ಬಾಕ್ಸಿಂಗ್ ದೊರೆಯ ಮರೆಯಲಾಗದ ಪ್ರಹಾರಗಳು
ತಮ್ಮ ತೀಕ್ಷ್ಣವಾದ ಚುಚ್ಚು ಮಾತುಗಳಿಂದ ಪದೇ ಪದೇ ಜಗತ್ತಿನ ಬಿಳಿ ವರ್ಣವಾದಿಗಳಿಗೆ ತೀವ್ರ ಮುಜುಗರ ಉಂಟು ಮಾಡುತ್ತಿದ್ದ ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿ ಅವರ ಕೆಲವು ಪ್ರಸಿದ್ಧ ಹೇಳಿಕೆಗಳು ಇಲ್ಲಿವೆ. ಅಲಿ ಕೇವಲ ಬಾಕ್ಸರ್ ಆಗಿರದೆ ಸಮಕಾಲೀನ ವಾಸ್ತವಗಳನ್ನು ವಿಮರ್ಶಾತ್ಮಕವಾಗಿ ನೋಡುವ ಮತ್ತು ಅನ್ಯಾಯಗಳ ವಿರುದ್ಧ ತಮ್ಮ ಆಕ್ರೋಶವನ್ನು ಪರಿಣಾಮಕಾರಿಯಾಗಿ ಪ್ರಕಟಿಸುವ ಸಾಮರ್ಥ್ಯ ಉಳ್ಳವರಾಗಿದ್ದರು ಎಂಬುದಕ್ಕೆ ಅವರ ಈ ನುಡಿಗಳು ಸಾಕ್ಷಿ. ಅವರ ಹೆಚ್ಚಿನ ನುಡಿಗಳು ಅವರೊಳಗಿದ್ದ ಆಧ್ಯಾತ್ಮಿಕ ಜಾಗೃತಿ ಮತ್ತು ಸಂವೇದನಾ ಶೀಲತೆಯ ಕಡೆಗೂ ಗಮನ ಸೆಳೆಯುತ್ತವೆ. ಪ್ರೀತಿಯ ಶಕ್ತಿಯಲ್ಲಿ ವಿಶ್ವಾಸ ಇರುವ ಈ ಜಗತ್ತಿನ ಶೇ.10 ಮಂದಿಯಾದರೂ ತಮ್ಮ ಪೈಕಿ ಯಾರು ಅತ್ಯಧಿಕ ಜನರ ಪಾಲಿಗೆ ಅತ್ಯಧಿಕ ಉಪಯುಕ್ತರಾಗಬಲ್ಲರು ಎಂಬ ಸ್ಪರ್ಧೆಗೆ ಇಳಿದಿದ್ದರೆ ಈ ನಮ್ಮ ಜಗತ್ತು ಅತ್ಯಂತ ಸುಂದರ ಜಗತ್ತಾಗಿ ಇರುತ್ತಿರಲಿಲ್ಲವೇ?
►ಜನರು ನನ್ನನ್ನು ಪ್ರೀತಿಸಿದಂತೆ ಎಲ್ಲರನ್ನೂ ಪ್ರೀತಿಸಲಿ. ಆಗ ಈ ಜಗತ್ತು ತುಂಬಾ ಸುಂದರವಾಗಿರುತ್ತದೆ.
►ಬಲೆ ಮೀನನ್ನು ಹಿಡಿದಂತೆ ಪ್ರೀತಿಯು ಎಲ್ಲರ ಮನಸ್ಸುಗಳನ್ನು ಹಿಡಿದುಕೊಳ್ಳುತ್ತದೆ.
►ಪ್ರಮಾದಗಳ ಬಗ್ಗೆ ತಲೆ ಕೆಡಿಸಿಕೊಂಡು ಕೂರುವುದು ಅತಿ ದೊಡ್ಡ ಪ್ರಮಾದವಾಗಿದೆ.
