ಭಾರತೀಯತೆಯ ಎಳೆ ಮತ್ತು ಎಳೆದಾಟ
ಮತದಾರರಂತೂ ಗಾಬರಿಗೊಳ್ಳುವ ಅಗತ್ಯವಿಲ್ಲ. ನಮ್ಮ ಋಷಿಪರಂಪರೆಯು ಈ ಕುರಿತು ಮಂತ್ರ-ತಂತ್ರಗಳನ್ನು ಸಂಸ್ಕರಿಸಿದೆ. ಹೇಳುತ್ತೇವಲ್ಲ- ‘‘ಆಕಾಶಂ ಪತಿತ ತೋಯಂ, ಯಥಾ ಗಚ್ಛತಿ ಸಾಗರಃ| ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿಃ॥!’’ ಹಾಗೆಯೇ ಯಾವ ಗುರುತಿಗೆ ಮತವೊತ್ತಿದರೂ ಅದು ಸೇರಬೇಕಾದ ಅದ್ವೈತ ಅದ್ವಿತೀಯ ದೇವರಿಗೇ ಸೇರುತ್ತದೆ. ಆದ್ದರಿಂದ ಪ್ರಜಾಪ್ರಭುತ್ವದಲ್ಲಿ ಮತಾಂಧತೆಯೆಂಬುದಿಲ್ಲವೆಂದು ಸಾಬೀತಾಗಿದೆ. ನಿಮಗೆ ನಿಮ್ಮ ಸರ್ವಾಧಿಕಾರಿಯನ್ನು ಆಯ್ಕೆಮಾಡುವ ಸ್ವಾತಂತ್ರ್ಯವನ್ನು ದಯಪಾಲಿಸಲಾಗಿದೆಯಾದ್ದರಿಂದ ಗುಲಾಮೀಸ್ಥಿತಿಯನ್ನು ಆನಂದದಿಂದ ಮುಂದುವರಿಸಬಹುದು.
ಬಿಹಾರದ ಚುನಾವಣೆಯು ಭಾರತ ಎತ್ತ ಸಾಗುತ್ತಿದೆಯೆಂಬುದನ್ನು ಸಾರಿ ಹೇಳಿದೆ. ಈ ದೇಶದ ಮತದಾರರಿಗೆ ಮತ್ತು ಒಟ್ಟಾರೆ ಪ್ರಜೆಗಳಿಗೆ ಅನ್ನ, ಗಾಳಿ, ಉದ್ಯೋಗ, ಬದುಕು ಮತ್ತು ಭವಿಷ್ಯಕ್ಕಿಂತ ದೇವರು, ಧರ್ಮ, ಮತ ಮತ್ತು ಆಮಿಷಗಳು ಮುಖ್ಯವಾಗಿವೆಯೆಂಬುದನ್ನು ಫಲಿತಾಂಶಗಳು ತೋರಿಸಿವೆ. ಒಂದರ್ಥದಲ್ಲಿ ಇದೂ ಸರಿ. ಲೌಕಿಕವೆಂದು ಕರೆಯಲ್ಪಡುವ ಅಗತ್ಯಗಳಿಗಿಂತ ಅಧ್ಯಾತ್ಮವೆಂದು ಕರೆಯಲ್ಪಡುವ ಅಸಂಗತ, ಅಮೂರ್ತಗಳೇ ಮುಖ್ಯವಾದಾಗ ತನ್ನ, ತನ್ನ ಕುಟುಂಬದ, ಬಂಧು-ಬಳಗದ ತನ್ನ ಸಮಾಜದ, ಕೊನೆಗೆ ಕಣ್ಣಿಗೆ ಕಾಣುವ ಈ ಜಗತ್ತೇ ಶೂನ್ಯದಂತೆ ಕಾಣುವುದು ಸಹಜ. ಬುದ್ಧ, ಮಹಾವೀರ, ಬಸವಣ್ಣ ಮುಂತಾದವರು ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತೆರಳಿದ್ದು ಈ ಕಾರಣಕ್ಕೇ ಇರಬಹುದೆಂದು ಹೇಳಬಹುದು. ಇದನ್ನು ಮೂರ್ತೀಕರಿಸಿದರೆ ಪ್ರಾಯಃ ೨೦೪೭ರ ಹೊತ್ತಿಗೆ ಆಳುವವರನ್ನು ಮತ್ತು ಉದ್ಯಮೋಪತಿಗಳನ್ನು ಹೊರತುಪಡಿಸಿದರೆ ಇತರರೆಲ್ಲ ಕಾವಿಯೆಂಬ ಸಮವಸ್ತ್ರವನ್ನು ಧರಿಸಿ ಮೈಗೆಲ್ಲ ಬೂದಿಯೋ, ಮೃತ್ತಿಕೆಯೋ, ಕೊನೆಗೆ ಗೋಮಯವನ್ನೋ ಲೇಪಿಸಿಕೊಂಡು ಹಿಮಾಲಯದತ್ತ ತೆರಳಬಹುದು ಇಲ್ಲವೇ ಅಂತಹ ಅನಿವಾರ್ಯತೆ ಬರಬಹುದು. ಹೀಗೆ ಮಾಡಿದಾಗ ಮೃಣ್ಮಯಿಗಳೆಲ್ಲ ಚಿನ್ಮಯಿಗಳಾಗಬಹುದು.
