ಮೃತಪಟ್ಟ ಪುಟಾಣಿಗಳಿಗೆ ಸಲ್ಲಿಸಬೇಕಾದ ಶ್ರದ್ಧಾಂಜಲಿ

Update: 2016-06-22 18:10 GMT

ಇಡೀ ರಾಜ್ಯವೇ ತಲ್ಲಣಿಸುವಂತಹ, ಹೃದಯವಿದ್ರಾವಕ ದುರಂತ ಕರಾವಳಿಯ ಕುಂದಾಪುರ ತಾಲೂಕಿನಲ್ಲಿ ಸಂಭವಿಸಿದೆ. ಶಾಲಾವಾಹನಕ್ಕೆ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಎಂಟು ಎಳೆ ಕಂದಮ್ಮಗಳು ಪ್ರಾಣಕಳೆದುಕೊಂಡಿವೆ. 14 ಪುಟಾಣಿಗಳು ಗಾಯಗೊಂಡಿವೆ. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕರಾವಳಿ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಹಲವು ಭೀಕರ ಅಪಘಾತಗಳಿಗೆ ಸಾಕ್ಷಿಯಾಗಿದೆ. ಆದರೆ ಕುಂದಾಪುರದ ತ್ರಾಸಿ ಸಮೀಪ ನಡೆದ ಈ ದುರಂತಕ್ಕೆ ಇಡೀ ವ್ಯವಸ್ಥೆ, ಸಮಾಜ ತಲೆತಗ್ಗಿಸಬೇಕಾಗಿದೆ. ಮೃತಪಟ್ಟ ಹಾಲುಗಲ್ಲದ ಮಕ್ಕಳು ಹಾಗೂ ಆಸ್ಪತ್ರೆಯಲ್ಲಿ ಚೀರಾಡುತ್ತಿರುವ ಕಂದಮ್ಮಗಳು ಕೇಳುತ್ತಿರುವ ಪ್ರಶ್ನೆಗಳಿಗೆ ಸಮಾಜ ಉತ್ತರಿಸುವಂತಹ ಸ್ಥಿತಿಯಲ್ಲಿಲ್ಲ. ಈ ದುರಂತಕ್ಕೆ ಯಾರು ಹೊಣೆ ಎನ್ನುವುದನ್ನು ನಿರ್ಧರಿಸುವುದೂ ಅಷ್ಟು ಸುಲಭವಲ್ಲ. ಸದ್ಯಕ್ಕಂತೂ ನಾವು ವಾಹನ ಚಾಲಕರನ್ನೇ ನೇರವಾಗಿ ಹೊಣೆ ಮಾಡಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಇಂತಹ ದುರಂತಗಳಿಗೆ ಎಲ್ಲರೂ ತಮ್ಮ ಸಣ್ಣ ಸಣ್ಣ ಪಾಲನ್ನು ಪರೋಕ್ಷವಾಗಿ ನೀಡಿರುತ್ತಾರೆ. ದುರಂತಕ್ಕೆ ಸಂಬಂಧಪಟ್ಟ ನೇರ ಆರೋಪಿಗಳಿಗೆ ಗಲ್ಲು ಶಿಕ್ಷೆಯಾದರೂ ಕಡಿಮೆಯೇ. ಜೊತೆ ಜೊತೆಗೆ ಪರೋಕ್ಷ ಕಾರಣರಾದ ಸಣ್ಣ ಪಾಲುದಾರರೂ ತಮ್ಮನ್ನು ತಿದ್ದಿಕೊಳ್ಳಬೇಕಾದ ಸಂದರ್ಭ ಬಂದಿದೆ. ಹಾಗಾದಲ್ಲಿ ಮಾತ್ರ ಇಂತಹ ದುರಂತಗಳು ಪುನರಾವರ್ತನೆಯಾಗದಿರಬಹುದು.