►ನಿಮ್ಮ ಕನಸುಗಳು ನನಸಾಗಬೇಕೇ? ಮೊದಲು ನೀವು ಎಚ್ಚೆತ್ತುಕೊಳ್ಳಿ. ಒಳ್ಳೆಯ ಉತ್ತರ ಹೊಳೆಯದಿದ್ದರೆ ಮೌನವೇ ಬಂಗಾರ.
►ನೀವು ಸರಿಯಾದುದನ್ನು ಮಾಡಿದರೆ ಯಾರಿಗೂ ನೆನೆಪಿರುವುದಿಲ್ಲ. ನೀವು ತಪ್ಪು ಮಾಡಿದರೆ ಮಾತ್ರ ಯಾರೂ ಮರೆಯುವುದಿಲ್ಲ.
►ಇದು (ಪಾರ್ಕಿನ್ ಸನ್) ನನ್ನ ಬದುಕಿನ ಅತ್ಯಂತ ಕಠಿಣ ಹೋರಾಟವಾಗಿದೆ. ಇದರಲ್ಲಿ ಸಂಕಟವೇನೂ ಇಲ್ಲ. ನಾನು ಪ್ರಾರ್ಥನೆ ಸಲ್ಲಿಸುತ್ತಿದ್ದೇನೆಯೇ ಮತ್ತು ನಾನು ನನ್ನ ವಿಶ್ವಾಸವನ್ನು ಉಳಿಸಿ ಕೊಳ್ಳುತ್ತೇನೆಯೇ ಎಂಬ ಪರೀಕ್ಷೆ ಇದು. ಎಲ್ಲ ಮಹಾನ್ ಚೇತನಗಳನ್ನು ದೇವರು ಪರೀಕ್ಷಿಸಿದ್ದಾನೆ.
ನನಗೆ ಭೇಟಿಯಾಗುವ ಕೌತುಕ ಇರುವುದು, ಪ್ರವಾದಿ ಮುಹಮ್ಮದ್ (ಸ)ರನ್ನು ಮಾತ್ರ.
►ದೇವರ ಯೋಜನೆಯಲ್ಲಿ ಏನಿದೆ ಎಂಬುದು ನನಗೆ ತಿಳಿಯದು. ಆದರೆ ಆ ಯೋಜನೆಯ ಜೊತೆಗೆ ನಾನು ಬದುಕಬೇಕಾಗಿದೆ ಎಂಬುದು ಮಾತ್ರ ನನಗೆ ತಿಳಿದಿದೆ.
►ಮಹಾನ್ ಎನಿಸಿಕೊಂಡ ಯಾವ ವ್ಯಕ್ತಿಗಳೂ ಕೇವಲ ತಮ್ಮ ಸ್ವಂತಕ್ಕಾಗಿ ಮಹಾನ್ ಎನಿಸಿಕೊಳ್ಳಲಿಲ್ಲ. ಅವರೆಲ್ಲಾ ಇತರರಿಗೆ ಹಿತವನ್ನು ಮಾಡಲು ಹೊರಟವರು ಮತ್ತು ದೇವರ ಸಾಮೀಪ್ಯ ಬಯಸಿದವರು.
►ಬಾಕ್ಸಿಂಗ್ ಅಂದರೆ ಸಾವಿರಾರು ಬಿಳಿಯರು ಸೇರಿ ಇಬ್ಬರು ಕರಿಯರು ಪರಸ್ಪರ ಹೊಡೆದಾಡುವುದನ್ನು ವೀಕ್ಷಿಸಿ ಸಂತೋಷ ಪಡೆಯುವ ಕ್ರೀಡೆ.
►ನಾನೇ ನಂಬರ್ ವನ್, ನೀನಲ್ಲ, ಎಂಬುದನ್ನು ನನಗೆ ನೆನಪಿಸಲಿಕ್ಕಾಗಿ ದೇವರು ನನಗೆ ಈ (ಪಾರ್ಕಿನ್ ಸನ್) ರೋಗವನ್ನು ನೀಡಿದ್ದಾನೆ.