ಅಸಂಬದ್ಧ, ಅಸಂಗತ ಮತ್ತು ಅಸ್ತವ್ಯಸ್ತ- ಈ ದೇಶದ ಈಗಿನ ಸ್ಥಿತಿಯನ್ನು ನನ್ನಂಥವರು ಹೀಗೆ ವಿವರಿಸಬಹುದು. ಸಂಘರ್ಷ ಈಗ ಇರುವುದು ಪ್ರಜೆಗಳ ಮನಸ್ಥಿತಿಯಲ್ಲಿ. ಹಲವು ಸಮಸ್ಯೆಗಳ ಬೆತ್ತಲೆ ಚಿತ್ರವನ್ನು ಇತ್ತೀಚೆಗಿನ ಚುನಾವಣೆ ಮತ್ತು ಒಟ್ಟಾರೆ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ತೋರಿಸುತ್ತಿದೆ. ಆದರೆ ಇವೆಲ್ಲ ಸುಳ್ಳೆಂದು ಬಹುಮತ ಹೇಳುತ್ತದೆ. ಇವ್ಯಾವುದನ್ನೂ ಲೆಕ್ಕಿಸದೆ ನೇರ ಸಹಗಮನಕ್ಕೆ ಸಿದ್ಧರಾದವರನ್ನು ಗಮನಿಸುವಾಗ ಮತ್ತು ಇವರೊಂದಿಗೆ ನಾವೂ ಸುಟ್ಟುಹೋಗುತ್ತೇವೆಂಬ ಖಾಂಡವವನ ದಹನದ ಕಥೆ ನೆನಪಾದಾಗ ಮಾತ್ರ ನನ್ನಂಥವರಿಗೆ ಗಾಬರಿಯಾಗುತ್ತದೆ. ಅಶ್ವಸೇನನೂ ಪಾರಾಗದಂತೆ ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯ ಚಪ್ಪರವು ಖಾತ್ರಿಗೊಳಿಸಿದೆ. ದೇವೇಂದ್ರನು ಎಷ್ಟೇ ಪ್ರಯತ್ನಿಸಿದರೂ ನೀರಿಳಿಯದು. ಇಳಿದರೂ ಅದನ್ನು ಕುಡಿಯಲು ಸಾಧ್ಯವಾಗದು. ಗಂಗೆ, ನರ್ಮದೆ ಕೂಡಾ ಮಲಿನವಾಗಿವೆ; ಪಕ್ಕದಲ್ಲೇ ‘ಬಿಸಿಲೇರಿ’ ನೀರಿನ ಬೃಹತ್ ಯೋಜನೆ ಕೇಂದ್ರದ ಕೈಯಲ್ಲಿದೆ. ಆದರೆ ಇದು ಬಿಸಿಲೇರಿದಾಗ, ಬಾಯಾರಿದಾಗ ಸಿಕ್ಕದು; ದಕ್ಕದು. ಉಳಿದವು ಪ್ರವಾಹವನ್ನು ಹರಿಸುವುದರ ಹೊರತು ಇತರ ಋತುಗಳಲ್ಲಿ ಋತುಮತಿಗಳಾಗದೆ ಬತ್ತುತ್ತಿವೆ. ಆದ್ದರಿಂದ ನೀರಿಗಾಗಿ ಆಗಸದತ್ತ ಮುಖಮಾಡಿ ಉಪಯೋಗವಿಲ್ಲ. ಖಾಸಗಿ ಮತ್ತು ಸಾರ್ವಜನಿಕ ಜಾಗಗಳಲ್ಲಿ ಆಳುವವರ ಅಥವಾ ಅವರು ನಿರ್ದೇಶಿಸಿದ ದೇವರು (ದಿಂಡರ) ಪ್ರತಿಮೆಗಳನ್ನು ಪ್ರತಿಷ್ಠಾಪಿಸಬೇಕೆಂಬ ನಿರ್ದೇಶನವು ಬರಬಹುದು. ಬಾಯಾರಿಕೆಯಾದರೆ ಕುಡಿಯುವುದಕ್ಕೆ, ಹಸಿವೆಯಾದರೆ ತಿನ್ನುವುದಕ್ಕೆ ಬಗೆಬಗೆಯ ನೀರು-ಪಾನೀಯ-ಊಟ-ತಿಂಡಿಗಳ ಬೃಹತ್ ಕಟೌಟ್, ಬ್ಯಾನರ್ ಮತ್ತಿತರ ಮಾದರಿಯ ಫಲಕಗಳನ್ನು ನಿಮ್ಮ ಕಣ್ಣಿಗೆ ಕಾಣುವಂತೆ ಜೋಡಿಸಬಹುದು. ಇವಕ್ಕೆ ‘ಜಲಮಿಷನ್’, ‘ಆಹಾರ ಮಿಷನ್’ ಮುಂತಾದ ಆಕರ್ಷಕ ಶೀರ್ಷಿಕೆಗಳನ್ನು ನೀಡುವುದರಿಂದ ನಿಮಗೆ ಇವನ್ನು ನೋಡುತ್ತಲೇ ಹಸಿವು ಬಾಯಾರಿಕೆಗಳು ಆವಿಯಾಗಿ ಹೋಗಬಹುದು. ಅಮೃತ ಕಾಲದಲ್ಲಿ ಬರ ಬರಬಾರದು; ಆದ್ದರಿಂದ ಬರ ಬಾರದು. ಇಷ್ಟಕ್ಕೂ ‘‘ಬರ ಬಂದ ಕಾಲಕ್ಕೆ ಮಗ ಊಟಕ್ಕೆ ಕುಳಿತ’’ (ಅಥವಾ ‘ಕಲಿತ’?) ಎಂಬ ನಾಣ್ಣುಡಿಯು ವಾಸ್ತವವಾದಿಗಳಿಗೆ, ಜೀವನಾನು‘ಭವಿ’ಗಳಿಗೆ ಅನ್ವಯಿಸುವುದಿಲ್ಲ. ಅದೇನಿದ್ದರೂ ಬರೀ ‘ಭವಿ’ಗಳಿಗೆ ಮಾತ್ರ! ಇಷ್ಟಕ್ಕೂ ನಾವು ಹೇಳುವ ಹಸಿವೆ ಬಾಯಾರಿಕೆಗಳು ದೇಹಕ್ಕೆ ಮಾತ್ರ; ಅದು ಸತ್ತರೂ ಆತ್ಮ ಅವಿನಾಶಿ.
ಮತದಾರರಂತೂ ಗಾಬರಿಗೊಳ್ಳುವ ಅಗತ್ಯವಿಲ್ಲ. ನಮ್ಮ ಋಷಿಪರಂಪರೆಯು ಈ ಕುರಿತು ಮಂತ್ರ-ತಂತ್ರಗಳನ್ನು ಸಂಸ್ಕರಿಸಿದೆ. ಹೇಳುತ್ತೇವಲ್ಲ- ‘‘ಆಕಾಶಂ ಪತಿತ ತೋಯಂ, ಯಥಾ ಗಚ್ಛತಿ ಸಾಗರಃ| ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿಃ॥!’’ ಹಾಗೆಯೇ ಯಾವ ಗುರುತಿಗೆ ಮತವೊತ್ತಿದರೂ ಅದು ಸೇರಬೇಕಾದ ಅದ್ವೈತ ಅದ್ವಿತೀಯ ದೇವರಿಗೇ ಸೇರುತ್ತದೆ. ಆದ್ದರಿಂದ ಪ್ರಜಾಪ್ರಭುತ್ವದಲ್ಲಿ ಮತಾಂಧತೆಯೆಂಬುದಿಲ್ಲವೆಂದು ಸಾಬೀತಾಗಿದೆ. ನಿಮಗೆ ನಿಮ್ಮ ಸರ್ವಾಧಿಕಾರಿಯನ್ನು ಆಯ್ಕೆಮಾಡುವ ಸ್ವಾತಂತ್ರ್ಯವನ್ನು ದಯಪಾಲಿಸಲಾಗಿದೆಯಾದ್ದರಿಂದ ಗುಲಾಮೀಸ್ಥಿತಿಯನ್ನು ಆನಂದದಿಂದ ಮುಂದುವರಿಸಬಹುದು.
