ಶ್ಯಾಂಭಟ್ ವಿರುದ್ಧ ಮತ್ತೊಂದು ದೂರು
ಬೆಂಗಳೂರು, ಜೂ.7: ರಾಜ್ಯ ಸರಕಾರದಿಂದ ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸುಗೊಂಡಿರುವ ಬಿಡಿಎ ಆಯುಕ್ತ ಶ್ಯಾಂಭಟ್ ವಿರುದ್ಧ ಲೋಕಾಯುಕ್ತಕ್ಕೆ ಆಮ್ ಆದ್ಮಿ ಪಕ್ಷದ ಮುಖಂಡ ರವಿಕೃಷ್ಣಾರೆಡ್ಡಿ ಅವರು ಮಂಗಳವಾರ ದೂರು ನೀಡಿದ್ದಾರೆ.
ಮುಂದಿನ ಐದು ವರ್ಷಗಳ ಅವಧಿಗೆ ಕೆಪಿಎಸ್ಸಿ ಅಧ್ಯಕ್ಷರನ್ನಾಗಿ ಶ್ಯಾಂಭಟ್ ಅವರನ್ನು ನೇಮಕ ಮಾಡಲು ರಾಜ್ಯ ಸರಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ. ಈ ಸಂಬಂಧ ರಾಜ್ಯಪಾಲರು ಲೋಕಾಯುಕ್ತದಿಂದ ವರದಿ ಕೇಳಿದ್ದು, ಆ ವರದಿಗಳ ಜತೆಗೆ ಪ್ರಮುಖವಾಗಿ ಕೆಐಎಡಿಬಿಯಲ್ಲಿ ನಡೆದ ಭಾರೀ ಅಕ್ರಮದ ಕುರಿತ ಪ್ರಮುಖ ದಾಖಲೆಯನ್ನು ಸಲ್ಲಿಕೆ ಮಾಡುವಂತೆ ದೂರಿನಲ್ಲಿ ರವಿಕೃಷ್ಣಾರೆಡ್ಡಿ ಕೋರಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಶ್ಯಾಂ ಭಟ್ ವಿರುದ್ಧ ಲೋಕಾಯುಕ್ತದಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಲ್ಲದೆ, 13ಕ್ಕೂ ಹೆಚ್ಚು ಪ್ರಕರಣಗಳು ಖುಲಾಸೆಯಾಗಿವೆ. ಇನ್ನೂ 18 ಪ್ರಕರಣಗಳು ಬಾಕಿ ಉಳಿದಿವೆ. ಇಂತಹ ವ್ಯಕ್ತಿಯನ್ನು ಕರ್ನಾಟಕ ಲೋಕಾಸೇವಾ ಆಯೋಗಕ್ಕೆ ನೇಮಕ ಮಾಡಿದರೆ, ಆ ಸಂಸ್ಥೆಯೂ ಭ್ರಷ್ಟಾಚಾರದ ಕೂಪವಾಗುತ್ತದೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ಶ್ಯಾಂಭಟ್ ಅವರ ಬೆದರಿಕೆಗೆ ಒಳಗಾಗಿ ಈ ನಿರ್ಧಾರ ಕೈಗೊಂಡಿದ್ದಾರಾ ಅಥವಾ ಅಧಿಕಾರದ ಮಂಪರಿನಲ್ಲಿ ಶಿಫಾರಸು ಮಾಡಿದ್ದಾರಾ ಎಂದು ತಿಳಿಯುತ್ತಿಲ್ಲ ಎಂದರು.