►ಜನ ಸೇವೆ ಎಂಬುದು ದೇವರು ನಮಗೆ ನೀಡಿರುವ ಭೂಮಿ ಎಂಬ ಕೋಣೆಗೆ ನಾವು ಸಲ್ಲಿಸುವ ಬಾಡಿಗೆ.
►ಒಬ್ಬ ವ್ಯಕ್ತಿ ತನ್ನ ಇಪ್ಪತ್ತನೆ ವಯಸ್ಸಿನಲ್ಲಿ ಜಗತ್ತನ್ನು ನೋಡುವ ದೃಷ್ಟಿಕೋನ ಮತ್ತು ಅವನು ತನ್ನ ಐವತ್ತನೆ ವಯಸ್ಸಿನಲ್ಲಿ ಜಗತ್ತನ್ನು ನೋಡುವ ದೃಷ್ಟಿಕೋನದಲ್ಲಿ ವ್ಯತ್ಯಾಸವೇನೂ ಇಲ್ಲವೆಂದಾದರೆ ಅವನು ತನ್ನ ಆಯುಷ್ಯದ ಮೂವತ್ತು ವರ್ಷಗಳನ್ನು ವ್ಯರ್ಥಗೊಳಿಸಿದ್ದಾನೆ ಎಂದೇ ಅರ್ಥ.
►ದ್ವೇಷ ಹಾಗೂ ಹಿಂಸೆಯ ಜೊತೆ ಇಸ್ಲಾಮ್ ಧರ್ಮ ಹಾಗೂ ಮುಸ್ಲಿಮ್ ಸಮಾಜದ ಹೆಸರನ್ನು ಜೋಡಿಸಲಾದಾಗ ನನಗೆ ದುಃಖ ವಾಗುತ್ತದೆ. ಇಸ್ಲಾಮ್ ಹಂತಕ ಧರ್ಮ ಅಲ್ಲ. ಇಸ್ಲಾಮ್‌ನ ಅರ್ಥವೇ ಶಾಂತಿ. ಜನರು ಈ ರೀತಿ ಮುಸ್ಲಿಮರ ಮೇಲೆ ಹಿಂಸೆಯ ಹಣೆಪಟ್ಟಿ ಕಟ್ಟುತ್ತಿರುವಾಗ ನಾನು ನನ್ನ ಮನೆಯಲ್ಲಿ ಮೂಕ ವೀಕ್ಷಕನಾಗಿರಲು ಸಾಧ್ಯವಿಲ್ಲ.
►ನಾನು ಆರಿಸಿಕೊಂಡಿರುವ ಗುರಿಗಳು ನನ್ನನ್ನು ಸದಾ ಚಲನ ಶೀಲನಾಗಿಡುತ್ತವೆ.
►ನಿಮ್ಮ ಮಾತಿನ ಪರವಾಗಿ ನಿಮ್ಮ ಬಳಿ ಪುರಾವೆಗಳಿದ್ದರೆ ಆ ನಿಮ್ಮ ಮಾತು ಬೊಗಳೆ ಎನಿಸಿಕೊಳ್ಳುವುದಿಲ್ಲ.
►ಸ್ನೇಹ ಅಂದರೇನು ಎಂಬುದನ್ನು ವ್ಯಾಖ್ಯಾನಿಸುವುದು ಕಷ್ಟ. ಅದು ನಿಮಗೆ ಶಾಲೆಯಲ್ಲಿ ಕಲಿಯಲು ಸಿಗುವುದಿಲ್ಲ. ಆದರೆ ನೀವು ಸ್ನೇಹವನ್ನು ಅರಿತಿಲ್ಲ ಎಂದಾದರೆ ಬದುಕಿನಲ್ಲಿ ಮತ್ತೇನನ್ನೂ ಕಲಿತಿಲ್ಲ ಎಂದೇ ಅರ್ಥ.
► ನೀವು ನಿಜಕ್ಕೂ ದೇವರನ್ನು ಪ್ರೀತಿಸುವವರಾಗಿದ್ದರೆ ನೀವು ಅವನ ದಾಸರ ಪೈಕಿ ಕೇವಲ ಕೆಲವರನ್ನು ಮಾತ್ರ ಪ್ರೀತಿಸುವವರಾಗಿ ಇರುವುದಿಲ್ಲ.
►ದೇವರು ಯಾರ ಮೇಲೂ ಅವರಿಗೆ ಹೊರಲಾಗದ ಭಾರವನ್ನು ಹೊರಿಸುವುದಿಲ್ಲ.
►ಚಿಟ್ಟೆಯಂತೆ ತೇಲಬೇಕು, ಜೇನು ನೊಣದಂತೆ ಕುಟುಕಬೇಕು.
►ಕಣ್ಣಿಗೆ ಕಾಣದ್ದನ್ನು ಹೊಡೆಯಲು ಕೈಗೆ ಸಾಧ್ಯವಾಗುವುದಿಲ್ಲ.
►ನೀವು ನನ್ನನ್ನು ಹೊಡೆದು ಉರುಳಿಸುವ ಕನಸು ಕಂಡಿದ್ದರೆ, ಎಚ್ಚೆತ್ತು ಕೊಂಡು ಕ್ಷಮೆಯಾಚಿಸುವುದು ಒಳ್ಳೆಯದು.
►ನಾನು ಅಲ್ಲಾಹನನ್ನು ನಂಬಿದ್ದೇನೆ. ಹಾಗೆಯೇ ನಾನು ಇಸ್ಲಾಮ್ ಧರ್ಮ ಹಾಗೂ ಶಾಂತಿಯಲ್ಲಿ ನಂಬಿಕೆ ಉಳ್ಳವನಾಗಿದ್ದೇನೆ.
►ನಾನು ನನ್ನ ಮನೆಯೊಳಗೆ ತುಂಬಾ ಸಜ್ಜನನಾಗಿರುತ್ತೇನೆ. ಆದರೆ ಈ ವಿಷಯವನ್ನು ನಾನು ಹೊರಗೆ ಯಾರಿಗೂ ತಿಳಿಸುವುದಿಲ್ಲ. ಏಕೆಂದರೆ ನನಗೆ ತಿಳಿದಿರುವಂತೆ ತುಂಬಾ ಸೌಜನ್ಯ ಇರುವ ಹೆಚ್ಚಿನವರು ಬದುಕಿನಲ್ಲಿ ಹೆಚ್ಚೇನನ್ನೂ ಸಾಧಿಸುವುದಿಲ್ಲ.
►ಯುದ್ಧಗಳು ಭೂಪಟಗಳನ್ನು ಬದಲಿಸಿಬಿಡುತ್ತವೆ. ಆದರೆ ದಾರಿದ್ರ್ಯದ ವಿರುದ್ಧ ಯುದ್ಧ ಸಾರುವ ಮೂಲಕ ನಾವು ಬದಲಾವಣೆಯ ಭೂಪಟ ನಿರ್ಮಿಸಬಹುದು.
► ಜನರನ್ನು ಅವರ ಬಣ್ಣದ ಕಾರಣಕ್ಕೆ ದ್ವೇಷಿಸುವುದು ಘೋರ ತಪ್ಪು. ನೀವು ಯಾವ ಬಣ್ಣದವರನ್ನು ದ್ವೇಷಿಸುತ್ತೀರಿ ಎಂಬುದು ಮುಖ್ಯವಲ್ಲ. ಬಣ್ಣದ ಆಧಾರದಲ್ಲಿ ದ್ವೇಷಿಸುವುದೇ ಘೋರ ತಪ್ಪು.
