ದೇಶದ ಅಭಿವೃದ್ಧಿಗೆ ಪರಿಸರ ಕಾಳಜಿ, ಧಾರ್ಮಿಕ ಪ್ರಜ್ಞೆ ಅಗತ್ಯ: ಚಂದ್ರಶೇಖರ ಸ್ವಾಮೀಜಿ
ಬೆಂಗಳೂರು, ಜೂ.20: ದೇಶದೆಲ್ಲೆಡೆ ಜನರಲ್ಲಿ ಅಭದ್ರತೆ ಕಾಡುತ್ತಿದ್ದು, ಒಬ್ಬರನ್ನೊಬ್ಬರು ದ್ವೇಷಿಸುವ ವಾತಾವರಣ ಮೂಡಿದೆ. ಧಾರ್ಮಿಕ ಚಿಂತನೆ ಹಾಗೂ ಕುಟುಂಬ ಸಾಮರಸ್ಯ ಕಡಿಮೆಯಾಗುತ್ತಿದ್ದು, ಮನುಷ್ಯನ ಸ್ವಾರ್ಥದಿಂದಾಗಿ ಪರಿಸರ ಅಸಮತೋಲನದಿಂದಾಗಿ ಪ್ರಕೃತಿಯಲ್ಲಿ ಏರುಪೇರು ಉಂಟಾಗಿದೆ. ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಹಾಗೂ ಧಾರ್ಮಿಕ ಪ್ರಜ್ಞೆ ಮೂಡಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವೆಂದು ಅಂತಾರಾಷ್ಟ್ರೀಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ.
ಬೆಂಗಳೂರಿನ ಯದುಗಿರಿ ಯತಿರಾಜ ಮಠದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಚಂದ್ರಶೇಖರ ಸ್ವಾಮೀಜಿ ದಂಪತಿಗೆ ಶ್ರೀ ರಾಮಾನುಜಾಚಾರ್ಯ ವಿಶ್ವಮಾನವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯತಿರಾಜ ಮಠದ ಶ್ರೀ ನಾರಾಯಣ ಶ್ರೀ ರಾಮಾನುಜಾಚಾರ್ಯರು, ಎಳೆಯ ಪ್ರಾಯದಲ್ಲೇ ಆಧ್ಯಾತ್ಮ ಜ್ಞಾನ ಸಂಪಾದಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜ್ಯೋತಿಷ್ಯ, ವಾಸ್ತು, ಯೋಗವನ್ನು ತಲುಪಿಸಿದ್ದಾರೆ ಎಂದು ಚಂದ್ರಶೇಖರ್ ಸ್ವಾಮೀಜಿಯವರನ್ನು ಶ್ಲಾಘಿಸಿದರು.
ಸಮಾರಂಭದಲ್ಲಿ ಸರಕಾರದ ವಿಶೇಷ ಅಧಿಕಾರಿ ಜೆ.ಎಂ. ತಿಪ್ಪೇಸ್ವಾಮಿ, ಅಡಿಗಾಸ್ ಹೋಟೆಲ್‌ನ ಮಾಲಕ ರಾಧಾಕೃಷ್ಣ ಅಡಿಗ, ಕಾನೂನು ಸಲಹೆಗಾರ ಎಂ.ಎಸ್. ಶ್ಯಾಮ್‌ಸುಂದರ್, ನಿವೃತ್ತ ಐಎಎಸ್ ಅಧಿಕಾರಿ ಡಿ. ವೆಂಕಟೇಶ್ವರ ರಾವ್, ವಿಜಯ್ ಕುಮಾರ್, ಮಂಜುನಾಥ್ ಗೌಡ ಉಪಸ್ಥಿತರಿದ್ದರು. ಮಠದ ಹಿರಿಯ ವಿದ್ವಾನ್ ರಂಗಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.