×
Ad

ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ | ಒಂದು ಪಂದ್ಯದಿಂದ ಹರ್ಷಿತ್ ರಾಣಾಗೆ ನಿಷೇಧ

Update: 2024-04-30 21:48 IST

ಹರ್ಷಿತ್ ರಾಣಾ | PC : PTI 

ಹೊಸದಿಲ್ಲಿ : ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿರುವ ಕಾರಣಕ್ಕೆ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ತಂಡದ ವೇಗದ ಬೌಲರ್ ಹರ್ಷಿತ್ ರಾಣಾಗೆ ಒಂದು ಪಂದ್ಯದಿಂದ ನಿಷೇಧಿಸಲಾಗಿದ್ದು, ಪಂದ್ಯ ಶುಲ್ಕದಲ್ಲಿ ಶೇ.100ರಷ್ಟು ದಂಡ ವಿಧಿಸಲಾಗಿದೆ.

ಸೋಮವಾರ ಈಡನ್ ಗಾರ್ಡನ್ಸ್ನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಈ ಹಿಂದೆ ಕೆಕೆಆರ್ ತವರಿನಲ್ಲಿ ಆಡಿದ್ದ ಪಂದ್ಯದ ವೇಳೆ ರಾಣಾ ಪಂದ್ಯ ಶುಲ್ಕದಲ್ಲಿ ಶೇ.60ರಷ್ಟು ದಂಡ ಪಾವತಿಸಿದ್ದರು. ಸನ್ರೈಸರ್ಸ್ ಹೈದರಾಬಾದ್ ಬ್ಯಾಟರ್ ಮಯಾಂಕ್ ಅಗರ್ವಾಲ್ ಔಟಾದ ನಂತರ ರಾಣಾ ಫ್ಲೈಯಿಂಗ್ ಕಿಸ್ ನೀಡಿ ಅಶಿಸ್ತಿನಿಂದ ವರ್ತಿಸಿದ್ದರು.

ಸೋಮವಾರ ನಡೆದಿದ್ದ ಪಂದ್ಯದಲ್ಲಿ ರಾಣಾ ಎಸೆದ ಫುಲ್ ಲೆಂಗ್ತ್ ಎಸೆತವು ಅಭಿಷೇಕ್ ಪೊರೆಲ್ ಸ್ಟಂಪನ್ನು ಉಡಾಯಿಸಿತ್ತು. ಅಭಿಷೇಕ್ ಪೆವಿಲಿಯನ್ ಗೆ ಸಾಗುತ್ತಿದ್ದಾಗ ಮತ್ತೊಮ್ಮೆ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ರಾಣಾ ನೀತಿ ಸಂಹಿತೆ ಉಲ್ಲಂಘಿಸಿದ್ದರು.

ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5ರ ಅಡಿಯಲ್ಲಿ ಲೆವೆಲ್-1 ತಪ್ಪನ್ನು ರಾಣಾ ಎಸಗಿದ್ದಾರೆ. ಅವರು ಮ್ಯಾಚ್ ರೆಫರಿಯ ನಿರ್ಧಾರವನ್ನು ಸ್ವೀಕರಿಸಿದ್ದಾರೆ. ನೀತಿ ಸಂಹಿತೆಯ ಲೆವೆಲ್-1 ಉಲ್ಲಂಘನೆಗೆ ಸಂಬಂಧಿಸಿ ಮ್ಯಾಚ್ ರೆಫರಿಯವರ ನಿರ್ಧಾರವೇ ಅಂತಿಮ ಎಂದು ಐಪಿಎಲ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಆಟಗಾರನಿಗೆ ಈ ಹಿಂದೆ ಇದೇ ರೀತಿಯ ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿತ್ತು ಎಂದು ಐಪಿಎಲ್ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News