►ನನ್ನ ಬುದ್ಧಿಗೆ ನಿಲುಕುವ ಮತ್ತು ನನ್ನ ಮನಸ್ಸು ನಂಬುವ ಎಲ್ಲವನ್ನೂ ಸಾಧಿಸಲು ನನಗೆ ಖಂಡಿತ ಸಾಧ್ಯವಿದೆ.
►ನೀವು ಸಂಪತ್ತುಳ್ಳವರಾ ಗಬೇಕಿದ್ದರೆ ಕಡ್ಡಾಯವಾಗಿ ಸಂಪತ್ತನ್ನು ವಿತರಿಸಬೇಕು. ನಿಜವಾದ ಸಂಪನ್ನತೆ ಇರುವುದೇ ಹಂಚಿ ತಿನ್ನುವುದರಲ್ಲಿ.
►ಕರಿಯ ಜನ ಸಾಮಾನ್ಯರು ನರಕ ಯಾತನೆ ಅನುಭವಿಸುತ್ತಿರುವಾಗ ನಾನೊಬ್ಬ ಸಾಕಷ್ಟು ಮುಂದೆ ಬಂದಿದ್ದೇನೆ. ಆದರೆ ನಿಜವಾಗಿ ಕರಿಯರೆಲ್ಲರೂ ವಿಮೋಚನೆ ಪಡೆಯುವ ತನಕ ನಾನು ವಿಮೋಚಿತನಲ್ಲ.
►ಅಸಾಧ್ಯ ಎಂಬುದು, ಜಗತ್ತನ್ನು ಬದಲಾಯಿಸುವ ಅಥವಾ ತಮ್ಮದೇ ಆದ ಹೊಸ ಜಗತ್ತನ್ನು ನಿರ್ಮಿಸುವ ಸಾಹಸ ಮಾಡಲಾಗದೆ ತಮಗೆ ಯಾರೋ ಕೊಟ್ಜ ಜಗತ್ತಿನಲ್ಲಿ ನೆಮ್ಮದಿಯಾಗಿ ಬದುಕುವ ಕೆಲವು ಸಣ್ಣ ಮನುಷ್ಯರು ಪ್ರಚಾರ ಪಡಿಸಿದ ಪದವಾಗಿದೆ. ಅಸಾಧ್ಯ ಎಂಬುದು ಸತ್ಯವಲ್ಲ. ಅದೊಂದು ಅಭಿಪ್ರಾಯ ಅಷ್ಟೇ. ಅಸಾಧ್ಯ ಎಂಬುದು ಒಂದು ತೀರ್ಮಾನವೇನಲ್ಲ. ಅದೊಂದು ಸವಾಲು. ಅದೊಂದು ಅವಕಾಶ. ಅದೊಂದು ಸಾಧ್ಯತೆ. ಅದು ತೀರಾ ತಾತ್ಕಾಲಿಕ. ಯಾವುದೂ ಅಸಾಧ್ಯ ಅಲ್ಲ.
►ಹೊಡೆದವನಿಗೆ ತಿರುಗಿ ಹೊಡೆಯದವನನ್ನು ನಾನು ಗೌರವಿಸುವುದಿಲ್ಲ. ನೀವು ನನ್ನ ನಾಯಿಯನ್ನು ಕೊಂದಿದ್ದರೆ, ನೀವು ನಿಮ್ಮ ಬೆಕ್ಕನ್ನು ಅಡಗಿಸಿಟ್ಟುಕೊಳ್ಳುವುದು ಉತ್ತಮ.
►ನಿಮ್ಮ ಮುಂದಿರುವ ಪರ್ವತಕ್ಕಿಂತ ನಿಮ್ಮ ಬೂಟಿನೊಳಗಿರುವ ಮರಳಿನ ಒಂದು ಕಣವು ನಿಮ್ಮನ್ನು ಹೆಚ್ಚು ದಣಿಸಿಬಿಡುತ್ತದೆ.
►ಗುರಿ ಸಾಧಿಸುವ ಹೋರಾಟದಲ್ಲಿ ಸೋಲಿಗೆ ಅವಕಾಶವೇ ಇರುವುದಿಲ್ಲ. ನನ್ನ ಪ್ರಕಾರ ಹೋರಾಡುವುದಕ್ಕೆ ಯಾವುದೇ ಗುರಿ ಇಲ್ಲದವರೇ ನಿಜವಾಗಿ ಪರಾಜಿತರು.
►ಚಾಂಪಿಯನ್ ಆಗಲು ನಿಪುಣತೆ ಮತ್ತು ಸಂಕಲ್ಪ ಎರಡೂ ಬೇಕು. ಆದರೆ ನಿಪುಣತೆಗಿಂತ ಸಂಕಲ್ಪವು ಹೆಚ್ಚು ಗಟ್ಟಿಯಾಗಿರಬೇಕು.
►ವಿಯೆಟ್ನಾಮ್‌ನ ಜನರ ಜೊತೆ ನನಗೆ ಯಾವ ಜಗಳವೂ ಇಲ್ಲ. ಅವರು ಯಾರೂ ನನ್ನನ್ನು ನಿಗ್ಗರ್ ಎಂದು ನಿಂದಿಸಿಲ್ಲ.
►ನನಗೆ ಜೈಲಿಗೆ ಹೋಗುವ ಭಯವೇನೂ ಇಲ್ಲ. ಕಳೆದ ನಾಲ್ಕು ನೂರು ವರ್ಷಗಳಿಂದ ನಾವು ಜೈಲಲ್ಲೇ ಇದ್ದೇವಲ್ಲ!
►ನನ್ನ ಶ್ರೀಮಂತಿಕೆ ಅಡಗಿರುವುದು ನನ್ನ ಜ್ಞಾನ, ನನ್ನ ಆತ್ಮಾಭಿಮಾನ, ನನ್ನ ಪ್ರೀತಿ ಮತ್ತು ನನ್ನ ಆಧ್ಯಾತ್ಮಿಕತೆಯಲ್ಲಿ.
►ಪ್ರೀತಿ, ಪ್ರೇಮ, ಸಹಾನುಭೂತಿ ಇತ್ಯಾದಿ ಮನಸ್ಸಿಗೆ ಸಂಬಂಧಿಸಿದ ವಿಷಯಗಳನ್ನು ನೋಡುವುದಾದರೆ ನಾನು ನಿಜಕ್ಕೂ ತುಂಬ ಶ್ರೀಮಂತ.
►ನಾವು ಬಹಳಷ್ಟು ಪ್ರೀತಿಸುವ ಭೌತಿಕ ವಸ್ತುಗಳ ಬಂಧನದಿಂದ ಹೊರ ಬರುವುದೇ ಬದುಕಿನ ಬಹು ದೊಡ್ಡ ವಿಜಯ.
►ತರಬೇತಿಯ ಒಂದೊಂದು ಕ್ಷಣವನ್ನೂ ನಾನು ದ್ವೇಷಿಸುತ್ತಿದ್ದೆ. ಆದರೆ ನಾನು ಆ ಹಂತದಲ್ಲಿ ಪಲಾಯನ ಮಾಡಬೇಡ, ಈಗ ಒಂದಷ್ಟು ನರಳು, ಆ ಬಳಿಕ ಜೀವನದುದ್ದಕ್ಕೂ ಚಾಂಪಿಯನ್ ಆಗಿರು ಎಂದು ನನಗೆ ಸಾಂತ್ವನ ಹೇಳಿಕೊಂಡೆ.
