ಸಸ್ಯಶಾಸ್ತ್ರಜ್ಞನೊಬ್ಬನ ಸಮಾಜಶಾಸ್ತ್ರೀಯ ಅಧ್ಯಯನ ಕೃತಿ

Update: 2016-06-19 08:57 GMT

ಮಧುರಾಮನಾಥ್ ಕೇವಲ ಒಬ್ಬ ಸಸ್ಯಶಾಸ್ತ್ರಜ್ಞನಾಗಿರದೆ, ಅವರೊಳಗೊಬ್ಬ ಸಮಾಜಶಾಸ್ತ್ರಜ್ಞನೂ ಇದ್ದುದರಿಂದ ಇಂತಹ ಮಹತ್ವದ ಕೃತಿಯೊಂದನ್ನು ಅವರು ರಚಿಸಲು ಸಾಧ್ಯವಾಗಿದೆ. ಒಳ್ಳೆಯ ರೇಖಾ ಚಿತ್ರಕಾರರೂ ಆಗಿರುವ ರಾಮನಾಥ್ ರವರು ಆದಿವಾಸಿಗಳು ಬಳಸುವ ಎಲ್ಲಾ ರೀತಿಯ ಉಪಕರಣಗಳನ್ನು ಅಂದರೆ. ಅವರ ಬಾಣ, ಬಿಲ್ಲು, ಆಯುಧಗಳು, ಅವುಗಳನ್ನು ಇಡಲು ತಯಾರಿಸಿಕೊಂಡಿರುವ ಬಿದರಿನ ಸಲಕರಣೆಗಳು, ಬಸ್ತರ್ ಆರಣ್ಯದ ಪ್ರಾಣಿ, ಪಕ್ಷಿಗಳನ್ನು, ಚಿತ್ರಿಸಿ, ಕೃತಿಯಲ್ಲಿ ದಾಖಲಿಸಿದ್ದಾರೆ.

ಸಸ್ಯಶಾಸ್ತ್ರಗಳ ಬಗ್ಗೆ ಬಹು ವಿಸ್ತೃತವಾಗಿ ಅಧ್ಯಯನ ಮಾಡಿದವರಲ್ಲಿ ಭಾರತೀಯ ಅರಣ್ಯ ಶಾಸ್ತ್ರದ ಪಿತಾಮಹ ಎನಿಸಿಕೊಂಡ ಜರ್ಮನಿ ಮೂಲದ ಬ್ರ್ಯಾಂಡಿಸ್ ಮತ್ತು ನಮ್ಮವರೇ ಆದ ಡಿ.ವಿ.ಗುಂಡಪ್ಪನವರ ಪುತ್ರ ಹಾಗೂ ಹಸಿರು ಹೊನ್ನು ಎಂಬ ಶ್ರೇಷ್ಠ ಕೃತಿ ಬರೆದ ಬಿ.ಜಿ.ಎಲ್. ಸ್ವಾಮಿ ಇವರುಗಳ ಹೆಸರು ಬಹಳ ಪ್ರಮುಖವಾದುದು. ಇವರುಗಳ ಸಾಲಿನಲ್ಲಿ ಮತ್ತೊಂದು ಪ್ರಮುಖ ಹೆಸರು ತಮಿಳುನಾಡು ಮೂಲದ ಮಧು ರಾಮನಾಥ್. ಇವರು 2015 ರಲ್ಲಿ ರಚಿಸಿರುವ ''ವುಡ್ ಸ್ಮೋಕ್ ಆ್ಯಂಡ್ ಲೀಫ್ ಕಪ್ಸ್'' (ಕಟ್ಟಿಗೆಯ ಹೊಗೆ ಮತ್ತು ಎಲೆಯ ಬಟ್ಟಲುಗಳು) ಎನ್ನುವ ಕೃತಿ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು ಚರ್ಚೆಯಾಗುತ್ತಿದೆ.

