×
Ad

ನ್ಯೂರೋಚಿಪ್ ಬಳಸಿದರೆ ಜೈವಿಕ ಡ್ರೋನ್‌ ಗಳಾಗಿ ಬದಲಾಗುವ ಪಾರಿವಾಳಗಳು; ರಷ್ಯಾದ ಹೊಸ ಸಂಶೋಧನೆ!

Update: 2025-12-04 16:46 IST

Photo Credit : indianexpress.com

ರಷ್ಯಾ ಮೂಲದ ಕಂಪೆನಿಯಾದ ‘ನೈರೀ’ ಪಾರಿವಾಳಗಳನ್ನು ಜೀವಂತ ಡ್ರೋನ್‌ ಗಳಾಗಿ ಬದಲಿಸುವ ಜೈವಿಕ ತಂತ್ರಜ್ಞಾನವನ್ನು ಕಂಡುಹಿಡಿದಿರುವುದಾಗಿ ಘೋಷಿಸಿದೆ. ನೈರೀ, ರಷ್ಯಾದ ನರತಂತ್ರಜ್ಞಾನ ಕಂಪೆನಿಯಾಗಿದೆ. ಅದು ಪಾರಿವಾಳಗಳನ್ನು ಡ್ರೋನ್‌ ಗಳಾಗಿ ಪರಿವರ್ತಿಸುವ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿದೆ. ಈ ಯೋಜನೆ ಅಂತಿಮ ಹಂತದಲ್ಲಿದ್ದು, ರಿಮೋಟ್ (ಜನವಸತಿಯಿಲ್ಲದ ಪ್ರದೇಶ) ಸ್ಥಳಗಳಲ್ಲಿ ಮೇಲ್ವಿಚಾರಣೆಗಾಗಿ ಶೀಘ್ರವೇ ಈ ಜೈವಿಕ ಡ್ರೋನ್‌ ಗಳನ್ನು ಬಳಸಲಾಗುವುದು ಎಂದು ತಿಳಿಸಿದೆ.

ಪಾರಿವಾಳಗಳ ಮೆದುಳಿನಲ್ಲಿ ಚಿಪ್

ಜೀವಂತ ಪಾರಿವಾಳಗಳ ಮೆದುಳಿಗೆ ಚಿಪ್‌ ಗಳನ್ನು ಇಂಪ್ಲಾಂಟ್ ಮಾಡಲಾಗುತ್ತದೆ. ಈ ಜೈವಿಕ ಡ್ರೋನ್‌ ಪಾರಿವಾಳಗಳ ಹಾರಾಟದ ಗುಣಲಕ್ಷಣಗಳನ್ನು ಪರೀಕ್ಷಿಸುತ್ತಿರುವುದಾಗಿ ನೈರೀ ತನ್ನ ಬ್ಲಾಗ್‌ ಪೋಸ್ಟ್‌ ನಲ್ಲಿ ಹೇಳಿದೆ. ಈ ನ್ಯೂರೋಚಿಪ್ ಪರೀಕ್ಷೆ ಯಶಸ್ವಿಯಾದಲ್ಲಿ ಪಾರಿವಾಳಗಳನ್ನು ಮಾನವ-ಚಾಲಿತ ಡ್ರೋನ್‌ ಗಳನ್ನಾಗಿ ಪರಿವರ್ತಿಸಬಹುದು ಎಂದು ಕಂಪೆನಿ ಹೇಳಿಕೊಂಡಿದೆ.

ಡ್ರೋನ್‌ ಗಳಂತೆ ಹಾರುವ ಪಕ್ಷಿಗಳು

ಸಾಂಪ್ರದಾಯಿಕ ಡ್ರೋನ್‌ಗಳಂತೆಯೇ ಕಾರ್ಯನಿರ್ವಹಿಸುವ ಈ ಪಕ್ಷಿ ದ್ರೋಣ್‌ ಗಳು, ರಿಮೋಟ್ ಕಂಟ್ರೋಲ್‌ ನಲ್ಲಿ ಸೂಚಿಸಿದ ಹಾದಿಯಲ್ಲಿ ಹಾರಾಡುತ್ತದೆ. “ಬಯೋಡ್ರೋನ್ ಮತ್ತು ತರಬೇತಿ ಪಡೆದ ಪ್ರಾಣಿಗಳ ನಡುವಿನ ಏಕೈಕ ವ್ಯತ್ಯಾಸವೆಂದರೆ, ಅವುಗಳಿಗೆ ತರಬೇತಿಯ ಅಗತ್ಯವಿರುವುದಿಲ್ಲ” ಎಂದು ಕಂಪೆನಿ ಹೇಳಿದೆ.