►ನಾನು ನನ್ನ ಬದುಕಿನುದ್ದಕ್ಕೂ ಪರೀಕ್ಷೆಗಳನ್ನು ಎದುರಿಸಿದ್ದೇನೆ. ನನ್ನ ಧೈರ್ಯದ ಪರೀಕ್ಷೆ ನಡೆದಿದೆ. ನನ್ನ ಸಂಕಲ್ಪದ ಮತ್ತು ನನ್ನ ಶಕ್ತಿಯ ಪರೀಕ್ಷೆ ನಡೆದಿದೆ. ಇದೀಗ ನನ್ನ ಸಹನೆ ಹಾಗೂ ನನ್ನ ಸ್ಥೈರ್ಯದ ಪರೀಕ್ಷೆ ನಡೆಯುತ್ತಿದೆ.
►ನಾನೆಷ್ಟು ದಾನ ಮಾಡಿದ್ದೇನೆ ಮತ್ತು ನಾನು ಯಾರಿಗೆಲ್ಲಾ ಸಹಾಯ ಮಾಡಿದ್ದೇನೆ ಎಂಬುದನ್ನೆಲ್ಲ ನಾನು ಚರ್ಚಿಸಲು ಬಯಸುವುದಿಲ್ಲ. ಏಕೆಂದರೆ ಏನನ್ನೂ ಮರಳಿ ಪಡೆಯುವ ಆಸೆ ಇಲ್ಲದಿರುವುದೇ ನಿಜವಾದ ಔದಾರ್ಯ ಎಂದು ನಾನು ನಂಬಿದ್ದೇನೆ
►ನಾನು ಮಿಲಿಟರಿ ಸಮವಸ್ತ್ರ ಧರಿಸಿಕೊಂಡು ನನ್ನ ಮನೆಯಿಂದ ಹತ್ತು ಸಾವಿರ ಮೈಲು ದೂರ ಇರುವ ವಿಯೆಟ್ನಾಮ್ ದೇಶದ ಕಂದು ಬಣ್ಣದ ಜನರ ಮೇಲೆ ಗುಂಡುಗಳನ್ನು ಹಾಗೂ ಬಾಂಬುಗಳನ್ನು ಯಾಕೆ ಸುರಿಸಬೇಕು? ಇಲ್ಲಿ ನಮ್ಮದೇ ದೇಶದ ತಥಾಕಥಿತ ನೀಗ್ರೋಗಳನ್ನು ನಾಯಿಗಳಿಗಿಂತ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ. ಅವರಿಗೆ ಮೂಲಭೂತ ಮಾನವೀಯ ಹಕ್ಕು ಗಳನ್ನು ನಿರಾಕರಿಸಲಾಗುತ್ತಿದೆ. ಬಿಳಿಯ ಸಾಮ್ರಾಜ್ಯ ಶಾಹಿಗಳು ಜಗತ್ತಿನೆಲ್ಲೆಡೆ ಕರಿ ಚರ್ಮದ ಜನರ ಮೇಲೆ ತಮ್ಮ ಅಕ್ರಮ ಸ್ವಾಮ್ಯವನ್ನು ಮುಂದುವರಿಸುವುದಕ್ಕೆ ನಡೆಸುತ್ತಿರುವ ಯುದ್ಧದಲ್ಲಿ ಪಾಲುಗೊಳ್ಳುವುದಕ್ಕಾಗಿ ಮತ್ತು ಇನ್ನೊಂದು ಬಡ ದೇಶದ ಜನರನ್ನು ಕೊಲ್ಲುವ ಹಾಗೂ ಸುಟ್ಟು ಹಾಕುವ ಕೆಲಸಕ್ಕಾಗಿ ನನ್ನೂರಿನಿಂದ ಸಾವಿರಾರು ಮೈಲು ದೂರ ಪ್ರಯಾಣಿಸಲು ನಾನು ಖಂಡಿತ ಸಿದ್ಧನಿಲ್ಲ.