  ಮಧು ರಾಮನಾಥ್ ರವರ ಅಧ್ಯಯನ, ಆಸಕ್ತಿ ಮತ್ತು ಅವರ ಸಾಹಸ ಪ್ರವೃತ್ತಿ ನಿಜಕ್ಕೂ ಬೆರಗು ಮೂಡಿಸುವಂತಹದ್ದು. ನೆದರ್ ಲ್ಯಾಂಡ್ ದೇಶದ ಆಮ್ ಸ್ಟರ್ ಡ್ಯಾಂ ನಗರದ ವಿ.ವಿ.ಯಲ್ಲಿ ಸಸ್ಯ ಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡಿದ ಇವರು, ನಂತರ ಮೆಕ್ಕೆ ಜೋಳದ ಮೂಲ ದೇಶಗಳಲ್ಲಿ ಒಂದಾದ ಮೆಕ್ಸಿಕೊ ರಾಷ್ಟ್ರಕ್ಕೆ ತೆರಳಿ ಅಲ್ಲಿನ ಗ್ರಾಮಾಂತರ ಪ್ರದೇಶದ ರೈತರ ಮನೆಗಳಲ್ಲಿ ವಾಸಿಸುತ್ತಾ ಆರು ತಿಂಗಳಕಾಲ ಅಧ್ಯಯನ ಮಾಡುವಾಗ, ದೇಶಿ ಜ್ಞಾನ ಶಿಸ್ತು ಮತ್ತು ಅರಣ್ಯಗಳ ನಡುವೆ ಇರುವ ಸಸ್ಯಗಳು ಮತ್ತು ಅವುಗಳ ಪ್ರಭೇದ ಕುರಿತು ಸ್ಥಳೀಯ ಜನರಿಗೆ ಇರುವ ಜ್ಞಾನ ಕಂಡು ಅಚ್ಚರಿಗೊಂಡರು. ನಂತರ ಮಧು ರಾಮನಾಥ್ ರವರ ಮುಂದಿನ ಗುರಿ ತಾವು ಹುಟ್ಟಿ ಬೆಳೆದ ಭಾರತದ ದಂಡಕಾರಣ್ಯ ಪ್ರದೇಶವಾಗಿತ್ತು.

 ಮೆಕ್ಸಿಕೊ ದೇಶದಿಂದ ವಾಪಸ್ ಆಮ್ ಸ್ಟರ್ ಡ್ಯಾಂ ನಗರಕ್ಕೆ ಬಂದ ರಾಮನಾಥ್‌ರವರು, ತಾವು ಪ್ರೀತಿಸಿ ವಿವಾಹವಾಗಿದ್ದ ನೆದರ್‌ಲ್ಯಾಂಡ್‌ನ ಪತ್ನಿ ಎಡಿತ್ ಮುಂದೆ ತಮ್ಮ ಕನಸು ಮತ್ತು ಗುರಿಯನ್ನು ಹಂಚಿಕೊಂಡರು. ಇಬ್ಬರೂ ಭಾರತ ಭೂಪಟವನ್ನು ತಮ್ಮ ಮುಂದೆ ಬಿಡಿಸಿಟ್ಟುಕೊಂಡು, ಇಂದಿನ ಛತ್ತೀಸ್‌ಗಡ ಮತ್ತು ಮಧ್ಯಪ್ರದೇಶದ ನಡುವೆ ಇರುವ ದಂಡಕಾರಣ್ಯ ಅರಣ್ಯದ ನಡುವಿನ ಬಸ್ತಾರ್ ಎಂಬ ಆದಿವಾಸಿಗಳು ಇರುವ ಪ್ರದೇಶವನ್ನು ತಮ್ಮ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡರು. 1980ರ ದಶಕದಲ್ಲಿ ಅಧ್ಯಯನಕ್ಕಾಗಿ ನೆದರ್‌ಲ್ಯಾಂಡ್ ತೊರೆದು ಭಾರತದ ಬಸ್ತಾರ್‌ಗೆ ಬಂದ ರಾಮನಾಥ್ ದಂಪತಿಅರಣ್ಯದ ಆದಿವಾಸಿಗಳ ನಡುವೆ ಸತತ ಮೂವತ್ತು ವರ್ಷಗಳ ಕಾಲ ತಮಗರಿವಿಲ್ಲದೆ ಅಧ್ಯಯನದಲ್ಲಿ ಮುಳುಗಿ ಬದುಕಿಬಿಟ್ಟರು.