ಮೆದುಳಿನ ನಿರ್ದಿಷ್ಟ ಜಾಗಗಳನ್ನು ಉತ್ತೇಜಿಸುವ ಮೂಲಕ ಸಂಶೋಧಕರು ಪಕ್ಷಿಯನ್ನು ಉದ್ದೇಶಿತ ದಿಕ್ಕಿನಲ್ಲಿ ಚಲಿಸುವಂತೆ ಮಾಡಬಹುದು. ಹೀಗೆ ವಿಜ್ಞಾನಿಗಳು ಬಯಸಿದ ಮತ್ತು ನಿರ್ದೇಶಿಸಿದ ಹಾದಿಯಲ್ಲಿ ಪಕ್ಷಿಗಳು ಚಲಿಸುತ್ತವೆ.

ನಗರ ಪ್ರದೇಶಗಳಲ್ಲಿ ಬಳಕೆ

ಕಾರ್ಯನಿರ್ವಹಿಸುವ ಸಮಯ ಮತ್ತು ವ್ಯಾಪ್ತಿಯನ್ನು ಪರಿಗಣಿಸಿದಲ್ಲಿ ಜೈವಿಕ ಡ್ರೋನ್‌ಗಳು ಯಾಂತ್ರಿಕ ಡ್ರೋನ್‌ ಗಳನ್ನು ಮೀರಿಸುತ್ತವೆ. ಸಾರಿಗೆ ದಟ್ಟಣೆ ಇರುವ ನಗರದ ಪ್ರದೇಶಗಳಲ್ಲಿ ಪಾರಿವಾಳಗಳು ನ್ಯಾವಿಗೇಟ್ ಮಾಡಲು ಸಾಂಪ್ರದಾಯಿಕ ಡ್ರೋನ್‌ ಗಳಿಗಿಂತ ಹೆಚ್ಚು ಉಪಯುಕ್ತ ಎಂದು ಕಂಪೆನಿ ಹೇಳಿದೆ.

ಪಕ್ಷಿಗಳು ಸಾಮಾನ್ಯ ಜೀವನವನ್ನು ನಡೆಸುತ್ತಿರುತ್ತವೆ. ಚಿಪ್‌ ನಿಂದ ಪಕ್ಷಿಗಳಿಗೆ ಯಾವುದೇ ಸಮಸ್ಯೆಯಾಗದು. ಪಕ್ಷಿಗಳು ಕೆಳಗೆ ಬೀಳುವ ಸಂಭವ ಕಡಿಮೆ ಇರುತ್ತದೆ. ಸಾಮಾನ್ಯವಾಗಿ ಪಕ್ಷಿಗಳು ಹಾರಾಡುವಂತೆಯೇ ಅವು ಹಾರಾಡುತ್ತವೆ ಎಂದು ಸಂಸ್ಥೆ ತಿಳಿಸಿದೆ.

ಪಕ್ಷಿ ಡ್ರೋನ್ ಹೇಗೆ ಕೆಲಸ ಮಾಡುತ್ತದೆ?

ಪಕ್ಷಿಯ ಹಿಂಭಾಗದಲ್ಲಿ ಜೋಡಿಸಲಾದ ಸ್ಟಿಮ್ಯುಲೇಟರ್‌ ಗೆ ಸಂಪರ್ಕಗೊಂಡಿರುವ ಎಲೆಕ್ಟ್ರೋಡ್‌ಗಳ ಮೂಲಕ ಪಕ್ಷಿಗೆ ಪ್ರಚೋದನೆ ನೀಡಿ ಎಡ ಅಥವಾ ಬಲಕ್ಕೆ ತಿರುಗುವಂತೆ ಮಾಡಬಹುದು. ಅದರ ಜೊತೆಗೆ ಇರುವ ಕಂಟ್ರೋಲರ್ ಸಂಕೇತಗಳನ್ನು ಕಳುಹಿಸುತ್ತದೆ. ಅದರಲ್ಲಿ ಪಕ್ಷಿ ಎಡಕ್ಕೆ ಅಥವಾ ಬಲಕ್ಕೆ ಹೋಗಲು ಬಯಸುತ್ತಿದೆ ಎನ್ನುವ ಸಂಕೇತ ಸಿಗುತ್ತದೆ. ಈ ವ್ಯವಸ್ಥೆಯಲ್ಲಿ ಜಿಪಿಎಸ್ ರಿಸೀವರ್ ಕೂಡ ಇರುತ್ತದೆ. ಅದು ಚಾಲಕರಿಗೆ ಪಕ್ಷಿಯ ಸ್ಥಳವನ್ನು ಗುರುತಿಸಲು ಮತ್ತು ಟ್ರ್ಯಾಕ್ ಮಾಡಲು ನೆರವಾಗುತ್ತದೆ.

