12 ಮಂದಿಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಬೆದರಿಕೆ
ಬೆಂಗಳೂರು, ಜೂ. 19: ಸಚಿವ ಸ್ಥಾನ ಕೈತಪ್ಪಿದವರು ಹಾಗೂ ಸ್ಥಾನ ವಂಚಿತ ಆಕಾಂಕ್ಷಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶಗೊಂಡಿರುವ 12ಕ್ಕೂ ಹೆಚ್ಚು ಮಂದಿ ಮಾಜಿ ಸಚಿವರು, ಶಾಸಕರು ತಮ್ಮ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ಬೆದರಿಕೆವೊಡ್ಡಿದ್ದಾರೆ.
ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಚಿಂತನೆ ನಡೆಸುತ್ತೇನೆ ಎಂದು ಪ್ರಕಟಿಸಿದ್ದಾರೆ. ಈ ಮಧ್ಯೆಯೇ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನು ಹೊರ ಹಾಕಿದ್ದಾರೆ.
ಸಮಾನ ಮನಸ್ಕರ ಅಸಮಾಧಾನ: ಬೆಂಗಳೂರು ನಗರದ ಯಶವಂತಪುರ ಕ್ಷೇತ್ರದ ಎಸ್.ಟಿ.ಸೋಮಶೇಖರ್, ಕೆ.ಆರ್.ಪುರ ಕ್ಷೇತ್ರದ ಬೈರತಿ ಬಸವರಾಜು, ರಾಜರಾಜೇಶ್ವರಿ ನಗರ ಕ್ಷೇತ್ರದ ಮುನಿರತ್ನ, ಚಿಕ್ಕಪೇಟೆ ಕ್ಷೇತ್ರದ ಆರ್.ವಿ.ದೇವರಾಜ್, ವಿಜಯನಗರ ಕ್ಷೇತ್ರದ ಎಂ.ಕೃಷ್ಣಪ್ಪ, ಗೋವಿಂದರಾಜ ನಗರದ ಪ್ರಿಯಾಕೃಷ್ಣ ಸೇರಿದಂತೆ ಎಂಟು ಮಂದಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಬೆಂಗಳೂರು ನಗರಕ್ಕೆ ಪ್ರಾತಿನಿದ್ಯ ನೀಡಿಲ್ಲ. ಅಲ್ಲದೆ, ಮೊದಲಬಾರಿಗೆ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂದು ಇದೀಗ ಪ್ರಿಯಾಂಕ್ ಖರ್ಗೆ ಹಾಗೂ ಪ್ರಮೋದ್ ಮಧ್ವರಾಜ್ ಅವರಿಗೆ ಸಚಿವ ಸ್ಥಾನ ನೀಡಿದ್ದೇಕೆ. ಸಿಎಂ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ನಡುವೆ ಮ್ಯಾಚ್‌ಫಿಕ್ಸ್ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶಾಸಕರು, ಶೀಘ್ರದಲ್ಲೇ ಸಮಾನ ಮನಸ್ಕ ಶಾಸಕರ ಸಭೆ ನಡೆಸಿ ನಮ್ಮ ನಿರ್ಧಾರ ಕೈಗೊಳ್ಳಲಾಗುವುದು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ನಿಶ್ಚಿತ ಎಂದು ಖಚಿತಪಡಿಸಿದ್ದಾರೆ.