   ರಾಮನಾಥ್ ಪತ್ನಿ ಎಡಿತ್‌ರವರಿಗೆ ವೈದ್ಯಕೀಯ ಜ್ಞಾನ ವಿದ್ದ ಕಾರಣದಿಂದ ತಾವು ವಾಸವಿದ್ದ ಜಾಗದಲ್ಲಿ ಆದಿವಾಸಿಗಳನ್ನು ಸಾಮಾನ್ಯವಾಗಿ ಕಾಡುತ್ತಿದ್ದ ಮಳೆಗಾಲದಲ್ಲಿ ಜ್ವರ, ಬೇಸಿಗೆಯಲ್ಲಿನ ವಾಂತಿ-ಭೇದಿ, ಹೀಗೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಮದ್ದು ನೀಡುತ್ತಾ ಎಲ್ಲರ ಪ್ರೀತಿ ಗಳಿಸಿದರು. ರಾಮನಾಥ್‌ರವರಂತೂ ತಮ್ಮ ಪ್ಯಾಂಟು, ಶರ್ಟುಗಳನ್ನು ಕಿತ್ತೆಸೆದು, ಸ್ಥಳೀಯ ದುರ್ವಾ ಎಂಬ ಆದಿವಾಸಿಗಳಂತೆ ಚಡ್ಡಿ, ಕಾಚವಿಲ್ಲದೆ ಮೊಣಕಾಲುವರೆಗೆ ಲುಂಗಿಯ ತುಂಡೊಂದನ್ನು ಉಟ್ಟರು. ಗುಂಡಿಗಳಿಲ್ಲದ( ಬಟನ್) ಶರ್ಟ್ ಗಳನ್ನು ತೊಟ್ಟು, ಹೆಗಲ ಮೇಲೆ ಟವಲ್ ಹಾಕಿಕೊಂಡು, ಆದಿವಾಸಿಗಳಂತೆ ತಲೆಗೂದಲನ್ನು ಬೆಳೆಸಿ ಗಂಟು ಹಾಕಿಕೊಂಡರು. ಆನಂತರ ನಮ್ಮ ಪೂರ್ಣಚಂದ್ರ ತೇಜಸ್ವಿಯವರ ಗೆಳೆಯರಾದ ಶ್ರೀರಾಮ್ ಹೇಳಿರುವ ''ನಾವು ಈ ಜಗತ್ತಿನಲ್ಲಿ ಎರಡು ಕಾಲಿನ ಮನುಷ್ಯರು ಮತ್ತು ನಾಲ್ಕು ಕಾಲುಗಳ ಕುರ್ಚಿ, ಮೇಜು ಇವುಗಳನ್ನು ಬಿಟ್ಟು ಎಲ್ಲವನ್ನೂ ತಿನ್ನುತ್ತೇವೆ'' ಎಂಬ ಮಾತಿನಂತೆ ಆದಿವಾಸಿಗಳ ಜೊತೆ ಬದುಕುತ್ತಾ, ಶಿಕಾರಿಯಲ್ಲಿ ಪಾಲ್ಗೊಂಡು, ಹಾವು, ಏಡಿ, ಕಪ್ಪೆ, ಮಂಗ, ಮುಂಗುಸಿ, ಮೀನು, ಹಕ್ಕಿ, ಕಾಡು ಹಂದಿ ಹೀಗೆ ಎಲ್ಲದರ ಮಾಂಸದ ರುಚಿ ನೋಡಿದರು. ಬೇಸಾಯದಲ್ಲಿ, ಹಬ್ಬ ಹರಿದಿನಗಳ ಸಂಭ್ರಮದಲ್ಲಿ ಮತ್ತು ಸಾವು-ನೋವಿನ ಸಂದರ್ಭದಲ್ಲಿ ಪಾಲ್ಗೊಳ್ಳುತ್ತಾ ಅವರ ಜೊತೆ ಭಟ್ಟಿ ಸಾರಾಯಿ ಕುಡಿಯುತ್ತಾ, ಬೀಡಿ ಸೇದುತ್ತಾ ದುರ್ವಾ ಭಾಷೆಯನ್ನು ಕಲಿತರು. ಜೊತೆಗೆ ಸಸ್ಯಲೋಕದ ಬಗ್ಗೆ ಆದಿವಾಸಿಗಳಿಗಿದ್ದ ಜ್ಞಾನ ಪರಂಪರೆಯನ್ನು ತಮ್ಮದಾಗಿಸಿಕೊಂಡು, ಅವರ ಅನನ್ಯ ಸಂಸ್ಕೃತಿಯನ್ನು ಪರಿಚಯಿಸಿಕೊಂಡು ದಾಖಲಿಸಿದರು.