ಯಕ್ಷಗಾನ ನಮ್ಮ ಪರಂಪರೆಯ ಜಾನಪದ. ಅದೀಗ ಹರಿಹರರನ್ನು ಒಂದುಗೂಡಿಸಿದೆ. ಬೆಂಗಳೂರಿನಲ್ಲಿ ತಮ್ಮ ಬೌದ್ಧಿಕವನ್ನು ನೀಡುತ್ತಾ ಭಾಗವತರು ಭಾರತೀಯರು ಸಹಿಷ್ಣುಗಳು; ಸಾಮರಸ್ಯ ಜಗತ್ತಿಗೆ ನಮ್ಮ ಕೊಡುಗೆಯೆಂದಿದ್ದಾರೆ. ಹಿಂದುತ್ವವು ಅಳಿದರೆ ವಿಶ್ವವೇ ಅಳಿಯುತ್ತದೆಯೆಂದಿದ್ದಾರೆ. ಡೈನೊಸಾರಸ್ ಅಳಿದದ್ದು ಕೇಳಿದ್ದೇವೆ. ಇದು ಚರಿತ್ರೆಯನ್ನು ಬದಲಾಯಿಸುವ ಕಾಲ. ಆದ್ದರಿಂದ ಚರಿತ್ರೆಯನ್ನು ಸ್ವಲ್ಪ ಬದಲಾಯಿಸಿದರೆ ಡೈನಾಸೊರಸ್ ಅಳಿಯಲೇ ಇಲ್ಲ; ಕಾರಣ ಅವು ಇರಲೇ ಇಲ್ಲ ಎಂದು ಸಾಧಿಸಬಹುದು. ಈ ಬಗ್ಗೆ ಕೇಂದ್ರ ಸರಕಾರದಿಂದ ಒಂದು ಫರ್ಮಾನನ್ನು ಉಗುಳಿ ಅದನ್ನು ಪೀಕದಾನಿಯಲ್ಲಿ ಶೇಖರಿಸಿದರೆ ಬಹುತೇಕ ಮಾಧ್ಯಮಗಳು ಜೀಯಾ ಹಸಾದ ಎಂದು ಸ್ವೀಕರಿಸಬಹುದು. ಏಕೆಂದರೆ ಅವು ವಿವೇಕಾನಂದರಿಗಿಂತಲೂ ಹೆಚ್ಚು ವಿವೇಕಿಗಳು. ಅಲ್ಲದೆ ಸ್ವಾಮಿನಿಷ್ಠೆಯಲ್ಲಿ ದೇಶೀ ಶ್ವಾನಗಳನ್ನು ಮೀರಬಲ್ಲವರು. ಅವುಗಳಿಗೆ ಭವ್ಯ ಪರಂಪರೆಯಿದೆ. ಮಹಾಭಾರತ ಓದಿ: ಸ್ವರ್ಗಾರೋಹಣ ಪರ್ವದಲ್ಲಿ ಧರ್ಮರಾಜನೊಂದಿಗೆ ಕೊನೆಯ ಬಂಧುವಾಗಿ ಅನುಸರಿಸಿದವರು ಯಾರು? ಇವರೇ. ‘Two is company, Three is crowd’(‘ಇಬ್ಬರಾದರೆ ಜೊತೆಗಾರರು, ಮೂರಾದರೆ ಗುಂಪು’) ಎಂದು ಹೇಳಿದೆಯಲ್ಲ! ಆದ್ದರಿಂದ ನಾವೀಗ ಅದಾನಿ ಅಂಬಾನಿಗಳೆಂಬ ಇಬ್ಬರು ಮಹಾ ಕುಬೇರರನ್ನು ಜೊತೆಗಿಟ್ಟುಕೊಂಡು ನಮ್ಮ ಒಟ್ಟಾರೆ ದೇಶೀ ವಿತ್ತವನ್ನು ಹೆಚ್ಚಿಸಿಕೊಂಡಿದ್ದೇವೆ. ಈ ಸಮೃದ್ಧಿಯು ಇನ್ನೂ ಹೆಚ್ಚಲೆಂದು ಪ್ರಾರ್ಥಿಸೋಣ. ಮೂವರಾಗುವುದು ಗುಂಪು; ಅದು ಗುಂಪು ಹಲ್ಲೆಗೆ ಮೀಸಲಾಗಿರಲಿ.