   ಇಂದು ಇಂಗ್ಲಿಷ್ ಮಾಧ್ಯಮಗಳ ಮೋಹ ಪೋಷಕರನ್ನು ವಿಚಿತ್ರ ಸ್ವಾರ್ಥಿಗಳನ್ನಾಗಿಸಿದೆ. ಎಂತಹ ಪರಿಸ್ಥಿತಿಯಲ್ಲೂ ಅವರು ಇಂಗ್ಲಿಷ್ ಮಾಧ್ಯಮದಲ್ಲೇ ಓದಬೇಕು. ಇಲ್ಲಿ ಪೋಷಕರಿಗೆ ಮಕ್ಕಳ ಮನಸ್ಥಿತಿ ಮುಖ್ಯವಾಗುವುದೇ ಇಲ್ಲ. ಪಾಲಕರ ಈ ಮೋಹವನ್ನು ಕೆಲವು ಇಂಗ್ಲಿಷ್ ಮಾಧ್ಯಮ ಶಾಲೆಗಳು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿವೆ. ಡೊನೇಶನ್ ವಸೂಲಿ ಸಂದರ್ಭದಲ್ಲಿ ಅತ್ಯಂತ ಕಠಿಣವಾಗುವ ಸಂಸ್ಥೆಗಳು, ಮಕ್ಕಳನ್ನು ಸಾಗಿಸುವ ವಾಹನಗಳ ನಿರ್ವಹಣೆಗೆ ವಿಶೇಷ ಗಮನವನ್ನು ನೀಡುವುದಿಲ್ಲ. ಶಾಲೆಯ ಆವರಣ ಅಥವಾ ತರಗತಿಯೊಳಗೆ ಮಕ್ಕಳು ಪ್ರವೇಶಿಸಿದ ಬಳಿಕವೇ ಅವರ ಹೊಣೆ ನಮ್ಮದು ಎಂಬ ಧೋರಣೆಗಳನ್ನು ಬಹಳಷ್ಟು ಇಂಗ್ಲಿಷ್ ಮೀಡಿಯಂ ಶಾಲೆಗಳ ಹೆಸರಲ್ಲಿ ನಡೆಯುವ ಉದ್ಯಮಗಳು ತಿಳಿದುಕೊಂಡಿವೆ. ಇದೇ ಸಂದರ್ಭದಲ್ಲಿ ಅದೆಷ್ಟು ದೂರವಿದ್ದರೂ, ವಾಹನ ಸೌಲಭ್ಯಗಳಿಲ್ಲದಿದ್ದರೂ ತಮ್ಮ ಮಕ್ಕಳು ಇಂಗ್ಲಿಷ್ ಮೀಡಿಯಂ ಶಾಲೆಗಳಿಗೇ ಸೇರಬೇಕು ಎಂದು ಪೋಷಕರೂ ಒದ್ದಾಡುತ್ತಾರೆ. ಹತ್ತಿರದಲ್ಲೇ ಅತ್ಯುತ್ತಮ ಕನ್ನಡ ಮಾಧ್ಯಮ ಶಾಲೆಗಳಿದ್ದರೂ ಅದರಲ್ಲಿ ಅತ್ಯುತ್ತಮ ಸೌಲಭ್ಯಗಳಿದ್ದರೂ ಪ್ರತಿಷ್ಠೆಯ ಕಾರಣಕ್ಕಾಗಿ ಇವರು ತಮ್ಮ ಮಕ್ಕಳನ್ನು ದೂರದ ಇಂಗ್ಲಿಷ್ ಮಾಧ್ಯಮಗಳಿಗೆ ಸೇರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸಣ್ಣ ಖಾಸಗಿ ಕಾರುಗಳಲ್ಲಿ ಮಿತಿಗಿಂತಲೂ ಅಧಿಕ ಮಕ್ಕಳನ್ನು ತುರುಕಿಸಿ ಶಾಲೆಗೆ ಒಯ್ಯಲಾಗುತ್ತದೆ. ಪಾಲಕರಿಗೂ ಇಂಗ್ಲಿಷ್ ಮೀಡಿಯಂ ಬೇಕು, ಆದರೆ ಆದಷ್ಟು ಕಡಿಮೆ ವೆಚ್ಚದಲ್ಲಾಗಬೇಕು. ಈ ಕಾರಣದಿಂದ ವಾಹನದಲ್ಲಿರುವ ಮಕ್ಕಳ ಸಂಖ್ಯೆ ಗೊತ್ತಿದ್ದರೂ, ತಮ್ಮ ಮಕ್ಕಳನ್ನು ಅದರಲ್ಲಿ ಕಳುಹಿಸಲು ಹಿಂಜರಿಯುವುದಿಲ್ಲ. ಉಸಿರುಗಟ್ಟುವ ಸ್ಥಿತಿಯಲ್ಲಿ ಮಕ್ಕಳು ಒತ್ತೊತ್ತಾಗಿ ಸಾಗಿಸಲ್ಪಡುತ್ತಾರೆ. ಚಾಲಕನಿಗೆ ಹೆಚ್ಚು ಹೆಚ್ಚು ಮಕ್ಕಳನ್ನು ತುರುಕಿಸಿಕೊಂಡಷ್ಟೂ ಲಾಭ. ಆತನೊಂದಿಗೆ ಜಗಳವಾಡುವುದಕ್ಕೂ ಪೋಷಕರು ಹಿಂಜರಿಯುತ್ತಾರೆ. ಶಾಲೆಗಳಂತೂ ಇದು ನಮಗೆ ಸಂಬಂಧಿಸಿದ ವಿಷಯವೇ ಅಲ್ಲ ಎಂಬಂತೆ ವರ್ತಿಸುತ್ತವೆ. ಅಥವಾ ಶಾಲೆಗಳು ವಾಹನ ಹೊಂದಿದ್ದರೂ ಚಾಲಕನ ಗುಣ ನಡತೆಗಳು, ಅರ್ಹತೆಗಳ ವಿಚಾರಣೆ ಮಾಡುವುದು ತೀರಾ ಕಡಿಮೆ. ಇದರ ಪರಿಣಾಮವಾಗಿಯೇ ಕೆಲ ಚಾಲಕರು ಪುಟಾಣಿ ಮಕ್ಕಳ ಜೊತೆಗೆ ಅಸಭ್ಯವಾಗಿ ವರ್ತಿಸಲು ಸಾಧ್ಯವಾಗುವುದು. 

ಇದೇ ಸಂದರ್ಭದಲ್ಲಿ ಕನಿಷ್ಠ ತಿಂಗಳಿಗೊಮ್ಮೆ ವಾಹನ ಚಾಲಕರು, ಸಿಬಂದಿಯನ್ನು ಕರೆಸಿ ಅವರ ಕಾರ್ಯಕ್ಷಮತೆಗಳನ್ನು ಪರಿಶೀಲಿಸುವುದು, ಅವರ ಕುರಿತಂತೆ ಇರುವ ದೂರುಗಳನ್ನು ಮುಕ್ತವಾಗಿ ಸ್ವೀಕರಿಸುವುದನ್ನು ಖಾಸಗಿ ಶಾಲೆಗಳು ಮಾಡಬೇಕು. ಆಗ ಮಕ್ಕಳನ್ನು ಹೊತ್ತೊಯ್ಯುವ ಸಂದರ್ಭದಲ್ಲಿ ಈ ಚಾಲಕರು ಹೆಚ್ಚು ಜಾಗರೂಕರಾಗಿರುತ್ತಾರೆ. ಮಕ್ಕಳ ಜೊತೆಗೆ ಏನನ್ನು ಮಾತನಾಡಬೇಕು, ಮಾತನಾಡಬಾರದು ಎನ್ನುವುದನ್ನೂ ಚಾಲಕರಿಗೆ, ಸಿಬ್ಬಂದಿಗಳಿಗೆ ತಿಳಿಸಿಕೊಡುವ ಹೊಣೆಗಾರಿಕೆಯನ್ನು ಈ ಇಂಗ್ಲಿಷ್ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿ ಹೊತ್ತುಕೊಳ್ಳಬೇಕು. ಇದೇ ಸಂದರ್ಭದಲ್ಲಿ, ಇತರ ಪ್ರಯಾಣಿಕರನ್ನು ಸಾಗಿಸಿದಂತೆ ಪುಟಾಣಿ ಮಕ್ಕಳನ್ನು ಸಾಗಿಸುವುದು ತಪ್ಪು ಎನ್ನುವುದನ್ನು ಎಲ್ಲ ವಾಹನ ಚಾಲಕರು ಅರಿತುಕೊಳ್ಳಲು ಈ ದುರಂತ ಒಂದು ಪಾಠವಾಗಬೇಕು. ಮೃತಪಟ್ಟ ಎಂಟು ಶಾಲಾ ಮಕ್ಕಳ ಮುಗ್ಧ ಮುಖವನ್ನು ಎಲ್ಲ ಚಾಲಕರು ತಮ್ಮ ತಮ್ಮ ಮೆದುಳಿನಲ್ಲಿ, ಎದೆಯೊಳಗೆ ಇಟ್ಟುಕೊಳ್ಳಬೇಕು. ಇಂದು ಬೇರೆಯವರ ಮಕ್ಕಳು ಬಲಿಯಾಗಿದ್ದರೆ, ನಾಳೆ ಆ ಸ್ಥಾನದಲ್ಲಿ ನಮ್ಮದೇ ಮಕ್ಕಳು ಬಂದು ನಿಲ್ಲಬಹುದು. ತಾವು ಒಯ್ಯುತ್ತಿರುವ ಮಕ್ಕಳು ತಮ್ಮ ಮನೆಯ ಮಕ್ಕಳಿಗಿಂತ ಬೇರೆಯಲ್ಲ ಎನ್ನುವುದನ್ನು ತಿಳಿದುಕೊಂಡರೆ ಚಾಲಕ ಯಾವ ಕಾರಣಕ್ಕೂ ಬೇಜವಾಬ್ದಾರಿಯಿಂದ ವಾಹನವನ್ನು ಚಲಾಯಿಸುವುದಿಲ್ಲ. ಮತ್ತು ಅಸಭ್ಯವಾಗಿ ವರ್ತಿಸುವುದಿಲ್ಲ.

  ಇನ್ನು ದುರಂತಕ್ಕೆ ಮುಖ್ಯ ಕಾರಣವಾಗಿರುವ ಖಾಸಗಿ ಬಸ್‌ಗಳ ಬಗ್ಗೆ. ಮಂಗಳೂರು ಸಹಿತ ಕರಾವಳಿಯಲ್ಲಿ ಖಾಸಗಿ ಬಸ್‌ಗಳ ಸ್ಪರ್ಧೆ, ಅತಿ ವೇಗ, ಪ್ರಯಾಣಿಕರೊಂದಿಗೆ ಅತ್ಯಂತ ಬೇಜವಾಬ್ದಾರಿ ವರ್ತನೆ ಎಲ್ಲರೂ ಅನುಭವಿಸುವಂತಿರುವಂತಹದು. ಖಾಸಗಿ ಬಸ್‌ಗಳು ಮದವೇರಿದ ಗೂಳಿಗಳಂತೆ ರಸ್ತೆಗಳಲ್ಲಿ ಓಡಾಡುತ್ತಿವೆ. ಅವರ ನಿರ್ಲಕ್ಷಕ್ಕೆ ಅದೆಷ್ಟೋ ಜೀವಗಳು ಬಲಿಯಾಗುತ್ತಿವೆಯಾದರೂ, ಇವರ ಮನಸ್ಥಿತಿ ಮಾತ್ರ ಬದಲಾಗಿಲ್ಲ. ಬರೇ ಖಾಸಗಿ ಬಸ್‌ಗಳು ಮಾತ್ರವಲ್ಲ, ಮರಳು ಸಾಗಣೆ ಮಾಡುವ ಲಾರಿಗಳ ಪೈಪೋಟಿ, ಒಮ್ಮೆ ಗುರಿ ತಲುಪಿದರೆ ಸಾಕು ಎಂದು ಅತ್ಯಂತ ಹಾರುತ್ತಾ ಸಾಗುವ ಟ್ಯಾಂಕರ್‌ಗಳು ಕರಾವಳಿಯಲ್ಲಿ ಯಮದೂತರಿಗಿಂತಲೂ ಭೀಕರವಾಗಿ ಜನರನ್ನು ಕಾಡುತ್ತಿವೆ. ಈ ಮದವೇರಿದ ಗೂಳಿಗಳಿಗೆ ಮೂಗುದಾರ ಹಾಕುವುದೊಂದೇ ಪರಿಹಾರ. ರಾಜ್ಯ ಸರಕಾರ ಹಲವು ವರ್ಷಗಳಿಂದ ಸ್ಪೀಡ್‌ಗವರ್ನರ್ ಕಡ್ಡಾಯ ಮಾಡಲು ಯೋಚಿಸುತ್ತಾ ಇದೆ. ಆದರೆ ಘನ ವಾಹನಗಳ ಮಾಲಕರು, ಚಾಲಕರ ಧರಣಿ ಬೆದರಿಕೆಯಿಂದ ಮತ್ತು ಲಾಬಿಗಳಿಗೆ ಮಣಿದು ಸರಕಾರ ಇದನ್ನು ಮುಂದೂಡುತ್ತಾ ಬಂದಿದೆ. 


ಕುಂದಾಪುರದಲ್ಲಿ ನಡೆದ ದುರಂತ, ಖಾಸಗಿ ಬಸ್ ಮತ್ತು ಲಾರಿಗಳಿಗೆ ಸ್ಪೀಡ್ ಗವರ್ನರ್ ಅಥವಾ ವೇಗ ನಿಯಂತ್ರಕ ಅತ್ಯಗತ್ಯ ಎನ್ನುವುದನ್ನು ಇಡೀ ರಾಜ್ಯಕ್ಕೇ ಕೇಳುವಂತೆ ಕೂಗಿ ಕೂಗಿ ಹೇಳುತ್ತಿವೆ. ಆದುದರಿಂದ ಸರಕಾರ ಎಲ್ಲ ಬಸ್‌ಗಳಿಗೆ ಹಾಗೂ ಘನವಾಹನಗಳಿಗೆ ವೇಗ ನಿಯಂತ್ರಕವನ್ನು ಅಳವಡಿಸುವ ಕಾರ್ಯಕ್ಕೆ ತಕ್ಷಣ ಮುಂದಾಗಬೇಕಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯವೂ ವಿಶೇಷ ಆಸಕ್ತಿಯಿಂದ ಪ್ರಕರಣವನ್ನು ಕೈಗೆತ್ತಿಕೊಂಡು ಸರಕಾರಕ್ಕೆ ಸೂಚನೆ ನೀಡಬೇಕು. ಇನ್ನಷ್ಟು ಅಮಾಯಕರು ಬಲಿಯಾಗುವುದನ್ನು ತಪ್ಪಿಸಬೇಕು. ಈ ಮೂಲಕ ಮೃತಪಟ್ಟ ಎಂಟು ಪುಟಾಣಿಗಳಿಗೆ ಸರಕಾರ ತನ್ನ ಶ್ರದ್ಧಾಂಜಲಿ ಸಲ್ಲಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News