  ಅವರ ಇಡೀ ಕೃತಿಯಲ್ಲಿ ದಂಡಕಾರಣ್ಯದ ಆದಿವಾಸಿಗಳ ಬದುಕು, ಅವರ ಸಂಸ್ಕೃತಿ, ಆಚರಣೆ, ಮದುವೆ, ಸಾವು, ತಿಥಿ, ಕಾಯಿಲೆ ಬಿದ್ದಾಗ ದೇವರು ಮತ್ತು ದೆವ್ವಗಳ ಮೊರೆ ಹೋಗುವುದು, ಪೂಜಾರಿಗಳ ವರ್ತನೆ, ಮಳೆ ಹಬ್ಬ, ಮತ್ತು ಕಾಡಿನಲ್ಲಿ ಶಿಕಾರಿ ಮಾಡಿ ತಂದ ಪ್ರಾಣಿಯ ಮಾಂಸವನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳುವ ಪರಿ, ಹಬ್ಬದೂಟದ ಸಂದರ್ಭದಲ್ಲಿ ಹೆಚ್ಚಿನ ಮಾಂಸ ತಿನ್ನುವ ಆಸೆಯಿಂದ ಹಲ್ಲಿಲ್ಲದ ಮುದುಕರ ಬಳಿ ಕೂರುವ ಯುವಕರು, ಮುದುಕರು ತಿನ್ನಲಾರದೆ ಬಿಟ್ಟ ಮೂಳೆಯನ್ನು ಒಳಗೊಂಡ ಮಾಂಸವನ್ನು ಗಬಕ್ಕೆಂದು ಎತ್ತಿ ಬಾಯಿಗೆ ಹಾಕಿ ಜಗಿಯುವ ಪರಿ, ಹಾಗೂ ಪ್ರತಿ ಮನೆಯಲ್ಲೂ ಸ್ವತಃ ತಯಾರಿ ಮಾಡಿಕೊಳ್ಳುವ ದೇಶಿ ಮದ್ಯ, ಜಗಳ, ಪ್ರೀತಿ ಇವೆಲ್ಲವನ್ನೂ ನಮ್ಮ ಕನ್ನಡದ ಪೂರ್ಣಚಂದ್ರತೇಜಸ್ವಿಯವರ ಶೈಲಿಯಲ್ಲಿ ಸ್ವಾರಸ್ಯಕರವಾಗಿ ತಮ್ಮ ಕೃತಿಯಲ್ಲಿ ಬಣ್ಣಿಸಿದ್ದಾರೆ.