►ನಮಗಿರುವುದು ಒಂದೇ ಜೀವನ. ಇದು ಕಳೆದು ಹೋಗಲಿದೆ. ಆದರೆ ನಾವು ದೇವರಿಗಾಗಿ ಏನೆಲ್ಲ ಮಾಡಿರುತ್ತೇವೋ ಅದು ಮಾತ್ರ ಉಳಿದಿರುತ್ತದೆ.
►ನಾನು ನಿವೃತ್ತನಾಗುತ್ತಿದ್ದೇನೆ. ಏಕೆಂದರೆ, ಜಗತ್ತಿನಲ್ಲಿ ನನಗೆ, ಜನರನ್ನು ಹೊಡೆಯುವುದಕ್ಕಿಂತ ಹೆಚ್ಚು ಸಂತಸದಾಯಕವಾದ ಅನೇಕ ಕೆಲಸಗಳನ್ನು ಮಾಡಲಿಕ್ಕಿದೆ.
►ನಿಜವಾಗಿ ಅಲ್ಲಾಹನೇ ಗ್ರೇಟೆಸ್ಟ್. ನಾನು ಕೇವಲ ಗ್ರೇಟೆಸ್ಟ್ ಬಾಕ್ಸರ್ ಅಷ್ಟೇ.
►ನಾನು ಸತ್ಯ ಮತ್ತು ಶಾಂತಿಯನ್ನು ಅರಸುತ್ತಾ ಪ್ರೀತಿಯ ಪ್ರಯಾಣಕ್ಕೆ ಹೊರಟಿದ್ದೇನೆ. ನಾನು ಈಗಲೂ ಕಲಿಯುತ್ತಲೇ ಇದ್ದೇನೆ.
►ಒಮ್ಮೆ ನಾನು ನ್ಯೂಯಾರ್ಕ್ ನಗರದ ಹಾರ್ಲೆಮ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಅಲ್ಲಿ ಒಬ್ಬ ವ್ಯಕ್ತಿ ದಾರಿಹೋಕರ ಬಳಿ ನನಗೊಂದು ಡಾಲರ್ ಕೊಡಿ ಎಂದು ಬೇಡುತ್ತಿದ್ದ. ಜನರು ಅವನನ್ನು ಕಡೆಗಣಿಸಿ ಹಾದು ಹೋಗುತ್ತಿದ್ದರು. ನಾನು ಅಲ್ಲಿ ನಿಂತು ಅವನಿಗೆ ಸ್ವಲ್ಪ ಹಣ ನೀಡಿದೆ. ನಾನು ಅಲ್ಲಿಂದ ಮುಂದೆ ಸಾಗಲು ಹೊರಟಾಗ ಆ ವ್ಯಕ್ತಿ ನನ್ನತ್ತ ಕೈ ಚಾಚಿ ನನ್ನ ಕೈ ಕುಲುಕಿದ ಮತ್ತು ನೇರವಾಗಿ ನನ್ನ ಕಣ್ಣುಗಳನ್ನು ನೋಡುತ್ತಾ, ನಿನಗೆ ಒಳ್ಳೆಯದಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ. ಆತ ಸಾಕ್ಷಾತ್ ದೇವನಾಗಿದ್ದ ಎಂದು ನಾನು ಹೇಳುವುದಿಲ್ಲ. ಆದರೆ ನಮಗೇನು ಗೊತ್ತು? ಆ ವ್ಯಕ್ತಿ ದೇವರೇ ನೇಮಿಸಿರುವ ದೇವರ ಒಬ್ಬ ಪ್ರತಿನಿಧಿಯಾಗಿರಬಹುದು. ವೇಷ ಮರೆಸಿಕೊಂಡು ನಾವು ಏನು ಮಾಡುತ್ತೇವೆ ಎಂದು ಪರೀಕ್ಷಿಸು ತ್ತಿರಬಹುದು.