ತೈಲ ಬೆಲೆ ಹೆಚ್ಚಿದೆಯೆಂದು ಚಿಂತೆ ಯಾಕೆ? ಡಾಲರಿಗೆದುರಾಗಿ ನಾವು ಶತಕ ಬಾರಿಸುತ್ತಿದ್ದೇವಲ್ಲ! ಅಡುಗೆ ಅನಿಲ, ಅಷ್ಟೇ ಅಲ್ಲ, ಬಂಗಾರಕ್ಕೂ ಬೆಳ್ಳಿಗೂ ಎಂದಿಲ್ಲದ ಬೆಲೆ! ಬೇಸರ ಬೇಡ: ಮಾತು ಬೆಳ್ಳಿ; ಮೌನ ಬಂಗಾರ. ಸುಮ್ಮನಿದ್ದರಾಯಿತು. ಭಗವಂತ ಕೃಷ್ಣ ಹೇಳಿದಂತೆ ‘ಮೂಕಂ ಕರೋತಿ ವಾಚಾಲಂ ಯತ್ಕಪಾ ತಮಹಂ ವಂದೇ ಪರಮಾನಂದಂ ಮಾಧವಂ!’ ಮಾತಿಗೆ ಕಾಲವಿದೆ. ದೈವಕೃಪೆಯಾಗಬೇಕು, ಅಷ್ಟೇ. ಐದು ವರ್ಷಗಳ ಬಳಿಕ ಮತ್ತೆ ಈ ದೈವಕೃಪೆ ಬರಬೇಕು. ಮುಂದಿನ ಐದು ವರ್ಷ ಬಂಗಾರದ ಬದುಕು ಸಾಗಿಸುವುದಕ್ಕೆ ಬಿಹಾರದ ಮಹಿಳೆಯರಿಗೆ ‘ಹತ್ತು ಸಹಸ್ರ’ ರೂಪಾಯಿಗಳನ್ನು ನೀಡಲಾಗಿದೆ. ಹತ್ತು ಸಹಸ್ರ ಎಂದರೆ ಕಡಿಮೆಯೇ! ಎಷ್ಟು ಶೂನ್ಯಗಳಿವೆಯೆಂದು ಲೆಕ್ಕ ಹಾಕಿ; ಕಷ್ಟವೇನಿಲ್ಲ. ಗೊತ್ತಾಗದಿದ್ದರೆ ಶೂನ್ಯದತ್ತ ದಿಟ್ಟಿಸಿ. ಮತ್ತೆ ಮಹಾಭಾರತವನ್ನು ನೆನಪಿಸಿ: ಕುರುಕ್ಷೇತ್ರದಲ್ಲಿ ನಮ್ಮ ಭೀಷ್ಮಾಚಾರ್ಯರು ದಿನವೊಂದರ ಹತ್ತು ಸಹಸ್ರ ಯೋಧರನ್ನೋ ಅತಿರಥ-ಮಹಾರಥಿಗಳನ್ನೋ ಅಂತೂ ಶಿರಗಳನ್ನು ತರಿಯುವುದಾಗಿ ಪ್ರತಿಜ್ಞೆ ಮಾಡಿ ಅದರಂತೆ ನಡೆದುಕೊಂಡರಲ್ಲ! ಹಾಗೆಯೇ ಇದು. ಈ ಹತ್ತು ಸಹಸ್ರವು ಬದುಕಿನ ಹಾದಿಯನ್ನೇ ಬದಲಿಸಬಲ್ಲುದು. ಅದು ಕರ್ನಾಟಕದ ಪಂಚ ಗ್ಯಾರಂಟಿಗಳಂತಲ್ಲ. ಒಂದೇ ಬಾರಿ-ಅಮೃತ ಕುಡಿದಂತೆ. ಶಾಶ್ವತದ ಸ್ವರ್ಗ. ಬಿಹಾರದ ಜನರಿಗೆ ಇದು ಅರ್ಥವಾಗಿದೆ. ಅದಕ್ಕೇ ದಕ್ಷಿಣ ರಾಜ್ಯಗಳಲ್ಲಿ ಕೆಲಸಮಾಡುತ್ತ ದಿನಕಳೆಯುತ್ತಿದ್ದ ಬಿಹಾರದ ಶ್ರೀರಾಮಗಳು ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ’ (ಮಾತೆಯೂ ಮಾತೃಭೂಮಿಯೂ ಸ್ವರ್ಗಕ್ಕಿಂತಲೂ ಹೆಚ್ಚು) ಎಂಬ ಚುನಾವಣೆಗಾಗಿ ಬಿಹಾರವನ್ನು ತಲುಪಿ ಸ್ವರ್ಗವಾಸಿಗಳಾಗುವುದನ್ನು ತಪ್ಪಿಸಿಕೊಂಡು ಮತದಾನ ಮುಗಿಯುತ್ತಿದ್ದಂತೆಯೇ ಫಲಿತಾಂಶಕ್ಕೂ ಕಾಯದೆ ದಕ್ಷಿಣದ ರಾಜ್ಯಗಳತ್ತ ಉದ್ಯೋಗವನ್ನರಸಿ ಮರಳುತ್ತಿದ್ದಾರೆ. ಹೆತ್ತತಾಯಿ ಯಾವುದೇ ಇರಲಿ ಸಾಕುತಾಯಿ ಕರ್ನಾಟಕ. ಏಕೆಂದರೆ ಆಕೆ ಭಾರತ ಜನನಿಯ ತನುಜಾತೆೆ; ಬಿಹಾರದವರೆಂದು ತಾರತಮ್ಯ ತೋರದೆ ಅವರಿಗೂ ಆಹಾರ-ಬಿಹಾರ ನೀಡಬಲ್ಲವಳು.