ಮಧುರಾಮನಾಥ್ ಕೇವಲ ಒಬ್ಬ ಸಸ್ಯಶಾಸ್ತ್ರಜ್ಞನಾಗಿರದೆ, ಅವರೊಳಗೊಬ್ಬ ಸಮಾಜಶಾಸ್ತ್ರಜ್ಞನೂ ಇದ್ದುದರಿಂದ ಇಂತಹ ಮಹತ್ವದ ಕೃತಿಯೊಂದನ್ನು ಅವರು ರಚಿಸಲು ಸಾಧ್ಯವಾಗಿದೆ. ಒಳ್ಳೆಯ ರೇಖಾ ಚಿತ್ರಕಾರರೂ ಆಗಿರುವ ರಾಮನಾಥ್ ರವರು ಆದಿವಾಸಿಗಳು ಬಳಸುವ ಎಲ್ಲಾ ರೀತಿಯ ಉಪಕರಣಗಳನ್ನು ಅಂದರೆ ಅವರ ಬಾಣ, ಬಿಲ್ಲು, ಆಯುಧಗಳು, ಅವುಗಳನ್ನು ಇಡಲು ತಯಾರಿಸಿಕೊಂಡಿರುವ ಬಿದರಿನ ಸಲಕರಣೆಗಳು, ಬಸ್ತಾರ್ ಅರಣ್ಯದ ಪ್ರಾಣಿ, ಪಕ್ಷಿಗಳನ್ನು, ಚಿತ್ರಿಸಿ, ಕೃತಿಯಲ್ಲಿ ದಾಖಲಿಸಿದ್ದಾರೆ. ದುರ್ವಾ ಆದಿವಾಸಿಗಳ ಸಂಸ್ಕೃತಿ ಮತ್ತು ಆಚರಣೆಗಳ ಕುರಿತು ಇರುವ ಛಾಯಾಚಿತ್ರಗಳು, ಅರಣ್ಯ ಪ್ರದೇಶದ ನಕಾಶೆಗಳು ಇವೆಲ್ಲವೂ ಕೃತಿಯ ಘನತೆಯನ್ನು ಹೆಚ್ಚಿಸಿವೆ. ಆದಿವಾಸಿಗಳು ವೈವಿಧ್ಯಮಯ ಬದುಕು ಕಟ್ಟಿಕೊಡುವುದರ ಜೊತೆಗೆ ಅಲ್ಲಿನ ಹೆಣ್ಣು ಮಕ್ಕಳು ಮಾವು ಮತ್ತು ನೇರಳೆ ಹಣ್ಣಿನ ಕಾಲದಲ್ಲಿ ಮಂಗಗಳಂತೆ ಸುಲಲಿತವಾಗಿ ಮರವೇರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಇದರ ಜೊತೆ ಜೊತೆಯಲ್ಲಿ ಅವರು ವರ್ತಮಾನದ ಜಗತ್ತಿನಲ್ಲಿ ನಕ್ಸಲರು, ಪೊಲೀಸರು, ಸರಕಾರಿ ಅಧಿಕಾರಿಗಳು, ರಾಜಕಾರಣಿಗಳು, ಮರಗಳ್ಳರು ಮತ್ತು ಗಣಿ ಧಣಿಗಳ ಮಾಫಿಯಾ ಇವರಿಂದ ಅನುಭವಿಸುತ್ತಿರುವ ಕಿರುಕುಳವನ್ನು ಸಹ ದಾಖಲಿಸಿರುವುದು ವಿಶೇಷ. ಮೂರು ದಶಕಗಳ ವನವಾಸ ಮತ್ತು ಅಧ್ಯಯನವನ್ನು ಮುಗಿಸಿದ ಮಧು ರಾಮನಾಥ್ ದಂಪತಿ ಇದೀಗ ತಮಿಳುನಾಡಿನ ಕೊಡೈಕಾನಲ್ ನಲ್ಲಿ 'ಪಳನಿ ಹಿಲ್ ಕನ್ಸರ್ ವೇಶನ್ ಕೌನ್ಸಿಲ್'' ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿಕೊಂಡು, ಪಳನಿ ಪರ್ವತ ಶ್ರೇಣಿಯಲ್ಲಿರುವ ಜಲಮೂಲಗಳಾದ ಕೆರೆ, ಸರೋವರ, ಅರಣ್ಯ, ಸಸ್ಯ ಸಂಪತ್ತು ಇವುಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೃತಿಯ ವಿವರಗಳು

Woods smoke & Leap cups

( Autobiographical footnotes to the antropolojy of the durwa)

Author- Madhu Ramanath

Publisher- Harper Collins, no.A-75, Sector-75, Noida, Uttara Pradesh

Pages- 294 - Price-399 rupees,

Writer - ಜಗದೀಶ್ ಕೊಪ್ಪ

contributor

Editor - ಜಗದೀಶ್ ಕೊಪ್ಪ

contributor

Similar News