ಪಶ್ಚಿಮ ಬಂಗಾಳದ ಶಾಲೆಯ ನವೀಕರಣಕ್ಕೆ ನೆರವಾದ ತೆಂಡುಲ್ಕರ್

Update: 2016-06-14 18:30 GMT

ಕೋಲ್ಕತಾ, ಜೂ.14: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಕ್ರಿಕೆಟ್‌ನಿಂದ ನಿವೃತ್ತಿಯಾದರೂ ಕ್ರಿಕೆಟೇೀತರ ವಿಷಯಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಪಶ್ಚಿಮ ಬಂಗಾಳದ ಬುಡಕಟ್ಟು ಸಮುದಾಯ ವಾಸವಿರುವ ಹಳ್ಳಿಯಲ್ಲಿ ದುಸ್ಥಿತಿಯಲ್ಲಿದ್ದ 50 ವರ್ಷ ಹಳೆಯ ಶಾಲೆಯ ನವೀಕರಣಕ್ಕೆ ಧನ ಸಹಾಯ ಮಾಡುವ ಮೂಲಕ ಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ.

ಶಾಲೆಯ ಮುಖ್ಯೋಪಾಧ್ಯಾಯರ ಕೋರಿಕೆಗೆ ತಕ್ಷಣವೇ ಸ್ಪಂದಿಸಿದ ತೆಂಡುಲ್ಕರ್ ತನ್ನ ರಾಜ್ಯಸಭಾ ಸದಸ್ಯರಿಗೆ ಮೀಸಲಿರುವ ಅನುದಾನದಿಂದ 76, 21,050 ರೂ.ವನ್ನು ತಕ್ಷಣವೇ ಬಿಡುಗಡೆ ಮಾಡಲು ಸಮ್ಮತಿಸಿದ್ದಾರೆ. ಶಾಲೆಯು ಪಶ್ಚಿಮ ಮಿಡ್ನಾಪುರ ಜಿಲ್ಲೆಯ 140ಕಿ.ಮೀ.ದೂರದಲ್ಲಿರುವ ನಾರಾಯಣ್ ಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ.

ತೆಂಡುಲ್ಕರ್ ಮೂರು ಕಂತಿನ ಮುಖಾಂತರ ಶೇ.75ರಷ್ಟು ಹಣವನ್ನು ಬಿಡುಗಡೆ ಮಾಡಿದ್ದಾರೆ. ಉಳಿದ ಮೊತ್ತವನ್ನು ನಿಧಿ ಬಳಕೆಯಾದ ಪ್ರಮಾಣ ಪತ್ರ ಸಲ್ಲಿಸಿದ ಬಳಿಕ ಬಿಡುಗಡೆಯಾಗಲಿದ್ದು, ಆ ಪ್ರಮಾಣಪತ್ರವನ್ನು ಈಗಾಗಲೇ ಸಲ್ಲಿಸಿದ್ದಾರೆ.

 ಶಾಲೆಯ ಮುಖ್ಯೋಪಾಧ್ಯಾಯ ಉತ್ತಮ್ ಕುಮಾರ್ ಮೊಹಾಂತಿಗೆ ಇದು ಒಂದು ರೀತಿಯ ಪವಾಡವಾಗಿ ಪರಿಣಮಿಸಿದೆ. ಕುಸಿಯುವ ಸ್ಥಿತಿಯಲ್ಲಿದ್ದ ಶಾಲೆಯನ್ನು ನವೀಕರಣಗೊಳಿಸಲು ಮೊಹಾಂತಿ ಧನ ಸಹಾಯಕ್ಕಾಗಿ ಸ್ಥಳೀಯ ಸಂಸದ ಹಾಗೂ ಶಾಸಕರ ಮನೆ ಕದ ತಟ್ಟಿ ಸುಸ್ತಾಗಿ ಹೋಗಿದ್ದರು.

10 ವರ್ಷಗಳ ಕಾಲ ಪರದಾಟದ ಬಳಿಕ 2013ರಲ್ಲಿ ರಾಜ್ಯ ಸಭಾ ಸದಸ್ಯ ತೆಂಡುಲ್ಕರ್‌ಗೆ ಪತ್ರ ಬರೆಯಲು ನಿರ್ಧರಿಸಿದರು. ಆಗ ತೆಂಡುಲ್ಕರ್ ಎಂಪಿ ಆಗಿ ಒಂದು ವರ್ಷ ಆಗಿತ್ತು. ಮೇಲ್ಮನೆಯಲ್ಲಿ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುತ್ತಾರೆ ಎಂಬ ಆರೋಪವೂ ಅವರ ಮೇಲಿತ್ತು.

ತೆಂಡುಲ್ಕರ್‌ರ ಅಧಿಕೃತ ಇ-ಮೇಲ್‌ಗಾಗಿ ಇಂಟರ್‌ನೆಟ್ ಹುಡುಕಾಡಿದ ಮೊಹಾಂತಿ ಮಾ.13,2013ರಲ್ಲಿ ತೆಂಡುಲ್ಕರ್‌ಗೆ ಪತ್ರ ಬರೆದು ಶಾಲೆಯ ಮರುನಿರ್ಮಾಣಕ್ಕೆ ನೆರವಾಗುವಂತೆ ಮನವಿ ಸಲ್ಲಿಸಿದ್ದರು.

ಐದು ಬಾರಿ ಎಂಎಲ್‌ಎ ಆಗಿರುವ ಸೂರ್ಯಕುಮಾರ್ ಮಿಶ್ರಾ ಹಾಗೂ 2001-04ರ ತನಕ ಸಂಸದರಾಗಿದ್ದ ಪ್ರಬೋಧ್ ಪಾಂಡ ನನ್ನ ಮನವಿಯನ್ನು ನಿರ್ಲಕ್ಷಿಸಿದ ಬಳಿಕ ವಿಶ್ವಾಸವೇ ಹೊರಟುಹೋಗಿತ್ತು. ಹತಾಶೆಯಿಂದಲೇ ತೆಂಡುಲ್ಕರ್‌ಗೆ ಪತ್ರ ಬರೆದಿದ್ದ ಮೊಹಾಂತಿಗೆ ಒಂದು ದಿನ ಅಚ್ಚರಿ ಕಾದಿತ್ತು. ಮೊಹಾಂತಿಯ ಪತ್ರಕ್ಕೆ ತೆಂಡುಲ್ಕರ್ ಉತ್ತರ ಬರೆದಿದ್ದರು. ಸಾವಿರಕ್ಕೂ ಅಧಿಕ ಮಕ್ಕಳು ಓದುತ್ತಿರುವ ಶಾಲೆಯ ಮೂಲಭೂತ ಅವಶ್ಯಗಳ ಈಡೇರಿಕೆಗೆ ನೆರವು ನೀಡುವುದಾಗಿ ತೆಂಡುಲ್ಕರ್ ಪತ್ರದಲ್ಲಿ ಭರವಸೆ ನೀಡಿದ್ದರು.

ಬಾಂದ್ರಾದ ಕಲೆಕ್ಟರ್ ಬಳಿ ನಿಧಿ ಬಿಡುಗಡೆಗೆ ನಾನು ಶಿಫಾರಸು ಮಾಡುವೆ. ನೀವು ನಿಮ್ಮ ಪ್ರದೇಶದ ಕಲೆಕ್ಟರ್‌ರನ್ನು ಸಂಪರ್ಕಿಸಿ ಎಂದು ತೆಂಡುಲ್ಕರ್ ಮೊಹಾಂತಿಗೆ ತಿಳಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News