ಇನ್ನು ಮುಂದೆ ಸಾಂಸದಿಕ ಪದಗಳೇ ಇರುವುದಿಲ್ಲ. ಸಂಸತ್ತಿನಲ್ಲಿ ಮಾತನಾಡುವ ಪದಗಳಿಲ್ಲ. ಅಶ್ಲೀಲ, ಅಸಭ್ಯ, ಬೈಗುಳದ ಅಸಾಂಸದಿಕ ಪದಗಳೆನ್ನಿಸಿಕೊಂಡ ಅರ್ಥಕೋಶಗಳು ನಮ್ಮಲ್ಲಿದ್ದವು. ಅವನ್ನೆಲ್ಲ ಈಗ ಅಳಿಸಿ ಹಾಕಬಹುದು. ಬಂಕಿಮಚಂದ್ರರ ಕಾದಂಬರಿಯಲ್ಲಿ ಅಂತರ್ಗತವಾಗಿರುವ ‘ವಂದೇ ಮಾತರಂ’ ಮತ್ತು ನೇತಾಜಿಯವರು ಪ್ರಸಿದ್ಧಿಗೊಳಿಸಿದ ‘ಜೈಹಿಂದ್’ ಈ ಪೈಕಿ ಯಾವುದೋ ಗೊತ್ತಿಲ್ಲ; ಅಂತೂ ಅವನ್ನು ಸಂಸತ್ತಿನಲ್ಲಿ (ಸದ್ಯಕ್ಕೆ ಅತೀ ಬುದ್ಧಿವಂತರಿರುವ ರಾಜ್ಯಸಭೆಯಲ್ಲಿ ಮಾತ್ರ!) ಬಳಸಬಾರದೆಂಬ ರಾಷ್ಟ್ರೀಯ ಶಾಸನವು ಜಾರಿಯಾಗಿದೆ. ಇವು ಬುದ್ಧಿವಂತರಿಗಲ್ಲ; ಬರೀ ಬುದ್ಧಿಹೀನರಿಗೆ ಮಾತ್ರ ಹೇಳಿಸಿಕೊಳ್ಳಲು, ಕೇಳಿಸಿಕೊಳ್ಳಲು ಇರುವ ಪದಗಳೆೆಂದು ಕೇಂದ್ರವೇ ಹೇಳಿದ ಮೇಲೆ ಅವು ರಾಷ್ಟ್ರವಿರೋಧ ಪದಗಳೇ ಸರಿ. ಅವನ್ನು ತಿದ್ದಲು, ಟೀಕಿಸಲು, ವಿರೋಧಿಸಲು, ಪ್ರತಿಭಟಿಸಲು ನಾವು ಯಾರು? ರಾಷ್ಟ್ರವಾದಿಗಳು, ರಾಷ್ಟ್ರೀಯರು, ರಾಷ್ಟ್ರಭಕ್ತರು ಇನ್ನುಮುಂದೆ ಇವನ್ನು ಹೇಳದಿರುವುದು ಆತ್ಮಾಭಿಮಾನದ ಮತ್ತು ಇಂದಿನ ಅಮೃತಕಾಲದಲ್ಲಿ ‘ಆತ್ಮನಿರ್ಭರತೆ’ಯ ರೂಪಕ. ಮಾತನಾಡದಿರುವುದು ಅನೇಕ ಬಾರಿ ಮಾತಿಗಿಂತ ಹೆಚ್ಚು ಪ್ರೇರಣೆಯನ್ನು ನೀಡುತ್ತದಲ್ಲವೇ? ಅದನ್ನೇ ‘ಮನ್ ಕೀ ಬಾತ್’ ಎಂದು ಸುಂದರವಾಗಿ ಹೇಳಬಹುದು.
