವುದಿಲ್ಲ ಹಾಗೂ ಅವರ ಕುಟುಂಬದಲ್ಲಿ ಕನಿಷ್ಠ ಒಬ್ಬರು ಶಿಕ್ಷಕರಿರುತ್ತಾರೆ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿದೆ. ಯಾವುದಕ್ಕೂ ಸಲ್ಲದವರನ್ನು ಶಿಕ್ಷಕರಾಗಿಸದೆ ಪ್ರತಿಭಾವಂತರನ್ನು ಈ ಕ್ಷೇತ್ರಕ್ಕೆ ತರಬೇಕಾಗಿದೆ. ಅವರ ವೃತ್ತಿಯ ಮಹತ್ವವನ್ನು ಅವರಿಗೆ ತಿಳಿಹೇಳಬೇಕಾಗಿದೆ. ಇದು ನಾವು ನಮ್ಮ ಮುಂದಿನ ತಲೆಮಾರಿಗೆ ಮಾಡುವ ಬಹುದೊಡ್ಡ ಉಪಕಾರ.
ವಾರ್ತಾಭಾರತಿ : ಬ್ಯಾರೀಸ್‌ನ ಪ್ರಪ್ರಥಮ ಶಾಲೆ ಆರಂಭವಾದ ಕಾಲಕ್ಕೆ ಹೋಲಿಸಿದರೆ ಈಗ ಮುಸ್ಲಿಮ್ ಹೆಣ್ಣು ಮಕ್ಕಳ ಶಿಕ್ಷಣದ ಮಟ್ಟ ತುಂಬಾ ಸುಧಾರಿಸಿದೆ. ಇದರಿಂದ ಮುಸ್ಲಿಮ್ ಸಮುದಾಯದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ?
ಸೈಯದ್ ಬ್ಯಾರಿ: ಹೌದು. ಈಗ ಮುಸ್ಲಿಮರು ಅದರಲ್ಲೂ ಮುಸ್ಲಿಮ್ ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಇಲ್ಲಿ ಶಿಕ್ಷಣದ ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದೆ ಮತ್ತೆ ಸಾಮಾಜಿಕ ಸಮಸ್ಯೆಗಳು ಎದುರಾಗುತ್ತಿವೆ. ಸುಶಿಕ್ಷಿತ ಹೆಣ್ಣುಮಕ್ಕಳಿಗೆ ಶಿಕ್ಷಣದ ಉದ್ದೇಶದ ಅರಿವಿರಬೇಕು ಹಾಗೂ ಅವರು ಆ ನಿಟ್ಟಿನಲ್ಲಿ ತಾವು ಗಳಿಸಿದ ಶಿಕ್ಷಣವನ್ನು ಬಳಸಿಕೊಳ್ಳಬೇಕು. ಕೇವಲ ಸಂಪಾದನೆ, ಸ್ಥಾನಮಾನ, ಉದ್ಯೋಗ -ಇವುಗಳೇ ಮಹಿಳೆಯರ ಶಿಕ್ಷಣದ ಗುರಿಯಾದರೆ ಇದರಿಂದ ಒಟ್ಟಾರೆ ಸಮಾಜದಲ್ಲಿ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಇದೇ ಸಂದರ್ಭದಲ್ಲಿ ಮುಸ್ಲಿಮ್ ಯುವಕರು ಉನ್ನತ ಶಿಕ್ಷಣ ಪಡೆಯಲು ಹಿಂಜರಿದು ಗಲ್ಫ್ ದಾರಿ ಹಿಡಿಯುವ ಪ್ರವೃತ್ತಿ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಬೀಳಬೇಕಿದೆ.
ವಾರ್ತಾಭಾರತಿ : 110 ವರ್ಷಗಳ ಸಾಧನೆಯನ್ನು ಆಚರಿಸಲು ಏನೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೀರಿ?
ಸೈಯದ್ ಬ್ಯಾರಿ : ಈ ವರ್ಷಪೂರ್ತಿ ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಂಡಿದ್ದೇವೆ. ನಾವು ಅಳವಡಿಸಿಕೊಂಡಿರುವ ಸಾಮಾಜಿಕ ನಿಷ್ಠೆಗೆ ಅನುಗುಣವಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಸರಣಿ ಜನವರಿಯಲ್ಲಿ ಉದ್ಘಾಟನೆಗೊಂಡಿದೆ.ಪ್ರತಿ ತಿಂಗಳು ‘ನನ್ನ ಕನಸಿನ ಭಾರತ’, ‘ತೆರೆಮರೆಯ ಹೀರೋಗಳು’, ‘ಮಹಿಳೆಯರ ಸ್ಥಾನಮಾನ’, ‘ಚಾಂಪಿಯನ್ ನ ಹಾದಿ’, ‘ಸ್ವಚ್ಛ ಭಾರತ, ಹಸಿರು ಭಾರತ’, ಭ್ರಷ್ಟಾಚಾರ ಹಾಗೂ ಕೋಮುವಾದದ ನಿರ್ಮೂಲನೆ’, ‘ಹಿರಿಯರ ಆರೈಕೆ, ಯುವಪೀಳಿಗೆಯ ಓಲೈಕೆ’, ‘ಹಳೆ ವಿದ್ಯಾರ್ಥಿಗಳ ಸಂಗಮ’ ಇತ್ಯಾದಿ ಕೇಂದ್ರೀಯ ವಿಷಯಗಳ ಮೇಲೆ ವಿಶಿಷ್ಟ ಕಾರ್ಯಕ್ರಮಗಳು ನಡೆಯುತ್ತಿವೆ .
ವಾರ್ತಾಭಾರತಿ : ಶೈಕ್ಷಣಿಕ ರಂಗದಲ್ಲಿ ಬ್ಯಾರೀಸ್ ಸಮೂಹ ಸಂಸ್ಥೆಗಳ ಮುಂದಿನ ಯೋಜನೆಗಳೇನು?
ಸೈಯದ್ ಬ್ಯಾರಿ: ಕುಂದಾಪುರದ ಕೋಡಿ ಹಾಗೂ ಮಂಗಳೂರಿನಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಹಂತದವರೆಗೆ ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣ ನೀಡುವ 22 ಸಂಸ್ಥೆಗಳನ್ನು ಬ್ಯಾರೀಸ್ ನಡೆಸುತ್ತಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬೆಂಗಳೂರು ಮತ್ತು ರಾಜ್ಯದ ಇತರೆಡೆಗಳಲ್ಲಿ ವಿಸ್ತರಿಸುವ ಯೋಜನೆ ಇದೆ. ಜಾಗತಿಕ ಮಾನ್ಯತೆಯ ವಿಶ್ವವಿದ್ಯಾನಿಲಯವಾಗಿ ಈ ವಿಶ್ವಕ್ಕೆ ಅತ್ಯುತ್ತಮ ಪ್ರಜೆಗಳನ್ನು ನೀಡುವಂತಹ ಶಿಕ್ಷಣ ಸಮೂಹವಾಗುವುದು ನಮ್ಮ ಗುರಿ. ಅದಕ್ಕೆ ದೇವರ ದಯೆ ಹಾಗೂ ಅಭಯ ಸದಾ ಇರುತ್ತದೆ ಎಂಬ ಭರವಸೆ ನನಗಿದೆ.
www.bitmangalore.edu.in
www.beads.edu.in
ಮೊ: 98445 35720