ರಿಯೋ ಒಲಿಂಪಿಕ್ಸ್: ಪೇಸ್‌ಗೆ ಕೈಕೊಟ್ಟು ಸಾಕೇತ್‌ರನ್ನು ಆಯ್ಕೆ ಮಾಡಿದ ಬೋಪಣ್ಣ

Update: 2016-06-10 08:07 GMT

ಹೊಸದಿಲ್ಲಿ, ಜೂ.10: ರೋಹನ್ ಬೋಪಣ್ಣ ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ತನ್ನ ಜೊತೆಗಾರನಾಗಿ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಬದಲಿಗೆ ಯುವ ಆಟಗಾರ ಸಾಕೇತ್ ಮೈನೇನಿ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

 ಈ ಮೂಲಕ 2012ರ ಲಂಡನ್ ಒಲಿಂಪಿಕ್ಸ್‌ನ ವೇಳೆ ಉದ್ಬವಿಸಿದ ಟೆನಿಸ್ ಆಟಗಾರರ ಆಯ್ಕೆಯ ಗೊಂದಲ ಪುನರಾವರ್ತಿಸಿದೆ.

 ಎಟಿಪಿ ರ್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಬೋಪಣ್ಣ ರಿಯೋ ಗೇಮ್ಸ್‌ಗೆ ನೇರ ಟಿಕೆಟ್ ಪಡೆದಿದ್ದರು. ಮಾತ್ರವಲ್ಲ ತನ್ನ ಜೊತೆಗಾರನನ್ನು ತಾನೇ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನೂ ಪಡೆದಿದ್ದರು. ಬೋಪಣ್ಣ ತನ್ನ ಜೊತೆಗಾರನ ಹೆಸರನ್ನು ಶುಕ್ರವಾರ ಅಖಿಲ ಭಾರತ ಟೆನಿಸ್ ಸಂಸ್ಥೆಗೆ ತಿಳಿಸಿದ್ದಾರೆ. ಆದರೆ, ರಾಷ್ಟ್ರೀಯ ಟೆನಿಸ್ ಆಯ್ಕೆಗಾರರು ಶನಿವಾರ ರಿಯೋ ಗೇಮ್ಸ್‌ಗೆ ತಮ್ಮದೇ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ.

ಭಾರತ 2012ರ ಒಲಿಂಪಿಕ್ಸ್‌ನಲ್ಲಿ ಇದೇ ರೀತಿ ಆಯ್ಕೆಗೆ ಸಂಬಂಧಿಸಿ ವಿವಾದಕ್ಕೆ ಸಿಲುಕಿತ್ತು. ಬೋಪಣ್ಣ ಅವರು ಮಹೇಶ್ ಭೂಪತಿ ಅವರೊಂದಿಗೆ ಆಡಿದ್ದ ಕಾರಣ ಪೇಸ್ ಹೊಸ ಆಟಗಾರ ವಿಷ್ಣುವರ್ಧನ್‌ರೊಂದಿಗೆ ಒಲಿಂಪಿಕ್ಸ್‌ನಲ್ಲಿ ಆಡಬೇಕಾದ ಪರಿಸ್ಥಿತಿ ಎದುರಾಗಿತ್ತು.

‘‘2012ರಲ್ಲಿ ಒಲಿಂಪಿಕ್ಸ್‌ನಲ್ಲಿ ನಡೆದಿರುವ ಆಯ್ಕೆಯ ಗೊಂದಲ ಪುನರಾವರ್ತನೆಯಾಗದಿರಲಿ. ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮ. ಬೋಪಣ್ಣರ ಮಾತಿಗೆ ಖಂಡಿತವಾಗಿಯೂ ಆದ್ಯತೆ ನೀಡಲಿದ್ದೇವೆ’’ ಎಂದು ಎಐಟಿಎ ಸಿಇಒ ಹಿರೊನ್ಮಯ್ ಚಟರ್ಜಿ ತಿಳಿಸಿದ್ದಾರೆ.

ಪೇಸ್ ಬ್ರೆಝಿಲ್‌ನಲ್ಲಿ ಏಳನೆ ಬಾರಿ ಒಲಿಂಪಿಕ್ಸ್‌ನಲ್ಲಿ ಆಡುವ ಮೂಲಕ ದಾಖಲೆ ನಿರ್ಮಿಸಲು ಎದುರು ನೋಡುತ್ತಿದ್ದಾರೆ. ಬೋಪಣ್ಣ ಅವರೊಂದಿಗೆ ರಿಯೋ ಗೇಮ್ಸ್ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News