ನಮ್ಮ ಪರಂಪರೆಯ ಯಕ್ಷಗಾನ ಭಾಗವತರು ಸಹೋದರತೆ, ಸೌಹಾರ್ದ ಭಾರತದ ಲಕ್ಷಣವೆಂದಿದ್ದಾರೆ. ಈಗ ನಡೆಯುತ್ತಿರುವ ಶಾಂತಿಯ ಮಾತು-ಕಥೆ ಇವನ್ನು ಸಾಬೀತುಪಡಿಸಿದೆ. ಅಮರತ್ವವಿರುವುದು ಆತ್ಮಕ್ಕೆಂದೆ. ನಾನಂದದ್ದಲ್ಲ; ನಮ್ಮ ಪರಂಪರೆ. ಭಾರತದ ಗಡಿ ದಾಟುವ ವರೆಗೆ ಈ ಸಹೋದರತೆ, ಸೌಹಾರ್ದಕ್ಕೆ ಅಡ್ಡಿಯಿಲ್ಲ. ಯಾಕೆಂದು ಗೊತ್ತಿಲ್ಲ ಸಾಕಷ್ಟು ‘ಶುದ್ಧ ಭಾರತೀಯರು’ ಗಡಿ ದಾಟಿ ಹೋಗುತ್ತಿದ್ದಾರೆ. ಅಮೆರಿಕ ಈ ವಲಸೆಯನ್ನು ನಿಲ್ಲಿಸುವ ಬೆದರಿಕೆ ಹಾಕಿದೆ. ನಾವೇಕೆ ಹೆದರಬೇಕು? ಹೋಗದಿದ್ದರಾಯಿತು. ನಮ್ಮಲ್ಲನೇಕರನ್ನು ಗಡಿಯಲ್ಲಿ ನುಸುಳಿಸಿ ಕಳಿಸಿದರಾಯಿತು. ಅಲ್ಲಿಂದಲೇ ಅವರಿಗೆ ರಾಮನಾಮ ತಾರಕಮಂತ್ರವನ್ನು ಹೇಳಿಸಿದರಾಯಿತು. ಜೊತೆಗೆ ‘ಸಂಚಾರ್ ಸಾಥಿ’ಯಿದ್ದರೆ ಅವರ ಜಪವನ್ನು ಅಧಿಕೃತವಾಗಿ ಪರಿಶೀಲಿಸಬಹುದು, ಪರೀಕ್ಷಿಸಬಹುದು. ರಾಷ್ಟ್ರೀಯ ಪ್ರಸಾರದಲ್ಲಿ ಕೇಳಬಹುದು.
ಗಾಂಧಿಯ ಬಗ್ಗೆ ನಮ್ಮ ಭಾಗವತರು ಹೊಸ ಅಧ್ಯಯನವನ್ನು ಮಾಡಿದ್ದಾರೆ: ಖಂಡ ಭಾರತವು ಗಾಂಧಿಯ ವಸಾಹತುಶಾಹಿ ಮನೋಭಾವವನ್ನು ತೋರಿಸುತ್ತದೆಯೆಂದು ಆಂಗ್ಲ ಅಕ್ಷರಮಾಲೆಯ ಕೊನೆಯ ಅಕ್ಷರವಾದ ‘ಝೆಡ್’ ಮಟ್ಟದ ಭದ್ರತೆಯ ಈ ದೇಶಿತಳಿಯ ಅಭಿನಯಗಾಂಧಿ ಉಪ‘ದೇಶಿ’ಸಿದ್ದಾರೆ. ಈ ಅಮೃತಕಾಲದಲ್ಲಿ ಅದೂ ಇರಬಹುದು. ಇಲ್ಲದಿದ್ದರೂ ಇದೆಯೆಂದು ಬರೆಸಿದರಾಯಿತು. ಇದನ್ನು ಅನುಸರಿಸಿ ಮುಮ್ಮೇಳದ ರಾಜನಾಥ್ ಸಿಂಗ್ ಎಂಬವರು ತಮ್ಮ ಖಾತೆಯ ರಕ್ಷಣಾ ದ್ಯೋತಕವಾಗಿ ನೆಹರೂ ಬಾಬರಿ ಮಸೀದಿಯನ್ನು ಮತ್ತೆ ಕಟ್ಟಲು ಯೋಜಿಸಿದರೆಂದೂ ಅದನ್ನು ಸರದಾರ್ ಪಟೇಲ್ ವಿರೋಧಿಸಿ ನಿಲ್ಲಿಸಿದರೆಂದೂ ಹೇಳಿದ್ದಾರೆ. ಇದೂ ಇರಬಹುದು. ನೆಹರೂವಿನ ಯೋಜನೆ ಕಾರ್ಯಕ್ಕೆ ಬಂದಿದ್ದರೆ ೧೯೯೨ರ ಬದಲಿಗೆ ಅದಕ್ಕೂ ಮೂರು ದಶಕಗಳ ಮೊದಲೇ ಬಾಬರಿ ಮಸೀದಿ ಧ್ವಂಸವಾಗುತ್ತಿತ್ತು. ನಮ್ಮ ದೇಶಭಕ್ತರ ಮೇಲೆ ವಿನಾಕಾರಣ ಅಪವಾದ ಬರುತ್ತಿರಲಿಲ್ಲ. ನೆಹರೂ ಆಗಲೀ ಪಟೇಲ್ ಆಗಲೀ ಈಗ ಇಲ್ಲದಿರುವುದರಿಂದ ಮತ್ತು ನಮ್ಮ ಚರಿತ್ರೆಯನ್ನು ಭವ್ಯ ರಾಮಮಂದಿರದಂತೆ ಹೊಸದಾಗಿ ನಿರ್ಮಿಸಲಿರುವುದರಿಂದ ಮತ್ತು ಆತ್ಮವು ಅವಿನಾಶಿಯಾಗಿರುವುದರಿಂದ ಸನ್ಮಾನ್ಯ ಸಚಿವರು ಗತಿಸಿದ ಆತ್ಮಗಳ ಒಡನಾಡಿಯಾಗಿರಬಹುದಾದ್ದರಿಂದ ಹೊಸ ಚರಿತ್ರೆ ಸೃಷ್ಟಿಯಾಗಬಹುದು.
ಏನಿದ್ದರೂ ಬಿಹಾರ ಮತ್ತು ಅದರ ನಂತರದ ಕಾಲವು ದೇಶದ ರೂಪಕವಾಗಿ ಮುನ್ನಡೆಯಬಹುದು. ಹೇಗೆ ನಡೆಯಬೇಕೆಂದು ಆಗಾಗ ಅಮೆರಿಕದ ಅಧ್ಯಕ್ಷರು ಹೇಳಬಹುದು. ಆಗ ಸಾಮರಸ್ಯದ ಭಾರತವು ‘‘ನೀವು ಹೇಳಿದಂತೆ ನಾವು ಕೇಳಲಾರೆವು; ಆದರೆ ನಮ್ಮ ಸ್ವಯಿಚ್ಛೆಯಿಂದ ನೀವು ಹೇಳಿದಂತೆ ನಡೆದುಕೊಳ್ಳುತ್ತೇವೆ’’ ಎನ್ನಬಹುದು. ಹಿಂದೊಮ್ಮೆ ‘‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’’ ಎಂದು ಗಾಂಧಿ ಹೇಳಿದಾಗ ನಮ್ಮ ರಾಷ್ಟ್ರಭಕ್ತರುಗಳು ‘‘ಬಿಟ್ಟುಹೋಗಿ, ಆದರೆ ನಮ್ಮನ್ನು ಬಿಟ್ಟುಹೋಗಬೇಡಿ, ಹೋಗುವಾಗ ನಮ್ಮನ್ನೂ ಕರೆದುಕೊಂಡುಹೋಗಿ’’ ಎಂದರಂತಲ್ಲ!
ಅಸಾಂಸದಿಕವಾದರೂ ‘ಜೈಹಿಂದ್’, ‘ವಂದೇ ಮಾತರಂ’ ಮುಂತಾದ (ಭವಿಷ್ಯದಲ್ಲಿ ಬಹಿಷ್ಕೃತಗೊಳ್ಳಬಲ್ಲ ‘ಅಬ್ ಕೀ ಬಾರ್ ಟ್ರಂಪ್ ಸರ್ಕಾರ್’ ಮತ್ತಿತರ) ಘೋಷಣೆಗಳನ್ನು ದೇಶಬಕ್ರರಾದ ನಾವು ಆರ್ನಬ್ ಗೋಸ್ವಾಮಿಗೂ ಕೇಳುವಂತೆ ಕೂಗಿ ಹೇಳೋಣ.