ಪಕ್ಷಿಗಳ ಹಿಂಡನ್ನೇ ನಿಯಂತ್ರಿಸಬಹುದು

ನೈರಿ ಹೇಳುವ ಪ್ರಕಾರ ನ್ಯೂರಲ್ (ನರ) ಇಂಟರ್‌ ಫೇಸ್ ಮೂಲಕ ಸಂಪೂರ್ಣವಾಗಿ ಪಕ್ಷಿಗಳ ಹಿಂಡನ್ನೇ ನಿಯಂತ್ರಿಸಬಹುದು, ಅವುಗಳಿಗೆ ಹೊಸ ಹಾರಾಟದ ದಿಕ್ಕನ್ನು ಸೂಚಿಸಬಹುದು. PJN-1 ಜೈವಿಕಡ್ರೋನ್‌ ದಿನವೊಂದಕ್ಕೆ 310 ಮೈಲಿಗಳಷ್ಟು ಹಾರಬಲ್ಲದು. ನಿರಂತರವಾಗಿ ಸೂರ್ಯನ ಬೆಳಕಿದ್ದರೆ ಪಕ್ಷಿ ವಾರಕ್ಕೆ ಸುಮಾರು 1850 ಮೈಲಿಗಳಷ್ಟು ದೂರ ಹಾರಬಲ್ಲದು ಎಂದು ಕಂಪನಿ ತಿಳಿಸಿದೆ.

ಕಡಲ ಕೋಳಿಗಳಿಗೂ ಡ್ರೋನ್

ಸದ್ಯ ಸಂಸ್ಥೆ ಪಾರಿವಾಳದ ಮೇಲೆ ಮಾತ್ರ ಈ ಪ್ರಯೋಗ ನಡೆಸಿದೆ. ಆದರೆ ಯಾವುದೇ ಪಕ್ಷಿಯನ್ನೂ ಕೂಡ ಈ ವ್ಯವಸ್ಥೆಯ ಮೂಲಕ ಕ್ಯಾರಿಯರ್ ಆಗಿ ಬಳಸಬಹುದಾಗಿದೆ. ಭಾರವಾದ ಪೇಲೋಡ್‌ಗಳನ್ನು ಹೊತ್ತೊಯ್ಯಲು ರೇವನ್‌ಗಳನ್ನು (ಕಾಗೆ) ಬಳಸಲು ಯೋಜಿಸುತ್ತಿದ್ದೇವೆ. ಕರಾವಳಿ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು ಸೀಗಲ್‌ಗಳನ್ನು ಬಳಸಬಹುದು. ಸಾಗರ ಪ್ರದೇಶಗಳಲ್ಲಿ ಆಲ್ಬಟ್ರಾಸ್ (ಕಡಲ ಕೋಳಿ)ಗಳನ್ನು ಡ್ರೋನ್‌ ಗಳಾಗಿ ಬಳಸಬಹುದು ಎಂದು ಕಂಪೆನಿ ತಿಳಿಸಿದೆ.

ಆದರೆ ಪ್ರಯೋಗದ ಹಂತದಲ್ಲಿ ಎಷ್ಟು ಪಕ್ಷಿಗಳನ್ನು ಸಾಯಿಸಲಾಗಿದೆ ಮತ್ತು ಬಳಸಲಾಗಿದೆ ಎನ್ನುವ ಬಗ್ಗೆ ಸಂಸ್ಥೆ ಯಾವುದೇ ದತ್ತಾಂಶ ಬಿಡುಗಡೆ ಮಾಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News